Connect with us

ಕಲರ್ ಸ್ಟ್ರೀಟ್

ಅಭಿಮಾನಿಗಳಿಗಾಗಿ ಅಂಬರೀಷ್ ಏನು ಮಾಡಿದರು?

Published

on

ಸಿನೆಮಾ ಜಗತ್ತಿನಲ್ಲೊಂದು ಅಲಿಖಿತ ನಿಯಮವಿದೆ. ನಾಯಕನಟ ತನ್ನ ವರ್ಚಸ್ಸು ಕಳೆದುಕೊಂಡರೆ, ಜನಪ್ರಿಯತೆ ಕುಗ್ಗಿದರೆ, ವಯಸ್ಸಾದರೆ- ಹೊಸಬರಿಗೆ ದಾರಿ ಮಾಡಿಕೊಟ್ಟು, ತಾನು ಹಿಂದಕ್ಕೆ ಸರಿಯುತ್ತಾನೆ. ಅಥವಾ ಆ ಕಾಲವೇ ಆತನನ್ನು ನೇಪಥ್ಯಕ್ಕೆ ನೂಕುತ್ತದೆ. ಅಂಬರೀಷ್, ತಾವು ಸಿನೆಮಾ ರಂಗಕ್ಕೆ ಬರುವಾಗ, ವಯಸ್ಸಾದವರನ್ನು ಹಿಂದಕ್ಕೆ ಸರಿಸಿ, ತಮಗೆ ವಯಸ್ಸಾದಾಗ ಹಿಂದಕ್ಕೆ ಸರಿದು-ಎರಡನ್ನೂ ಕಂಡವರು. ಆ ಹಂತವನ್ನು ದಾಟಿ ಬಂದವರು. ಅದನ್ನೇ ಅವರು ರಾಜಕಾರಣದಲ್ಲೂ ಮಾಡಿದ್ದಾರೆ. ಮಾಡುವಾಗ ಅಂಜದೆ, ಅಳುಕದೆ ಸಹಜವಾಗಿ ವರ್ತಿಸಿದ್ದಾರೆ. ಅವರ ಪ್ರಕಾರ ಅದೇನು ಮಹಾ ತ್ಯಾಗದ ಕೆಲಸವಲ್ಲ. ‘‘ನನಗೆ ವಯಸ್ಸಾಯ್ತು, ಓಡಾಡಕ್ಕಾಗಲ್ಲ, ಬೇಡ’’ ಎಂದು, ತಮ್ಮ ಎಂದಿನ ‘ಅಂಬಿ ಶೈಲಿ’ಯಲ್ಲಿಯೇ ಹೇಳಿದ್ದಾರೆ. ಅವರ ನಡೆಯಲ್ಲಿ ನುಡಿಯಲ್ಲಿ ಎಲ್ಲೂ ಕೃತ್ರಿಮತೆ ಕಂಡುಬರಲಿಲ್ಲ. ಅದು ಅವರ ಜಾಯಮಾನವೂ ಅಲ್ಲ.

ಈ ಅಂಬಿ ಶೈಲಿಯಲ್ಲಿ ರೆಬೆಲ್ ಗುಣ, ಮಂಡ್ಯದ ಗಂಡಿನ ಗತ್ತು ಎಲ್ಲಾ ಇರಬಹುದು. ಇದು ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಗೋಚರಿಸಬಹುದು. ಹುಂಬ, ಒರಟ, ಉಡಾಫೆ, ಶಿಸ್ತು-ಶ್ರದ್ಧೆಗಳಿಲ್ಲದ ಉಡಾಳನಂತೆ ಕಾಣಲೂಬಹುದು. ಆದರೆ ಆ ಗುಣಗಳೇ ಇಲ್ಲಿಯವರೆಗೆ ಕರೆದುಕೊಂಡು ಬಂದಿರುವುದು; ಅವುಗಳೇ ಯಶಸ್ಸಿನ ಮೆಟ್ಟಿಲುಗಳು; ಶಕ್ತಿ ಸಾಮರ್ಥ್ಯಗಳು ಎಂದು ಅವರು ಬಲವಾಗಿ ನಂಬಿದ್ದಾರೆ. ಹಾಗಾಗಿ ಅದನ್ನೇ ಪಾಲಿಸಿಕೊಂಡು ಬರುತ್ತಿದ್ದಾರೆ. ಅಂಬಿ ಅಂದ್ರೆ ಹಿಂಗೆ ಇರಬೇಕೆಂದು ಹಠಕ್ಕೆ ಬಿದ್ದವರಂತೆ ಕಂಡವರು. ಹಾಗೆಯೇ ವರ್ತಿಸಿದವರು.

