ಈ ಸಲ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಗೀತಾ ಶಿವರಾಜ್ ಕುಮಾರ್ ಅವರು ಸ್ಪರ್ಧಿಸುತ್ತಿದ್ದಾರೆ. ಕರ್ನಾಟಕ ಕಂಡ ಅಪ್ರತಿಮ ರಾಜಕಾರಣಿ ಬಂಗಾರಪ್ಪನವರ ಪುತ್ರಿ ಮತ್ತೊಮ್ಮೆ ರಾಜಕಾರಣದ ಅಖಾಡದಲ್ಲಿ ಪರೀಕ್ಷೆಗಳಿದಿದ್ದಾರೆ. ಗೀತಾ ಶಿವರಾಜ್ ಕುಮಾರ್ ನಿಜಕ್ಕೂ ಗಟ್ಟಿಗಿತ್ತಿ ಹೆಣ್ಣುಮಗಳು. ಹೇಗೆ ಪಾರ್ವತಮ್ಮನವರು ಡಾ. ರಾಜಕುಮಾರ್ ಅವರ ಪ್ರೇರಕ ಶಕ್ತಿಯಾಗಿದ್ದರೋ, ಹಾಗೆಯೇ ಕಳೆದ ಮೂರೂವರೆ ದಶಕಗಳಿಂದ ಶಿವರಾಜ್ ಕುಮಾರ್ ಅವರ ಬೆನ್ನಿಗೆ ನಿಂತವರು. ಆದರೆ ಈಗ ವಿಚಾರ ಅದಲ್ಲ.
ಚಿತ್ರರಂಗದಲ್ಲಿ ಅತ್ಯುನ್ನತ ಸ್ಥಾನ ಹೊಂದಿರುವ ಶಿವಣ್ಣನ ಪತ್ನಿ ಚುನಾವಣೆಗೆ ಸ್ಪರ್ಧಿಸಿರುವುದೇನೋ ಸರಿ. ಈ ಸಂದರ್ಭದಲ್ಲಿ ಶಿವಣ್ಣನ ಸುತ್ತಮುತ್ತಲಿನ ಜನ ಅವರ ಬೆಂಬಲಕ್ಕೆ ನಿಲ್ಲಬೇಕು ನಿಜ. ಆದರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಸನ್ಮಾನ್ಯ ಎನ್.ಎಂ ಸುರೇಶ್ ಅವರು ಮಹಾಪರಾಧವನ್ನು ಎಸಗಿದ್ದಾರೆ. ಅದೇನೆಂದರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಲೆಟರ್ ಹೆಡ್ಡಿನಲ್ಲಿ ಅಧಿಕೃತವಾದ ಪತ್ರವನ್ನು ಬರೆದು ʻʻಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಖ್ಯಾತ ಚಲನಚಿತ್ರ ಕಲಾವಿದರಾದ ಶ್ರೀ ಶಿವರಾಜ್ ಕುಮಾರ್ ಅವರ ಧರ್ಮಪತ್ನಿ ಶ್ರೀಮತಿ ಗೀತಾ ಶಿವರಾಜ್ ಕುಮಾರ್ ಅವರು ಸ್ಪರ್ಧಿಸಿರುವುದರಿಂದ ಚಿತ್ರರಂಗದ ಪರವಾಗಿ ಪಕ್ಷಾತೀತವಾಗಿ ಬೆಂಬಲ ಸೂಚಿಸಬೇಕಾಗಿರುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿರುತ್ತದೆ. ಆದ್ದರಿಂದ ತಮ್ಮ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಶಿವಮೊಗ್ಗಕ್ಕೆ ಆಗಮಿಸುವ ಮೂಲಕ ಪಕ್ಷಾತೀತವಾಗಿ ಬೆಂಬಲವನ್ನು ಸೂಚಿಸಬೇಕಾಗಿ ತಮ್ಮಲ್ಲಿ ವಿನಂತಿ. ಈ ಪತ್ರ ತಲುಪಿದ ಕೂಡಲೇ ತಮ್ಮ ಬರುವಿಕೆಯನ್ನು ವಾಣಿಜ್ಯ ಮಂಡಳಿಗೆ ತಿಳಿಸಿದರೆ ಮುಂದಿನ ವ್ಯವಸ್ಥೆ ಮಾಡಲಾಗುವುದುʼʼ- ಇದು ಎನ್ ಎಂ ಸುರೇಶ್ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಲೆಟರ್ ಹೆಡ್ ನಲ್ಲಿ ಬರೆದು ಅಧಿಕೃತವಾಗಿ ಸಹಿ ಮಾಡಿ ಕಳಿಸಿರುವ ಪತ್ರದ ವಿವರ.
