ದಿಢೀರನೆ ಒಮ್ಮೊಮ್ಮೆ ಅಚ್ಛರಿಗೊಳಿಸುವಂಥಾ ಸಿನಿಮಾಗಳು ತೆರೆಗೆ ಬರುತ್ತಿರುತ್ತವೆ. ಇತ್ತೀಚೆಗೆ ಹೆಚ್ಚು ಪ್ರಚಾರದಲ್ಲಿದ್ದ ರತ್ನಮಂಜರಿ ಸಿನಿಮಾ ತೆರೆಗೆ ಬಂದಿದೆ. ಸ್ಪುರದ್ರೂಪಿ ನಟ ರಾಜ್ ಚರಣ್, ಅಖಿಲಾ ಪ್ರಕಾಶ್, ಪಲ್ಲವಿ ರಾಜು ರಂಥಾ ಗ್ಲಾಮರಸ್ ನಟಿಯರು ಮತ್ತು ಮೊದಲ ಬಾರಿಗೆ ಡೈರೆಕ್ಟರಾಗಿರುವ ಪ್ರಸಿದ್ಧ್ ಅವರ ನಿರ್ದೇಶನದ ಜೊತೆಗೆ ಎನ್.ಆರ್.ಐ ಕನ್ನಡಿಗರಾದ ಸಂದೀಪ್ ಮತ್ತು ನಟರಾಜ್ ಹಳೇಬೀಡು ಅವರ ನಿರ್ಮಾಣದಲ್ಲಿ ತಯಾರಾಗಿರುವ ರತ್ನಮಂಜರಿ ನಿಜಕ್ಕೂ ಜನಮೆಚ್ಚುವ ರೀತಿಯಲ್ಲಿ ಮೂಡಿಬಂದಿದೆ.
ಅಮೆರಿಕಾದಲ್ಲಿ ತೆರೆದುಕೊಳ್ಳುವ ಕತೆ ಕ್ರಮೇಣ ಕೊಡಗಿಗೆ ಶಿಫ್ಟ್ ಆಗುತ್ತದೆ. ಅಮೆರಿಕದಲ್ಲಿ ನಡೆಯುವ ಕೊಲೆಯೊಂದರ ಬೆನ್ನತ್ತಿಬಂದ ಹೀರೋಗೆ ಇಲ್ಲಿ ಕ್ಷಣ ಕ್ಷಣಕ್ಕೂ ಆಶ್ಚರ್ಯಕರ ಸಂಗತಿಗಳು ಎದುರಾಗುತ್ತವೆ. ಅವು ನೋಡುಗರ ಪಾಲಿಗೂ ಪರಮಾಶ್ಚರ್ಯಗೊಳಿಸಿ ಮೈ ಜುಮ್ಮೆನಿಸುತ್ತವೆ.
ಪ್ರೀತಿಸಿ ಮದುವೆಯಾದವರು ಹೊಸ ಬಾಳಿನ ಹೊಸ್ತಿಲಲ್ಲಿರುವಾಗಲೇ ಎದುರಾಗುವ ಆತಂಕ, ಸ್ವಂತ ಮಗನಿದ್ದರೂ ದತ್ತು ಮಗುವೊಂದನ್ನು ತಂದು ಸಾಕುವ ಪೋಷಕರು, ಮರಗಿಡಗಳನ್ನು ಅಪಾರವಾಗಿ ಪ್ರೀತಿಸುವ ಹುಡುಗ ಬೆಳೆದು ದೊಡ್ಡವನಾಗಿ ಅತೃಪ್ತೆಯೊಬ್ಬಳ ಬಾಳಿನಲ್ಲೂ ಬಿತ್ತನೆ ಆರಂಭಿಸುವ ವಿಚಿತ್ರ ಕಥಾಹಂದರ, ಯಾರನ್ನು ನಂಬುವುದು ಯಾರನ್ನು ಅನುಮಾನಿಸುವುದು ಎನ್ನುವಷ್ಟರ ಮಟ್ಟಿಗೆ ತಿರುವುಗಳು, ರೋಚಕತೆ, ನಿಗೂಢ ಎಲ್ಲವೂ ಬೆರೆತಿರುವ ಪಕ್ಕಾ ಕಮರ್ಷಿಯಲ್ ಸಿನಿಮಾ ರತ್ನಮಂಜರಿ.
ಪ್ರೀತಮ್ ತೆಗ್ಗಿನಮನೆ ಅವರ ಸಹಜ ಬೆಳಕಿನ ಛಾಯಾಗ್ರಹಣ, ಕೊಡಗಿನ ಹಿನ್ನೆಲೆಯೊಂದಿಗೆ ಅವರ ಕ್ಯಾಮೆರಾ ಕೈಚಳಕ ಕಲಾತ್ಮಕವಾಗಿ ಮೂಡಿಬರುವಂತೆ ಮಾಡಿದೆ. ನಾಯಕನ ರಾಜ್ ಚರಣ್ ನಟನೆ ಅಮೋಘವಾಗಿದೆ. ನಾಯಕಿ ಅಖಿಲಾ ಮುದ್ದುಮುದ್ದಾಗಿ ಕಂಡಿದ್ದಾಳೆ. ಪಲ್ಲವಿ ರಾಜು ಅವರ ಪಾತ್ರ ಚಿಕ್ಕದಾಗಿದ್ದರೂ ಎಲ್ಲರೂ ಮೆಚ್ಚುವ ಅಭಿನಯ ನೀಡಿದ್ದಾರೆ. ಚಿತ್ರದಲ್ಲಿ ಯಾವ ಪಾತ್ರವೂ ಅನವಶ್ಯಕವಾಗಿ ಬರುವುದಿಲ್ಲ. ಪ್ರತಿಯೊಂದು ಪಾತ್ರವೂ ಸಿನಿಮಾದ ಕತೆಯೊಂದಿಗೆ ಬೆಸೆದುಕೊಳ್ಳುವಂತೆ ಮಾಡಿರುವುದು ನಿರ್ದೇಶಕ ಪ್ರಸಿದ್ಧ್ ಅವರ ಗೆಲುವು. ರತ್ನಮಂಜರಿಯ ಮೂಲಕ ರಾಜ್ ಚರಣ್ ಎಂಬ ಪಕ್ಕಾ ಕಮರ್ಷಿಯಲ್ ಆ್ಯಕ್ಷನ್ ಹೀರೋ ಕನ್ನಡಕ್ಕೆ ದಕ್ಕಿದ್ದಾರೆ. ಒಟ್ಟಾರೆಯಾಗಿ ಎಲ್ಲರೂ ನೋಡಬೇಕಾದ ಸಿನಿಮಾವಾಗಿ ರತ್ನಮಂಜರಿ ಹೊರಹೊಮ್ಮಿದೆ.
No Comment! Be the first one.