ಸೂರಪ್ಪ ಬಾಬು ಅಲಿಯಾಸ್ ಎಂ ಬಿ ಬಾಬು ಮತ್ತೆ ಕೊತ ಕೊತ ಕುದಿಯುತ್ತಿದ್ದಾರಂತೆ. ಈ ಬಾರಿ ಬಾಬು ಅವರ ಬೇಗುದಿಗೆ ಕಾರಣವಾಗಿರುವುದು ಮಾತ್ರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂಬುದು ಅಚ್ಚರಿ ಆದರೂ ನಿಜ.
ವಿಷಯ ಏನೆಂದರೆ, ಡಿ ಬಾಸ್ ಮುಂದೆ ಸಾಲು ಸಾಲು ಚಿತ್ರಗಳಿವೆ. ಇತ್ತೀಚೆಗೆ ಹುಟ್ಟುಹಬ್ಬದ ಆಚರಣೆ ಸಂಭ್ರಮ ಹಾಗೂ ಕಾಟೇರ ಚಿತ್ರದ ಯಶಸ್ಸಿನ ಬೆನ್ನಲ್ಲೇ ಡಿ ಬಾಸ್ ಖಾತೆಯಲ್ಲಿ ಹಲವು ಚಿತ್ರಗಳು ಘೋಷಣೆಯಾದವು. ಈ ಪೈಕಿ ಮಿಲನ ಪ್ರಕಾಶ್ ನಿರ್ದೇಶನದ ಡೆವಿಲ್, ಜೋಗಿ ಪ್ರೇಮ್ ನಿರ್ದೇಶನದ ಚಿತ್ರ ಮಾತ್ರವಲ್ಲದೆ ತರುಣ್ ಕಿಶೋರ್ ನಿರ್ದೇಶನದಲ್ಲಿ ವೀರ ಸಿಂಧೂರ ಲಕ್ಷ್ಮಣ ಚಿತ್ರಗಳು ಜಾಹೀರಾತುಗಳ ಮೂಲಕ ಅನೌನ್ಸ್ ಆದವು. ಈ ಚಿತ್ರಗಳ ಪೈಕಿ ತೆಲುಗಿನ ನಿರ್ಮಾಪಕ ಪ್ರಸಾದ್ ಅವರ ಸಿನಿಮಾ ಕೂಡ ಒಂದು.
ಆದರೆ, ಇಷ್ಟೂ ಚಿತ್ರಗಳ ಸಾಲಿಗೆ ಸೂರಪ್ಪ ಬಾಬು ನಿರ್ಮಾಣದ ಚಿತ್ರವೂ ಸೇರಿಕೊಂಡಿದೆ ಎಂಬುದು ಬಾಬು ಅವರಿಗೆ ಮಾತ್ರ ಗೊತ್ತಿರುವ ಸಂಗತಿ. ಇದನ್ನು ಏನಾದರೂ ಮಾಡಿ ಅಧಿಕೃತಗೊಳಿಸಬೇಕು. ದರ್ಶನ್ ಅವರ ಬಗ್ಗೆ ಯಾವುದೇ ಸುದ್ದಿ ಬರೆದಾಗ ಅವರ ಮುಂದಿನ ಚಿತ್ರಗಳ ಪಟ್ಟಿ ಹಾಕುವಾಗ ತಾವು ʻಡಿ ಬಾಸ್ ಜತೆಗೆ ಸಿನಿಮಾ ಮಾಡುತ್ತಿದ್ದೇವೆʼ ಎಂಬುದನ್ನೂ ನಮೂದಿಸಬೇಕು ಎನ್ನುವ ಒತ್ತಾಸೆ ಬಾಬು ಅವರದ್ದು. ಪಾಪ.. ಬಾಬು ಅವರ ಸಂಕಷ್ಟ, ಅಪೇಕ್ಷೆ ಮಾಧ್ಯಮಗಳಿಗೆ ಅರ್ಥವಾಗಬೇಕಲ್ಲ!?
ಸದ್ಯಕ್ಕೆ ಅರ್ಥ ಆಗುವ ಲಕ್ಷಣಗಳೂ ಕಾಣುತ್ತಿಲ್ಲ. ಯಾವಾಗ ಮೀಡಿಯಾಗಳಿಗೆ ಮನವರಿಕೆಯಾಗಿ ಬಾಬು ಚಿತ್ರಕ್ಕೆ ಪ್ರಚಾರ ಸಿಗುತ್ತೋ ಗೊತ್ತಿಲ್ಲ. ದರ್ಶನ್ ಸಿನಿಮಾಗಳ ಪಟ್ಟಿಯಲ್ಲಿ ತಮ್ಮ ನಿರ್ಮಾಣದ ಚಿತ್ರವೊಂದು ಇದೆ ಎಂಬುದನ್ನು ಪತ್ರಿಕೆಗಳು ಬರೆಯದೇ ಹೋದರೆ ಬಜಾರ್ ನಲ್ಲಿ ಪೈಸಾ ಹುಟ್ಟೋದಿಲ್ಲ ಎನ್ನುವುದು ಬಾಬು ಅವರ ಅಸಲೀ ಸಂಕಟ. ಖುದ್ದು ದರ್ಶನ್ ಅವರೇ ಬಂದು ಅಧಿಕೃತವಾಗಿ ನಾನು ಬಾಬು ಅವರ ಜತೆಗೆ ಸಿನಿಮಾ ಮಾಡುತ್ತಿದ್ದೇನೆ. ಅವರ ನಿರ್ಮಾಣದಲ್ಲಿ ತಮ್ಮದು ಇಷ್ಟನೇ ಚಿತ್ರ ಎಂದು ಹೇಳಬೇಕು. ಆಗ ಮಾತ್ರ ಮೀಡಿಯಾದಲ್ಲಿ ಈ ವಿಚಾರ ಹೈಪ್ ತೆಗೆದುಕೊಳ್ಳತ್ತೆ.
