೨೦೨೩ರಲ್ಲಿ ಬಂದ ಬಹುತೇಕ ಸಿನಿಮಾಗಳು ದೊಪ್ಪದೊಪ್ಪನೆ ನೆಲಕ್ಕಪ್ಪಳಿಸಿದ್ದರಿಂದ ಕನ್ನಡ ಚಿತ್ರರಂಗ ಹೆಚ್ಚೂ ಕಡಿಮೆ ಐಸಿಯೂ ಬೆಡ್ಡಿನಲ್ಲಿ ಮಲಗಿತ್ತು. ವರ್ಷದ ಕೊನೆಯಲ್ಲಿ ತೆರೆಕಂಡ ದರ್ಶನ್ ಅಭಿನಯದ ಕಾಟೇರ ಸಿನಿಮಾದ ಅಮೋಘ ಗೆಲುವು ಚಿತ್ರರಂಗ ಒಂದಿಷ್ಟು ಮಟ್ಟಕ್ಕಾದರೂ ಕಣ್ಣು ಬಿಡುವಂತಾಗಿತ್ತು. ನಂತರ ಚಿಕ್ಕಣ್ಣ ಹೀರೋ ಆಗಿ ನಟಿಸಿರುವ ಉಪಾಧ್ಯಕ್ಷ ಕೂಡ ನಿರೀಕ್ಷಿಸಿದ್ದಕ್ಕಿಂತಾ ದೊಡ್ಡ ಗೆಲುವು ಕಂಡು ಉಸಿರಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಸಿನಿಮಾ ಇಂಡಸ್ಟ್ರಿಯಲ್ಲಿ ಲವಲವಿಕೆಯ ವಾತಾವರಣ ನಿರ್ಮಾಣವಾಗಬೇಕೆಂದರೆ, ದೊಡ್ಡ ಸ್ಟಾರ್‌ಗಳ ಸಿನಿಮಾಗಳು ಅಲ್ಲೊಂದು ಇಲ್ಲೊಂದಾದರೂ ರಿಲೀಸಾಗುತ್ತಿರಬೇಕು. ಹೊಸಬರ ಸಿನಿಮಾಗಳು ಗೆಲುವು ಕಾಣಬೇಕು. ಆಗ ಹೊಸ ಪಿಚ್ಚರುಗಳು ಸೆಟ್ಟೇರಲು ಕಾರಣವಾಗುತ್ತದೆ. ಹಣ ಹೂಡಿಕೆ ಮಾಡಲು ನಿರ್ಮಾಪಕರಿಗೆ ಧೈರ್ಯ ಸಿಕ್ಕಂತಾಗುತ್ತದೆ. ಬಂದ ಸಿನಿಮಾಗಳೆಲ್ಲಾ ಹೇಳ ಹೆಸರಿಲ್ಲದಂತಾದರೆ ಯಾವ ನಿರ್ಮಾಕನಿಗೆ ತಾನೆ ಕಾಸು ಹಾಕುವ ಮನಸ್ಸಾಗುತ್ತದೆ?
ನಿರೀಕ್ಷೆಗಳೆಲ್ಲಾ ಠುಸ್!