ಹಾಗೆ ನೋಡಿದರೆ, ಇದೆಲ್ಲವೂ 1972ರಲ್ಲಿಯೇ, ಪುಟ್ಟಣ್ಣ ಕಣಗಾಲರ ‘ನಾಗರಹಾವು’ ಚಿತ್ರದ ಜಲೀಲ್ ಪಾತ್ರದಲ್ಲಿಯೇ ಇತ್ತು. ಆ ರೆಬೆಲ್‌ತನವೇ ಅವರ ನಿಜವಾದ ಗುಣವಾಗಿತ್ತು. ಇಲ್ಲಿಯವರೆಗೆ ನೂರಾರು ಸಿನೆಮಾಗಳಲ್ಲಿ ನಟಿಸಿರುವ, ಈಗಲೂ ನಟಿಸುತ್ತಿರುವ ಅಂಬರೀಷ್, ಯಾವುದನ್ನೂ ಮನಸ್ಸಿಟ್ಟು ಮಾಡಿದವರಲ್ಲ. ‘ಚಲ್ತಾ ಹೈ’ ಎಂದು ಕಾಲದೊಂದಿಗೆ ಕೂಡಾವಳಿ ಮಾಡಿಕೊಂಡವರು. ಚಿತ್ರಬದುಕಿನ ಅವರ ಸಾಧನೆಯತ್ತ ಗಮನ ಹರಿಸಿದರೆ, ಅವರು ಮಾಡಿದ ಪಾತ್ರಗಳು ಮತ್ತು ಚಿತ್ರಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಅದು ಗೊತ್ತಾಗುತ್ತದೆ. ಪುಟ್ಟಣ್ಣ ಕಣಗಾಲರಂತಹ ನಿರ್ದೇಶಕರ ಕೈಗೆ ಸಿಕ್ಕ ಅಂಬಿಯೇ ಬೇರೆ, ಇತರ ನಿರ್ದೇಶಕರ ಕೈಗೆ ಸಿಕ್ಕ ಅಂಬಿಯೇ ಬೇರೆ. ಅದೇ ರಾಜಕಾರಣದಲ್ಲಿಯೂ ರಿಪೀಟ್ ಆಗಿದೆ. ಚಿತ್ರನಟ ಅಂಬಿಗಿರುವ ಸಿನೆಮಾ ಅಭಿಮಾನಿಗಳಂತೆ, ರಾಜಕಾರಣದಲ್ಲೂ ಅವರದೇ ಆದ ಸೆಲೆಕ್ಟಿವ್ ಹಿಂಬಾಲಕರಿದ್ದಾರೆ. ಆಶ್ಚರ್ಯಕರ ಸಂಗತಿ ಎಂದರೆ- ಅಂಬರೀಷರಲ್ಲಿರಬಹುದಾದ ನಿಜವಾದ ಪ್ರತಿಭೆಯನ್ನು ಸಿನೆಮಾರಂಗವೂ ಹೊರಗೆಳೆಯಲಿಲ್ಲ, ರಾಜಕಾರಣವೂ ಬಳಸಿಕೊಳ್ಳಲಿಲ್ಲ. ಅಂಬರೀಷರೂ ಮನಸ್ಸು ಮಾಡಲಿಲ್ಲ. ಬೀಸುವ ಗಾಳಿಯಂತೆ, ಹರಿಯುವ ನೀರಿನಂತೆ ಬದುಕಿದರು.

1994ರಲ್ಲಿ ಮೊದಲ ಬಾರಿಗೆ, ಅಂಬರೀಷ್ ಎಂಬ ಜನಪ್ರಿಯ ನಟನನ್ನು ಮತ್ತು ಆತನ ಬೆನ್ನಿಗಿರುವ ಜಾತಿಬಲವನ್ನು ರಾಜಕೀಯವಾಗಿ ಬಳಸಿಕೊಳ್ಳುವ, ಅದರಿಂದ ಅನುಕೂಲ ಪಡೆಯುವ ದಿಸೆಯಲ್ಲಿ ದೇವೇಗೌಡರು ಅವರನ್ನು ರಾಜಕೀಯಕ್ಕೆ ಕರೆತಂದರು. ಆಗ ಹಾಸನ ಬಿಟ್ಟು ರಾಮನಗರದತ್ತ ಹೆಜ್ಜೆ ಹಾಕಿದ್ದ ದೇವೇಗೌಡರ ಮುಂದೆ ಮುಖ್ಯಮಂತ್ರಿಯಾಗಲೇಬೇಕೆಂಬ ಮಹತ್ವಾಕಾಂಕ್ಷೆಯಿತ್ತು. ನಾಡಿನ ಜನತೆ ಗೌಡರನ್ನು ಗದ್ದುಗೆ ಮೇಲೆ ಕೂರಿಸಿದ್ದೂ ಆಗಿತ್ತು. ಮುಂದುವರಿದು, ಗೌಡರಿಗೆ ಪ್ರಧಾನಮಂತ್ರಿ ಪಟ್ಟವೂ ಅರಸಿ ಬಂದು ದಿಲ್ಲಿಗೆ ತೆರಳಿದಾಗ, ತೆರವಾದ ರಾಮನಗರ ಕ್ಷೇತ್ರಕ್ಕೆ ಸಾಮಾನ್ಯ ಕಾರ್ಯಕರ್ತನೊಬ್ಬನನ್ನು ನಿಲ್ಲಿಸಬಹುದಿತ್ತು. ಆದರೆ ಗೌಡರು ಅಂಬರೀಷರನ್ನು ಅಭ್ಯರ್ಥಿಯನ್ನಾಗಿಸಿದರು. ಆ ಸಂದರ್ಭದ ಗೌಡರ ಏರುಗತಿ ರಾಜಕಾರಣವನ್ನು ಕಂಡ ಅಂಬರೀಷ್, ಹಿಂದೆ ಮುಂದೆ ನೋಡದೆ, ಕ್ಷೇತ್ರವನ್ನು ಅರಿಯದೆ, ಜನಪ್ರಿಯತೆ ಮತ್ತು ಜಾತಿಯನ್ನು ಪಣಕ್ಕಿಟ್ಟು ಸ್ಪರ್ಧೆಗಿಳಿದರು, ಸ್ಥಳೀಯ ನಾಯಕ ಸಿ.ಎಂ.ಲಿಂಗಪ್ಪರಿಂದ ಪರಾಭವಗೊಂಡರು.

