ಒಂದೇ ಒಂದು ಮೋಷನ್ ಪೋಸ್ಟರ್ ಮೂಲಕ ಒಂದಷ್ಟು ಬಗೆಯ ಚರ್ಚೆ ಮತ್ತು ಕುತೂಹಲ ಹುಟ್ಟುಹಾಕಿದ್ದ ಚಿತ್ರ `ಕೆಂಡ’. ಈ ಹಿಂದೆ `ಗಂಟುಮೂಟೆ’ ಎಂಬ ಭಿನ್ನ ಕಥಾನಕದ ಮೂಲಕ ಸೆಳೆದಿದ್ದ ತಂಡವೇ ಕೆಂಡದ ರೂವಾರಿಯಾಗಿರುವುದು ಕೂಡಾ ಅದಕ್ಕೊಂದು ಕಾರಣ. ಗಂಟುಮೂಟೆ ಮೂಲಕ ಬೆರಗೊಂದನ್ನು ತೆರೆದಿಟ್ಟಿದ್ದ ರೂಪಾ ರಾವ್ ಮತ್ತು ಛಾಯಾಗ್ರಾಹಕರಾಗಿದ್ದುಕೊಂಡು, ನಿರ್ಮಾಣದಲ್ಲಿಯೂ ಭಾಗಿಯಾಗಿದ್ದ ಸಹದೇವ್ ಕೆಲವಡಿ ಒಟ್ಟುಗೂಡಿ ಕೆಂಡವನ್ನು ರೂಪಿಸಿದ್ದಾರೆ. ಈ ಮೂಲಕ ಛಾಯಾಗ್ರಾಹಕ ಸಹದೇವ್ ಕೆಲವಡಿ ನಿರ್ದೇಶಕರಾಗಿಯೂ ಬಡ್ತಿ ಪಡೆದುಕೊಂಡಿದ್ದಾರೆ. ಮೋಷನ್ ಪೋಸ್ಟರ್ ಮತ್ತು ಅದರ ಸಲುವಾಗಿ ಚಿತ್ರತಂಡ ಹಂಚಿಕೊಂಡಿದ್ದ ಒಂದಷ್ಟು ವಿವರಗಳಿಂದಾಗಿಯೇ ಕೆಂಡ ಪ್ರೇಕ್ಷಕರನ್ನು ಸೆಳೆದುಕೊಂಡಿತ್ತು. ಇದೀಗ ಚಿತ್ರತಂಡ ಕೆಂಡದ ಒಡಲಲ್ಲಿರುವ ವಿಭಿನ್ನವಾದ ಒಂದಷ್ಟು ಪಾತ್ರಗಳನ್ನು ಪರಿಚಯ ಮಾಡಿಸಿದೆ. ಒಂದು ವೀಡಿಯೋ ಮೂಲಕ ಕೆಂಡದೊಳಗಿನ ಪಾತ್ರಗಳು ಅನಾವರಣಗೊಂಡಿವೆ.
ಸಚ್ಚಾ ನಿರ್ವಹಿಸಿರುವ ಲೋಕೇಶ್ ಎಂಬ ಪಾತ್ರ, ಜಯರಾಮ್ ಆಗಿ ನಟಿಸಿರುವ ಶರತ್ ಗೌಡ, ಪ್ರಣವ್ ಶ್ರೀಧರ್ ಅವರ ವಿನಾಯಕ ಎಂಬ ಪಾತ್ರ, ಕೇಶವನಾಗಿರುವ ಬಿ.ವಿ ಭರತ್ ಒಂದೇ ಸಲ..ಕ್ಕೆ ಸೆಳೆಯುವಂಥಾ ಲುಕ್ಕಿನಲ್ಲಿ ಕಂಗೊಳಿಸಿದ್ದಾರೆ.