ವಾಸ್ತವವೆಂದರೆ, ದರ್ಶನ್ ಹಾಗೆ ಹೇಳೋ ಪೈಕಿಯೇ ಅಲ್ಲ. ಯಾಕೆಂದರೆ, ಅವರು ಒಂದು ಸಿನಿಮಾ ಮಾಡುವಾಗ ಮತ್ತೊಂದು ಸಿನಿಮಾ ಬಗ್ಗೆ ತುಟಿಕ್ ಪಿಟಿಕ್ ಅನ್ನಲ್ಲ. ಅದರಲ್ಲೂ ಮುಲಾಜಿನ ಕೋಟಾದಲ್ಲಿ ಕೊಡುವ ಕಾಲ್ ಶೀಟ್ ವಿಚಾರದಲ್ಲಂತೂ ಬಿಲ್ಕುಲ್ ಮಾತಾಡಲ್ಲ. ಆ ಚಿತ್ರ ಯಾವಾಗ ಸೆಟ್ಟೇರುತ್ತೋ ಆಗಲೇ ಗ್ಯಾರಂಟಿ ಎನ್ನುವ ಪಾಲಿಸಿ ದರ್ಶನ್ ಅವರದ್ದು. ಹೋಗ್ಲಿ ಮಾಧ್ಯಮಗಳಲ್ಲಾದರೂ ದರ್ಶನ್ ಬಗ್ಗೆ ಸುದ್ದಿ ಮಾಡುವಾಗ ತಮ್ಮ ನಿರ್ಮಾಣದ ಚಿತ್ರ ಇದೆ ಅಂತ ಬರೆಯಲಿ ಎಂಬುದು ಸೂರಪ್ಪ ಬಾಬು ಅವರ ಕಳಕಳಿಯ ಮನವಿ. ಸುದೀಪ್ ಜತೆಗೆ ಸಿನಿಮಾ ಮಾಡುವಾಗಲೂ ಇದೇ ಸಂಕಟದಲ್ಲಿ ಒದ್ದಾಡಿದ್ದರು. ಆಗ ಪೈಲ್ವಾನ್, ವಿಕ್ರಾಂತ್ ರೋಣ ಚಿತ್ರಗಳು ಬಾಬು ನರಳಾಟಕ್ಕೆ ಕಾರಣವಾಗಿದ್ದವು. ಈಗ ದರ್ಶನ್ ಕ್ಯಾಂಪಿಗೆ ಹೋದ ಮೇಲೂ ಬಾಬು ಪರಿಸ್ಥಿತಿ ಸುಧಾರಿಸಿಲ್ಲ. ಯಾಕೆಂದರೆ ಇದು ಕೂಡ ಮುಲಾಜಿನ ಸೌಲಭ್ಯದಡಿ ಸಿಕ್ಕಿರುವ ಕಾಲ್ ಶೀಟು!
ಬಾಬು ಅವರಂತೆಯೇ ದರ್ಶನ್ ಸಿನಿಮಾ ಮಾಡ್ತೀನಿ ಅಂತಾ ಕಾಲು ಶತಮಾನದಿಂದಲೂ ಓಡಾಡುತ್ತಿರುವ ಮತ್ತೊಬ್ಬ ನಿರ್ಮಾಪಕರಿದ್ದಾರೆ. ಅವರ ಹೆಸರು ಎಂ.ಜಿ. ರಾಮಮೂರ್ತಿ!!
(ಮಾಧ್ಯಮದ ವಲಯದಲ್ಲಿ ಸಿನಿಮಾ, ಸೆಲೆಬ್ರಿಟಿಗಳ ಕುರಿತಾಗಿ ಒಂದಿಷ್ಟು ವಿಚಾರಗಳ ವಿನಿಮಯವಾಗುತ್ತಿರುತ್ತದೆ. ಅದನ್ನು ಓದುಗರಿಗೂ ತಲುಪಿಸುವ ದಿನದ ಅಂಕಣ ʻಮೀಡಿಯಾ ಮಾತುʼ.)
No Comment! Be the first one.