ಎರಡು ವರ್ಷಗಳ ಕಾಲ ಆ ಕಡೆ ತಲೆಹಾಕದ ಅಂಬರೀಷ್, ನಂತರ ತಮ್ಮ ತವರು ನೆಲದಲ್ಲಿ ನೆಲೆ ಹುಡುಕಿಕೊಂಡರು. 1998ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದರು. ಅಲ್ಲಿಗೆ ದೇವೇಗೌಡರ ಸಂಪರ್ಕಕ್ಕೆ ಬಂದು ನಾಲ್ಕು ವರ್ಷಗಳಾಗಿತ್ತು, ಅಧಿಕಾರವೂ ಇಲ್ಲವಾಗಿತ್ತು, ಗೌಡರ ಒಳರಾಜಕಾರಣದ ಪಟ್ಟುಗಳೂ ಗೊತ್ತಾಗಿತ್ತು. ಹೊಸ ಚಿತ್ರಕ್ಕೆ ಹೊಸ ನಿರ್ಮಾಪಕರನ್ನು ಹುಡುಕಿಕೊಂಡಂತೆ ಅಥವಾ ನಾಯಕನಟನನ್ನು ಅವರೇ ಹುಡುಕಿಕೊಂಡು ಬಂದಂತೆ, ಶಿವರಾಮೇಗೌಡರ ಕಡೆಯಿಂದ 1999ರಲ್ಲಿ ಅಂಬರೀಷ್ ಕಾಂಗ್ರೆಸ್ ಪಕ್ಷದ ಪಾಲಾದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾದರು. ಅಂಬರೀಷ್ ಮಂಡ್ಯ ಲೋಕಸಭಾ ಸದಸ್ಯರಾದರು. ತಮಗಿಷ್ಟವಾದ ಬೆಂಗಳೂರು-ದಿಲ್ಲಿ ಓಡಾಟದಲ್ಲಿ ಮುಳುಗಿದರು. ಅವರ ವರ್ಚಸ್ಸು, ಜನಪ್ರಿಯತೆ ಕಂಡ ಸೋನಿಯಾ ಗಾಂಧಿ, ಅಂಬರೀಷರನ್ನು ಕಾಂಗ್ರೆಸ್ ಉಪಾಧ್ಯಕ್ಷರನ್ನಾಗಿ ಮಾಡಿ, ‘ಪಾರ್ಟಿ ಸ್ಟ್ರೆಂಥನ್ ಮಾಡಿ’ ಎಂದು ಸ್ಥಾನ ನೀಡಿ ಗೌರವಿಸಿದರು. ‘‘ಅಂಬ್ರೀಷ್ ಏಳೋದೆ ಮಧ್ಯಾಹ್ನ 12 ಗಂಟೆಗೆ, ಅದಾದ ಮೇಲೆ ಫ್ರೆಂಡ್ಸ್ ಜೊತೆ ಕಾರ್ಡ್ಸ್, ಕುದುರೆ ರೇಸು ಅಂತೆಲ್ಲ ಬ್ಯುಸಿ, ಅವರಿಗೆ ‘ಪಾರ್ಟಿ’ ಅಂದಾಕ್ಷಣ, ಯೋಚ್ನೆಗೆ ಬರೋದು ಸಂಜೆ ಪಾರ್ಟಿ’’ ಎಂದು ಕಾಂಗ್ರೆಸಿಗರೇ ಲೇವಡಿ ಮಾಡಿದರು. ಅಂಬರೀಷರೂ ಕಾಂಗ್ರೆಸಿಗರ ಮಾತಿಗೆ ಬೆಲೆ ಬರುವಂತೆಯೇ ನಡೆದುಕೊಂಡರು.

2004ರಲ್ಲಿ ಮತ್ತೊಮ್ಮೆ ಸಂಸದರಾದಾಗ, ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ, ಅಂಬರೀಷರಿಗೊಂದು ಅತ್ಯುತ್ತಮ ಅವಕಾಶ- ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಸ್ಥಾನ(ಅ. 2006ರಿಂದ ಫೆ. 2007ರವರೆಗೆ) ಲಭಿಸಿತು. ಅದನ್ನವರು ಸರಿಯಾಗಿ ನಿರ್ವಹಿಸಿದ್ದರೆ, ಅಂಬರೀಷ್ ಹಾಗೂ ಅವರ ರಾಜಕೀಯ ಬದುಕು ಬದಲಾಗುತ್ತಿತ್ತು. ಅದಕ್ಕೆ ಬೇಕಾದ ವಿಪುಲ ಅವಕಾಶವೂ ಇತ್ತು. ಆದರೆ ಸಚಿವ ಸ್ಥಾನ ಸಿಕ್ಕರೂ, ಆ ಸ್ಥಾನದ ಮಹತ್ವವನ್ನು ಅರಿಯದೆ, ಅದರ ವ್ಯಾಪ್ತಿ ವಿಸ್ತಾರವನ್ನು ತಿಳಿಯದೆ, ಕಚೇರಿಗೆ ಕಾಲಿಡದೆ, ಕಾವೇರಿ ನೆಪ ಹೇಳಿ ರಾಜೀನಾಮೆ ಕೊಟ್ಟು, ‘ಕೊಟ್ಟ ಕುದುರೆಯನೇರಲಾರದವನು..’ ಎಂಬ ಟೀಕೆಗೆ ಗುರಿಯಾದರು.

