ಕನ್ನಡ ಚಿತ್ರರಂಗ ಕಳಾಹೀನವಾಗಿರುವ ಈ ಪರಿಸ್ಥಿತಿಯಲ್ಲಿ ಒಳ್ಳೊಳ್ಳೆ ಸಿನಿಮಾಗಳು ತೆರೆಗೆ ಬರಬೇಕು ಅನ್ನೋದು ಎಲ್ಲರ ಬಯಕೆಯಾಗಿದೆ. ಈ ಹೊತ್ತಿನಲ್ಲಿ ಉತ್ತಮ ಗುಣಮಟ್ಟದ, ಎಲ್ಲರೂ ಇಷ್ಟಪಡಬಹುದಾದ ಸಿನಿಮಾವೊಂದು ತೆರೆಗೆ ಬಂದಿದೆ. ಅದು ಕಿಶೋರ್ ಮೇಗಳಮನೆ ನಿರ್ದೇಶನದ ಕಾಂಗರೂ.
ನಟ ಆದಿತ್ಯ ಈ ಹಿಂದೆ ಬಹುತೇಕ ಕಮರ್ಷಿಯಲ್, ಆಕ್ಷನ್ ಸಿನಿಮಾಗಳಲ್ಲೇ ನಟಿಸಿದವರು. ಈ ಸಲ ಕಾಂಗರೂ ಹೆಸರಿನ ಸಿನಿಮಾದಲ್ಲಿ ಆದಿತ್ಯ ನಟಿಸುತ್ತಿದ್ದಾರೆ ಅಂದಾಗಲೇ ಎಲ್ಲರೂ ಆಶ್ಚರ್ಯ ಪಟ್ಟಿದ್ದರು. ಏನಿದು ಕಾಂಗರೂ, ಕಾಂಗರೂಗೆ ಈ ಸಿನಿಮಾಗೂ ಏನಾದರೂ ಸಂಬಂಧವಿದೆಯಾ ಅಂತೆಲ್ಲಾ ಯೋಚಿಸಬಹುದು. ಕಾಂಗರೂ ಎನ್ನುವ ಪ್ರಾಣಿಗೆ ನೇರ ಸಂಬಧವಿಲ್ಲದಿದ್ದರೂ ಇಡೀ ಸಿನಿಮಾದ ಮೆಟಫರ್ ಆಗಿದೆ ಅನ್ನೋದು ಇಲ್ಲಿ ವಿಶೇಷ. ಕಿಶೋರ್ ಮೇಗಳಮನೆ ಅವರ ಕೆಲಸ ನೋಡಿದರೇನೆ ಇವರೊಬ್ಬ ಬುದ್ದಿವಂತ ನಿರ್ದೇಶಕ ಅನ್ನೋದು ಗೊತ್ತಾಗುತ್ತದೆ.
ಕಾಂಗರೂ ಚಿತ್ರದ ಕತೆಯ ಬಹುಬಾಗ ಚಿಕ್ಕಮಗಳೂರಿನ ಹಿನ್ನೆಲೆಯಲ್ಲಿ ನಡೆಯುತ್ತದೆ. ಆ್ಯಂಟೋನಿ ಕಾಟೇಜ್‍ಗೆ ಆಗಮಿಸುವ ಗಂಡ-ಹೆಂಡತಿಗೆ ಚಿತ್ರವಿಚಿತ್ರ ಎಕ್ಸ್‌ಪೀರಿಯೆನ್ಸ್ ಆಗುತ್ತಿರುತ್ತದೆ. ಆ ಜಾಗದಿಂದ ಹಿಂತಿರುಗಿರವರಲ್ಲಿ ಕೆಲವರು ಆತ್ಮಹತ್ಯೆ ಮಾಡಿಕೊಂಡರೆ ಉಳಿದವರು ಯಾರಿಗೂ ಕಾಣದಂತೆ ಮಂಗಮಾಯವಾಗುತ್ತಿರುತ್ತಾರೆ. ಇವರೆಲ್ಲರ ನಿಗೂಢ ಸಾವಿಗೆ, ಮಿಸಿಂಗ್ ಕೇಸುಗಳಿಗೆ ಕಾರಣ ಯಾರು?
