G9 Communication Media and Entertainment ಲಾಂಛನದಲ್ಲಿ ನಿರ್ಮಾಣವಾಗಿರುವ ಹಾಗೂ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಪ್ರಮುಖಪಾತ್ರದಲ್ಲಿ ನಟಿಸಿರುವ “ದ ಜಡ್ಜ್ ಮೆಂಟ್” ಚಿತ್ರದ ಚಿತ್ರೀಕರಣ ಡಾ|| ರಾಜಕುಮಾರ್ ಅವರ ಹುಟ್ಟುಹಬ್ಬದಂದು ಮುಕ್ತಾಯವಾಗಿದೆ. ಈ ಸಂದರ್ಭದಲ್ಲಿ ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಮೊದಲಿಗೆ ಮಾತನಾಡಿದ ನಿರ್ದೇಶಕ ಗುರುರಾಜ ಕುಲಕರ್ಣಿ (ನಾಡಗೌಡ), ನಮ್ಮ ಚಿತ್ರದ ಚಿತ್ರೀಕರಣ ಇಂದಿಗೆ ಪೂರ್ಣವಾಗಿದೆ. ಕಾಕತಾಳೀಯ ಎಂದರೆ ನಮ್ಮ ಚಿತ್ರದ ಚಿತ್ರೀಕರಣ ಕಳೆದವರ್ಷ ಡಾ|| ರಾಜಕುಮಾರ್ ಅವರ ಹುಟ್ಟುಹಬ್ಬದಂದು ಆರಂಭವಾಗಿತ್ತು. ಈ ವರ್ಷ ಅವರ ಹುಟ್ಟುಹಬ್ಬದ ದಿನ ಮುಕ್ತಾಯವಾಗಿದೆ. ಚಿತ್ರ ಇಷ್ಟು ಸರಾಗವಾಗಿ ಮುಕ್ತಾಯವಾಗಲು ರವಿಚಂದ್ರನ್ ಅವರು ಸೇರಿದಂತೆ ಎಲ್ಲಾ ಕಲಾವಿದರ ಹಾಗೂ ತಂತ್ರಜ್ಞರ ಸಹಕಾರವೇ ಕಾರಣ. ಈ ಸಂದರ್ಭದಲ್ಲಿ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ಈ ಚಿತ್ರವನ್ನು ನಾನು ಸೇರಿದಂತೆ ಐವರು ನಿರ್ಮಾಪಕರು ನಿರ್ಮಿಸಿದ್ದೇವೆ. ಕೋರ್ಟ್ ರೂಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ “ದ ಜಡ್ಜ್ ಮೆಂಟ್” ಚಿತ್ರವನ್ನು ಮೇ ನಲ್ಲಿ ತೆರೆಗೆ ತರುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ನಮ್ಮ ಚಿತ್ರ ಕಳೆದವರ್ಷ ಯಾವ ದಿನ ಆರಂಭವಾಗಿತ್ತೊ, ಈ ವರ್ಷ ಅದೇ ದಿನ ಮುಕ್ತಾಯವಾಗಿದೆ. ಇಂತಹ ಅದ್ದೂರಿ ತಾರಾಬಳಗ ಹಾಗೂ ತಾಂತ್ರಿಕವರ್ಗ ಹೊಂದಿರುವ ಈ ಚಿತ್ರ ಯಾವುದೇ ತೊಂದರೆಯಿಲ್ಲದೆ ಪೂರ್ಣವಾಗಲು ಸಹಕಾರ ನೀಡಿದ ಪ್ರತಿಯೊಬ್ಬರಿಗೂ ನಮ್ಮ ಧನ್ಯವಾದ ಎಂದರು ನಿರ್ಮಾಪಕರಾದ ಶರದ್ ನಾಡಗೌಡ ಹಾಗೂ ರಾಮು ರಾಯಚೂರು. ನಿರ್ಮಾಪಕರಾದ ವಿಶ್ವನಾಥ್ ಗುಪ್ತ ಹಾಗು ರಾಜಶೇಖರ ಪಾಟೀಲ್ ಅವರೂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
“ದ ಜಡ್ಜ್ ಮೆಂಟ್” ಚಿತ್ರದಲ್ಲಿ ನಟಿಸಿರುವುದಕ್ಕೆ ಖುಷಿಯಾಗಿದೆ. ಈ ತಂಡದವರು ಕಲಾವಿದರನ್ನು ನೋಡಿಕೊಂಡ ರೀತಿ ನಿಜಕ್ಕೂ ಶ್ಲಾಘನೀಯ ಎಂದು ಧನ್ಯಾ ರಾಮಕುಮಾರ್ ತಿಳಿಸಿದರು.
