ಒಬ್ಬರಿಗೊಬ್ಬರು ಸಂಬಂಧವೇ ಇಲ್ಲದವರು, ಬಂಧವಿದ್ದೂ ದಿಕ್ಕಾಪಾಲಾದವರು. ಎಲ್ಲ ಇದ್ದೂ ಏನೂ ಇಲ್ಲದವರು… ಬದುಕಿಗೆ ನೂರೆಂಟು ಮುಖಗಳು. ಒಬ್ಬೊಬ್ಬರ ಲೈಫಲ್ಲೂ ಒಂದೊಂದು ಬಗೆಯ ಕೊರತೆ, ಸಂಕಟ. ಇವುಗಳ ನಡುವೆಯೂ ಖುಷಿಯನ್ನು ಹುಡುಕಿಕೊಳ್ಳಬೇಕು. ಆಗ ತೆರೆದುಕೊಳ್ಳೋದು ಹೊಸ ದಿನಚರಿ!
ಖರೀದಿಸಲು ಸಾಧ್ಯವಾಗದ್ದು ಅಂತೇನಾದರೂ ಇದ್ದರೆ ಅದು ಪ್ರೀತಿ ಮಾತ್ರ. ಅದು ಮಾಯೆ. ಯಾರಿಗೆ, ಯಾವಾಗ, ಎಲ್ಲಿ ದಕ್ಕುತ್ತದೆ ಅಂತಾ ನಿಖರವಾಗಿ ಹೇಳಲಿಕ್ಕಾಗುವುದಿಲ್ಲ. ಬದುಕು ಇಷ್ಟೇ ಅಂತಾ ತೀರ್ಮಾನಿಸಿ ನಿಂತ ಒಣ ಹೃದಯದಲ್ಲಿಯೂ, ಯಾವುದೇ ಕ್ಷಣ ಒಲವಿನ ಚಿಗುರು ಟಿಸಿಲೊಡೆಯಬಹುದು. ಸಾವಿರ ವರ್ಷವಾದರೂ ಹೀಗೇ ಇದ್ದುಬಿಡಬೇಕು ಅಂದುಕೊಂಡವರು ಜೊತೆಗಿರಲಾರದೇ ಅರ್ಧಕ್ಕೇ ಎದ್ದು ನಡೆಯಬಹುದು. ಬೇಡ ಬೇಡ ಅಂತಾ ಬ್ರೇಕಪ್ಪಿಗೆ ತಯಾರಾದವರು ಬಿಟ್ಟೂಬಿಡಲಾರದೆ ಅಂಟಿಕೊಂಡು ಬಾಳ್ವೆ ನಡೆಸಬಹುದು. ಅದು, ವಿಧಿ ಲಿಖಿತವೋ, ಹಣೇಬರಹವೋ, ಅದೃಷ್ಟವೋ, ದುರಾದೃಷ್ಟವೋ ಗೊತ್ತಿಲ್ಲ. ಇಲ್ಲಿ ಯಾವುದೂ ಪೂರ್ವನಿರ್ಧಾರಿತವಲ್ಲ. ಎಲ್ಲವೂ ಆಕಸ್ಮಿಕ. ಯಾರ ಬದುಕಲ್ಲಿ ಏನು ಬೇಕಾದರೂ ಘಟಿಸಬಹುದು. ಆದರೆ ಪ್ರೀತಿ ಮಾತ್ರ ನಿರಂತರ ಪ್ರವಹಿಸುತ್ತಲೇ ಇರುತ್ತದೆ. ಮತ್ತೆ ಮತ್ತೆ ಬಂದು ಎದೆಗೆ ಅಪ್ಪಳಿಸುತ್ತಿರುತ್ತದೆ. ಥೇಟು ಸಮುದ್ರದ ಅಲೆಗಳಂತೆ…
- ಇಂಥ ಅದೆಷ್ಟೋ ಅವ್ಯಕ್ತ ಭಾವನೆಗಳನ್ನು ಒಂದೇ ಹಿಡಿಯಲ್ಲಿ ಹಿಡಿದು, ಬೊಗಸೆ ತುಂಬಾ ಮೊಗೆದುಕೊಟ್ಟಿರುವ ಚಿತ್ರ ಹೊಸ ದಿನಚರಿ. ಎಲ್ಲೆಲ್ಲೋ ಚೆದುರಿಹೋದ ಪಾತ್ರಗಳು ಬಂದು ಒಟ್ಟು ಸೇರುತ್ತವೆ. ದಿಕ್ಕು ದೆಸೆಯಿಲ್ಲದಂತೆ ಹರಿಯುವ ನಾಲ್ಕು ಪ್ರತ್ಯೇಕ ನದಿಗಳು ಒಂದು ಕೂಡಿ ಸಾಗರಕ್ಕೆ ಸೇರಿದಂತೆ ಇಲ್ಲಿ ʻಹೊಸ ದಿನಚರಿʼಯನ್ನು ಆರಂಭಿಸುತ್ತವೆ.