ಆ ವೇಳೆಗೆ ಅಂಬರೀಷ್ ಮಂಡ್ಯ ಜಿಲ್ಲೆಯ ರಾಜಕಾರಣಕ್ಕೆ ಕಾಲಿಟ್ಟು 10 ವರ್ಷಗಳಾಗಿತ್ತು. ಜಿಲ್ಲೆಯನ್ನು ಹಿಡಿತದಲ್ಲಿಟ್ಟುಕೊಂಡಿದ್ದ ಹಿರಿತಲೆಗಳಾದ ಜಿ.ಮಾದೇಗೌಡ, ಚೌಡಯ್ಯ, ಎಸ್.ಎಂ.ಕೃಷ್ಣರು ಹಿಂದಕ್ಕೆ ಸರಿದು, ಅಂಬರೀಷ್, ಚೆಲುವರಾಯಸ್ವಾಮಿ, ಡಿ.ಸಿ.ತಮ್ಮಣ್ಣರಂತಹ ಹೊಸ ಪೀಳಿಗೆಯ ಕಾರುಬಾರು ಜೋರಾಗಿತ್ತು. ಕೃಷ್ಣರ ಗುಂಪಿನಲ್ಲಿ ಆತ್ಮಾನಂದರಂತಹವರು ಗುರುತಿಸಿಕೊಂಡು ಅಲ್ಲೇ ಕೊಳೆಯುತ್ತಿದ್ದರೆ, ಅಂಬರೀಷರ ಗುಂಪಿನಲ್ಲಿ ಅಮರಾವತಿ ಚಂದ್ರಶೇಖರ್ ಥರದವರು ಮೆರೆಯುತ್ತಿದ್ದರು. ಏತನ್ಮಧ್ಯೆ, 2008ರಲ್ಲಿ ರಾಜ್ಯ ರಾಜಕಾರಣಕ್ಕೆ ಬರಬೇಕೆಂದು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಜೆಡಿಎಸ್‌ನ ರಮೇಶಬಾಬು ಬಂಡಿಸಿದ್ದೇಗೌಡರಿಂದ ಸೋತರು. ಆನಂತರ ಲೋಕಸಭೆಗೆ ನಿಂತು ಚೆಲುವರಾಯಸ್ವಾಮಿ ವಿರುದ್ಧ ಮತ್ತೊಮ್ಮೆ ಸೋಲು ಕಂಡರು. ಅಷ್ಟರಲ್ಲಾಗಲೇ ಜಿಲ್ಲೆಯ ಹಿರಿಯ ನಾಯಕ ಎಸ್.ಎಂ.ಕೃಷ್ಣರೊಂದಿಗೆ ಕೊಸರಿಕೊಂಡಿದ್ದರು. ಅವರು ಅಂಬರೀಷರಿಗೆ ಬ್ರೇಕ್ ಹಾಕಲು ನಟಿ ರಮ್ಯಾರನ್ನು ತಂದು ಕೂರಿಸಿದ್ದರು. ಅಷ್ಟಾದರೂ, ಮಂಡ್ಯದ ಮತದಾರರ ಕೃಪೆಯಿಂದ 2013ರಲ್ಲಿ ವಿಧಾನಸಭೆ ಪ್ರವೇಶಿಸಿದರು. ಕಾಂಗ್ರೆಸ್ ಬಹುಮತ ಪಡೆದು ಸರಕಾರ ರಚಿಸಿ, ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಪ್ರಬಲ ಒಕ್ಕಲಿಗ ಜಾತಿ ಮತ್ತು ಮಂಡ್ಯ ಜಿಲ್ಲೆಯ ಪ್ರಾತಿನಿಧ್ಯದ ಕೋಟಾದಲ್ಲಿ ಅಂಬರೀಷರಿಗೆ, ವಸತಿ ಖಾತೆ ಕೊಟ್ಟು ಹೊಸ ಜವಾಬ್ದಾರಿ ಹೊರಿಸಲಾಯಿತು. ಮತ್ತೆ ಮತ್ತೊಂದು ಮಹತ್ವದ ಅವಕಾಶ.

ಆದರೆ ಅಂಬಿ ಗೌರವಾನ್ವಿತ ಸಚಿವ ಸ್ಥಾನಕ್ಕೆ ನ್ಯಾಯ ಸಲ್ಲಿಸದೆ, ಘನತೆವೆತ್ತ ಸದನಕ್ಕೆ ಬರದೆ, ವಿರೋಧಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸದೆ, ಸರಕಾರವನ್ನು ಮುಜುಗರಕ್ಕೀಡುಮಾಡಿದರು. ಗೆಲ್ಲಿಸಿ, ಗದ್ದುಗೆ ನೀಡಿ ಗೌರವಿಸಿದ ಮಂಡ್ಯದ ಮತದಾರರನ್ನೂ ಮರೆತರು. ಖಾತೆಯಲ್ಲಿ ಕೆಲಸಗಳಾಗುತ್ತಿದ್ದವು, ನಿಜ. ಕೇಂದ್ರ ಸರಕಾರದಿಂದ ಪ್ರಶಸ್ತಿಗಳೂ ಬಂದಿದ್ದವು, ನಿಜ. ಆದರೆ ಅವುಗಳನ್ನು ಸರಕಾರದ ಕೆಲಸಗಳನ್ನಾಗಿ ಪರಿವರ್ತಿಸುವ, ಪಕ್ಷದ ಖಾತೆಗೆ ಜಮಾ ಮಾಡುವ ಛಾತಿ ಅಂಬರೀಷರಲ್ಲಿ ಕಾಣಲಿಲ್ಲ. ಆಸಕ್ತಿಯೂ ಇರಲಿಲ್ಲ, ಪ್ರಯತ್ನವನ್ನೂ ಪಡಲಿಲ್ಲ. ಆದರೆ ಪಕ್ಷ ಅವರಂತೆ ಯೋಚಿಸುವುದು, ವರ್ತಿಸುವುದು ಸಾಧ್ಯವಿರಲಿಲ್ಲ. ವ್ಯಕ್ತಿಯೇ ಬೇರೆ, ಪಕ್ಷವೇ ಬೇರೆ. ಇವೆರಡರ ನಡುವಿನ ವ್ಯತ್ಯಾಸವನ್ನೇ ಅಂಬರೀಷ್ ಅರಿಯಲಿಲ್ಲ. ಜೊತೆಗೆ ಆರೋಗ್ಯ ಕೈಕೊಟ್ಟು ಸಿಂಗಪೂರ್‌ಗೆ ಹಾರಿದರು. ವಾಪಸಾದ ನಂತರ, ತಾನೊಬ್ಬ ಸಚಿವ, ತಮಗೊಂದು ಜವಾಬ್ದಾರಿಯುತ ಖಾತೆಯಿದೆ, ಅದಕ್ಕೊಂದು ಇಲಾಖೆಯಿದೆ, ಕಾರ್ಯಭಾರಗಳಿವೆ, ರಾಜ್ಯದ ಜನರ ಆಶೋತ್ತರಗಳಿವೆ ಎಂಬುದನ್ನೇ ಮರೆತು ದಣಿದಿದ್ದ ದೇಹದ ಆರೈಕೆಯಲ್ಲಿ ಮುಳುಗಿದರು.