ಈ ಹಿಂದೆ ಒಂದಷ್ಟು ಸಿನಿಮಾಗಳಲ್ಲಿ ಕೆಲ ಪಾತ್ರಗಳೇ ಅಗಾಧವಾದ ಕ್ರೇಜ್ ಸೃಷ್ಟಿಸಿದ್ದವು. ಇಲ್ಲಿನ ಪಾತ್ರಗಳೂ ಕೂಡಾ ಅಂಥಾದ್ದರ ರೂವಾರಿಯಾಗುವ ಲಕ್ಷಣಗಳು ದಟ್ಟವಾಗಿವೆ. ಅಂದಹಾಗೆ, ಅಮೇಯುಕ್ತಿ ಸ್ಟುಡಿಯೋಸ್ ಮೂಲಕ ಈ ಚಿತ್ರ ನಿರ್ಮಾಣಗೊಂಡಿದೆ. ಪ್ರಸಕ್ತ ಸನ್ನಿವೇಷಗಳಿಗೆ ತಕ್ಕುದಾಗಿರುವ ಈ ಕಥನ ರಗಡ್ ಶೈಲಿಯಲ್ಲಿದೆ ಎಂಬುದನ್ನು ಶೀರ್ಷಿಕೆಯೇ ಸಾರಿ ಹೇಳಿತ್ತು. ಇದೀಗ ತೆರೆದುಕೊಂಡಿರುವ ಪಾತ್ರಗಳು ಆ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಿವೆ. ಕೆಂಡದ ತಾರಾಗಣವೆಲ್ಲ ಹೊಸಬರಿಂದಲೇ ತುಂಬಿಕೊಂಡಿದೆ. ರಂಗಭೂಮಿ ಪ್ರತಿಭೆಗಳಿಲ್ಲಿ ಪ್ರಧಾನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಬಿ.ವಿ ಭರತ್, ಪ್ರಣವ್ ಶ್ರೀಧರ್, ವಿನೋದ್ ರವೀಂದ್ರನ್, ಗೋಪಾಲ ದೇಶಪಾಂಡೆ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.
ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ ಅವರ ಪುತ್ರ ರಿತ್ವಿಕ್ ಕಾಯ್ಕಿಣಿ ಈ ಸಿನಿಮಾ ಮೂಲಕ ಸಂಗೀತ ನಿರ್ದೇಶಕರಾಗುತ್ತಿದ್ದಾರೆ. ಕಥೆಯೊಂದಿಗೇ ಹೊಸೆದುಕೊಂಡಂಥಾ ಎರಡು ಹಾಡುಗಳಿಗೆ ಖುದ್ದು ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ಎಲಿಫೆಂಟ್ ವಿಸ್ಪರ್ಸ್ ಚಿತ್ರದ ಭಾಗವಾಗಿದ್ದ ಶ್ರೇಯಾಂಕ್ ನಂಜಪ್ಪ ಕೆಂಡ ಚಿತ್ರಕ್ಕೆ ಶಬ್ಧ ಸಂಯೋಜನೆ ಮಾಡಿದ್ದಾರೆ. ಗಂಟುಮೂಟೆಯಂಥಾ ಚೆಂದದ ಸಿನಿಮಾ ಕೊಟ್ಟಿದ್ದ ತಂಡವೇ ಕೆಂಡದ ಸಾರಥ್ಯ ವಹಿಸಿರೋದರಿಂದಾಗಿ, ಈ ಚಿತ್ರ ಒಂದಷ್ಟು ಕುತೂಹಲ ಮೂಡಿಸಿದೆ. ಯುವ ಸಮೂಹದ ಕನಸು, ನಿರಾಸೆ, ತವಕ ತಲ್ಲಣಗಳನ್ನು ಹೊಂದಿರುವ ಈ ಚಿತ್ರ ಈಗಾಗಲೇ ಚಿತ್ರೀಕರಣ ಮುಗಿಸಿಕೊಂಡಿದೆ. ಪೋಸ್ಟ್ ಪ್ರೊಡಕ್ಷನ್ ಕಾರ್ಯವೂ ಅಂತಿಮ ಘಟ್ಟದಲ್ಲಿದೆ. ಹೀಗೆ ಹಂತ ಹಂತವಾಗಿ ಕೆಂಡ ಪ್ರೇಕ್ಷಕರೊಳಗೆ ಕುತೂಹಲ ಮೂಡಿಸುತ್ತಿದೆ.
Other Articles
Next
October 26, 2023
`ಕೆಂಡ’ದೊಳಗಿವೆ ಬೆಂಕಿಯಂಥಾ ಕ್ಯಾರೆಕ್ಟರ್ ಗಳು!
Previews
October 26, 2023
No Comment! Be the first one.