ಒಟ್ಟಾರೆ ಮಿತಿಮೀರಿದ ಕ್ರೈಮ್ ಅನ್ನು ಹತೋಟಿಗೆ ತರಲೆಂದೇ ಬಂದ ಇನ್ಸ್‌ಪೆಕ್ಟರ್ ಪೃಥ್ವಿಗೆ ಇಲ್ಲಿ ನಡೆಯುತ್ತಿರುವ ಅನಾಚಾರ, ಅನಾಹುತಗಳು ಒಂದೊಂದೇ ಗಮನಕ್ಕೆ ಬರುತ್ತದೆ. ಇದಕ್ಕೆಲ್ಲಾ ಕಾರಣ ದೆವ್ವವಾ? ಅಥವಾ ಯಾರದ್ದಾದರೂ ನೆರಳಿದೆಯಾ? ಅನ್ನೋದು ಚಿತ್ರದಲ್ಲಿ ಅನಾವರಣಗೊಳ್ಳುವ ಅಂತಿಮ ಗುಟ್ಟು.
ಥ್ರಿಲ್ಲರ್ ಸಿನಿಮಾಗಳು ಕನ್ನಡದಲ್ಲಿ ಸಾಕಷ್ಟು ಬಂದಿವೆ; ಬರುತ್ತಲೇ ಇರುತ್ತವೆ. ಆದರೆ, ಉತ್ತಮ ಗುಣ ಮಟ್ಟ ಇರುವ, ಅದರೊ ಜೊತೆಗೆ ಕ್ರಿಯಾಶೀಲತೆಯನ್ನೂ ಬೆರೆಸಿರುವ ಚಿತ್ರ ಕಾಂಗರೂ. ತನ್ನ ಕುಡಿಯನ್ನು ಚೀಲದಲ್ಲಿಟ್ಟುಕೊಂಡು ಪರೊಯುವುದು ಕಂಗರೂ ಗುಣ. ಹಾಗೆಯೇ ಇಲ್ಲಿ ಕೂಡಾ ತಾಯಿ ಮಗವನ್ನು ಹೇಗೆ ಬದುಕಿಸಿಕೊಳ್ಳುತ್ತಾಳೆ ಎನ್ನುವ ರೂಪಕ ಚಿತ್ರದಲ್ಲಿದೆ. ನಿರೀಕ್ಷೆ ಮಾಡಲಾರದ ತಿರುವುಗಳು, ನಿರೂಪಣೆಯಲ್ಲಿನ ಹೊಸತನದಿಂದ ಚಿತ್ರ ಸಾಗುವುದೇ ಗೊತ್ತಾಗುವುದಿಲ್ಲ. ತನಿಖಾಧಿಕಾರಿಯಾಗಿ ಆದಿತ್ಯ ಅದ್ಭುತವಾಗಿ ನಟಿಸಿದ್ದಾರೆ. ರಂಜನಿ ರಾಘವನ್ ಕೂಡಾ ಅಷ್ಟೇ ಚೆಂದದ ನಟನೆ ನೀಡಿದ್ದಾರೆ. ಸಾಧು ಕೋಕಿಲ ಹಿನ್ನೆಲೆ ಸಂಗೀತ ಚಿತ್ರದ ಶಕ್ತಿಯನ್ನು ಹೆಚ್ಚಿಸಿದೆ. ಉದಯ್ ಲೀಲಾ ಛಾಯಾಗ್ರಹಣ ಕೂಡಾ ಅಷ್ಟೇ ಬ್ರಿಲಿಯಂಟಾಗಿದೆ. ಶಿವಮಣಿ, ನಾಗೇಂದ್ರ ಅರಸ್, ಅಶ್ವಿನ್ ಹಾಸನ್, ಕರಿಸುಬ್ಬು ಮೊದಲಾದವರು ಪಾತ್ರಕ್ಕೆ ಬೇಕಿರುವಷ್ಟು ಅಭಿನಯಿಸಿದ್ದಾರೆ. ಒಟ್ಟಾರೆ ಈ ಸಮಯಕ್ಕೆ ಒಪ್ಪುವ ಒಳ್ಳೆಯ ಚಿತ್ರ ಇದಾಗಿದೆ…
No Comment! Be the first one.