ಈ ತಂಡಕ್ಕೆ ತಡವಾಗಿ ಬಂದು ಸೇರಿಕೊಂಡವಳು ನಾನೇ ಎಂದು ಮಾತು ಆರಂಭಿಸಿದ ನಟಿ ಮೇಘನಾ ಗಾಂವ್ಕರ್, ರವಿಚಂದ್ರನ್ ಅವರ ಜೊತೆ ನಟಿಸಿದ್ದು ನನಗೆ ಸಂತೋಷವಾಗಿದೆ. ಡಾ|| ರಾಜಕುಮಾರ್ ಅವರ ಹುಟ್ಟುಹಬ್ಬದ ದಿನ ಆರಂಭವಾಗಿ, ಈ ವರ್ಷದ ಅವರ ಹುಟ್ಟುಹಬ್ಬದ ದಿನವೇ ಚಿತ್ರೀಕರಣ ಮುಕ್ತಾಯವಾಗಿರುವುದು ನಿಜಕ್ಕೂ ಅಚ್ಚರಿಯಾಗಿದೆ. ಅಣ್ಣಾವ್ರ ಆಶೀರ್ವಾದ ನಮ್ಮ ತಂಡಕ್ಕೆ ಇದೆ ಎಂದರು.
ಡಾ|| ರಾಜಕುಮಾರ್ ಪುತ್ರಿ ಪೂರ್ಣಿಮಾ ರಾಮಕುಮಾರ್ ಚಿತ್ರತಂಡಕ್ಕೆ ಶುಭ ಕೋರಿದರು. ಗೀತರಚನೆಕಾರ ಪ್ರಮೋದ್ ಮರವಂತೆ ಹಾಗು ಚಿತ್ರದಲ್ಲಿ ನಟಿಸಿರುವ ರೇಖಾ ಕೂಡ್ಲಗಿ, ನವಿಲ ಚಿತ್ರದ ಕುರಿತು ಮಾತನಾಡಿದರು. ಛಾಯಾಗ್ರಾಹಕ ಪಿ.ಕೆ.ಹೆಚ್ ದಾಸ್ ಹಾಗೂ ಸಂಕಲನಕಾರ ಕೆಂಪರಾಜ್ ಸೇರಿದಂತೆ ಅನೇಕ ತಂತ್ರಜ್ಞರು ಪತ್ರಿಕಾಗೋಷ್ಠಿಯಲ್ಲಿದ್ದರು.
ಕ್ರೇಜಿಸ್ಟಾರ್ ರವಿಚಂದ್ರನ್, ದಿಗಂತ್ , ಧನ್ಯ ರಾಮಕುಮಾರ್, ಮೇಘನಾ ಗಾಂವ್ಕರ್, ಲಕ್ಷ್ಮೀ ಗೋಪಾಲಸ್ವಾಮಿ, ನಾಗಾಭರಣ, ಪ್ರಕಾಶ್ ಬೆಳವಾಡಿ, ರಂಗಾಯಣ ರಘು, ರವಿಶಂಕರ್ ಗೌಡ, ಸುಜಯ್ ಶಾಸ್ತ್ರಿ ಕೃಷ್ಣ ಹೆಬ್ಬಾಳೆ, ರೇಖಾ ಕೂಡ್ಲಿಗಿ, ನವಿಲ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಅನೂಪ್ ಸೀಳಿನ್ “ದ ಜಡ್ಜ್ ಮೆಂಟ್” ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
No Comment! Be the first one.