ತಮಿಳುನಾಡಲ್ಲಿ ಕೂಡಾ ಮೊನ್ನೆ ದಿನ ಚುನಾವಣೆ ನಡೆದಿದೆ. ಸ್ಟಾರ್ ನಟರು ಮತದಾನ ಮಾಡುವ ಬೂತ್ ಗಳನ್ನು ಮೇಟೇಂನ್ ಮಾಡೋದು ಪೊಲೀಸರಿಗೆ ತುಂಬಾನೇ ಕಷ್ಟದ ಕೆಲಸ. ನಟ ತಲಾ ಅಜಿತ್ ಗೊತ್ತಲ್ಲಾ? ಸದಾ ಜನರಿಂದ ದೂರವೇ ಉಳಿಯಲು ಬಯಸಿ, ತಮ್ಮ ಪಾಡಿಗೆ ತಾವು ಕಾಡು ಮೇಡು ಅಲೆದುಕೊಂಡಿರುವ ವಿಕ್ಷಿಪ್ತ ಮನಸ್ಥಿತಿಯ ನಟ. ತಾವು ಹೋದಲ್ಲಿ ಬಂದಲ್ಲೆಲ್ಲಾ ಜನಜಂಗುಳಿ ಸೇರಬೇಕು, ಜೈಕಾರಗಳು ಮೊಳಗಬೇಕು ಅಂತಾ ಬಯಸೋದು ಸೆಲೆಬ್ರೆಟಿಗಳ ಸಾಮಾನ್ಯ ಮನಸ್ಥಿತಿ. ಆದರೆ ಅಜಿತ್ ಅದಕ್ಕೆ ಅಪವಾದ. ನನ್ನ ಅಭಿಮಾನಿಗಳು ಅನ್ನಿಸಿಕೊಂಡವರು ಯಾವ ಕಾರಣಕ್ಕೂ ಜೈಕಾರ ಕೂಗಬೇಡಿ. ಅದರಿಂದ ಶಬ್ದಮಾಲಿನ್ಯವಾಗಿ, ಮತ್ಯಾರಿಗೋ ಕಿರಿಕಿರಿ ಆಗುವುದು ಬೇಡ ಅಂತಾ ಹೇಳಿಕೆ ಕೊಟ್ಟಿದ್ದವರು.
ಮೊನ್ನೆ ನಡೆದ ಮತದಾನದಲ್ಲಿ ವೋಟು ಹಾಕಲು ಅಜಿತ್ ಕೂಡಾ ಬಂದಿದ್ದರು. ಸ್ವಲ್ಪ ಲೇಟಾದರೂ ಜನ ಸೇರಿಬಿಡುತ್ತಾರೆ. ಮೊದಲೇ ಹೋಗಿ ಶುರುವಿನಲ್ಲೇ ಮತ ಚಲಾಯಿಸಿ ಹೊರಟುಬಿಡೋಣ ಅನ್ನೋದು ಅಜಿತ್ ಲೆಕ್ಕಾಚಾರವಾಗಿತ್ತು. ಈ ಕಾರಣಕ್ಕೇ ಮನೆಯಿಂದ ಬೇಗ ಹೊರಟ ತಲಾ ಏಳು ಗಂಟೆಗೆ ಆರಂಭಗೊಳ್ಳಲಿದ್ದ ಮತದಾನ ಕೇಂದ್ರಕ್ಕೆ ಆರೂ ಮುಕ್ಕಾಲಿಗೆಲ್ಲ ತಲುಪಿದ್ದರು. ಪೊಲೀಸರಿಗೆ ವಿಚಾರ ಗೊತ್ತಾಗಿದ್ದೇ ತಡಬಡಾಯಿಸಿಹೋಗಿದ್ದರು. ಅಜಿತ್ ಥರದ ಸೂಪರ್ ಸ್ಟಾರ್ ಪಬ್ಲಿಕ್ಕಲ್ಲಿ ಹೀಗೆ ಸಿಕ್ಕರೆ ಜನ ಸುಮ್ಮನೇ ಬಿಡ್ತಾರಾ? ಸುತ್ತುವರಿದು ಗಲಿಬಿಲಿ ಮಾಡಿಬಿಡ್ತಾರೆ ಅನ್ನೋದು ಪೊಲೀಸರ ಭಯ. ಮೊದಲು ಇವರನ್ನು ಒಳಗೆ ಕಳಿಸಿ ವೋಟ್ ಹಾಕಿಸಿ ಕಳಿಸಿಬಿಟ್ಟರೆ ನಿರಾಳವಾಗಬಹುದು ಅಂತಾ ವ್ಯವಸ್ಥೆ ಮಾಡುತ್ತಿದ್ದರು. ಅಷ್ಟರಲ್ಲಿ ಅಜಿತ್ ಗಿಂತಾ ಮೊದಲೇ ಬಂದು ಕ್ಯೂನಲ್ಲಿ ನಿಂತಿದ್ದ ಸೀನಿಯರ್ ಸಿಟಿಜನ್ನೊಬ್ಬರು ‘ನೋ ವೇ ಛಾನ್ಸೇ ಇಲ್ಲ. ಮೊದಲು ಬಂದಿದ್ದು ನಾನು. ನಾನೇ ಫಸ್ಟ್ ಹೋಗಬೇಕು. ಯಾವ ಸೂಪರ್ ಸ್ಟಾರ್ ಆದರೆ ನನಗೇನು” ಅಂತಾ ಕಿತಾಪತಿ ತೆಗೆದುಬಿಟ್ಟಿದ್ದರು. ಕಾಮನ್ ಸೆನ್ಸ್ ಕಳೆದುಕೊಂಡ ಹಿರಿಯರು ಪಬ್ಲಿಕ್ಕಲ್ಲಿ ಈ ಥರಾ ನ್ಯೂ ಸೆನ್ಸ್ ಕ್ರಿಯೇಟ್ ಮಾಡೋದು ಸಹಜ. ಆದರೆ ಇಲ್ಲಿ ಆ ಮುದುಕಪ್ಪನ ಮನವೊಲಿಸುವಷ್ಟರಲ್ಲಿ ಊರಲ್ಲಿದ್ದ ಜನರೆಲ್ಲಾ ಬಂದು ಮತಗಟ್ಟೆಗೆ ಮುತ್ತಿಕೊಂಡಿದ್ದರು. ಅಜಿತ್ ಹಿಂದೆ ಹೇಳಿದ್ದನ್ನು ಮರೆತು ಮುಗಿಲುಮುಟ್ಟುವಂತೆ ಜೈಕಾರ ಕೂಗಿದ್ದರು!
No Comment! Be the first one.