ಆತ ಉತ್ತರ ಕರ್ನಾಟಕದ ಪ್ರತಿಷ್ಠಿತ ಇನಾಮ್ದಾರ್ ಮನೆತನದ ನಾಯಕ. ಮನೆಯಲ್ಲಿ ಮಕ್ಕಳಿಲ್ಲದ ಕೊರಗು. ಮಲೆನಾಡಿನ ತಪ್ಸೆ ಗುಡ್ಡದ ಶಿವನನ್ನು ಇದೇ ಮನೆತನೆ ಅನಾದಿಕಾಲದಿಂದಲೂ ಪೂಜಿಸುತ್ತಾ ಬಂದಿರುತ್ತದೆ. ಅದೊಂದು ದಿನ ತಪ್ಸೆ ಗುಡ್ಡದ ಶಿವನ ದಯೆಯಿಂದ ಇನಾಮ್ದಾರರ ಮನೆಯಲ್ಲಿ ಮಗುವಿನ ಸದ್ದು ಮೂಡುತ್ತದೆ! ಏಳು ತಿಂಗಳಿಗೇ ಹುಟ್ಟಿದ ಮಗು ಬದುಕಿದರೆ, ತಾಯಿ ಕಣ್ಮುಚ್ಚುತ್ತಾಳೆ. ತನ್ನ ಮನೆತನದ ಹೆಸರು ಉಳಿಸಿ ಬೆಳೆಸುವ ಮಗನಾಗಲಿ ಅಂತಾ ವೀರಬಾಹು ಅಂತಾ ಹೆಸರಿಟ್ಟಿರುತ್ತಾನೆ. ಆದರೆ, ಮಗು ಬೆಳೆಯುತ್ತಾ ವ್ಯಾಘ್ರ ರೂಪ ಪಡೆಯುತ್ತದೆ. ಸರ್ಕಾರ್ ಅಂತಾ ಗುರುತಿಸಿಕೊಳ್ಳುತ್ತಾನೆ. ಕಂಡ ಕಂಡ ಹೆಣ್ಮಕ್ಕಳ ಮೇಲೆ ಕಣ್ಣಿಡುತ್ತಾ, ವಿಲಾಸೀ ಬದುಕಿನ ಕಡೆ ವಾಲಿರುತ್ತಾನೆ. ಇಂಥವನೊಬ್ಬನ ಬದುಕಿನ ಪಥ ಬದಲಾಗಲು ಕಾರಣವಾವೇನು? ಮಾರ್ಪಾಟಾಗುವ ಹೊತ್ತಿಗೆ ಅಪ್ಪನ ಪರಿಸ್ಥಿತಿ ಏನಾಗಿರುತ್ತದೆ ಅನ್ನೋದು ಮೊದಲ ಭಾಗದ ಕ್ಯೂರಿಯಾಸಿಟಿ. ಹಾಗೆ ನೋಡಿದರೆ ಈ ಸಿನಿಮಾಗೆ ಎರಡೆರಡು ಕ್ಲೈಮ್ಯಾಕ್ಸುಗಳಿವೆ. ಮೊದಲ ಭಾಗಕ್ಕೊಂದು ಎರಡನೇ ಭಾಗಕ್ಕೊಂದು.
ಬದಲಾದ ವೀರಬಾಹು ಮತ್ತೆ ತಪ್ಸೆ ಗುಡ್ಡಕ್ಕೆ ಬಂದ ನಂತರ ಏನೇನಾಗುತ್ತದೆ? ಕಪಾಳದಲ್ಲಿ ಸದಾ ವಿಷವನ್ನಿರಿಸಿಕೊಂಡ ಕಾಡಿನ ರಾಜನಂಥಾ ಕಾಳಿಂಗ ಯಾರು? ಈ ಕಾಳಿಂಗನಿಗೂ ಕರಡಿ ಕಾಮ ಎನ್ನುವ ಕಾಡು ಮೃಗನಿಗೂ ಎಂಥಾ ಸಂಬಂಧ? ಅದೇ ಕಾಡಿನಲ್ಲಿರುವ ಭುವಿಯ ಹಿನ್ನೆಲೆ ಏನು? ಕಾಡು ಜೀವಗಳ ವಿರುದ್ಧ ಸರ್ಕಾರ, ಪೊಲೀಸು ಯಾಕೆ ಧಾಳಿ ಮಾಡುತ್ತದೆ? ಘೋರ ಮತ್ತು ಕಾಳ ಎನ್ನುವ ಪಾತ್ರಗಳ ಪ್ರಾಮುಖ್ಯತೆ ಎಷ್ಟಿದೆ? ಎನ್ನುವುದರ ಜೊತೆಗೆ ಕಟ್ಟಕಡೆಯದಾಗಿ ವೀರಬಾಹು ಮತ್ತು ಕರಡಿ ಕಾಮನ ನಡುವೆ ಯುದ್ದ ಏರ್ಪಡೋದು ಯಾಕೆ ಅನ್ನೋದು ‘ಇನಾಮ್ದಾರ’ನ ಕತೆಯ ಕೊನೆಯ ಕುತೂಹಲ.
