ನಟಿ ಎಸ್ತರ್ ನರೋನಾ ಇವತ್ತಿಗೆ ಇಡೀ ಇಂಡಿಯಾ ಪೂರ್ತಿ ಹೆಸರು ಮಾಡಿದ್ದಾರೆ. ಕನ್ನಡದವರೇ ಆದ ಎಸ್ತರ್ ಹಿಂದಿ ಮತ್ತು ತೆಲುಗು ಚಿತ್ರರಂಗದಲ್ಲಿ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದವರು. ಹಾಗೆ ನೋಡಿದರೆ ಎಸ್ತರ್ ಪಾಲಿಗೆ ದೇಶ, ಭಾಷೆಗಳ ಗಡಿಯೇ ಇಲ್ಲ. ಯಾಕೆಂದರೆ, ಈಕೆ ಹುಟ್ಟಿದ್ದು ಗಲ್ಫ್ ದೇಶದಲ್ಲಿ. ನಂತರ ಮೂರನೇ ತರಗತಿ ಹೊತ್ತಿಗೆ ಮಂಗಳೂರಿಗೆ ಬಂದು ತಲುಪಿದ್ದರು. ಕಾಲೇಜು ಓದಿದ್ದು ಮುಂಬೈನಲ್ಲಿ. ತೀರಾ ಸಣ್ಣ ವಯಸ್ಸಿಗೇ ಹಾಡುಗಾರಿಕೆಯಲ್ಲಿ ಹೆಸರು ಮಾಡಿದ್ದ ಹುಡುಗಿ ಈಕೆ. ಬಾಲಿವುಡ್ನ ಪ್ರಖ್ಯಾತ ಡ್ಯಾನ್ಸ್ ಕೊರಿಯೋಗ್ರಾಫರ್ ಸರೋಜ್ ಖಾನ್ ಅವರ ಕಣ್ಣಿಗೆ ಬಿದ್ದು, ನಂತರ ಅನುಪಮ್ ಖೇರ್ ಅವರ ನಟನಾ ಶಾಲೆಯಲ್ಲಿ ಕಲಿತು, ಆ ಮೂಲಕ ಹಿಂದಿ ಚಿತ್ರರಂಗದಲ್ಲಿ ಅವಕಾಶ ಪಡೆದ ನಿಜವಾದ ಪ್ರತಿಭಾವಂತೆ ಇವರು.
ಕನ್ನಡದಲ್ಲಿ, ಉಸಿರಿಗಿಂತಾ ನೀನೇ ಹತ್ತಿರ, ನಾವಿಕ, ಅತಿರಥ, ನುಗ್ಗೇಕಾಯಿ, ಲೋಕಲ್ ಟ್ರೈನ್ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಲೂಸ್ ಮಾದ ಯೋಗಿ ಮತ್ತು ಸಂಚಾರಿ ವಿಜಯ್ ನಟಿಸಿದ್ದ ಲಂಕೆ ಸಿನಿಮಾ ಎಸ್ತರ್ಗೆ ಹೆಚ್ಚು ಹೆಸರು ತಂದುಕೊಟ್ಟಿತ್ತು. ಈ ವರೆಗೆ ಎಸ್ತರ್ ನಟಿಸಿರೋದು ಬಹುತೇಕ ಗ್ಲಾಮರಸ್ ಪಾತ್ರಗಳೇ. ಎಸ್ತರ್ ಮಾದಕತೆಯ ಜೊತೆಗೆ ನಟನೆಯಲ್ಲೂ ತಮ್ಮದೇ ಆದ ಶೈಲಿ ರೂಢಿಸಿಕೊಂಡವರು. ಈ ಕಾರಣಕ್ಕೇ ಎಷ್ಟೋ ಜನ ನಿರ್ದೇಶಕರು, ಕತೆಗಾರರು ಎಸ್ತರ್ ಅವರನ್ನು ಗಮನದಲ್ಲಿಟ್ಟುಕೊಂಡು ಕಥೆ, ಪಾತ್ರಗಳನ್ನು ರೂಪಿಸುತ್ತಾ ಬಂದಿದ್ದಾರೆ. ಲಂಕೆ ಚಿತ್ರದಲ್ಲಿ ಈಕೆಯ ಪಾತ್ರ ನಿರ್ವಹಣೆ ನೋಡಿದವರು ʻಎಸ್ತರ್ ಬಿಟ್ಟು ಬೇರೆ ಯಾರೂ ಆ ಪಾತ್ರಕ್ಕೆ ನ್ಯಾಯ ಸಲ್ಲಿಸಲು ಆಗುತ್ತಿರಲಿಲ್ಲʼ ಅಂತಾ ಹೇಳಿದ್ದರು.
ಈ ಕೊಂಕಣಿ ಹುಡುಗಿ ತುಳು ಚಿತ್ರರಂಗದಲ್ಲೂ ಸಾಕಷ್ಟು ಹೆಸರು ಮಾಡಿದ್ದಾರೆ. ಸದ್ಯ ತೆಲುಗಿನವರ ಪಾಲಿಗೆ ʻಹಾಟ್ʼ ಫೇವರಿಟ್ ಆಗಿರುವ ಎಸ್ತರ್ ನರೋನಾ ಕನ್ನಡ ಮತ್ತು ಕೊಂಕಣಿ ಭಾಷೆಗಳಲ್ಲಿ ಏಕಕಾಲದಲ್ಲಿ ತಯಾರಾಗಿರುವ ʻದಿ ವೆಕೆಂಟ್ ಹೌಸ್ʼ ಎನ್ನುವ ಸಿನಿಮಾವೊಂದನ್ನು ರೂಪಿಸಿದ್ದಾರೆ. ವಿಶೇಷವೆಂದರೆ, ಎಸ್ತರ್ ನರೋನಾ ಇಲ್ಲಿ ಬರಿಯ ನಟನೆಯನ್ನು ಮಾತ್ರ ಮಾಡಿಲ್ಲ. ನಿರ್ಮಾಣ, ನಿರ್ದೇಶನ, ಕತೆ, ಚಿತ್ರಕತೆ, ಸಂಗೀತ, ಸಾಹಿತ್ಯ, ಕಾಸ್ಟೂಮ್ ಸೇರಿದಂತೆ ಎಲ್ಲ ವಿಭಾಗಗಳಲ್ಲೂ ಕೆಲಸ ಮಾಡಿದ್ದಾರೆ. ಹೆಣ್ಣುಮಗಳೊಬ್ಬಳು ಇಷ್ಟೆಲ್ಲಾ ಜವಾಬ್ದಾರಿಗಳನ್ನು ನಿಭಾಯಿಸೋದು ಅಂದರೆ ಸುಮ್ಮನೆ ಮಾತಲ್ಲ. ಆದರೆ, ಎಸ್ತರ್ ಅವೆಲ್ಲವನ್ನೂ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ʻವೆಕೆಂಟ್ ಹೌಸ್ʼನ ಫಸ್ಟ್ ಲುಕ್ ಕೂಡಾ ಈಗೆ ಬಿಡುಗಡೆಯಾಗಿದೆ.
ತನ್ನ ಬೋಲ್ಡ್ ನಟನೆಯಿಂದ ಎಲ್ಲ ಭಾಷೆಯ ಪ್ರೇಕ್ಷಕರನ್ನು ಸೆಳೆದಿರುವ ಎಸ್ತರ್ ಈಗ ನಿರ್ದೇಶಕಿಯಾಗಿಯೂ ಗೆಲ್ಲುವ ಎಲ್ಲ ಸೂಚನೆ ನೀಡಿದ್ದಾರೆ.
No Comment! Be the first one.