#MalenadaGombe #Kerebete #gowrishankarSRG #BinduShivaram #a2music #kannadasongs

ಕೆರೆಬೇಟೆಯಲ್ಲಡಗಿದೆ ಮಲೆನಾಡಿನ ಕರಾಳ ಸತ್ಯ!

ಅವನು ಭಯಂಕರ ಒರಟ. ಗಂಡಸು, ಹೆಂಗಸು ಅನ್ನೋದನ್ನೂ ನೋಡದೆ ಯಾರೆಂದರೆ ಅವರ ಮೇಲೆ ಮುರಕೊಂಡು ಬೀಳುವ ಕೋಪಿಷ್ಟ. ಎರಡು ಎಕರೆ ಗದ್ದೆ, ತೋಟ ಖರೀದಿ ಮಾಡೋದೇ ಇವನಿಗೆ ಬದುಕಿನ ಪರಮ ಗುರಿ. ಹೆಸರು ಕೆರೆಮನೆ ನಾಗ!

ರಾಜಾರೋಷವಾಗಿ ನಾಟಾ ಕಳ್ಳಸಾಗಾಣೆ ಮಾಡಿಕೊಂಡಿದ್ದ ನಾಗ ಜೈಲಿಂದ ಹೊರಬಂದಿರುತ್ತಾನೆ. ಮಲೆನಾಡ ಗೊಂಬೆಯೊಂದನ್ನು ನೋಡಿ ಈ ಮನೆಹಾಳನ ಮನಸೋಲುತ್ತದೆ. ಜಾತಿ ಕಾರಣಕ್ಕೆ ಒಲ್ಲೆ ಅನ್ನುವ  ಅವರಪ್ಪನ ವಿರೋಧವನ್ನೂ ಲೆಕ್ಕಿಸದೆ ಹುಡುಗಿಯನ್ನು ಎತ್ತಾಕಿಕೊಂಡು ಬರುತ್ತಾನೆ. ಮುಂದೆ ಯಾರೂ ನಿರೀಕ್ಷಿಸಲೂ ಸಾಧ್ಯವಾಗದ ತಿರುವುಗಳು ಘಟಿಸುತ್ತವೆ. ಎಷ್ಟೇ ಗಟ್ಟಿಗರಾದರೂ, ನೂರು ಜನರೊಟ್ಟಿಗೆ ಬಡಿದಾಡಿ ಗೆದ್ದರೂ, ಪ್ರಳಯಾಂತಕರೇ ಆದರೂ ಜಾತಿ, ಪ್ರತಿಷ್ಠೆಗಳನ್ನು ಜಯಿಸೋದು ಸುಲಭದ ಮಾತಲ್ಲ.

ಇಷ್ಟಪಟ್ಟು ಕಟ್ಟಿಕೊಂಡು ಹುಡುಗಿಯನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯಬೇಕಾದ ಜವಾಬ್ದಾರಿ ಹುಡುಗನದ್ದು. ಆದರೆ, ಕೆರೆಮನೆ ನಾಗ ಯಾಕೆ ಹಾಗೆಲ್ಲಾ ಮಾಡಿಬಿಟ್ಟ? ಆತ ಈ ರೀತಿ ವರ್ತಿಸಿದ್ದು ಸರೀನಾ ಎಂಬಿತ್ಯಾದಿಯಾಗಿ ನೋಡುಗರ ಎದೆಯಲ್ಲಿ ನೂರೆಂಟು ಪ್ರಶ್ನೆಗಳು ಮೂಡುತ್ತವೆ. ಆದರೆ ಅಸಲಿಗೆ ಅಲ್ಲಿ ನಡೆದಿದ್ದೇನು ಅಂತಾ ತಿಳಿದುಕೊಳ್ಳಬೇಕಾದರೆ, ಚಿತ್ರದ ಕಟ್ಟಕಡೆಯ ದೃಶ್ಯದ ತನಕ ಕಾಯಲೇಬೇಕು.

ಮಲೆನಾಡು ಅಂದರೆ ಹಸಿರಿನ ಸೊಬಗು, ತಣ್ಣನೆಯ ವಾತಾವರಣ, ಜಿಟಿಜಿಟಿ ಮಳೆ ಇತ್ಯಾದಿಗಳೇ ಎಲ್ಲರ ಮನಸ್ಸಿಗೆ ಬರುತ್ತದೆ. ಆದರೆ, ಇದೇ ಹಸಿರು ಗರ್ಭದಲ್ಲಿ ಭಯಾನಕ ಕ್ರೌರ್ಯ, ಜಾತಿ, ಪ್ರತಿಷ್ಟೆಗಳೆಲ್ಲಾ ಬೇರುಬಿಟ್ಟಿವೆ. ನೆತ್ತರ ಕಲೆಗಳೆಲ್ಲಾ ಜಿಟಿಜಿಟಿ ಮಳೆಯ ನೀರಲ್ಲಿ ತೊಳೆದುಕೊಂಡು ಹೋಗುತ್ತಿದೆ… ಅನ್ನೋದನ್ನು ಕೆರೆಬೇಟೆ ಚಿತ್ರ ಸ್ಪಷ್ಟಪಡಿಸಿದೆ.

