ಈ ತಮಿಳು ಜನ ಸಿನಿಮಾ ಮೂಲಕವೇ ಚಳವಳಿ ಕಟ್ಟಿಬಿಡುತ್ತಾರೆ. ಸಮಾಜದ ಓರೆಕೋರೆಗಳನ್ನೇ ಕತೆಯ ಪ್ರಧಾನ ಅಂಶವನ್ನಾಗಿಸಿಕೊಂಡು ತಮ್ಮದೇ ಕಲ್ಪಿತ ಪರಿಹಾರವನ್ನು ಮಂಡಿಸಿ ಗೆಲ್ಲುತ್ತಾರೆ. ಆದರೆ ಈಗಷ್ಟೇ ಬಿಡುಗಡೆಯಾಗಿರುವ ಎ.ಆರ್. ಮುರುಗದಾಸ್ ನಿರ್ದೇಶನದ ಸರ್ಕಾರ್ ಸಿನಿಮಾದಲ್ಲಿ ಅವರು ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಪ್ರಾಮುಖ್ಯತೆ ಹೊಂದಿದೆಯಾದರೂ ಅದನ್ನು ನಿರೂಪಿಸುವಲ್ಲಿ ಮತ್ತು ರಂಜನೀಯವಾಗಿ ಕಟ್ಟಿಕೊಡುವಲ್ಲಿ ಮುರುಗದಾಸ್ ಸೋತಿದ್ದಾರೆ.
ಅವನೊಬ್ಬ ಕಾರ್ಪೊರೇಟ್ ಟೈಕೂನ್. ತಮಿಳುನಾಡಿನ ಯಾವುದೋ ಹಳ್ಳಿಯ ಬಡಕುಟುಂಬದಲ್ಲಿ ಹುಟ್ಟಿ ಅಮೆರಿಕಾದ ದೊಡ್ಡ ಸಂಸ್ಥೆಯಲ್ಲಿ ಸಿಇಓ ಆಗಿ ಕೆಲಸ, ಕೋಟ್ಯಂತರ ರುಪಾಯಿ ಸಂಬಳ ಗಿಟ್ಟಿಸಿಕೊಂಡವನು. ಇಂಥ ಕಾರ್ಪೊರೇಟ್ ಮಾಸ್ಟರ್ ಮೈಂಡ್ ಯಾವ ದೇಶಕ್ಕೆ ಕಾಲಿಟ್ಟರೂ ಇಡೀ ಕಾರ್ಪೊರೇಟ್ ಜಗತ್ತಿಗೆ ನಡುಕ ಹುಟ್ಟಿಸುವವನು. ಈತ ಭಾರತಕ್ಕೆ ಬಂದಾಗಲೂ ಇಲ್ಲಿನ ಕಾರ್ಪೊರೇಟ್ ವಲಯ ಬೆಚ್ಚಿಬೀಳುತ್ತದೆ. ಅದೆಷ್ಟು ಸಂಸ್ಥೆಗಳನ್ನು ನಾಮಾವಶೇಷಗೊಳಿಸುತ್ತಾನೋ ಎಂದು. ಆದರೆ ಆತ ತಾಯ್ನಾಡಿಗೆ ಬರೋದು ಚುನಾವಣೆಯಲ್ಲಿ ತನ್ನ ಮತ ಚಲಾಯಿಸಲು. ಹಾಗೆ ಬಂದವನ ವೋಟನ್ನು ಮತ್ಯಾರೋ ನಕಲು ಮಾಡಿ ಮತದಾನ ಮಾಡಿರುತ್ತಾರೆ. ತಾನು ವೋಟು ಹಾಕಿದರೇನೇ ಎಲೆಕ್ಷನ್ ಫಲಿತಾಂಶ ಹೊರಬರಬೇಕು ಎಂದು ಕಾನೂನಿನ ಮೊರೆ ಹೋಗುತ್ತಾನೆ.
