ತೀರಾ ಸಣ್ಣ ವಯಸ್ಸಿಗೇ ಅಪರಾಧ ಜಗತ್ತಿಗೆ ಕಾಲಿಟ್ಟುಬಿಟ್ಟವನ ಮುಂದಿನ ದಿನಗಳು ಹೇಗೆಲ್ಲಾ ತಿರುವು ಪಡೆದುಕೊಳ್ಳುತ್ತದೆ? ಮುಂಗೋಪ ಅನ್ನೋದು ಯಾರದ್ದೇ ಒಬ್ಬ ವ್ಯಕ್ತಿಯ ಬದುಕಿಗೆ ಹೇಗೆ ಮಾರಕವಾಗಬಹುದು? ʻಅಪರಾಧಿʼ ಎನ್ನುವ ಸ್ಥಾನದಿಂದ ಮುಕ್ತವಾಗಿ, ಹೆಣ ಕುಯ್ಯುವ ಕೆಲಸ ಮಾಡಿಕೊಂಡಿದ್ದವನ ಜೀವನದಲ್ಲಿ ನಡೆದ ಘಟನೆಗಳೇನು? – ಹೀಗೆ ಸಾಕಷ್ಟು ವಿಚಾರಗಳನ್ನು ಬಿಚ್ಚಿಟ್ಟಿರುವ ಚಿತ್ರ ಟೋಬಿ…
ರಾಜ್ ಬಿ ಶೆಟ್ಟಿ ನಟನೆಯ ಟೋಬಿ ಸಿನಿಮಾ ತೆರೆಗೆ ಬಂದಿದೆ. ಗರುಡಗಮನ ವೃಷಭ ವಾಹನ ಸಿನಿಮಾದ ನಂತರ ರಾಜ್ ಶೆಟ್ಟಿ ಬಗ್ಗೆ ವಿಪರೀತ ಕುತೂಹಲ ಕ್ರಿಯೇಟ್ ಆಗಿತ್ತು. ಟೋಬಿಯಲ್ಲಿ ಶೆಟ್ಟರು ಯಾವ ಅವತಾರದಲ್ಲಿ ಕಾಣಿಸಿಕೊಂಡಿರಬಹುದು ಎನ್ನುವುದರ ಬಗ್ಗೆ ಕ್ಯೂರಿಯಾಸಿಟಿಯಿತ್ತು. ಮೂಗಿಗೆ ದೊಡ್ಡದೊಂದು ಮೂಗುತಿ ತಗುಲುಹಾಕಿಕೊಂಡ ಪೋಸ್ಟರು, ಟೀಸರುಗಳೆಲ್ಲಾ ಹೊರಬಂದಿದ್ದು ಅದಕ್ಕೆ ಕಾರಣ ಅಂದುಕೊಳ್ಳಬಹುದು!
ಅಂತಿಮವಾಗಿ ಟೋಬಿ ತೆರೆಗೆ ಬಂದಿದೆ. ಟಿ.ಕೆ. ದಯಾನಂದ ಅವರ ಕಥೆಯನ್ನು ಆಧರಿಸಿ ರಾಜ್ ಬಿ ಬರೆದುಕೊಂಡಿರುವ ಸಿನಿಮಾ ಇದು. ನಿರ್ದೇಶನವನ್ನು ಮಾತ್ರ ಬಾಸಿಲ್ ಅವರಿಂದ ಮಾಡಿಸಿದ್ದಾರೆ!
ದಯಾನಂದ ಅವರ ಕತೆಗಳಲ್ಲಿ ಬರುವ ಪಾತ್ರಗಳ ಗುಣ ಲಕ್ಷಣಗಳೇ ಮಜಬೂತಾಗಿರುತ್ತವೆ. ಯಾವುದೋ ಊರಿನಲ್ಲಿ ಕಂಡ ವಿಚಿತ್ರ, ವಿಲಕ್ಷಣ ವ್ಯಕ್ತಿತ್ವಗಳ ಬೆನ್ನು ಹತ್ತಿ, ಅವರ ಬದುಕಿನ ವಿವರಗಳನ್ನೆಲ್ಲಾ ಕಲೆ ಹಾಕಿ, ಅದನ್ನು ಕಥಾರೂಪಕ್ಕಿಳಿಸೋದು ಅವರ ಶೈಲಿ. ಹಾಗೆ ಕಥೆಯಲ್ಲಿ ಜೀವ ಪಡೆದ ಪಾತ್ರಗಳನ್ನು ತೆರೆಮೇಲೆ ಕಟ್ಟಿಕೊಡೋದು ನಿಜಕ್ಕೂ ಕಷ್ಟದ ಕೆಲಸ. ಟೋಬಿ ಎನ್ನುವ ಪಾತ್ರವನ್ನು ತೆರೆಯಲ್ಲಿ ಅರಳಿಸುವುದರ ಹಿಂದೆ ಕೂಡಾ ಅಂಥದ್ದೇ ಶ್ರಮ ಎದುರಾಗಿರುವುದು ಸಿನಿಮಾ ನೋಡಿದಾಗ ಸ್ಪಷ್ಟವಾಗುತ್ತದೆ.
