ಶಿವರಾಜ್ ಕುಮಾರ್ ಅಭಿನಯದ ಘೋಸ್ಟ್ ಸಿನಿಮಾ ತೆರೆಗೆ ಬಂದಿದೆ. ಅನೇಕ ಯುವ ನಿರ್ದೇಶಕರಿಗೆ ಶಿವಣ್ಣನ ಸಿನಿಮಾವೊಂದನ್ನು ನಿರ್ದೇಶಿಸಬೇಕು ಎನ್ನುವ ಕನಸಿರುತ್ತದೆ. ಈ ಸಲ ಶ್ರೀನಿ ಅದನ್ನು ನನಸು ಮಾಡಿಕೊಂಡಿದ್ದಾರೆ. ಸ್ವತಃ ನಟನಾಗಿ, ನಿರ್ದೇಶಕನಾಗಿ ಗೆದ್ದಿರುವ ಶ್ರೀನಿ ಈ ಸಲ ಸೂಪರ್ ಸ್ಟಾರ್ ನಟನ ಇಮೇಜನ್ನು ಉಳಿಸಿದ್ದಾರಾ ಅನ್ನೋದು ಘೋಸ್ಟ್ ಚಿತ್ರದ ಮೂಲಕ ಜಾಹೀರಾಗಿದೆ.
ಬೃಹತ್ ಜೈಲೊಂದರ ಮೇಲೆ ಅಟ್ಯಾಕ್ ಮಾಡಿ, ಅದರೊಳಗೆ ನುಸುಳಿ, ಇಡೀ ಜೈಲನ್ನು ಹೈಜಾಕ್ ಮಾಡುವ ಕಥೆ ಈ ಚಿತ್ರದ್ದು. ಅದು ಯಾಕೆ? ಯಾರಿಂದ? ಅನ್ನೋದೆಲ್ಲಾ ಚಿತ್ರದ ಪ್ರಧಾನ ವಿಚಾರ. ಘೋಸ್ಟ್ ಕ್ಯಾರೆಕ್ಟರು ನಿಜಕ್ಕೂ ಶಿವಣ್ಣನಿಗೆ ಹೇಳಿಮಾಡಿಸಿದಂತಿದೆ. ಅವರ ಲುಕ್ಕು, ಮ್ಯಾನರಿಸಮ್ಮು, ಡೈಲಾಗ್ ಡೆಲಿವರಿ ಎಲ್ಲವೂ ಅದ್ಭುತ ಎನಿಸುವ ಮಟ್ಟಿಗೆ ಮೂಡಿ ಬಂದಿದೆ. ನಿರ್ದೇಶಕ ಶ್ರೀನಿ ಕಲ್ಪಿಸಿಕೊಂಡ ದೃಶ್ಯಗಳೆಲ್ಲಾ ಯಥಾವತ್ತಾಗಿ ತೆರೆ ಮೇಲೆ ಮೂಡಿದೆ. ಅದಕ್ಕೆ ಕಾರಣ ಮಹೇಂದ್ರ ಸಿಂಹ ಎನ್ನುವ ಬ್ರಿಲಿಯಂಟ್ ಡಿ.ಓ.ಪಿ.. ಅರ್ಜುನ್ ಜನ್ಯ ಕೂಡಾ ಹಾಡುಗಳಿಲ್ಲದೆ, ಬರಿಯ ಹಿನ್ನೆಲೆ ಸಂಗೀತದಲ್ಲೇ ಮ್ಯಾಜಿಕ್ ಮಾಡಿದ್ದಾರೆ. ಚೇತನ್ ಡಿಸೋಜ ಕಂಪೋಸ್ ಮಾಡಿರುವ ಇಂಟ್ರಡಕ್ಷನ್ ಫೈಟ್ ಅಂತೂ ಎಕ್ಸಲೆಂಟ್. ಎಲ್ಲವೂ ಇರುವ ಘೋಸ್ಟ್ ಚಿತ್ರದ ಕಥೆ ಮತ್ತು ಚಿತ್ರಕತೆ ಮೇಲೆ ಇನ್ನೊಂದಿಷ್ಟು ಕೆಲಸಗಳಾಗಬೇಕಿತ್ತು. ಯಾವುದೇ ಕಥೆಯ ಹಿನ್ನೆಲೆಯಲ್ಲಿ ನಿರ್ಧಿಷ್ಟವಾದ ಉದ್ದೇಶ, ವ್ಯಾಪ್ತಿಗಳೆಲ್ಲಾ ಇರಬೇಕು. ಅದಿಲ್ಲಿ ಸುಲಭಕ್ಕೆ ಅರ್ಥವಾಗುವುದಿಲ್ಲ. ಆದರೂ ಶಿವಣ್ಣನ ನಟನೆ, ತಾಂತ್ರಿಕತೆಗಳು ಬೇರೆಲ್ಲ ಕೊರತೆಗಳನ್ನೂ ಮರೆಮಾಚಿವೆ.