ಒಂದೇ ಒಂದು ಮತ ತಮಿಳುನಾಡಿನ ರಾಜಕೀಯ ಪರಿಸ್ಥಿತಿಯನ್ನೇ ಬುಡಮೇಲು ಮಾಡುತ್ತದೆ. ಮರುಚುನಾವಣೆಯಾಗುವಂತೆ ನ್ಯಾಯಾಲಯ ಸೂಚಿಸುತ್ತದೆ. ಅಧಿಕಾರಸ್ಥರು ಈತನ ವಿರುದ್ಧ ತಿರುಗಿಬೀಳುತ್ತಾರೆ. ಯಾವುದಕ್ಕೂ ಅಂಜದ ಸುಂದರ್ ರಾಮಸ್ವಾಮಿ (ವಿಜಯ್) ತಾನೇ ಚುನಾವಣೆಗೆ ಸ್ಪರ್ಧಿಸುತ್ತಾನೆ. ಹಾಲಿ ಸರ್ಕಾರದ ವಿರುದ್ಧ ಸಮರ ಸಾರುತ್ತಾನೆ. ಮುಖ್ಯಮಂತ್ರಿ ಮತ್ತು ಯೂತ್ ಐಕಾನ್ ಸುಂದರ್ ನಡುವೆ ಮಹಾ ಕದನವೇರ್ಪಡುತ್ತದೆ. ಅಷ್ಟರಲ್ಲಿ ಮುಖ್ಯಮಂತ್ರಿ ಸಾಯುತ್ತಾನೆ. ಆತನ ಮಗಳು ಅಖಾಡಕ್ಕಿಳಿಯುತ್ತಾಳೆ. ಸುಂದರ್ ತಂತ್ರದ ವಿರುದ್ಧ ಆಕೆ ರಾಜಕೀಯ ಕುತಂತ್ರವನ್ನು ಆರಂಭಿಸುತ್ತಾಳೆ. ಕಾರ್ಪೊರೇಟ್ ವಲಯದಲ್ಲಿ ಗುರುತಿಸಿಕೊಂಡು ಜಗತ್ತಿನೆಲ್ಲೆಡೆ ಖ್ಯಾತಿ ಪಡೆದ ಹೀರೋ ಯಃಕಶ್ಚಿತ್ ತಮಿಳು ನಾಡು ರಾಜಕೀಯದಲ್ಲಿ ದಿಢೀರನೆ ಎದ್ದು ನಿಲ್ಲಲು ಸಾಧ್ಯವಾ? ಬಣ್ಣಕಟ್ಟುವ ರಾಜಕಾರಣಿಗಳ ನಡುವೆ ಇವನ ಕಂಪ್ಯೂಟರ್ ಮೈಂಡು ಕೆಲಸ ಮಾಡುತ್ತದಾ? ಬುದ್ಧಿವಂತಿಕೆ ವರ್ಸಸ್ ಕುರುಡು ಅಭಿಮಾನ ಎನ್ನುವಂತಾಗುವ ಪರಿಸ್ಥಿತಿಯಲ್ಲಿ ಹೀರೋಗೆ ಗೆಲುವು ಸಿಗುತ್ತದಾ ಅನ್ನೋದು ಸಿನಿಮಾದ ಕೊನೇಹಂತದ ವರೆಗೂ ಕೆರಳಿಸುವ ಕುತೂಹಲ.
ಒಟ್ಟಾರೆ ಸಿನಿಮಾದಲ್ಲಿ ಮುರುಗದಾಸ್ ತಾವು ಭ್ರಮಿಸಿದ ಸರ್ಕಾರವನ್ನು ಎತ್ತಿನಿಲ್ಲಿಸುವಲ್ಲಿ ಗೆಲುವು ಕಂಡಿದ್ದಾರೆ. ಆದರೆ ಮನರಂಜನೆಯನ್ನಷ್ಟೇ ಬಯಸಿಬಂದ ಪ್ರೇಕ್ಷಕರ ಮನಸ್ಸು ಗೆಲ್ಲುವಲ್ಲಿ ಸೋತುಬಿಟ್ಟರಾ ಅನಿಸುತ್ತದೆ. ಯಾಕೆಂದರೆ ಇಡೀ ಸಿನಿಮಾ ರಾಜಕಾರಣದ ಸುತ್ತಲೇ ತಿರುಗುತ್ತದೆ. ನಾಯಕಿ ಕೀರ್ತಿ ಸುರೇಶ್ ಅತ್ತಿತ್ತ ಸುಳಿದಾಡೋದನ್ನು ಬಿಟ್ಟರೆ ಕಥೆಯಲ್ಲಿ ಪ್ರಾಮುಖ್ಯತೆಯನ್ನೇ ಪಡೆದಿಲ್ಲ. ವಿಜಯ್ ಪಾತ್ರವನ್ನು ವಿಜೃಂಭಿಸುವ ಭರದಲ್ಲಿ ಬೇರೆಲ್ಲ ಕ್ಯಾರೆಕ್ಟರುಗಳು ಕಳಪೆಯಾಗಿಬಿಟ್ಟಿವೆ. ತಾಂತ್ರಿಕವಾಗಿ ಶ್ರೀಮಂತಿಕೆಯಿಂದ ಕೂಡಿರುವ ಈ ಸಿನಿಮಾ ಬರೀ ರಾಜಕೀಯದಿಂದ ಸುತ್ತುವರೆಯಲ್ಪಟ್ಟಿರುವುದರಿಂದ ಅದರ ಹೊರತಾಗಿ ಪ್ರೇಕ್ಷಕನಿಗೆ ಬೇರೇನೂ ದಕ್ಕುವುದಿಲ್ಲ. ಮುಂದೆ ಏನಾಗಬಹುದೆಂಬುದರ ಸ್ಪಷ್ಟ ಸೂಚನೆ ಮೊದಲೇ ಪ್ರೇಕ್ಷಕರಿಗೆ ತಿಳಿಯುತ್ತಾ ಸಾಗುವ ಚಿತ್ರಕತೆ ಎಲ್ಲಿಯೂ ಅಂತಾ ಕುತೂಹಲ ಕೆರಳಿಸೋದಿಲ್ಲ. ಇರೋ ಹಾಡುಗಳು ಕೂಡಾ ಮಜಾ ಕೊಡುವುದಿಲ್ಲ. ತೆರೆಮೇಲಿನ ವಿಜಯ್ ಸ್ಟೈಲೆಲ್ಲವೂ ಹಳಸಲೆನಿಸುತ್ತದೆ. ಒಟ್ಟಾರೆ `ಸರ್ಕಾರ್’ ನೋಡುಗರನ್ನು ಪೂರ್ಣಪ್ರಮಾಣದಲ್ಲಿ ರಂಜಿಸುವಲ್ಲಿ ವಿಫಲವಾಗಿದೆ.
#
No Comment! Be the first one.