ನಿರೀಕ್ಷಿತ ಸಿನಿಮಾಗಳ ಭಯಾನಕ ಸೋಲು ಇಡೀ ಚಿತ್ರರಂಗದಲ್ಲಿ ಆತಂಕ ಹುಟ್ಟಿಸುವುದು ಸುಳ್ಳಲ್ಲ. ಈ ನಿಟ್ಟಿನಲ್ಲಿ ನೋಡಹೋದರೆ, ೨೦೨೩ರಲ್ಲಿ ಉಪೇಂದ್ರ, ಶಿವಣ್ಣ, ಸುದೀಪ್ ಒಟ್ಟಾಗಿ ನಟಸಿದ್ದ ಕಬ್ಜ, ರಕ್ಷಿತ್ ಶೆಟ್ಟಿಯ ಸಪ್ತಸಾಗರದಾಚೆ ಎಲ್ಲೋ, ರಾಜ್ ಬಿ ಶೆಟ್ಟಿ ನಟಿಸಿದ್ದ ಟೋಬಿ, ಡಾರ್ಲಿಂಗ್ ಕೃಷ್ಣ ಅಭಿನಯದ ಸಾಲು ಸಾಲು ಚಿತ್ರಗಳು ಸೇರಿದಂತೆ ಸುಮಾರಷ್ಟು ಸಿನಿಮಾಗಳು ಮಕಾಡೆ ಮಲಗಿಬಿಟ್ಟವು. ಕಡೇ ಪಕ್ಷ ದರ್ಶನ್ ನಟನೆಯ ಕ್ರಾಂತಿ ಸಿನಿಮಾ ಬಾಕ್ಸಾಫೀಸ್ ಲೂಟಿ ಮಾಡಬಹುದು ಅಂತಾ ಬಯಸಿದರೆ ಅದೂ ಆಗಲಿಲ್ಲ. ದರ್ಶನ್ ಕೆರಿಯರ್‌ನಲ್ಲೇ ಅತೀ ಕಳಪೆ ಸಿನಿಮಾ ಅನ್ನೋದನ್ನು ಸ್ವತಃ ಅದರ ನಿರ್ದೇಶಕ ಹರಿಕೃಷ್ಣ ಪ್ರೂವ್ ಮಾಡಿದ್ದರು. ಯೋಗರಾಜ್ ಭಟ್ ನರ್ದೇಶನದ ಗರಡಿ ಸಿನಿಮಾದಲ್ಲಿ ಖುದ್ದು ದರ್ಶನ್ ಬಂದು ಗೆಸ್ಟ್ ರೋಲಲ್ಲಿ ಕಾಣಿಸಿಕೊಂಡರು. ಏನೇ ಗುದ್ದಾಟ ಮಾಡಿದರೂ ಗರಡಿಯಿಂದ ನಿರ್ಮಾಪಕ ಬಿ.ಸಿ. ಪಾಟೀಲರಿಗೆ ಲುಕ್ಸಾನಾಗೋದನ್ನು ತಪ್ಪಿಸಲು ಆಗಲಿಲ್ಲ. ಡಾಲಿ ಧನಂಜಯ ನಟನೆಯ ಹೊಯ್ಸಳ ಕೂಡಾ ಹೊಗೆ ಹಾಕಿಸಿಕೊಂಡಿತು.
ಗೋಲ್ಡನ್ ಸ್ಟಾರ್ ಗಣಿಯ ಬಾನ ದಾರಿಯಲ್ಲಿ ಬಂದಿದ್ದೂ ಗೊತ್ತಾಗಲಿಲ್ಲ, ಹೋಗಿದ್ದೂ ಗೊತ್ತಾಗಲಿಲ್ಲ. ಹೊಂಬಾಳೆ ಸಂಸ್ಥೆ ನಿರ್ಮಿಸಿದ್ದ, ಪವನ್ ಕುಮಾರ್ ನಿರ್ದೇಶನದ ಧೂಮಂ ಎನ್ನುವ ಸಿನಿಮಾ ದೊಡ್ಡ ಮಟ್ಟದಲ್ಲಿ ಏನೋ ಕಿತ್ತು ಗುಡ್ಡೆ ಹಾಕುತ್ತದೆ ಅನ್ನೋದು ಎಲ್ಲರ ನಂಬಿಕೆಯಾಗಿತ್ತು. ಆದರೆ ಭಾರತೀಯ ಚಿತ್ರರಂಗದ ಘಟಾನುಘಟಿ ನಟರಿದ್ದರೂ ಧೂಮಂ ಯಾರೂ ನಿರೀಕ್ಷಿಸದ ಮಟ್ಟಲ್ಲಿ ಹೊಗೆ ಹಾಕಿಸಿಕೊಂಡಿತು. ಅದರಲ್ಲೂ ಕಬ್ಜ ಸಿನಿಮಾ ಕೊಟ್ಟ ಏಟಿಕೆ ಇಡೀ ಭಾರತೀಯ ಚಿತ್ರರಂಗದಲ್ಲಿ ಕನ್ನಡ ಸಿನಿಮಾರಂಗದ ಹೆಸರು ಕೆಟ್ಟಿತು. ಕಬ್ಜಕ್ಕೆ ವಿಪರೀತ ಪಬ್ಲಿಸಿಟಿ ಮಾಡಿ ಸರಿ ಸುಮಾರು ಎಪ್ಪತ್ತು ಕೋಟಿ ರುಪಾಯಿಗಳ ವ್ಯಾಪಾರ ಗಿಟ್ಟಿಸಿದ್ದರು. ಕಬ್ಜ ಸೃಷ್ಟಿಸಿದ ಕ್ರೇಜು ನೋಡಿ ಸಿನಿಮಾ ನೋಡದೆಯೇ ಡಬ್ಬಿಂಗ್, ಟೀವಿ ರೈಟ್ಸುಗಳನ್ನು ಬಾಂಬೆ ಕಂಪನಿ ಖರೀದಿ ಮಾಡಿತ್ತು. ಯಾವಾಗ ತೆರೆಗೆ ಬಂದ ಸಿನಿಮಾದ ಅಸಲೀ ಬಂಡವಾಳ ಹೊರಬಿತ್ತೋ, ಖರೀದಿಗಾಗಿ ನಿಂತಿದ್ದ ಕಂಪನಿಗಳೆಲ್ಲಾ ಕನ್ನಡ ಚಿತ್ರರಂಗದತ್ತ ಅನುಮಾನದ ದೃಷ್ಟಿ ಬೀರಲು ಶುರು ಮಾಡಿದರು. ʻʻಸ್ಯಾಂಡಲ್‌ವುಡ್ಡಿನ ಸಿನಿಮಾಗಳ ಸಾವಾಸವೇ ಬೇಡ. ರಿಲೀಸಿಗೂ ಮುಂಚೆ ಯಾವ ಕಾರಣಕ್ಕೂ ಬಿಡ್ ಮಾಡೋದು, ಪರ್ಚೇಸ್ ಮಾಡುವುದರ ತಂಟೆಗೆ ಹೋಗೋದು ಬೇಡ. ಮೊದಲು ಥೇಟರಿಗೆ ಬರಲಿ, ಗೆದ್ದರೆ ಕೊಂಡುಕೊಳ್ಳೋಣʼʼ ಅಂತಾ ತೀರ್ಮಾನಿಸಿಬಿಟ್ಟರು. ಕನ್ನಡ ಚಿತ್ರರಂಗ ಕುಸಿದುಬೀಳಲು ಇಷ್ಟು ಸಾಕಿತ್ತು. ರಕ್ಷಿತ್ ಶೆಟ್ಟಿ ಕೂಡಾ ಸಪ್ತಸಾಗರದಾಚೆ ಸೈಡ್ ಎ ಮತ್ತು ಸೈಡ್ ಬಿ ಎರಡೂ ಸಿನಿಮಾಗಳನ್ನು ಬಿಡುಗಡೆಗೆ ಮುಂಚೆಯೇ ಒಳ್ಳೆ ಮೊತ್ತಕ್ಕೆ ಸೇಲ್ ಮಾಡಿದ್ದರು. ದುರಂತಕ್ಕೆ ಸಿನಿಮಾದ ಎರಡೂ ಪಾರ್ಟುಗಳು ಹೇಳಿಕೊಳ್ಳುವಂತಾ ಯಶಸ್ಸು ಕಾಣಲಿಲ್ಲ. ಸಿನಿಮಾದ ಕಂಟೆಂಟು ಚೆನ್ನಾಗೇ ಇದ್ದರೂ ಪ್ರೇಕ್ಷಕರಿಗೆ ಅದು ರುಚಿಸಲಿಲ್ಲ. ಇವೆಲ್ಲದರ ನಡುವೆ ತಮಿಳಿನ ಜೈಲರ್, ಕ್ಯಾಪ್ಟನ್ ಮಿಲ್ಲರ್, ಸಲಾರ್ ಸೇರಿದಂತೆ ಪರಭಾಷೆಯ ಅನೇಕ ದೊಡ್ಡ ಸಿನಿಮಾಗಳು ತೆರೆಗೆ ಬಂದವು. ಕನ್ನಡದ ಸಿನಿಮಾಗಳು ರಿಲೀಸಾಗುತ್ತಿದ್ದ ಥೇಟರುಗಳನ್ನು ಆಕ್ರಮಿಸಿಕೊಂಡವು. ಇವೆಲ್ಲ ಕಾರಣಗಳ ನಡುವೆ ಕನ್ನಡ ಸಿನಿಮಾಗಳು ಅಕ್ಷರಶಃ ಉಸಿರು ಚೆಲ್ಲಿ ಮಗಲಿದ್ದವು.
