ಬಿಗ್ ಬಾಸ್ ಕಾರ್ಯಕ್ರಮದಿಂದಲೇ ಜಗದ್ವಿಖ್ಯಾತಿ ಪಡೆದು, ಎಂ.ಎಲ್.ಎ, ದೇವ್ರಂಥ ಮನುಷ್ಯ ಸಿನಿಮಾಗಳ ಮೂಲಕ ಹೀರೋ ಕೂಡಾ ಆದ ಪ್ರಥಮ್ ನಟನೆಯ ನಟಭಯಂಕರ ಸಿನಿಮಾ ಬಹುತೇಕ ಬಿಡುಗಡೆಗೆ ರೆಡಿಯಾಗಿದೆ. ಈ ಚಿತ್ರ ರಿಲೀಸಿಗೂ ಮುಂಚೆಯೇ ಪ್ರಥಮ್ ಮತ್ತೊಂದು ಸಿನಿಮಾದಲ್ಲಿ ನಟಿಸಲು ತಯಾರಿ ನಡೆಸಿಕೊಳ್ಳುತ್ತಿದ್ದಾರೆ. ಪ್ರಥಮ್ ನಟನೆಯ ಈ ಹಿಂದಿನ ಸಿನಿಮಾಗಳಿಗೆ ಶ್ರೀ ಮುರಳಿ ಬಂದು ಹರಸಿದ್ದಾರೆ. ಈಗ ಆರಂಭಗೊಳ್ಳಬೇಕಿರುವ ಚಿತ್ರಕ್ಕೂ ಶ್ರೀಮುರಳಿ ಬರೋದು ಬಹುತೇಕ ಖಚಿತ. ಆದರೆ ಈ ಸಿನಿಮಾದ ಹೆಸರನ್ನು ಬದಲಿಸಿಕೊಳ್ಳಲು ಮುರಳಿ ಸೂಚಿಸಿದ್ದಾರೆ!
ಹಾಗಿದ್ದರೆ ಪ್ರಥಮ್ ತಮ್ಮ ಚಿತ್ರಕ್ಕೆ ಅದ್ಯಾವ ಹೆಸರಿಟ್ಟಿದ್ದರು ಅನ್ನೋದು ಎಂಥವರಿಗಾದರೂ ಕುತೂಹಲ ಮೂಡುವ ಪ್ರಶ್ನೆಯೇ. ಈ ಹಿಂದೆ ರವಿಚಂದ್ರನ್ ನಾನು ನನ್ ಹೆಂಡ್ತಿ ಮತ್ತು ನಾನು ನನ್ ಹೆಂಡ್ತೀರು ಎಂಬೆರಡು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದರು. ಈಗ ಪ್ರಥಮ್ ಇನ್ನೊಂಚೂರು ಮುಂದೆ ಹೋಗಿ ʻನಾನು ನಿಮ್ ಹೆಂಡ್ತಿʼ ಅಂತಾ ಇಟ್ಟಿದ್ದರು. ʻಯಾವುದೇ ಕಾರಣಕ್ಕೂ ಈ ಟೈಟಲ್ ಇಡಬೇಡಿ. ಸಿನಿಮಾದ ಒಳಗಿನ ಕಂಟೆಂಟ್ ಎಷ್ಟು ಚೆಂದ ಇದೆ. ಸಂಬಂಧಗಳ ಮೌಲ್ಯಗಳನ್ನು ಎತ್ತಿಹಿಡಿಯುವ, ಹಾಸ್ಯದ ಮೂಲಕ ಗಂಭೀರವಾದ ವಿಚಾರವೊಂದನ್ನು ಹೇಳಹೊರಟಿದ್ದೀರಿ. ಆದರೆ ಶೀರ್ಷಿಕೆ ನೋಡುಗರ ಮನಸ್ಸಿನಲ್ಲಿ ನೆಗೆಟೀವ್ ಇಂಪ್ಯಾಕ್ಟ್ ಹುಟ್ಟಿಸಬಾರದುʼ ಅಂತಾ ಶ್ರೀಮುರಳಿ ಪ್ರಥಮ್ ಮತ್ತವರ ತಂಡಕ್ಕೆ ಕಿವಿಮಾತು ಹೇಳಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡುತ್ತಿದ್ದ ಸಮಯದಲ್ಲೇ ಪ್ರಾಣ ತೊರೆದ ತುಷಾರ್ ರಂಗನಾಥ್, ಅವರ ಸಹಾಯಕರಾಗಿದ್ದವರು ಜೈ ಶೇಖರ್. ಪ್ರಥಮವಾಗಿ ಈಗ ಪೂರ್ಣಪ್ರಮಾಣದ ನಿರ್ದೇಶಕರಾಗುತ್ತಿದ್ದಾರೆ. ಒಂದೊಳ್ಳೆ ಚಿತ್ರಕತೆ, ಸಂಭಾಷಣೆಯನ್ನು ರೆಡಿ ಮಾಡಿಟ್ಟುಕೊಂಡಿದ್ದಾರೆ. ಸಂಬಂಧಗಳ ವ್ಯಾಲ್ಯೂಸ್ ಜೊತೆಗೆ ವಾಮಾಚಾರ ಕೂಡಾ ಈ ಚಿತ್ರದಲ್ಲಿ ಪ್ರಧಾನ ಅಂಶವಾಗಿದೆ. ಈ ಕಾರಣದಿಂದ ಪ್ರಥಮ್ ಕೊಳ್ಳೇಗಾಲದಲ್ಲಿ ಉಳಿದುಕೊಂಡು, ಮಾಟ, ಮಂತ್ರ, ಪವಾಡಗಳ ಕಲಿಕೆಯಲ್ಲಿ ನಿರತರಾಗಿದ್ದಾರೆ!
ಸೆಪ್ಟೆಂಬರ್ ತಿಂಗಳಲ್ಲಿ ಈ ಸಿನಿಮಾ ಆರಂಭವಾಗಲಿದ್ದು, ʻನಾನು ನಿಮ್ ಹೆಂಡ್ತಿʼ ಹೆಸರಿನ ಬದಲಿಗೆ ಯಾವ ಹೆಸರನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ ಅನ್ನೋದು ಮುಹೂರ್ತದ ಹೊತ್ತಿಗೆ ಫೈನಲ್ ಆಗಲಿದೆ.