ವಿರೋಧ ಪಕ್ಷಗಳ ಟೀಕೆಗಳು, ಸರಕಾರದ ಮೇಲೆ ಬೀರುತ್ತಿದ್ದ ಪರಿಣಾಮ, ಪಕ್ಷದ ವರ್ಚಸ್ಸು- ಎಲ್ಲವನ್ನು ಅಳೆದು ತೂಗಿ, ಸಚಿವ ಸಂಪುಟ ಪುನರ್‌ರಚನೆಯ ಸಂದರ್ಭದಲ್ಲಿ ವಸತಿ ಖಾತೆಯಿಂದ ಅಂಬರೀಷರನ್ನು ಬಿಡುಗಡೆಗೊಳಿಸಿದರು. ‘‘ಕನಕದಾಸನನ್ನು ಕನಕರಾಜನನ್ನಾಗಿ ಮಾಡಿ ಎಂದಿದ್ದು ನಾನು, ಆಗ ಮೂಲಕಾಂಗ್ರೆಸಿಗರೆಲ್ಲ ಸಿದ್ದರಾಮಯ್ಯನವರ ವಿರುದ್ಧವಿದ್ದರು. ಈಗ ಅವರೆಲ್ಲ ಒಂದಾಗಿದ್ದಾರೆ, ನಾನು ಹೊರಗಿದ್ದೇನೆ. ಪರವಾಗಿಲ್ಲ, ಅವರೆಲ್ಲ ಚೆನ್ನಾಗಿರಲಿ. ಆದರೆ ಸಚಿವ ಸ್ಥಾನದಿಂದ ತೆಗಿವಾಗ ಸಿದ್ದರಾಮಯ್ಯ ನಡೆದುಕೊಂಡ ರೀತಿ ನನಗೆ ಬೇಸರ ತರಿಸಿದೆ. ನನ್ನ ಕರೆದು ಸಚಿವ ಸ್ಥಾನ ಬಿಡು ಎಂದಿದ್ದರೆ, ಬಿಟ್ಟುಬರುತ್ತಿದ್ದೆ, ಆದರೆ ನನಗೆ ತಿಳಿಸದೆ, ತೆಗೆದುಹಾಕಿದ್ದು ಸರಿಯಲ್ಲ’’ ಎನ್ನುವುದು ಅಂಬರೀಷ್ ಕೊಸರಿಕೊಳ್ಳುವುದಕ್ಕೆ ಕೊಡುವ ಕಾರಣ.

ಆದರೆ ರಾಜಕೀಯದಲ್ಲಿ ಅಧಿಕಾರ ಪಡೆಯುವುದು ಒಂದು ರೀತಿಯ ಹೋರಾಟವಾದರೆ, ಗಳಿಸಿದ ಅಧಿಕಾರವನ್ನು ಉಳಿಸಿಕೊಳ್ಳುವುದು ಇನ್ನೊಂದು ರೀತಿಯ ಹೋರಾಟ. ನಾಲ್ಕು ಸಲ ಗೆದ್ದು, ಮೂರು ಸಲ ಸೋತಿರುವ 66ರ ಹರೆಯದ ಅಂಬರೀಷರಿಗೆ ಅದೂ ಕೂಡ ಗೊತ್ತಿದೆ. ಗೊತ್ತಿದ್ದೂ ಕೂಡ ಟಿಕೆಟ್ ಪಡೆಯುವಲ್ಲಿ ಮೊಂಡಾಟಕ್ಕೆ ಬಿದ್ದರು. ಹಳೆಮೈಸೂರು ಭಾಗದಲ್ಲಿ ಕಾಂಗ್ರೆಸಿಗೆ ಕಷ್ಟ ಎಂಬ ತಲೆನೋವು ತಂದಿಟ್ಟರು. ಕೊನೆಗೆ ‘‘ನನಗ್ಯಾಕೆ ಟಿಕೆಟ್ಟು, ಯಾರಿಗೆ ಬೇಕಾದರೂ ಕೊಡಿ, ಪ್ರಚಾರಕ್ಕೆ ಬರಲ್ಲ’’ ಎಂದರು. ಸದ್ಯಕ್ಕೆ ಕಾಂಗ್ರೆಸ್ ನಿರಾಳವಾಗಿರಬಹುದು. ಆದರೆ ಇದು ಕೂಡ ಇವತ್ತಿಗೆ, ನಾಳೆ ಏನೋ ಗೊತ್ತಿಲ್ಲ. ಒಟ್ಟಿನಲ್ಲಿ ಪ್ರಜಾಪ್ರಭುತ್ವದ ಸೊಗಸನ್ನು ಅರಿಯದ ಅಂಬಿ, ಗೆಲ್ಲಿಸಿದ ಮತದಾರರನ್ನು ಅವಮಾನಿಸಿದರು, ರಾಜಕಾರಣಕ್ಕೆ ಕರೆತಂದ ದೇವೇಗೌಡರಿಂದ ದೂರವಾದರು, ಎಸ್.ಎಂ.ಕೃಷ್ಣರೊಂದಿಗೆ ಕಾದಾಟಕ್ಕಿಳಿದರು, ಸಿದ್ದರಾಮಯ್ಯರೊಂದಿಗೆ ಮುನಿಸಿಕೊಂಡರು, ಆಪ್ತ ಅಮರಾವತಿ ಚಂದ್ರಶೇಖರ್‌ರನ್ನು ದೂರವಿಟ್ಟರು. ಸಿಕ್ಕ ಅವಕಾಶವನ್ನು ಬಳಸಿಕೊಳ್ಳದೆ ಬಿಟ್ಟರು. ಆಪ್ತರಿಗೆ ಟಿಕೆಟ್ ಬೇಕು ಎಂದರು, ಬೇಡ ಎಂದರು. ‘‘ಎಲ್ರ ಬಂಡವಾಳನೂ ಗೊತ್ತು, ಬಿಡಲೆ’ ಎಂದು ಎಲ್ಲರನ್ನು ಹಗುರವಾಗಿ ಕಂಡರು. ಎಲ್ಲೋ ಕೆಲವು ರಾಜಕಾರಣಿಗಳು ಹಾಗೂ ಚಿತ್ರರಂಗದವರು ಅವರನ್ನು ದುರು ಪಯೋಗಪಡಿಸಿಕೊಂಡಿರಬಹುದು, ಬಳಸಿಕೊಂಡು ಮೋಸ ಮಾಡಿರಲೂಬಹುದು. ಆದರೆ ಏನನ್ನೂ ಬಯಸದ ಕನ್ನಡಿಗರ ಪ್ರೀತಿ, ಅಭಿಮಾನದ ಮಹಾಗೋಡೆ ಎಲ್ಲಾ ಕಾಲಕ್ಕೂ ಅಂಬಿಯ ಬೆನ್ನಿಗೆ ನಿಂತಿದೆಯಲ್ಲವೇ?.

