SARAMSHA

ಇದು ಬದುಕಿನ ಸಾರಾಂಶ

ಹೌದಲ್ವಾ? ನಮ್ಮ ಆಸಕ್ತಿಯೇ ಬೇರೆ, ನಾವು ಬದುಕುತ್ತಿರುವ ರೀತಿಯೇ ಬೇರೆ. ನಮ್ಮ ಜೀವನ ಶೈಲಿಯಿಂದ ಜಗತ್ತು ನಮ್ಮನ್ನು ನೋಡುತ್ತಿರುವ ರೀತಿಯಂತೂ ಇನ್ನೂ ಬೇರೇನೇ ಆಗಿದೆ. ಯಾರದ್ದೋ ಮರ್ಜಿಗೆ, ಮತ್ತಿನ್ಯಾರದ್ದೋ ಸಮಾಧಾನಕ್ಕೆ  ಎಷ್ಟು ಶುಷ್ಕವಾಗಿ ಜೀವಿಸುತ್ತಿದ್ದೇವೆ… ಸಮಾಜದ ಸಿದ್ದ ಸೂತ್ರಗಳಲ್ಲಿ ಸಿಕ್ಕಿಕೊಂಡು, ನಾವಲ್ಲದ ನಾವಾಗಿಯೇ ಬದುಕಿ ಕಟ್ಟಕಡೆಯದಾಗಿ ಒಂದು ದಿನ ಮಣ್ಣಲ್ಲಿ ಮಣ್ಣಾಗಿಬಿಡಬೇಕಾ? ಯಾವುದೋ ಮರದ ಸೌದೆಯಮೇಲೆ ಮಲಗಿ ಬೂದಿಯಾಗಬೇಕಾ? ನಮ್ಮದು, ನಮ್ಮತನ ಅನ್ನೋದಕ್ಕಿಲ್ಲಿ ಬೆಲೆಯೇ ಇಲ್ಲವಾ? ಅದ್ಭುತ ಪಾತ್ರಗಳನ್ನು ಸೃಷ್ಟಿಸಿ, ಕ್ರಿಯಾಶೀಲವಾಗಿ ಬರೆದುಕೊಂಡಿರಬೇಕು ಅಂತಾ ಬಯಸಿದವನೊಬ್ಬ ತನಗೆ ಸಂಬಂಧವೇ ಇಲ್ಲದ ಜಗತ್ತಿನಲ್ಲಿ ಲೆಕ್ಕ ಬರೆದುಕೊಂಡಿರುತ್ತಾನೆ. ಇನ್ನೇನೋ ಆಗಬೇಕು ಅಂದುಕೊಂಡು ಕನಸು ಕಂಡವನು ಕಿರಾಣಿ ಅಂಗಡಿಯಲ್ಲಿ ದಿನಸಿಯನ್ನು ತೂಕ ಹಾಕಿಕೊಂಡು, ಪೊಟ್ಟಣ ಕಟ್ಟಿಕೊಂಡೇ ಸವೆದುಹೋಗುತ್ತಾನೆ. ಸೃಜನಶೀಲವಾಗಿ ಬೆಳೆಯಬೇಕು ಅಂತಾ ಬಯಸಿದ ಹೆಣ್ಣೊಬ್ಬಳು ತನ್ನಿಡೀ ಜೀವನವನ್ನು ಅಡುಗೆಮನೆಯಲ್ಲಿ ಬೆಂದು ಬೆಂದೇ ಕಳೆದುಕೊಳ್ಳುತ್ತಾಳೆ. ಇದನ್ನು ಹಣೆಬರಹ ಅಂದುಕೊಳ್ಳಬೇಕಾ? ನಾವೇ ಮಾಡಿಕೊಂಡ ಯಡವಟ್ಟು ಅಂತಾ ತೀರ್ಮಾನಿಸಬೇಕಾ? ನಮ್ಮನ್ನು ನಾವೇ ಒಮ್ಮೆ‌ ಆತ್ಮವಿಮರ್ಶೆ ಮಾಡಿಕೊಂಡರೆ, ನಡೆದು ಬಂದ ಹಾದಿಯನ್ನೊಮ್ಮೆ ಹಿಂತಿರುಗಿ ನೋಡಿದರೆ ಏಲ್ಲವೂ ಶೂನ್ಯ ಅನ್ನಿಸಿಬಿಡುತ್ತದೆ. ಹೀಗೆ ಚಿಂತಿಸುವ ಒಂದು ಪಾತ್ರವನ್ನು ಸೃಷ್ಟಿಸಿ ಅಮೂರ್ತವಾದ ವಿಚಾರಗಳನ್ನು ಮೂರ್ತ ರೂಪಕ್ಕೆ ತಂದು ನಿಲ್ಲಿಸಿರುವ ಚಿತ್ರ ʻಸಾರಾಂಶʼ. ತೀರಾ ಅಬ್‌ಸ್ಟ್ರಾಕ್ಟ್‌ ಅನ್ನಿಸುವ ವಿಚಾರಗಳನ್ನು, ಒಂದೇ ಗುಕ್ಕಿಗೆ ಓದಿಬಿಡಬಲ್ಲ ಕಥೆಯನ್ನು ದೃಶ್ಯಕ್ಕೆ ಅಳವಡಿಸುವುದು ನಿಜಕ್ಕೂ ಸವಾಲಿನ ಕೆಲಸ. ʻಸಾರಾಂಶʼದ ಮೂಲಕ ನಿರ್ದೇಶಕ ಸೂರ್ಯ ವಸಿಷ್ಠ ಅದನ್ನು ಸಾಧಿಸಿದ್ದಾರೆ. ಲೇಖಕನೊಬ್ಬ ಪಾತ್ರಗಳನ್ನು ಸೃಷ್ಟಿಸಬಲ್ಲ. ಆದರೆ, ಪಾತ್ರಗಳೇ ಎದ್ದು ಬಂದು ಲೇಖಕನನ್ನು ಪ್ರಶ್ನಿಸುವಂತಾದರೆ ಹೇಗಿರುತ್ತದೆ? ʻಸಾರಾಂಶʼ ಸಿನಿಮಾವನ್ನೊಮ್ಮೆ ನೋಡಿದರೆ ನಿಮಗದರ ಅರಿವಾಗುತ್ತದೆ.

