ವರ್ಷವಿಡೀ ಬ್ಯುಸಿ ಇರೋ ಹೀರೋಗಳಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಕೂಡಾ ಒಬ್ಬರು. ಸಿಕ್ಸರ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಪ್ರಜ್ವಲ್ ಈಗ ಅತೀ ಕಡಿಮೆ ಅವಧಿಯಲ್ಲಿ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಹೀರೋ ಎನಿಸಿಕೊಂಡಿದ್ದಾರೆ. ಮಿನಿಮಮ್ ಗ್ಯಾರೆಂಟಿ ನಟ ಎನಿಸಿಕೊಂಡಿರುವ ಕಾರಣಕ್ಕೋ ಏನೋ ಕಳೆದ ಒಂದೂವರೆ ದಶಕಗಳಲ್ಲಿ ಪ್ರಜ್ವಲ್ ದೇವರಾಜ್ ಸುಮ್ಮನೇ ಕೂತೇ ಇಲ್ಲ. ಒಂದರ ಹಿಂದೊಂದು ಸಿನಿಮಾಗಲ್ಲಿ ನಟಿಸುತ್ತಲೇ ಇರುತ್ತಾರೆ.
ಇನ್ನೇನು ಬಿಡುಗಡೆಗೆ ತಯಾರಾಗುತ್ತಿರುವ ಶ್ರೀ ನರಸಿಂಹ ನಿರ್ದೇಶನದ ಇನ್ಸ್ಪೆಕ್ಟರ್ ವಿಕ್ರಂ ಸಿನಿಮಾದ ಟೀಸರ್ ಬಂದಿದ್ದೇ ಬಂತು, ಪ್ರಜ್ವಲ್ ಬೇಡಿಕೆ ಮತ್ತಷ್ಟು ಹೆಚ್ಚಾಗಿಹೋಯ್ತು. ಈ ಚಿತ್ರದ ಟೀಸರ್ ಹೊರಬಂದ ಮೇಲೆ ಪ್ರಜ್ವಲ್ ಏನಿಲ್ಲವೆಂದರೂ ಒಂಭತ್ತು ಸಿನಿಮಾಗಳಿಗೆ ಸಹಿ ಮಾಡಿದ್ದಾರಂತೆ. ಇವತ್ತು ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬದ ಪ್ರಯುಕ್ತ, ಗುರು ದೇಶಪಾಂಡೆ ನಿರ್ಮಾಣದಲ್ಲಿ, ಜಡೇಶ್ ಕುಮಾರ್ ನಿರ್ದೇಶಿಸುತ್ತಿರುವ `ಜಂಟಲ್ ಮನ್’ ಸಿನಿಮಾದ ಟೀಸರ್ ಕೂಡಾ ಬಿಡುಗಡೆಗೊಳಿಸಿದ್ದಾರೆ. ಈ ಟೀಸರ್ ಕೂಡಾ ಬೇರೆಯದ್ದೇ ಬಗೆಯಲ್ಲಿ ಮೂಡಿಬಂದಿದೆ.
ವ್ಯಕ್ತಿಯೊಬ್ಬ ದಿನವೊಂದಕ್ಕೆ ಹದಿನೆಂಟು ಗಂಟೆಗಳ ಕಾಲ ನಿದ್ರಿಸಿ, ಉಳಿದ ಆರು ಗಂಟೆಗಳ ಕಾಲ ಹೇಗೆಲ್ಲಾ ಆ್ಯಕ್ಟೀವ್ ಆಗಿರುತ್ತಾನೆ ಎನ್ನುವುದನ್ನು ತೆರೆದಿಡಲಿರುವ ಭಿನ್ನ ಕಥಾ ಹಂದರ ಹೊಂದಿರುವ ಸಿನಿಮಾ ಜಂಟಲ್ ಮನ್. ಈ ಸಿನಿಮಾದಲ್ಲಿ ಪ್ರಜ್ವಲ್ ಕುಂಭಕರ್ಣನಂತೆ ನಿದ್ರಿಸುವ ಹೀರೋ ಆಗಿ ನಟಿಸಿದ್ದಾರೆ. ಚಿತ್ರದ ಟೀಸರ್ ಸಾಕಷ್ಟು ನಿರೀಕ್ಷೆ ಮೂಡಿಸಿವೆ. ಬಹುಶಃ ಇನ್ಸ್ಪೆಕ್ಟರ್ ವಿಕ್ರಂ ಮತ್ತು ಜಂಟಲ್ ಮನ್ ತೆರೆಗೆ ಬರೋ ಹೊತ್ತಿಗೆ ಇನ್ನೂ ಅದೆಷ್ಟು ಸಿನಿಮಾಗಳಿಗೆ ಪ್ರಜ್ಜು ಬುಕ್ ಆಗುತ್ತಾರೋ ಗೊತ್ತಿಲ್ಲ. ಪ್ರಜ್ವಲ್ ದೇವರಾಜ್ ಯಾವತ್ತಿಗೂ ಹೀಗೇ ಬ್ಯುಸಿಯಾಗಿದ್ದು, ಉತ್ತಮ ಕಂಟೆಂಟುಗಳ ಸಿನಿಮಾಗಳನ್ನು ನೀಡುವಂತಾಗಲಿ. ಅವರಿಗೆ ಸಿನಿಬಜ್ ಕಡೆಯಿಂದಲೂ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸೋಣ.
No Comment! Be the first one.