ಹೆತ್ತವರನ್ನು ಮರೆತು ಫಾರಿನ್ ಪಾಲಾದವರು, ತನ್ನವರಿಂದ ದೂರವೇ ಉಳಿದು ಪರರ ಸೇವೆಗೆ ನಿಂತ ವೈದ್ಯ, ಜೊತೆಗಿದ್ದೂ ಕಿತ್ತಾಡಿಕೊಳ್ಳುವ ಟೆಕ್ಕಿಗಳು, ನಲತ್ತೈದು ವರ್ಷ ಜೊತೆಗೆ ಬಾಳ್ವೆ ನಡೆಸಿದರೂ ಅದೇ ಪ್ರೀತಿಯನ್ನು ಪೋಷಿಸಿಕೊಂಡು ಬಂದ ವೃದ್ಧ ದಂಪತಿ, ಸಾಂಗತ್ಯ ಬಯಸುವ ಯುವಕ, ಬೇರುಗಳನ್ನು ಹುಡುಕಿಕೊಂಡು ಬರುವ ಹುಡುಗಿ…. ಹೀಗೆ ಅನೇಕ ಪಾತ್ರಗಳು ಹೊಸ ದಿನಚರಿಯಲ್ಲಿ ಬೆರೆತಿವೆ.
ʻಹೊಸ ದಿನಚರಿʼಯನ್ನು ಸಿನಿಮಾರಂಗಕ್ಕೆ ಹೊಸಬರಾದ ವೈಶಾಖ್ ಪುಷ್ಪಲತಾ ಮತ್ತು ಕೀರ್ತಿ ಶೇಖರ್ ಜೊತೆ ಸೇರಿ ನಿರ್ದೇಶನ ಮಾಡಿದ್ದಾರೆ. ಇವರು ಆಯ್ಕೆ ಮಾಡಿಕೊಂಡಿರುವ ವಿಚಾರವೇ ಇಷ್ಟು ಕ್ಯೂಟ್ ಆಗಿರುವಾಗ ಸಿನಿಮಾ ಮನಸ್ಸಿಗೆ ಹತ್ತಿರವಾಗದೇ ಇರಲು ಹೇಗೆ ಸಾಧ್ಯ? ಬದುಕಿನ ಸಣ್ಣ ಸಣ್ಣ ಸೂಕ್ಷ್ಮಗಳಿಗೆ ಕಥೆಯ ರೂಪ ಕೊಟ್ಟು ತೆರೆಯ ಮೇಲೆ ಕಟ್ಟುವುದು ಕಷ್ಟದ ಕೆಲಸ. ಅದೂ ಯಾವುದೇ ರೋಚಕತೆಯನ್ನು ಬೆರೆಸದೆ, ಅತಿರಂಜಕ ಅಂಶಗಳನ್ನು ತುರುಕದೇ ತಣ್ಣಗೆ ಹೇಳವುದು ಸುಮ್ಮನೇ ಮಾತಲ್ಲ. ಆದರೆ, ಅದನ್ನು ನಿರ್ದೇಶಕದ್ವಯರು ಸಲೀಸಾಗಿ ನೆರವೇರಿಸಿದ್ದಾರೆ.
ಬಾಬು ಹಿರಣ್ಣಯ್ಯ ಅದ್ಭುತ ಕಲಾವಿದ. ಹೊಸ ದಿನಚರಿ ನೋಡಿದ ಮೇಲೆ ಅವರ ಮೇಲಿನ ಗೌರವ ಹೆಚ್ಚಾಗುತ್ತದೆ. ಅರುಣಾ ಬಾಲರಾಜ್ ಕೂಡಾ ಇಷ್ಟವಾಗುತ್ತಾರೆ. ಚೇತನ್ ವಿಕ್ಕಿ ಮತ್ತು ದೀಪಕ್ ಸುಬ್ರಮಣ್ಯ ಎಂಬ ಇಬ್ಬರು ಕಲಾವಿದರು ಅಚ್ಛರಿ ಹುಟ್ಟಿಸುವಂತೆ ನಟಿಸಿ ʻಹೊಸ ದಿನಚರಿʼಯಲ್ಲಿ ಎಲ್ಲರನ್ನೂ ಆವರಿಸಿಕೊಳ್ಳುತ್ತಾರೆ. ಭಾರತೀಯ ಸಿನಿಮಾರಂಗದಲ್ಲಿ ಈ ಇಬ್ಬರೂ ನಟರು ದೊಡ್ಡ ಮಟ್ಟಕ್ಕೆ ಬೆಳೆದುನಿಲ್ಲೋದು ಖಚಿತ. ತಾಂತ್ರಿಕವಾಗಿಯೂ ಯಾವ ಕೊರತೆಗಳಿಲ್ಲದ ಸರಳ, ಸುಂದರ ಸಿನಿಮಾ ಇದು.
ನೋಡಿದ ಯಾರಿಗೇ ಆದರೂ ಇಷ್ಟವಾಗುವ ʻಹೊಸ ದಿನಚರಿʼಯನ್ನು ಎಲ್ಲರೂ ಒಮ್ಮೆ ನೋಡಿ…
No Comment! Be the first one.