ಮೇಲ್ನೋಟಕ್ಕೆ ಇದು ಬಂಗಾರದ ಬಿಸ್ಕೆಟ್ಟುಗಳಿಗಾಗಿ ನಡೆಯುವ ಹೋರಾಟ ಅನ್ನಿಸಿದರೂ, ಅದರ ಹಿಂದೆ ಮುಖ್ಯಮಂತ್ರಿ ಮಗ ಮಾಡಿದ ಆದಿವಾಸಿ ಹೆಣ್ಣುಮಗಳ ಅತ್ಯಾಚಾರದಂಥಾ ಘೋರ ಕೃತ್ಯದ ಪ್ರಸ್ತಾಪವಾಗುತ್ತದೆ. ಘೋಸ್ಟ್ ಯಾರು ಎನ್ನುವುದರ ಕುರಿತು ಒಂದಿಷ್ಟು ಪ್ರಕರಣಗಳನ್ನು ತೋರಿಸುತ್ತಾರೆ. ಆದರೆ ಯಾವುದೂ ಸ್ಪಷ್ಟವಾಗಿ ಸಮಾಪ್ತಿಯಾಗುವುದಿಲ್ಲ.
ಹೀರೋಯಿನ್ನು, ಫ್ಯಾಮಿಲಿ, ಸೆಂಟಿಮೆಂಟುಗಳೆಲ್ಲಾ ಇಲ್ಲದ ಮಾಮೂಲಿ ಫಾರ್ಮುಲಾಗಳಿಂದ ಹೊರತಾದ ಸಿನಿಮಾ ಘೋಸ್ಟ್. ಶಿವಣ್ಣನಿಗೆ ಸರಿಗಟ್ಟುವಂತೆ ನಟಿಸಿರುವುದು ಮಲಯಾಳಂ ನಟ ಜಯರಾಂ. ಬಹುಶಃ ತೆರೆಮೇಲೆ ಇವರೇ ಹೆಚ್ಚು ಕಾಣಿಸಿಕೊಂಡಂತಿದೆ. ಅದು ಬಿಟ್ಟರೆ, ಅರ್ಚನಾ ಜೋಯಿಸ್ ಪತ್ರಕರ್ತೆಯಾಗಿ ನಟಿಸಿದ್ದಾರೆ. ಪ್ರಸನ್ನ ಬರೆದಿರುವ ಸಂಭಾಷಣೆ ವಾಸ್ತವಕ್ಕೆ ತಿವಿದಂತಿದೆ. ಬ್ರೇಕಿಂಗ್ ನ್ಯೂಸ್‌ಗಾಗಿ ಹಪಹಪಿಸುವ ಟೀವಿ ಜರ್ನಲಿಸ್ಟುಗಳನ್ನು ಯಾಮಾರಿಸೋದು ಬಹಳ ಸುಲಭ ಅನ್ನೋದನ್ನೂ ತೋರಿಸಿದ್ದಾರೆ. ʻಯಾರನ್ನಾದರೂ ನಂಬುವಾಗ ಸ್ವಲ್ಪ ಯೋಚಿಸಿʼ ಎನ್ನುವ ರೀತಿಯಲ್ಲಿ ಆ ಪತ್ರಕರ್ತೆಗೆ ಹೇಳುವ ಡೈಲಾಗು ಮಜವಾಗಿದೆ!
ಕೆಲವರು ಮುಟ್ಟಿದ್ದೆಲ್ಲಾ ಚಿನ್ನವಾಗುತ್ತದೆ ಆದರೆ ಶಿವಣ್ಣ ಈ ಸಲ ಚಿನ್ನವನ್ನೇ ಮುಟ್ಟಿದ್ದಾರೆ. ಅದು ಪ್ರೇಕ್ಷಕರ ದೃಷ್ಟಿಯಲ್ಲಿ ಹೆಚ್ಚು ಬೆಲೆ ಪಡೆಯಲಿ!!
Leave a Reply
You must be logged in to post a comment.