ಕಲರ್ ಸ್ಟ್ರೀಟ್

ಇದೇ ಶನಿವಾರ ಬರಲಿದೆ ಸುವರ್ಣ ಸುಂದರಿ ಟ್ರೈಲರ್!

Published

on


ಅದ್ದೂರಿ ವೆಚ್ಚದಲ್ಲಿ ತಯಾರಾಗಿರುವ ಸುವಣ್ ಸುಂದರಿ ಸಿನಿಮಾ ಆರಂಭದಿಂದಲೂ ಸುದ್ದಿಯಾಗುತ್ತಲೇ ಬಂದಿದೆ. ಇದೀಗ ಚಿತ್ರತಂಡ ಈ ಸಿನಿಮಾದ ಟ್ರೈಲರ್ ಲಾಂಚ್ ಮಾಡಲು ತಯಾರಾಗಿದೆ. ಇದೇ ೧೯ನೇ ತಾರೀಕಿನ ಶನಿವಾರದಂದು ಸುವರ್ಣ ಸುಂದರಿ ಟ್ರೈಲರ್ ಬಿಡುಗಡೆಯಾಗಲಿದೆ.

ಎಸ್ ಟೀಮ್ ಪಿಕ್ಚರ್‍ಸ್ ಲಾಂಛನದಡಿಯಲ್ಲಿ ತಯಾರಾಗಿರುವ `ಸುವರ್ಣ ಸುಂದರಿ’ ಚಿತ್ರ ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿಕೊಂಡಿದೆ. ತೆಲುಗಿನಲ್ಲಿ ಈಗಾಗಲೇ ಒಂದಷ್ಟು ಚಿತ್ರಗಳನ್ನು ನಿರ್ದೇಶನ ಮಾಡಿರುವ ಸೂರ್ಯ ನಿರ್ದೇಶನದ ಈ ಚಿತ್ರ ನಾಲಕ್ಕು ಕಾಲಮಾನಗಳ ವಿಶಿಷ್ಟವಾದ ಕಥಾ ಹಂದರ ಹೊಂದಿದೆ.
ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕ ಕಾಲದಲ್ಲಿ ತಯಾರಾಗಿರೋ ಈ ಚಿತ್ರಕ್ಕೆ ರಾಂಗೋಪಾಲ್ ವರ್ಮಾ ಅವರ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿರುವ ಸಾಯಿ ಕಾರ್ತಿಕ್ ಅವರೇ ರಾಗ ಸಂಯೋಜನೆ ಮಾಡಿರೋದು ವಿಶೇಷ. ಬೆಂಗಳೂರು, ಅನಂತಪುರಂ, ಹೈದರಾಬಾದ್, ಬೀದರ್, ಕೇರಳ ಮುಂತಾದೆಡೆಗಳಲ್ಲಿ ಚಿತ್ರೀಕರಣ ಮುಗಿಸಿಕೊಂಡಿರೋ ಈ ಚಿತ್ರವೀಗ ಅಂತಿಮ ಹಂತಕ್ಕೆ ತಲುಪಿಕೊಂಡಿದೆ. ಇದರ ಜೊತೆಗೇ ಒಂದು ಸುಂದರವಾದ ಟ್ರೈಲರ್ ಕೂಡಾ ಇಗಾಗಲೆ ಬಿಡುಗಡೆಗೊಂಡಿದೆ. ಇದೀಗ ವಿಶಿಷ್ಟವಾದ ಎರಡನೇ ಟ್ರೈಲರ್ ನೋಡೋ ಕಾಲ ಹತ್ತಿರಾಗಿದೆ.

ಬಾಹುಬಲಿ ಚಿತ್ರಕ್ಕೆ ಸಿಜಿ ವರ್ಕ್ ಮಾಡಿದ್ದ ತಂತ್ರಜ್ಞರೇ ಈ ಚಿತ್ರಕ್ಕೆ ನಲವತೈದು ನಿಮಿಷಗಳ ಸಿಜಿ ವರ್ಕ್ ಮಾಡಿದ್ದಾರಂತೆ. ಪೂರ್ಣ, ಸಾಕ್ಷಿ, ತಿಲಕ್, ಸಾಯಿ ಕುಮಾರ್, ಜೈ ಜಗಧೀಶ್, ರಾಮ್, ಅವಿನಾಶ್, ಇಂದಿರಾ, ಸತ್ಯಪ್ರಕಾಶ್ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಎಲ್ಲಾ ಕೆಲಸ ಕಾರ್ಯಗಳನ್ನೂ ಸಂಪೂರ್ಣವಾಗಿ ಮಗಿಸಿಕೊಂಡಿರುವ ಚಿತ್ರತಂಡ ಇದೀಗ ಟ್ರೈಲರ್ ತೋರಿಸಲು ಮುಂದಾಗಿದೆ.

Continue Reading

ಕಲರ್ ಸ್ಟ್ರೀಟ್

ಯಜಮಾನನ ಅಬ್ಬರದ ಮುಂದೆ ತಮಿಳು ಚಿತ್ರಗಳೂ ಥಂಡ! ಯೂಟ್ಯೂಬಿನಲ್ಲಿ ಶಿವನಂದಿಗೆ ಎದುರು ನಿಲ್ಲೋರಿಲ್ಲ!

Published

on


ಸಂಕ್ರಾಂತಿಯ ಶುಭ ಘಳಿಗೆಯಲ್ಲಿ ದರ್ಶನ್ ಅಭಿಮಾನಿಗಳ ಪಾಲಿಗೆ ಭರ್ಜರಿ ಸಂಭ್ರಮವೇ ಸಿಕ್ಕಿ ಬಿಟ್ಟಿದೆ. ಅದಕ್ಕೆ ಕಾರಣವಾಗಿರೋದು ಯಜಮಾನ ಚಿತ್ರದ ಶಿವನಂದಿ ಹಾಡಿನ ನಾಗಾಲೋಟ. ಯೂಟ್ಯೂಬ್‌ನಲ್ಲಿ ಈ ಹಾಡಿನ ಹವಾ ಅದ್ಯಾವ ಥರ ಇದೆಯೆಂದರೆ, ಅದರ ಮುಂದೆ ತಮಿಳು ಚಿತ್ರಗಳೂ ಥಂಡಾ ಹೊಡೆದು ಬಿಟ್ಟಿವೆ.

ಸಂಕ್ರಾಂತಿಯಂದು ಬಿಡುಗಡೆಯಾಗಿದ್ದ ಶಿವನಂದಿ ಆ ದಿನವೇ ಬಹುತೇಕ ದಾಖಲೆಗಳನ್ನು ಬ್ರೇಕ್ ಮಾಡಿತ್ತು. ಅದಾಗಿ ಮಾರನೇ ದಿನ, ಅಂದರೆ ಈ ಕ್ಷಣದ ವರೆಗೇ ಶಿವನಂದಿ ಹಾಡು ಯೂಟ್ಯೂಬ್ ಟ್ರೆಂಡಿಂಗ್‌ನಲ್ಲಿದೆ. ಇದರ ಅಬ್ಬರದ ಮುಂದೆ ತಮಿಳಿನ ಚಿಯಾನ್ ವಿಕ್ರಂ ಚಿತ್ರವೇ ಮಂಕಾಗಿ ಬಿಟ್ಟಿದೆ!

ಇದೇ ದಿನ ಚಿಯಾನ್ ವಿಕ್ರಂ ಅಭಿಯದ ಕೊಡರಂ ಕೊಂಡನ್ ಟೀಸರ್ ಮತ್ತು ಪ್ರಭುದೇವ ನಟನೆಯ ಚಾರ್ಲಿ ಚಾಪ್ಲಿನ್ ೨ ಚಿತ್ರದ ಟ್ರೈಲರ್ ಬಿಡುಗಡೆಯಾಗಿತ್ತು. ಈ ಎರಡಕ್ಕೂ ವೀಕ್ಷಣೆ ಸಿಕ್ಕಿದೆಯಾದರೂ ಯೂಟ್ಯೂಬ್ ಟ್ರೆಂಡಿಂಗ್‌ನಲ್ಲಿ ಯಜಮಾನನ ಶಿವನಂದಿಯನ್ನು ಹಿಂದಿಕ್ಕಲು ಸಾಧ್ಯವಾಗಿಲ್ಲ. ಈಗಿರೋ ಹವಾ ನೋಡಿದರೆ ಅದು ಅಷ್ಟು ಸಲೀಸಾಗಿ ಸಾಧ್ಯವಾಗೋದೂ ಇಲ್ಲ.
ಇದು ಯಜಮಾನ ಚಿತ್ರದ ಆರಂಭಿಕ ಯಶಸ್ಸು ಎಂಬುದರಲ್ಲಿ ಎರಡು ಮಾತಿಲ್ಲ. ಈ ಮೂಲಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊ ಬೇರೆಯದ್ದೇ ರೀತಿಯಲ್ಲಿ ಅಭಿಮಾನಿಗಳ ಮುಂದೆ ಬರಲು ಅಣಿಯಾಗಿದ್ದಾರೆ. ಒಟ್ಟಾರೆ ಕಥೆ ಭಿನ್ನವಾಗಿದೆ ಎಂಬುದೂ ಸೇರಿದಂತೆ ಈಗಾಗಲೇ ಯಜಮಾನನ ಬಗ್ಗೆ ಅಭಿಮಾನದಾಚೆಯೂ ಪ್ರೇಕ್ಷಕರು ಆಕರ್ಷಿತರಾಗಿದ್ದಾರೆ.