ಇರೋದರಲ್ಲಿ ಹೊಸಬರ ತಂಡದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಊಹೆಗೂ ಮೀರಿ ಲಾಭ ಮಾಡಿತ್ತು. ಹೊಸ ನಿರ್ದೇಶಕ ಉಮೇಶ್ ಕೃಪ ನಿರ್ದೇಶನದ ಟಗರು ಪಲ್ಯ ಒಳ್ಳೇ ರುಚಿ ಕೊಟ್ಟಿತ್ತು. ಈ ಚಿತ್ರವನ್ನು ನಿರ್ಮಿಸಿದ್ದ ಡಾಲಿ ಧನಂಜಯ ಅವರಿಗೆ ಲಾಭವನ್ನೂ ತಂದುಕೊಟ್ಟಿತು. ಯುವ ನಿರ್ದೇಶಕ ಜಗನ್ನಾಥ ನಿರ್ದೇಶನದ ಹೊಂದಿಸಿ ಬರೆಯಿರು ಥೇಟರಲ್ಲಿ ಗೆಲ್ಲುವ ಎಲ್ಲ ಅಂಶಗಳನ್ನು ಹೊಂದಿತ್ತು. ಆದರೆ ಬಾಕ್ಸಾಫೀಸಿನಲ್ಲಿ ಗೆಲ್ಲದ ಈ ಚಿತ್ರ ಓಟಿಟಿ ಪ್ಲಾಟ್‌ಫಾರ್ಮಿನಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದು ದಾಖಲೆ ನಿರ್ಮಿಸಿತು. ಜಯತೀರ್ಥ ನಿರ್ದೇಶನದ, ಧ್ವನೀರ್ ನಟನೆಯ ಕೈವ ಸಿನಿಮಾದಲ್ಲಿ ಯಾವ ಕೊರತೆಯೂ ಇರಲಿಲ್ಲ. ಒಬ್ಬ ಹೊಸ ಹೀರೋ ಎದ್ದು ನಿಲ್ಲಲು ಬೇಕಿರುವ ಎಲ್ಲ ಅಶಂಗಳೂ ಇದ್ದವು. ಅದ್ಯಾಕೋ ಏನೋ ಕೈವ ಹೇಳಿಕೊಳ್ಳುವ ಮಟ್ಟಕ್ಕೆ ಸೌಂಡು ಮಾಡಲಿಲ್ಲ.
ಚಿಕ್ಕನ ಲಕ್ಕು ಕುದುರಿತು!
