ಸದ್ಯಕ್ಕೆ ರಕ್ಷಿತ್ ಶೆಟ್ಟಿ ರಶ್ಮಿಕಾ ಮಂದಣ್ಣ ಜೊತೆಗಿನ ಲವ್ ಬ್ರೇಕಪ್ ಮೂಡಲ್ಲಿದ್ದಾರೆ. ಆದರೆ ನಿಧಾನಕ್ಕೆ ಇದರಿಂದ ಹೊರ ಬರುತ್ತಿರೋ ರಕ್ಷಿತ್ ಇದೀಗ ಹೊಸಾ ಆವೇಗದೊಂದಿಗೆ ಮೈ ಕೊಡವಿಕೊಂಡು ಅಖಾಡಕ್ಕಿಳಿಯಲು ರೆಡಿಯಾಗಲಾರಂಭಿಸಿದ್ದಾರೆ. ಎದೆಯಲ್ಲಿರೋ ನೋವಿನ ಬಿಸಿಯಿಂದಲೇ ಹೊಸಾ ಕನಸುಗಳಿಗೆ ಕಾವು ಕೊಡೋ ಕೆಲಸಕ್ಕೂ ಚಾಲನೆ ನೀಡಿದಂತಿದ್ದಾರೆ!
ಅವನೇ ಶ್ರೀಮನ್ನಾರಾಯಣ, ಚಾರ್ಲಿ ೭೭೭ ಮುಂತಾದ ಚಿತ್ರಗಳಲ್ಲಿ ಬ್ಯುಸಿಯಾಗಿರೋ ರಕ್ಷಿತ್, ಮುಂದಿನ ವರ್ಷದ ಹೊತ್ತಿಗೆಲ್ಲ ತಮ್ಮ ಆಸಕ್ತಿಯ ನಿರ್ದೇಶನಕ್ಕಿಳಿಯಲು ಅಣಿಗೊಳ್ಳಲಾರಂಭಿಸಿದ್ದಾರೆ. ಅದರ ಫಲವಾಗಿ ರೂಪುಗೊಂಡಿರೋ ಚಿತ್ರ ಪುಣ್ಯಕೋಟಿ! ಕನ್ನಡಿಗರಿಗೆಲ್ಲ ಪುಣ್ಯಕೋಟಿಯ ಕಥೆ ಹೊಸದೇನಲ್ಲ. ಆ ಕಥೆಯ ತಿರುಳನ್ನೇ ಬೇಸಾಗಿಟ್ಟುಕೊಂಡು ಹೊಸಾ ಪ್ರಯೋಗದ ಕಥೆಯೊಂದನ್ನು ರಕ್ಷಿತ್ ಶೆಟ್ಟಿ
ಹೊಸೆಯುತ್ತಿದ್ದಾರೆ. ಸದ್ಯಕ್ಕಿ ಈ ಚಿತ್ರದ ಕಥೆ, ಸ್ಕ್ರಿಫ್ಟ್ ಕೆಲಸದಲ್ಲಿ ತೊಡಗಿಸಿಕೊಂಡಿರೋ ರಕ್ಷಿತ್ ಶೆಟ್ಟಿ ಈ ಪ್ರಾಜೆಕ್ಟನ್ನು ಮುಂದಿನ ವರ್ಷ ಅಕ್ಟೋಬರ್ ಹೊತ್ತಿಗೆಲ್ಲ ಟೇಕಾಫ್ ಮಾಡಲು ನಿರ್ಧರಿಸಿದ್ದಾರೆ.
ರಕ್ಷಿತ್ ಶೆಟ್ಟಿ ಈಗಾಗಲೇ ನಿರ್ದೇಶಕರಾಗಿಯೂ ಗೆದ್ದಿದ್ದಾರೆ. ವರ್ಷಾಂತರಗಳ ಹಿಂದೆಯೇ ಅವರು ಉಳಿದವರು ಕಂಡಂತೆ ಚಿತ್ರವನ್ನು ನಿರ್ದೇಶನ ಮಾಡಿ ನಟಿಸಿದ್ದರು. ಕನ್ನಡಕ್ಕೆ ಹೊಸಾ ತಾಜಾತನ ತುಂಬುತ್ತಲೇ ಆ ಚಿತ್ರ ಬೇರೆ ಭಾಷೆಗಳಿಗೂ ರೀಮೇಕ್ ಆಗಿದ್ದೀಗ ಇತಿಹಾಸ. ಇದೀಗ ಅವರು ಎರಡನೇ ಸಲ ಪುಣ್ಯಕೋಟಿ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ. ಇದರ ಕಥೆ ಏನೆಂಬುದರ ಬಗ್ಗೆಯೂ ಎಲ್ಲೆಡೆ ಕುತೂಹಲವೂ ಇದೆ.
ರಕ್ಷಿತ್ ಶೆಟ್ಟಿ ಅನಾಮಿಕಳಾಗಿದ್ದ ರಶ್ಮಿಕಾಳನ್ನು ಕರೆತಂದು ತಮ್ಮ ಕಿರಿಕ್ ಪಾರ್ಟಿ ಚಿತ್ರದಲ್ಲಿ ಅವಕಾಶ ನೀಡಿದ್ದರು. ಇದರ ಫಲವಾಗಿಯೇ ಅಗಾಧ ಅವಕಾಶ ಆಕೆಯ ಪಾಲಾಗಿತ್ತು. ಈ ನಿಟ್ಟಿನಲ್ಲಿ ನೋಡಿದರೆ ರಶ್ಮಿಕಾ ಪಾಲಿಗೆ ರಕ್ಷಿತ್ ಅಕ್ಷರಶಃ ಪುಣ್ಯಕೋಟಿ. ಆದರೆ ಕಿವಿ ಸೋಕಿದ ಸುಳಿಗಾಳಿಗೂ ಅಚ್ಚರಿಗೊಳ್ಳುವ ಎಳೆಗರುವಿನಂತಿದ್ದ ರಶ್ಮಿಕಾ ರಕ್ಷಿತ್ ಪಕ್ಕೆಗೆ ಗೊರಸು ತಿವಿದು ದೂರಾಗಿದ್ದಾಳೆ. ಪುಣ್ಯಕೋಟಿಯೆಂಬೋ ಕಥೆ ಆ ಗಾಯದಿಂದ ಜನಿಸಿದ್ದಾ ಎಂಬುದಕ್ಕೆ ಕಾಲವಷ್ಟೇ ಉತ್ತರ ಹೇಳಬೇಕಿದೆ!
#
No Comment! Be the first one.