ಹೇಗೆ ಕಾಣಿಸಿಕೊಂಡಿದ್ದಾರೆ ಎಸ್ತರ್‌ ನರೋನ್ಹಾ?

ಅವನು ಅಪ್ಪ-ಅಮ್ಮನನ್ನು ಕಳೆದುಕೊಂಡ ಯುವಕ.‌ ಹೆಸರು ಮಾನವ್.‌ ಸಣ್ಣ ಶಾಲೆಯಲ್ಲಿ ಶಿಕ್ಷಕ ವೃತ್ತಿ. ಒಬ್ಬಂಟಿ ಜೀವನ. ಯಾರಾದರೂ ಜೊತೆಯಾದರೆ ಸಾಕು ಅಂತಾ ಚಡಪಡಿಸಿದವನ ಪಾಲಿಗೆ ತನ್ನ ಮನೆಯ ಸುತ್ತಲೂ ಬಿಕೋ ಎನ್ನುವ ವಾತಾವರಣ. ಎದುರು ಮನೆಯತ್ತ ಇಣುಕಿದರೆ ಟು-ಲೆಟ್‌ ಬೋರ್ಡು ಮಾತ್ರ ಕಾಣಲು ಸಾಧ್ಯ. ಹೀಗಿರುವಾಗಲೇ ಅದೊಂದು ದಿನ ಅದೇ ಎದುರುಮನೆಯ ಕಾಂಪೌಂಡಿನಲ್ಲಿ ಅರಳಿನಿಂತ ಹೆಣ್ಣುಮಗಳು ಪ್ರತ್ಯಕ್ಷ. ಜೊತೆಗೊಬ್ಬ ಹಿರಿಯ ವ್ಯಕ್ತಿ.

ಮನೆಯವರ ಹಿತದೃಷ್ಟಿಯಿಂದ ಅಂಕಲ್‌ ವಯಸ್ಸಿನವನ ವ್ಯಕ್ತಿಯನ್ನು ಮದುವೆಯಾದ ಚೆಂದದ ಯುವತಿ ಅವಳು. ನಿರೀಕ್ಷೆಯಂತೇ ಮಾನವ್‌ಗೆ ಎದುರುಮನೆಯ ಮೋಹ ಜೊತೆ ಬಾಂಧವ್ಯ ಬೆಳೆಯುತ್ತದೆ. ಅದೊಂದು ದಿನ ಆಕೆ ತನ್ನ ವಯೋವೃದ್ಧ ಪತಿಯ ಜೊತೆ ಹೊರಗೆ ಹೋಗುತ್ತಾಳೆ. ಹಾಗೆ ಹೋದ ಮೋಹ ಮತ್ತೆ ಹೇಗೆ ಕಾಣಿಸಿಕೊಳ್ಳುತ್ತಾಳೆ. ಅನ್ನೋದು ʻದಿ ವೆಕೆಂಟ್‌ ಹೌಸ್‌ʼ ಒಳಗೆ ಅಡಗಿರುವ ಗುಟ್ಟು!

ಮಾನವ್‌ ಮತ್ತು ಮೋಹ ಎನ್ನುವ ಎರಡು ಪಾತ್ರಗಳ ಮೂಲಕ ಎಸ್ತರ್‌ ನರೋನ್ಹಾ ಸಾಕಷ್ಟು ರೂಪಕಗಳನ್ನು ಇಲ್ಲಿ ಬಿಡಿಸಿಟ್ಟಿದ್ದಾರೆ. ʻಜೊತೆಯಾಗಿದ್ದಾಗ ನೀನೇ ನನ್ನ ಸರ್ವಸ್ವ. ನೀನೇ ನನ್ನ ಜೀವ. ನೀನಿಲ್ಲದೇ ನಾನಿರೋದಿಲ್ಲ….ʼ ಅಂತೆಲ್ಲಾ ಯಾವುದೇ ಜೋಡಿ ಜೀವಗಳು ಸಹಜವಾಗಿ ಮಾತಾಡಿಕೊಂಡಿರುತ್ತವೆ. ಹಾಗಾದರೆ ಒಬ್ಬರು ಬಿಟ್ಟುಹೋದಮೇಲೆ ಮತ್ತೊಬ್ಬರು ಬದುಕೋದೇ ಇಲ್ಲವಾ? ಹಾಗೊಮ್ಮೆ ಜೊತೆಯಾಗಿದ್ದವರಲ್ಲಿ ಒಬ್ಬರು ಇಲ್ಲವಾದಾಗ ಮತ್ತೊಬ್ಬರು ಜೀವ ಕಳೆದುಕೊಂಡುಬಿಟ್ಟದ್ದರೆ ಜಗತ್ತಿನಲ್ಲಿ ಇಷ್ಟರಮಟ್ಟಿಗೆ ಜನಸಂಖ್ಯೆಯೇ ಇರುತ್ತಿರಲಿಲ್ಲ ಅಲ್ಲವಾ? ಹಾಗಾದರೆ, ʻನಿನ್ನ ಬಿಟ್ಟು ನಾನು ಬದುಕಲ್ಲʼ ಅನ್ನೋ ಮಾತು ನೆಪಮಾತ್ರಕ್ಕಾ, ಆ ಕ್ಷಣದ ತೆವಲಿಗೆ ಹೇಳಿಬಿಡುವ ಸುಳ್ಳಾ? ಅಸಲಿಗೆ ನಿಜವಾದ ಪ್ರೀತಿ ಅಂದರೆ ಏನು? ಅದರ ಸ್ವರೂಪ ಯಾವುದು? ಹೀಗೆ ಹತ್ತು ಹಲವು ಪ್ರಶ್ನೆಗಳನ್ನು ಹುಟ್ಟಿಸುವ ಮತ್ತು ಅದಕ್ಕೆ ಉತ್ತರವನ್ನೂ ನೀಡುವ ಸಿನಿಮಾ ʻದಿ ವೆಕೆಂಟ್‌ ಹೌಸ್‌ʼ!