ಇವೆಲ್ಲದರ ನಡುವೆ ೨೦೨೪ ಚಿತ್ರರಂಗದ ಪಾಲಿಗೆ ಏನಾಗಲಿದೆಯೋ ಎನ್ನುವ ಆತಂಕವೇ ಹೆಚ್ಚಾಗಿತ್ತು. ಹೊಸ ವರ್ಷದ ಹೊಸ್ತಿಲಿಗೇ ಬಂದ ಕಾಟೇರ ಇದ್ದ ಭಯವನ್ನೆಲ್ಲಾ ದೂರಾಗಿಸಿ, ದಾಖಲೆ ಬರೆಯಿತು. ಒಂದು ವೇಳೆ ಕಾಟೇರ ತೆರೆಗೆ ಬರದೇ ಹೋಗಿದ್ದಿದ್ದರೆ, ಈ ಹೊತ್ತಿಗೆ ಇದ್ದ ಬದ್ದ ಥೇಟರುಗಳೂ ಬಾಗಿಲು ಮುಚ್ಚಬೇಕಾಗಿತ್ತು. ಚಿಕ್ಕಣ್ಣ ಹೀರೋ ಆಗಿ ನಟಿಸಿದ್ದ, ಉಮಾಪತಿ ಶ್ರೀನಿವಾಸ್ ನಿರ್ಮಾಣದ ಉಪಾಧ್ಯಕ್ಷ ಕೂಡಾ ಲಾಭ ಮಾಡಿದ್ದು ವರ್ಷದ ಆರಂಭದಲ್ಲಿ ಚಿತ್ರರಂಗದ ವಲಯದಲ್ಲಿ ತಣ್ಣನೆಯ ವಾತಾವರಣ ನಿರ್ಮಿಸಿದ್ದು ನಿಜ. ಹಾಗೆ ನೋಡಿದರೆ ಉಪಾಧ್ಯಕ್ಷ ರಿಲೀಸಿಗೂ ಮುಂಚೇ ಅಂತಾ ಕ್ರೇಜು ಸೃಷ್ಟಿಸಿರಲಿಲ್ಲ. ದರ್ಶನ್ ಆದಿಯಾಗಿ ಇರೋ ಬರೋ ಸ್ಟಾರ್‌ಗಳೆಲ್ಲಾ ಸಿನಿಮಾದ ಬಗ್ಗೆ ಒಳ್ಳೇ ಮಾತಾಡಿದ್ದರಿಂದ ಬಹುಶಃ ಕಲೆಕ್ಷನ್ ಕಾಣುವಂತಾಯಿತು. ಹಾಸ್ಯನಟನಾಗಿ, ಪೋಷಕ ಕಲಾವಿದನಾಗಿದ್ದ ಚಿಕ್ಕಣ್ಣ ಇರೋ ಕೆಲಸವನ್ನೆಲ್ಲಾ ಬಿಟ್ಟು ಹೀರೋ ಆಗಲು ನಿಂತಾಗ ಗಾಂಧೀನಗರದ ಜನ ಮುಸಿಮುಸಿ ನಕ್ಕಿದ್ದರು. ಎಲ್ಲ ಹೀರೋಗಳ ಜೊತೆ ಛಾನ್ಸು ಗಿಟ್ಟಿಸಿಕೊಂಡು ತಿರುಗುತ್ತಿರುವವನಿಗೆ ಹೀರೋ ಆಗುವ ತಿಕ್ಕಲು ಯಾಕೆ ಹಿಡಿಯಿತೋ ಅಂತಾ ಜನ ಮಾತಾಡಿಕೊಂಡಿದ್ದರು. ಅಷ್ಟರಲ್ಲಾಗಲೇ ತನ್ನ ಧಿಮಾಕು, ತಮಿರಿನಿಂದ ಚಿಕ್ಕ ಹೆಸರು ಕೆಡಿಸಿಕೊಂಡಿದ್ದ. ಹೀರೋಗಳಿಗೆ ಬಕೀಟು ಹಿಡಿದು ಅವಕಾಶ ಪಡೆಯೋದನ್ನೇ ಟ್ಯಾಲೆಂಟು ಅಂದುಕೊಂಡಿದ್ದ. ಚಿಕ್ಕನ ನಸೀಬು ಕೆಟ್ಟು ಉಪಾಧ್ಯಕ್ಷ ಏನಾದರೂ ಉಲ್ಟಾ ಹೊಡೆದಿದ್ದರೆ, ʻʻಅತ್ತ ಕಾಮಿಡಿ ರೋಲೂ ಇಲ್ಲ, ಇತ್ತ ಹೀರೋ ಗಿರಿಯೂ ಉಳಿಯಲಿಲ್ಲʼʼ ಎನ್ನುವಂತಾಗುತ್ತಿತ್ತು. ಆದರೆ ಉಮಾಪತಿಯ ಕೈಗುಣವೋ, ಚಿಕ್ಕಣ್ಣನ ಲಕ್ಕೋ ಗೊತ್ತಿಲ್ಲ. ಉಪಾಧ್ಯಕ್ಷ ಭರ್ಜರಿ ಗಳಿಕೆ ಮಾಡಿದ. ಈ ಸಿನಿಮಾಗಾಗಿ ಉಮಾಪತಿ ತೀರಾ ದೊಡ್ಡ ಮಟ್ಟದ ಹಣವನ್ನೇನೂ ಹೂಡಿಕೆ ಮಾಡಿರಲಿಲ್ಲ. ಹೆಚ್ಚೆಂದರೆ ಮೂರು ಕೋಟಿಗಳನ್ನು ವ್ಯಯಿಸಿದ್ದರು. ಸಿನಿಮಾ ಬಿಡುಗಡೆಗೆ ಮುಂಚೆಯೇ ಉದಯ ಟೀವಿಯವರು ಬರೋಬ್ಬರಿ ಎರಡು ಕೋಟಿ ರೂಪಾಯಿಗಳನ್ನು ಕೊಟ್ಟು ಹಕ್ಕುಗಖನ್ನು ಖರೀದಿಸಿತ್ತು. ಆಡಿಯೋ, ಡಬ್ಬಿಂಗು, ಅದೂ ಇದೂ ಅಂತಾ ಲೆಕ್ಕ ಹಾಕಿದರೂ ನಾಲ್ಕು ಕೋಟಿ ರುಪಾಯಿಗಳ ವ್ಯಾಪಾರವಾಗಿತ್ತು. ಇನ್ನು, ಚಿತ್ರ ತೆರೆ ಕಂಡ ನಂತರ ಮೊದಲ ವಾರದ ಶೇರು ಮೂರು ಕೋಟಿ ಮತ್ತು ಎರಡನೇ ವಾರಕ್ಕೆ ಒಂದೂವರೆ ಕೋಟಿ ರೂಪಾಯಿಗಳ ನಿವ್ವಳ ಲಾಭ ನಿರ್ಮಾಪಕ ಉಮಾಪತಿ ಕೈ ಸೇರಿತು. ಅಲ್ಲಿಗೆ ಮೂರು ಕೋಟಿಯ ಉಪಾಧ್ಯಕ್ಷ ಎಂಟೂವರೆ ಕೋಟಿಯ ಬ್ಯುಸಿನೆಸ್ಸು ಮಾಡಿದಂತಾಗಿತ್ತು.
ಈ ವರ್ಷ ಈ ಎರಡು ಸಿನಿಮಾಗಳ ಗೆಲುವು ಕಂಡಿರೋದರಿಂದ ಲಾಭ ಮಾಡಿದವರ ಖುಷಿಯ ಜೊತೆಗೆ ಚಿತ್ರರಂಗದಲ್ಲಿ ಹೂಡಿಕೆ ಮಾಡಲು ತಯಾರಾಗಿರುವ ಪ್ರೊಡ್ಯೂಸರುಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುವ ಸಾಧ್ಯತೆ ಇದೆ ಎನ್ನುವ ಅಂದಾಜು ಮಾಡಲಾಗಿತ್ತು. ಆದರೆ, ಈದಾದ ನಂತರ ಯಾವ ಸಿನಿಮಾಗಳೂ ಥೇಟರಲ್ಲಿ ನಿಲ್ಲದೇ ಹೋಗುತ್ತಿರುವುದು ಆತಂಕ ಹೆಚ್ಚಿಸಿದೆ…!
….. ಮುಂದುವರೆಯುವುದು
(ಚಿತ್ರರಂಗ ಚಿಂತಾಚನಕ : 2024ರ ಮೂರು ತಿಂಗಳಲ್ಲಿ ಬಿಡುಗಡೆಯಾದ 70 ಸಿನಿಮಾಗಳ ಕಂಪ್ಲೀಟ್ ಜಾತಕ)
No Comment! Be the first one.