ಗೊತ್ತೂ ಗುರಿ ಇಲ್ಲದ ಮೃಗೀಯ ವರ್ತನೆಯ ಹುಡುಗ ರಿಮ್ಯಾಂಡ್ ಹೋಮ್ ಸೇರಿರುತ್ತಾನೆ. ಮಾತು ಬಾರದ ಈತನನ್ನು ಚರ್ಚ್‌ನ ಫಾದರ್ ಒಬ್ಬರು ಪರಿವರ್ತನೆ ಮಾಡುವ ಪ್ರಯತ್ನವನ್ನು ನಿರಂತರ ಚಾಲ್ತಿಯಲ್ಲಿಟ್ಟಿರುತ್ತಾರೆ. ಗ್ರೀಕ್ ಭಾಷೆಯಲ್ಲಿ ಟೋಬಿಯಾ ಅಂದರೆ, ʻದೇವರು ಒಳ್ಳೆಯವನುʼ ಎನ್ನುವ ಅರ್ಥವಿದೆ. ಈ ಕಾರಣಕ್ಕೇ ಹುಡುಗನಿಗೆ ಟೋಬಿ ಎನ್ನುವ ಹೆಸರನ್ನೂ ಇಡುತ್ತಾರೆ. ದುರಾದೃಷ್ಟವಶಾತ್ ಅವನು ಸೈತಾನನಂತೆ ಬೆಳೆದುನಿಲ್ಲುತ್ತಾನೆ. ಅವನ ಸುತ್ತ ನಡೆಯುವ ಘಟನಾವಳಿಗಳು ಅವನನ್ನು ರಾಕ್ಷಸನನ್ನಾಗಿ ರೂಪಿಸುತ್ತವೆ. ಇವನ ಮುಗ್ಧತೆ, ಮುಂಗೋಪಗಳನ್ನು ತಮ್ಮ ಸ್ವಾರ್ಥ ಸಾಧನೆಗೆ ಬಳಸಿಕೊಳ್ಳುವ ನೀಚನೊಬ್ಬ ಮಾಡಬಾರದ್ದನ್ನೆಲ್ಲಾ ಮಾಡಿ ಮುಗಿಸುತ್ತಾನೆ. ಹಂತ ಹಂತವಾಗಿ ಟೋಬಿಯ ಬದುಕನ್ನು ಆಪೋಶನ ತೆಗೆದುಕೊಳ್ಳುತ್ತಾನೆ. ಈ ಕತೆಯನ್ನು ಮಾರಿ, ಮೂಗುತಿ ಇತ್ಯಾದಿ ರೂಪಗಳನ್ನು ಬೆರೆಸಿ ರಾಜ್ ಬಿ ಶೆಟ್ಟರ ತಂಡ ತೆರೆ ಮೇಲೆ ಅರಳಿಸಿದೆ…
ಕುಮಟೆಯ ಪರಿಸರ ಕೂಡಾ ಇಲ್ಲಿ ಪಾತ್ರದಂತೆ ಅನಾವರಣಗೊಂಡಿದೆ. ರಾಜ್ ಶೆಟ್ಟರ ನಟನೆ, ವರ್ತನೆಗಳೆಲ್ಲಾ ಕೆಲವೊಮ್ಮೆ ಗರುಡಗಮನದ ಪಾತ್ರವನ್ನೇ ಮುಂದುವರೆಸಿದಂತೆ ಕಾಣುತ್ತದೆ. ಚೈತ್ರಾ ಆಚಾರ್ ಎಂದಿನಂತೆ ʻಅದ್ಭುತʼ ಅನ್ನಿಸಿಕೊಳ್ಳುವ ನಟನೆ ಮಾಡಿದ್ದಾರೆ. ಹೆಚ್ಚು ಸರಳ ಮತ್ತು ಸಹಜವಾಗಿ ಅಭಿನಯಿಸಿರೋದು ಗೋಪಾಲ್ ದೇಶಪಾಂಡೆ. ಪೊಲೀಸ್ ಮತ್ತು ಪೀಸಿ ಪಾತ್ರಧಾರಿಗಳೂ ಇಷ್ಟವಾಗುತ್ತಾರೆ. ದೀಪಕ್ ಶೆಟ್ಟಿ ಅವರ ನಟನೆಯಲ್ಲಿ ಅಂಥಾ ಹೊಸತನವೇನೂ ಇಲ್ಲ. ಲೈಂಗಿಕ ಕಾರ್ಯಕರ್ತೆಯ ಪಾತ್ರದಲ್ಲಿ ಸಂಯುಕ್ತಾ ಹೊರನಾಡ್ ನಟಿಸಿರುವ ರೀತಿ ಬ್ಯೂಟಿಫುಲ್. ಹಿನ್ನೆಲೆ ಸಂಗೀತದಲ್ಲಿ ಹೊಸ ಆವಿಷ್ಕಾರಗಳಾಗಿವೆ. ಮಾಂಟೇಜ್ ಹಾಡುಗಳು ಚಿತ್ರಕ್ಕೆ ಪೂರಕವಾಗಿವೆ. ಇಷ್ಟೆಲ್ಲಾ ಇರುವ ಟೋಬಿ ಚಿತ್ರದ ಸ್ಕ್ರೀನ್ ರೈಟಿಂಗ್ ಒಂದಿಷ್ಟು ಸ್ಪೀಡಾಗಬೇಕಿತ್ತು. 48 ಫ್ರೇಮ್ಸ್ ಅನ್ನು ಅಗತ್ಯಕ್ಕಿಂತಾ ಹೆಚ್ಚು ಬಳಸಿರೋದು ಕಿರಿಕಿರಿ ಅನ್ನಿಸುತ್ತದೆ. ಇಷ್ಟು ಬಿಟ್ಟರೆ ಮಿಕ್ಕಂತೆ ಸಿನಿಮಾ ಗುಣಮಟ್ಟದಿಂದ ಕೂಡಿದೆ. ಉತ್ತಮ ಕಂಟೆಂಟ್ ಇರುವ ʻಟೋಬಿʼ ಚಿತ್ರವನ್ನು ಧಾರಾಳವಾಗಿ ಒಂದು ಸಲ ನೋಡಿ…
Leave a Reply
You must be logged in to post a comment.