ಇವತ್ತಿನ ದಿನಗಳಲ್ಲಿ ನಿಜಕ್ಕೂ ನಗಿಸುವ ಕಾಮಿಡಿ ಕಲಾವಿದರ ಸಂಖ್ಯೆ ತೀರಾ ಕಡಿಮೆ. ಒಬ್ಬ ನಟ ತೆರೆ ಮೇಲೆ ಬರ್ತಿದ್ದಂಗೇ ಜನ ನಗಲು ಶುರು ಮಾಡ್ತಾರೆ ಅಂದರೆ ನಿಜಕ್ಕೂ ಅದು ಒಬ್ಬ ಹಾಸ್ಯ ಕಲಾವಿದನ ಗೆಲುವು ಅಂದುಕೊಳ್ಳಬಹುದು. ಸಧ್ಯಕ್ಕೆ ಸಾಧು ಕೋಕಿಲಾ ನಂತರ ಜನ ತೆರೆ ಮೇಲೆ ಅತಿ ಹೆಚ್ಚು ಎಂಜಾಯ್ ಮಾಡ್ತಿರೋದು ಮಹಂತೇಶ್ ಅವರ ನಟನೆಯನ್ನು ನೋಡಿ!
ಫ್ರೆಂಚ್ ಬಿರಿಯಾನಿ ಸಿನಿಮಾದ ಮಸಲ್ ಮಣಿ ಪಾತ್ರ ಮಹಂತೇಶ್ ಅವರಿಗೆ ಸ್ಟಾರ್ ವರ್ಚಸ್ಸು ತಂದುಕೊಟ್ಟಿದೆ. ಸಾಕಷ್ಟು ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ನಟಿಸುತ್ತಲೇ ಬ್ಯುಸಿ ಇರುವ ಮಹಂತೇಶ್ ಈಗ ಅರಸಯ್ಯನ ಪ್ರೇಮ ಪ್ರಸಂಗ ಸಿನಿಮಾದ ಮೂಲಕ ಲೀಡ್ ರೋಲಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.
ಗಂಡ್ಮಕ್ಕಳಲ್ಲಿ ಮಹಂತೇಶ್ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರೆ, ಇತ್ತ ಧಾರಾವಾಹಿಗಳಲ್ಲಿ ಹೆಸರು ಮಾಡಿರುವ ಶೃತಿ ರಮೇಶ್ ಮೆಲ್ಲಮೆಲ್ಲಗೆ ಸಿನಿಮಾದ ಕಡೆ ಹೆಜ್ಜೆ ಇಡುತ್ತಿದ್ದಾರೆ. ತರೀಕೆರೆ ಮೂಲದವರು ಶೃತಿ ರಮೇಶ್. ಸೀರಿಯಲ್ ಪ್ರೇಕ್ಷಕರ ಪಾಲಿಗೆ ʻಮಿಲಿʼ ಅಂತಲೇ ಪರಿಚಯವಿರುವ ಈ ಹುಡುಗಿ ಇಂಜಿನಿಯರಿಂಗ್ ಮುಗಿಸಿ ಸೀದಾ ಧಾರಾವಾಹಿ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟವರು.
ಈಗ ಮಿಲಿ ಮತ್ತು ಮಹಂತೇಶ್ ಇಬ್ಬರೂ ಒಟ್ಟಿಗೇ ಸೇರಿಕೊಂಡಿದ್ದಾರೆ. ಅದು ʻಧರಣಿʼ ಸಿನಿಮಾದಲ್ಲಿ. ಸುಧೀರ್ ಶಾನುಭೋಗ್ ನಿರ್ದೇಶನದ ಅಪ್ಪಟ ದೇಸೀ ಕತೆ ಹೊಂದಿರುವ ಸಿನಿಮಾ ಇದು. ಮನೋಜ್ ಮತ್ತು ರವೀಕ್ಷಾ ಶೆಟ್ಟಿ ಕಾಂಬಿನೇಷನ್ನಿನ ಈ ಚಿತ್ರದಲ್ಲಿ ಮಿಲಿ-ಮಹಂತೇಶ್ ಇಬ್ಬರೂ ಜೋಡಿಯಾಗಿ ನಟಿಸುತ್ತಿದ್ದಾರೆ. ಹೀರೋ ಇದ್ದಲ್ಲೆಲ್ಲಾ ಮಹಂತೇಶ್ ಇದ್ದರೆ, ಸದಾ ಹೀರೋಯಿನ್ ಜೊತೆ ಇರುವ ಪಾತ್ರ ಶೃತಿ ಅವರದ್ದು.
ಇಬ್ಬರೂ ಅದ್ಭುತ ಕಾಮಿಡಿ ಟೈಮಿಂಗ್ ಹೊಂದಿರುವ ಕಲಾವಿದರು. ಎಂಥದ್ದೇ ದೃಶ್ಯವಾದರೂ ಒಂದೇ ಟೇಕಿಗೆ ಓಕೆ ಮಾಡುತ್ತಾರೆ.
ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸುತ್ತಿರುವ ಈ ಇಬ್ಬರೂ ಸಿನಿಮಾ ಸ್ನೇಹಿ ಕಲಾವಿದರು ಅನ್ನೋದರಲ್ಲಿ ಡೌಟಿಲ್ಲ. ʻʻತೀರಾ ಐಷಾರಾಮಿ ಸವಲತ್ತುಗಳನ್ನು ನಿರೀಕ್ಷಿಸದೇ, ಶೂಟಿಂಗ್ ಟೈಮಲ್ಲಿ ಯಾವುದೇ ತಂಟೆ ತಕರಾರನ್ನೂ ಮಾಡದೇ, ತಮ್ಮ ಪಾಡಿಗೆ ತಾವು ನಟಿಸಿಕೊಂಡು ಹೋಗುತ್ತಾರೆʼʼ ಅನ್ನೋದು ಈ ಇಬ್ಬರ ಬಗ್ಗೆ ಇಂಡಸ್ಟ್ರಿಯಲ್ಲಿರುವ ಒಪೀನಿಯನ್ನು. ಎಷ್ಟೇ ಎತ್ತರಕ್ಕೆ ಬೆಳೆದರೂ ಇಬ್ಬರೂ ಇದೇ ಗುಣವನ್ನು ಕಾಪಾಡಿಕೊಳ್ಳಲಿ…
No Comment! Be the first one.