ಇಲ್ಲಿ ಏನು ನಡೆಯುತ್ತಿದೆ? ಒಂದು ಪಾತ್ರ, ಅದರ ನಡುವೆಯೇ ಸುಳಿಯುವ ಇನ್ನೆರಡು ಕ್ಯಾರೆಕ್ಟರುಗಳು. ಮತ್ತೇನೋ ಗೊಂದಲ, ಗೋಜಲು ಅನ್ನಿಸುವಷ್ಟರಲ್ಲೇ ಎಲ್ಲವೂ ನಿರಾಳ ಇವೆಲ್ಲದರ ಒಟ್ಟು ಮೊತ್ತವೇ ಸಾರಾಂಶ. ಥೇಟು ಮನುಷ್ಯನ ಬದುಕಿನಂತೆ. ಯಾವುದೂ ಹೀಗೀಗೇ ಅಂತಾ ಕರಾರುವಕ್ಕಾಗಿ ನಿರ್ಣಯಿಸಲು ಸಾಧ್ಯವಾಗದಂಥವು… ಅದನ್ನು ಒಂಭತ್ತು ಅಧ್ಯಾಯಗಳನ್ನಾಗಿ ವಿಂಗಡಿಸಿ ಕೊಟ್ಟಿದ್ದಾರೆ.

ಸಾರಾಂಶ ಚಿತ್ರ ಮಾಮೂಲಿ ಸಿನಿಮಾಗಳನ್ನು ನೋಡುವ ಪ್ರೇಕ್ಷಕರಿಗೆ ಖಂಡಿತಾ ರುಚಿಸುವುದಿಲ್ಲ. ಸಿನಿಮಾವನ್ನು ಸಾಹಿತ್ಯದಂತೆ ಓದುವ, ಆಳಕ್ಕಿಳಿದು ಅರ್ಥಮಾಡಿಕೊಳ್ಳುವವರಿಗೆ ʻವಾಹ್‌ʼ ಅನ್ನಿಸುವಂತೆ ಮಾಡುತ್ತದೆ. ಕನ್ನಡದಲ್ಲಿ ಇಂಥದ್ದೊಂದು ಪ್ರಯೋಗ ನಿಜಕ್ಕೂ ಸ್ವಾಗತಾರ್ಹ.

ದೀಪಕ್‌ ಸುಬ್ರಹ್ಮಣ್ಯ  ಎಂದಿನಂತೆ ಅದ್ಭುತವಾಗಿ ನಟಿಸಿದ್ದಾರೆ. ಸೂರ್ಯ ವಸಿಷ್ಠ ಮತ್ತು ಶೃತಿ ಹರಿಹರನ್‌ ಕೂಡಾ ಸಹಜವಾಗಿ ಸಿನಿಮಾದ ಭಾಗವಾಗಿದ್ದಾರೆ. ಹಲವು ದಿನಗಳ ನಂತರ ತೆರೆ ಮೇಲೆ ಕಾಣಿಸಿಕೊಂಡಿರುವ ಆಸಿಫ್‌ ಕ್ಷತ್ರಿಯಾ ಖುಷಿ ಕೊಡುತ್ತಾರೆ. ಈ ಥರದ ಸ್ಕ್ರಿಪ್ಟ್‌ಗೆ ಬಹುಶಃ ಅನಂತ್‌ ಭಾರದ್ವಾಜ್‌ ಬಿಟ್ಟು ಬೇರೊಬ್ಬರು ಛಾಯಾಗ್ರಹಣ ಮಾಡಲು ಸಾಧ್ಯವೇ ಇರಲಿಲ್ಲವೇನೋ. ಅಷ್ಟರ ಮಟ್ಟಿಗೆ ಅನಂತ್‌ ಅವರ ಕೆಲಸ ಅಚ್ಚುಕಟ್ಟಾಗಿದೆ. ಅಪರಾಜಿತ್‌ ಹಿನ್ನೆಲೆ ಸಂಗೀತ ಮತ್ತು ಪ್ರದೀಪ್‌ ನಾಯಕ್‌ ಸಂಕಲನ ಕೂಡಾ ಸಿನಿಮಾಗೆ ಗಾಂಭೀರ್ಯತೆ ತಂದುಕೊಟ್ಟಿದೆ.


Posted

in

by

Tags:

Comments

Leave a Reply