ತೀರಾ ಸರಳ ಅನ್ನಿಸುವ ಕಥೆಯನ್ನು ಆಯ್ಕೆ ಮಾಡಿಕೊಂಡು ಸಲೀಸಾಗಿ ನೋಡಿಸಿಕೊಂಡು ಹೋಗುವ ಚಿತ್ರವನ್ನು ಎಸ್ತರ್‌ ನರೋನ್ಹಾ ಕಟ್ಟಿಕೊಟ್ಟಿದ್ದಾರೆ. ಕಥೆ, ಚಿತ್ರಕತೆ, ಸಂಭಾಷಣೆ, ಸಂಗೀತ, ನಿರ್ದೇಶನ – ಹೀಗೆ ಎಲ್ಲವನ್ನೂ ಎಸ್ತರ್‌ ಒಬ್ಬರೇ ನಿರ್ವಹಿಸಿದ್ದಾರೆ. ನಾಯಕನ ಪಾತ್ರದಲ್ಲಿ ಶ್ರೇಯಸ್‌ ಚಿಂಗಾ ಸಹಜವಾಗಿ ನಟಿಸಿದ್ದಾರೆ. ಎಸ್ತರ್‌ ನರೋನ್ಹಾ ಇಲ್ಲಿ ಮುಗ್ದತೆಯೊಂದಿಗೆ ಮಾದಕತೆಯನ್ನೂ ಬೆರೆಸಿ ಅಭಿನಯಿಸಿದ್ದಾರೆ. ಇದರ ಜೊತೆಗೆ ಸೀಮಾ ಮತ್ತು ಸಂದೀಪ್‌ ಮಲಾನಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ನಾಲ್ಕೇ ಪಾತ್ರಗಳು ಇಲ್ಲಿ ಪ್ರಧಾನವಾಗಿವೆ. ಸ್ವತಃ ಎಸ್ತರ್‌ ಸಂಗೀತ ಸಂಯೋಜಿಸಿರುವ ʻಬಾ ಬಾ ಬಾ ಪ್ರೇಮದಾಟ ಆಡಣ…ʼ ಹಾಡು ನೆನಪಿನಲ್ಲುಳಿಯುತ್ತದೆ.

ಪ್ರೀತಿ, ಪ್ರೇಮ, ಮೋಹ, ದಾಹದ ಜೊತೆಗೆ ಹಾರರ್‌ ಅಂಶ ಕೂಡಾ ಇಲ್ಲಿದೆ. ಹಾರರ್‌ ಅಂದಾಕ್ಷಣ ವಿಲಕ್ಷಣ ಮತ್ತು ವಿಕಾರವಾಗಿ ತೋರಿಸೋದು ಚಿತ್ರಜಗತ್ತಿನಲ್ಲಿ ಯಾವತ್ತಿನಿಂದಲೂ ಚಾಲ್ತಿಯಲ್ಲಿರುವ ಫಾರ್ಮುಲಾ. ಆದರೆ ಎಸ್ತರ್‌ ಇಲ್ಲಿ ಆತ್ಮವನ್ನು ವಿರೂಪಗೊಳಿಸುವ ಹಳೇ ಪ್ರಯತ್ನ ಮಾಡದೆ, ಪ್ರೇತವನ್ನು ತುಂಬಾ ಮುದ್ದಾಗಿ ಚಿತ್ರಿಸಿದ್ದಾರೆ.

ಸಿನಿಮಾದ ವ್ಯಾಪ್ತಿ, ವಿಚಾರಗಳು ಚಿಕ್ಕದಾಗಿದ್ದರೂ ಅದು ಎಲ್ಲೂ ಹದಗೆಡದಂತೆ ಎಚ್ಚರದಿಂದ ʻದಿ ವಿಕೆಂಟ್‌ ಹೌಸ್‌ʼ ಚಿತ್ರವನ್ನು ರೂಪಿಸಿದ್ದಾರೆ. ನಿಮಗೂ ಇಷ್ಟವಾಗಬಹುದು. ಒಮ್ಮೆ ನೋಡಿ!


Posted

in

by

Tags:

Comments

Leave a Reply