ಕೆರೆಬೇಟೆ ಮಲೆನಾಡಿನ ಅತ್ಯಂತ ಪುರಾತನ ಕ್ರೀಡೆ ಮತ್ತು ಸಂಪ್ರದಾಯ. ಸಾವಿರಾರು ಜನ ಬಿದಿರಿನ ಬುಟ್ಟಿಗಳನ್ನು ಹಿಡಿದು ಒಮ್ಮೆಲೇ  ಕೆರೆಗಿಳಿದು ಮೀನು ಹಿಡಿಯುತ್ತಾರೆ. ಇದು ಈ ಚಿತ್ರದ ಆಕರ್ಷಣೆಯ ಕೇಂದ್ರಬಿಂದುವಷ್ಟೇ. ಉಳಿದಂತೆ ಬೇರೆಯದ್ದೇ ಕಥೆ, ಕಾಡುವ ವಿಚಾರಗಳನ್ನು ಕೆರೆಬೇಟೆ ಒಳಗೊಂಡಿದೆ. ಆರಂಭ ಮತ್ತು ಅಂತ್ಯ ಹದವಾಗಿದೆ. ನಡುವೆ ಬರುವ ದೃಶ್ಯಗಳು ನೋಡುಗನ ಮನಸ್ಸಿಗೆ ಕಸಿವಿಸಿ ಉಂಟುಮಾಡಬಹುದು. ಆದರೆ, ಅದಕ್ಕೇನು ಕಾರಣ ಅನ್ನೋದು ಕೂಡಾ ಕಡೆಗೆ ಮನದಟ್ಟಾಗುತ್ತದೆ. ಕಾದು ತಿಳಿಯುವ ವ್ಯವಧಾನ ಪ್ರೇಕ್ಷಕನಿಗೆ ಬೇಕಷ್ಟೇ!!

ಮಲೆನಾಡಿನ ಒರಟು ಹುಡುಗನಾಗಿ ಗೌರಿಶಂಕರ್‌ ಅದ್ಭುತವಾಗಿ ನಟಿಸಿದ್ದಾರೆ. ನಾಯಕಿ ಬಿಂದು ಪಳಗಿದ ನಟಿಯಂತೆ ಕಾಣಿಸಿಕೊಂಡಿದ್ದಾರೆ. ಇವರಿಬ್ಬರನ್ನು ಬಿಟ್ಟರೆ ಸಂಪತ್‌ ಮೈತ್ರೇಯ ಮತ್ತು ಗೋಪಾಲ ದೇಶಪಾಂಡೆ ಇಬ್ಬರೂ ಹೆಚ್ಚು ಸ್ಕೋರ್‌ ಮಾಡಿಕೊಂಡಿದ್ದಾರೆ. ಜೊತೆಗೆ ರಾಜು ವೈವಿದ್ಯ, ರಾಕೇಶ್‌ ಪೂಜಾರಿ ಮೊದಲಾದವರು ಸಿನಿಮಾದ ಕಳೆ ಹೆಚ್ಚಿಸಿದ್ದಾರೆ.

ಗಗನ್‌ ಬಡೇರಿಯಾ ಅವರ ಚೆಂದದ ಟ್ಯೂನುಗಳನ್ನು ಪ್ರಮೋದ್‌ ಮರವಂತೆ ಬರೆದ ಸುಂದರ ಸಾಲುಗಳು ಮೆರೆಸಿ, ಮೋಹಕಗೊಳಿಸಿವೆ. ʻಮಲೆನಾಡಗೊಂಬೆ ಮಲೆನಾಡ ಗೊಂಬೆ ಮನೆಹಾಳನೊಬ್ಬ ಮನಸೋತ ನಿಂಗೆʼ ಹಾಡು ಹಿತಾನುಭವ ನೀಡುತ್ತದೆ. ಕೀರ್ತನ್‌ ಪೂಜಾರಿ ಛಾಯಾಗ್ರಹಣವಂತೂ ಬ್ಯೂಟಿಫುಲ್!‌

ಇಷ್ಟೆಲ್ಲಾ  ವಿಶೇಷತೆಗಳನ್ನು ಒಟ್ಟು ಸೇರಿಸಿ, ಚೆಂದದ ಸಿನಿಮಾ ಮಾಡಿರುವ ರಾಜ್‌ಗುರು ಬಗ್ಗೆ ಹೇಳದಿದ್ದರೆ ತಪ್ಪಾಗುತ್ತದೆ. ನೆಲದ ಸೊಗಡಿನ ಕಥಾವಸ್ತವನ್ನು ಆಯ್ಕೆ ಮಾಡಿಕೊಂಡು, ಮಲೆನಾಡಿನ ಭಾಷೆಯನ್ನೇ ಬಳಸಿ, ಅಲ್ಲಿನ ಸಂಸ್ಕೃತಿ, ಆಚರಣೆಗಳನ್ನೂ ಕಥೆಯೊಳಗೆ ಬೆರೆಸಿರುವ ರಾಜ್‌ಗುರು ಕಲೆಗಾರ. ಮೊದಲ ಚಿತ್ರಕ್ಕೇ ಇಷ್ಟು ಅಚ್ಚುಕಟ್ಟಾಗಿ ಕೆಲಸ ಮಾಡಿರುವ ರಾಜ್‌ಗುರು ಚಿತ್ರರಂಗದಲ್ಲಿ ಇನ್ನೂ ಸಾಕಷ್ಟು ಕೃಷಿ ಮಾಡಬಲ್ಲರು.

ಒಟ್ಟಾರೆ ಮಲೆನಾಡು ಮಾತ್ರವಲ್ಲದೆ, ಕನ್ನಡ ನಾಡಿನ ಪ್ರತಿಯೊಬ್ಬ ಪ್ರೇಕ್ಷಕನೂ ನೋಡಲೇಬೇಕಾದ ಚಿತ್ರ ಕೆರೆಬೇಟೆ. ಯಾವ ಕಾರಣಕ್ಕೂ ಮಿಸ್‌ ಮಾಡಿಕೊಳ್ಳಬೇಡಿ!

 

Comments

Leave a Reply