ಮೇಲ್ನೋಟಕ್ಕೆ ಕಾಡಿನ ಉತ್ಫನ್ನ, ಗಂಧದ ಮರಗಳ ಕಳ್ಳ ಸಾಗಾಣಿಕೆಯ ಸುತ್ತ ಬೆಸೆದುಕೊಂಡ ವಿಚಾರ ಅನ್ನಿಸಿದರೂ ಪಶ್ಚಿಮಘಟ್ಟದಲ್ಲಿ ಮಾತ್ರ ಬೆಳೆಯುವ ಮ್ಯಾಜಿಕ್ ಮಶ್ರೂಮ್ ಎನ್ನುವ ಬೆಲೆಬಾಳುವ ಪದಾರ್ಥ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತದೆ. ಸಿಕ್ಕಾಪಟ್ಟೆ ಪಾತ್ರಗಳು, ಯಥೇಚ್ಛ ತಿರುವುಗಳು ಇಲ್ಲಿವೆ. ಒಂದು ಬೃಹತ್ ಕಾದಂಬರಿಯಾಗಬೇಕಿದ್ದ ವಿಸ್ತೃತ ಕಥಾವಸ್ತುವನ್ನು ನಿರ್ದೇಶಕ ಸಂದೇಶ್ ಶೆಟ್ಟಿ ಒಂದೇ ಹಿಡಿಯಲ್ಲಿ ದೃಶ್ಯ ರೂಪದಲ್ಲಿ ಹಿಡಿಯುವ ಪ್ರಯತ್ನ ಮಾಡಿದ್ದಾರೆ.
ಮೊದಲ ಭಾಗದಲ್ಲಿ ಸಿಲ್ಕ್ ಅವತಾರದಲ್ಲಿ ಕಾಣಿಸಿರುವ ಎಸ್ತರ್ ನರೋನಾ ನಟನೆ, ಮಾದಕ ಲುಕ್ಕು ಕಣ್ಕುಕ್ಕುತ್ತದೆ. ಹೀರೋ ರಂಜನ್ ಮತ್ತು ನಾಯಕಿ ಚಿರಶ್ರೀ ಅಂಚನ್ ಫೇಸಲ್ಲಿ ಇನ್ನೊಂಚೂರು ಎಕ್ಸ್ ಪ್ರೆಷನ್ ಬೇಕಿತ್ತು. ಕರಡಿ ಕಾಮನಾಗಿ ಸ್ವತಃ ನಿರ್ದೇಶಕ ಸಂದೇಶ್ ಶೆಟ್ಟಿ ಅಬ್ಬರಿಸಿ ನಟಿಸಿದ್ದಾರೆ. ಮಠ ಕೊಪ್ಪಳ, ಥ್ರಿಲ್ಲರ್ ಮಂಜು, ಶರತ್ ಲೋಹಿತಾಶ್ವ, ಪ್ರಶಾಂತ್ ಸಿದ್ದಿ, ಅವಿನಾಶ್, ರಘು ಪಾಂಡೇಶ್ವರ ಸೇರಿದಂತೆ ಅನೇಕ ನಟರು ಈ ಚಿತ್ರದ ಭಾಗವಾಗಿದ್ದಾರೆ.
ನಕುಲ್ ಅಭಯಂಕರ್ ಹಿನ್ನೆಲೆ ಸಂಗೀತ ಸಿನಿಮಾದ ತಾಕತ್ತು. ಮುರಳೀಧರ್ ಕ್ಯಾಮೆರಾ ಕೆಲಸ ಕೂಡಾ ಅಷ್ಟೇ ಚೆಂದ. ಶಿವರಾಜ್ ಮೇಹು ಸಂಕಲನ ಕೆಲಸಕ್ಕೆ ಹಾಕಿರುವ ಶ್ರಮ ಸಿನಿಮಾ ನೋಡಿದರಷ್ಟೇ ಗೊತ್ತಾಗೋದು.
ಇಡೀ ಸಿನಿಮಾ ನೋಡಿದ ಮೇಲೆ ಇಷ್ಟೊಂದು ಕಂಟೆಂಟ್ ಒಂದೇ ಚಿತ್ರದಲ್ಲಿ ಬೇಕಿದ್ದಾ ಅಂತಾ ಕೆಲವರಿಗೆ ಅನ್ನಿಸಬಹುದು. ಆದರೆ, ಕಥೆಯೇ ಇಲ್ಲದೆ, ಸವಕಲು ಚಿತ್ರಕತೆಯ ಸಿನಿಮಾಗಳ ನಡುವೆ ಇನಾಮ್ದಾರನನ್ನು ಮೆಚ್ಚಲು ಸಾಕಷ್ಟು ಅಂಶಗಳಿವೆ. ಒಮ್ಮೆ ಸಿನಿಮಾ ನೋಡಿ… ಇದು ಅಪ್ಪಟ ದೇಸೀ ಸೊಗಡಿನ ಸಿನಿಮಾ!
No Comment! Be the first one.