ಎನ್ ಎಂ. ಸುರೇಶ್ ಅವರು ವಾಣಿಜ್ಯ ಮಂಡಳಿಯ ಅಧ್ಯಕ್ಷಸ್ಥಾನದಲ್ಲಿ ಕುಂತು, ಈ ರೀತಿ ಕನಿಷ್ಟಮಟ್ಟದ ಪ್ರಜ್ಞೆಯೂ ಇಲ್ಲದ, ಬಾಲಿಶ ಕೆಲಸ ಮಾಡುತ್ತಾರೆ ಅಂದರೆ ಏನೆನ್ನಬೇಕೋ ಗೊತ್ತಿಲ್ಲ. ಸುರೇಶ್ ಸಿನಿಮಾ ನಿರ್ಮಾಣ ಮಾಡೋದನ್ನು ನಿಲ್ಲಿಸಿ ಸುಮಾರು ವರ್ಷಗಳಾಗಿರಬಹುದು. ಆದರೂ, ಇವರೊಬ್ಬ ಹಿರಿಯ ನಿರ್ಮಾಪಕ ಅನ್ನೋದು ನಿಜ. ಸಿನಿಮಾ ನಿರ್ಮಾಣದ ಜೊತೆ ಮಲ್ಲೇಶ್ವರಂ ಕೋ ಆಪರೇಟೀವ್ ಬ್ಯಾಂಕ್ ಥರದ ಜಾಗಗಳಲ್ಲಿ ಜವಾಬ್ದಾರಿಯುತ ಸ್ಥಾನಗಳಲ್ಲಿ ಕೂತಿದ್ದವರು. ಸದ್ಯ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರೂ ಆಗಿದ್ದಾರೆ. ಸುರೇಶ್ ಅವರು ವೈಯಕ್ತಿಕವಾಗಿ, ತಮ್ಮ ಗುಂಪಿನ ಸಮೇತ ಹೋಗಿ ಪಕ್ಷಾತೀತ ಬಂಬಲ ಕೊಟ್ಟಿದ್ದರೆ ಯಾರೆಂದರೆ ಯಾರೂ ಪ್ರಶ್ನಿಸುವಂತಿರಲಿಲ್ಲ. ಕನ್ನಡ ಸಿನಿಮಾರಂಗದ ಮಾತೃಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿರುವ ವಾಣಿಜ್ಯ ಮಂಡಳಿಯ ಲೆಟರ್ ಹೆಡ್ ಅನ್ನು ಬಳಸಲು ಇವರು ಹೇಗೆ ನಿರ್ಧಾರ ಮಾಡಿದರು? ಸುರೇಶ್ ಅವರು ಅತ್ಯುತ್ಸಾಹದಲ್ಲಿ ಈ ಕೆಲಸ ಮಾಡಿದರಾ? ಅಥವಾ ಅಧ್ಯಕ್ಷ ಅನ್ನಿಸಿಕೊಂಡ ಮಾತ್ರಕ್ಕೆ ತಾನು ಏನು ಬೇಕಾದರೂ ಮಾಡಬಹುದು ಅನ್ನೋ ಉದ್ಧಟತನವೋ ಗೊತ್ತಿಲ್ಲ. ಆಯಕಟ್ಟಿನ ಸ್ಥಾನದಲ್ಲಿದ್ದು ತಪ್ಪು ಮಾಡಿದ್ದಾರೆ ಅನ್ನೋದಂತೂ ಸ್ಪಷ್ಟ.
ಇಷ್ಟಕ್ಕೂ ಸುರೇಶ್ ಮತ್ತವರ ಪಡೆ ಗೀತಾ ಶಿವರಾಜ್ ಕುಮಾರ್ ಅವರಿಗೆ ಮಾತ್ರ ಯಾಕೆ ಈ ಪಾಟಿ ಬೆಂಬಲ ಸೂಚಿಸುತ್ತಿದ್ದಾರೋ ಗೊತ್ತಿಲ್ಲ. ಚಿತ್ರರಂಗದ ಹಿನ್ನೆಲೆ ಹೊಂದಿರುವವರಿಗೆಲ್ಲಾ ಇವರು ಪಕ್ಷಾತೀತವಾಗಿ ಬೆಂಬಲ ನೀಡುವುದಿದ್ದರೆ ಬರೀ ಗೀತಾ ಶಿವರಾಜ್ ಕುಮಾರ್ ಅವರನ್ನು ಮಾತ್ರ ಯಾಕೆ ಬೆಂಬಲಿಸಬೇಕು? ಹೆಚ್.ಡಿ. ಕುಮಾರಸ್ವಾಮಿ ಅವರು ರಾಜಕಾರಣಕ್ಕೆ ಬರುವ ಮೊದಲು ಕನ್ನಡ ಚಿತ್ರರಂಗದಲ್ಲಿ ವಿತರಕರಾಗಿ, ನಿರ್ಮಾಪಕರಾಗಿ ದುಡಿದವರು. ಕನ್ನಡ ಚಿತ್ರರಂಗದ ಶಕ್ತಿಯಂತಿದ್ದ ಅಂಬರೀಶ್ ಅವರ ಪತ್ನಿ ಆಗಿರುವ ಸುಮಲತಾ ಅಂಬರೀಶ್ ಕಳೆದ ನಾಲ್ಕು ದಶಕಗಳಿಂದ ಸಿನಿಮಾ ನಟಿಯಾಗಿ ಹೆಸರು ಮಾಡಿದವರು. ಇವರನ್ನೆಲ್ಲಾ ಮರೆತಿರುವ ಸುರೇಶ್, ಶಿವಮೊಗ್ಗ ಮತ್ತು ಶಿವಣ್ಣನ ಕಡೆಗೆ ಮಾತ್ರ ಯಾಕೆ ಇಷ್ಟೊಂದು ಕಾಳಜಿ ವಹಿಸುತ್ತಿದ್ದಾರೆ?
ಇವೆಲ್ಲ ಏನೇ ಆಗಲಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಲೆಟರ್ ಹೆಡ್ ಅನ್ನು ಬಳಸಿಕೊಂಡಿರುವುದರ ಕುರಿತಾಗಿ ಎನ್.ಎಂ. ಸುರೇಶ್ ಅವರು ಸ್ಪಷ್ಟೀಕರಣ ನೀಡಲೇಬೇಕು!
No Comment! Be the first one.