ಬಹುಶಃ ವೈದ್ಯಕೀಯ ವಿಜ್ಞಾನದ ಕುರಿತು ಆಳಕ್ಕಿಳಿದು ಅಧ್ಯಯನ ಮಾಡಿ, ಸಿನಿಮಾ ರೂಪಿಸಿದ ಸಿನಿಮಾವೊಂದು ಭಾರತೀಯ ಸಿನಿಮಾರಂಗದಲ್ಲಿ ಬಂದಿದೆಯೋ ಇಲ್ಲವೋ ಗೊತ್ತಿಲ್ಲ. ಪ್ರಿಯಾಮಣಿ ಇಂಡಿಯಾದ ಅದ್ಭುತ ನಟಿಯರಲ್ಲೊಬ್ಬರು ಅನ್ನೋದು ಯಾವತ್ತೋ ಪ್ರೂವ್ ಆಗಿದೆ. ಅವರಿಗೇ ಚಾಲೆಂಜ್ ಎನ್ನಿಸುವಂತಾ ಪಾತ್ರದಲ್ಲಿ ಅವರು ಡಾ. 56 ಚಿತ್ರದಲ್ಲಿ ನಟಿಸಿದ್ದಾರೆ. ಕನ್ನಡ, ತೆಲುಗು ತಮಿಳು ಸೇರಿದಂತೆ ಐದು ರಾಜ್ಯಗಳಲ್ಲಿ ಏಕಕಾಲಕ್ಕೆ ಇದೇ ಡಿಸೆಂಬರ್ 9ರಂದು ಡಾ.56 ತೆರೆಗೆ ಬರುತ್ತಿದೆ.
ಹರಿಹರ ಪಿಕ್ಚರ್ಸ್ ಲಾಂಛನದಲ್ಲಿ, ಪ್ರವೀಣ್ ರೆಡ್ಡಿ ನಿರ್ಮಿಸಿ, ರಾಜೇಶ್ ಆನಂದಲೀಲಾ ನಿರ್ದೇಶಿಸುತ್ತಿರುವ ಸಿನಿಮಾ ಡಾ. 56. ಪ್ರಿಯಾಮಣಿ ಪ್ರಧಾನಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರಕ್ಕೆ ನಿರ್ಮಾಪಕ ಪ್ರವೀಣ್ ರೆಡ್ಡಿ ಕತೆ, ಚಿತ್ರಕತೆ, ಬರೆದು ನಿರ್ಮಾಣವನ್ನೂ ಮಾಡುತ್ತಿದ್ದಾರೆ.
ಈ ಚಿತ್ರ ತೆರೆಗೆ ಬಂದ ನಂತರ ʻಮೆಡಿಕಲ್ ಸೈನ್ಸ್ ನಲ್ಲಿ ಹೀಗೆಲ್ಲಾ ನಡೆಯುತ್ತದಾ?ʼ ಅನ್ನೋ ಪ್ರಶ್ನೆ ಎಲ್ಲರಲ್ಲೂ ಮೂಡುತ್ತದೆ ಅನ್ನೋದು ಚಿತ್ರದ ನಾಯಕನಟ ಪ್ರವೀಣ್ ರೆಡ್ಡಿ ಅವರ ಅನಿಸಿಕೆ. ಈಗಾಗಲೇ ರಿಲೀಸ್ ಆಗಿರುವ ಟ್ರೇಲರ್ ʻಡಾ. 56ʼ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ. ಅಂತಾರಾಷ್ಟ್ರೀಯ ಗುಣಮಟ್ಟದ ಮೇಕಿಂಗ್ ಅಚ್ಛರಿ ಮೂಡಿಸಿದೆ. ಟ್ರೇಲರ್ ನಲ್ಲಿ ಹೇಳಿರುವಂತೆ ʻನೂರಾರು ಮಿಲಿಯನ್ ನೈಜ ಘಟನೆಗಳ ಆಧಾರಿತʼ ಎನ್ನುವ ಸಾಲು ಎಲ್ಲರನ್ನೂ ಸೆಳೆದಿದೆ.
ʻʻವೈದ್ಯಕೀಯ ವಿಜ್ಞಾನದ ಕುರಿತ ಈ ಸಿನಿಮಾ ಹೊಸ ಬಗೆಯ ಕತೆ ಹೊಂದಿದೆ. ಜೊತೆಗೆ ಮರ್ಡರ್ ಮಿಸ್ಟರಿಯ ಎಳೆ ಕೂಡಾ ರೋಚಕವಾಗಿ ತೆರೆದುಕೊಳ್ಳುತ್ತಾ ಸಾಗುತ್ತದೆ. ಪ್ರಿಯಾಮಣಿ ಈ ಚಿತ್ರದಲ್ಲಿ ಸಿಬಿಐ ಅಧಿಕಾರಿಯಾಗಿ ಕಾಣಿಸಿಕೊಂಡಿದಾರೆ.ʼʼ ಎಂದು ನಿರ್ದೇಶಕ ರಾಜೇಶ್ ಆನಂದಲೀಲಾ ಹೇಳಿಕೊಂಡಿದ್ದಾರೆ. ರಾಕೇಶ್ ಸಿ. ತಿಲಕ್ ಛಾಯಾಗ್ರಹಣ, ವಿಶ್ವ ಸಂಕಲನ, ಶಂಕರ್ ಸಂಭಾಷಣೆ, ಶ್ರೀಕಾಂತ್ ಕಶ್ಯಪ್ ಕಾರ್ಯಕಾರಿ ನಿರ್ಮಾಣದ ಈ ಚಿತ್ರಕ್ಕೆ ನೋಬಿನ್ ಪೌಲ್ ಸಂಗೀತವಿದೆ. ಈ ಚಿತ್ರದಲ್ಲಿ ಪ್ರಿಯಾಮಣಿ, ಪ್ರವೀಣ್, ರಮೇಶ್ ಭಟ್, ಯತಿರಾಜ್, ವೀಣಾ ಪೊನ್ನಪ್ಪ, ದೀಪಕ್ ಶೆಟ್ಟಿ ಮುಂತಾದವರ ಅಭಿನಯವಿದೆ. ಡಾ. 56 ಚಿತ್ರ ಪ್ರಿಯಾಮಣಿ ಅಭಿನಯದ 56ನೇ ಚಿತ್ರವೂ ಆಗಿರುವುದು ವಿಶೇಷ ಮತ್ತು ಕಾಕತಾಳೀಯವಾಗಿದೆ.
No Comment! Be the first one.