Continue Reading

ಕಲರ್ ಸ್ಟ್ರೀಟ್

ಕನ್ನಡದ ಹೆಮ್ಮೆಯ ಕಥೆಗಾರ ಟಿ.ಕೆ. ದಯಾನಂದ ಅವರ ಬೆಲ್ ಬಾಟಮ್

Published

on

ಟಿ.ಕೆ. ದಯಾನಂದ ಅನ್ನೋ ಹೆಸರು ಕನ್ನಡ ಚಿತ್ರರಂಗಕ್ಕೆ ತೀರಾ ಹೊಸದೇನಲ್ಲ. ಈ ಹಿಂದೆ ‘ಬೆಂಕಿ ಪಟ್ಣ’ ಅನ್ನೋ ಸಿನಿಮಾ ತೆರೆಗೆ ಬಂದಿತ್ತಲ್ಲಾ? ನಿರೂಪಕಿ ಅನುಶ್ರೀ ನಾಯಕಿಯಾಗಿ ನಟಿಸಿದ ಸಿನಿಮಾ… ಅದನ್ನು ನಿರ್ದೇಶನ ಮಾಡಿದ್ದವರು ಇದೇ ದಯಾನಂದ್. ಕಥೆ ಬರೆಯೋನಿಗೆ ಜೀವನದ ಕಷ್ಟ ಸುಖಗಳ ಬಗ್ಗೆ ಇಂಚಿಂಚೂ ಅನುಭವವಿರಬೇಕು. ಸಮಾಜಜ್ಞಾನ ಕೂಡಾ ಇರಬೇಕು. ದಯಾನಂದ್ ವಿಚಾರದಲ್ಲಿ ಇವೆಲ್ಲವೂ ಒಂಚೂರು ಹೆಚ್ಚೇ ಇದೆ. ಕಡು ಕಷ್ಟದ ಹಿನ್ನೆಲೆಯಿಂದ ಬಂದ ದಯಾನಂದ್ ಓದು ಮುಗಿಸಿ ಟೀವಿ ನೈನ್ ಚಾನೆಲ್ಲಿನಲ್ಲಿ ಡೆಸ್ಕ್ ಎಡಿಟರ್ ಆಗಿದ್ದವರು. ಅದರ ಜೊತೆಗೆ ಅಗ್ನಿ, ಲಂಕೇಶ್ ಸೇರಿದಂತೆ ಸಾಕಷ್ಟು ಪತ್ರಿಕೆಗಳಿಗೆ ಬರೆಯುತ್ತಿದ್ದವರು. ಜಗತ್ತಿನ ಎಲ್ಲ ಭಾಷೆಗಳ ಸಿನಿಮಾಗಳನ್ನು ನೋಡಿ ಅದರ ಕುರಿತು ಬರೆಯುತ್ತಿದ್ದ ದಯಾನಂದ್ ತಳಸಮುದಾಯಗಳ ಅಧ್ಯಯನಗಳನ್ನು ಕುರಿತ ಸಾಕಷ್ಟು ಡಾಕ್ಯುಮೆಂಟರಿಗಳನ್ನೂ ತಯಾರಿಸಿದ್ದಾರೆ. ಜೀವವನ್ನು ಪಣಕ್ಕಿಟ್ಟು ಮ್ಯಾನ್ ಹೋಲ್ ಗಳಲ್ಲಿ ಇಳಿಯುವ ಸಫಾಯಿಕರ್ಮಚಾರಿಗಳ ಕುರಿತಾಗಿ ದಯಾನಂದ ಮಾಡಿರುವ ಸಂಶೋಧನೆಗಳು ಸಾಕಷ್ಟು. ಇವತ್ತೇನಾದರೂ ಸಫಾಯಿಕರ್ಮಚಾರಿಗಳ ಬದುಕಲ್ಲಿ ಬೆಳಕು ಕಾಣಿಸೋ ಸೂಚನೆ ಕಂಡಿದೆಯೆಂದರೆ ಅದಕ್ಕೆ ದಯಾನಂದ್ ಮಾಡಿರುವ ಆಧ್ಯಯನ ವರದಿಗಳ ಪಾತ್ರ ದೊಡ್ಡದು.

ಚಾಕು ಸಾಣೆ ಹಿಡಿಯೋರು, ಹಾವಾಡಿಗರು, ಕರಡಿ ಕುಣಿಸೋರು… ಹೀಗೆ ಬದುಕಿಗಾಗಿ ನಾನಾ ಕಸುಬುಗಳನ್ನು ಮಾಡುವ ಜನರ ಕುರಿತು ದಯಾನಂದ್ ಬರೆದ ‘ರಸ್ತೆನಕ್ಷತ್ರಗಳು’ ಪುಸ್ತಕ ಹೊಸ ಸಾಮಾನ್ಯ ಜನರಿಗೆ ಗೊತ್ತಿಲ್ಲದ ಹೊಸ ಲೋಕವನ್ನು ಪರಿಚಯಿಸುತ್ತದೆ. ಇವರ ನಾಯಿಬೇಟೆ ಕಥೆಗಾಗಿ ಪ್ರಜಾವಾಣಿಯ ಪ್ರತಿಷ್ಟಿತ ದೀಪಾವಳಿ ಕಥಾಸ್ಪರ್ಧೆಯಲ್ಲಿ ಮೊದಲ ಬಹುಮಾನ ಬಂದಿತ್ತು. ವಿಜಯ ನೆಕ್ಸ್ಟ್ ಪತ್ರಿಕೆಯ ಕಥಾಸ್ಪರ್ಧೆಯಲ್ಲಿ ಇವರ ಒಂದಾನೊಂದು ಊರಿನಲ್ಲಿ ಕಥೆ ಕೂಡಾ ಮೊದಲ ಕಥೆಯಾಗಿ ಆಯ್ಕೆಯಾಗಿತ್ತು. ಕಣ್ಣೆದುರೇ ನಡೆಯುತ್ತಿದ್ದರೂ ಯಾರೂ ಕಣ್ಣೆತ್ತಿನೋಡದ ವಿಚಾರಗಳನ್ನೇ ಕಥೆಗಳನ್ನಾಗಿಸಿ, ರೋಚಕವೆನ್ನುವಂತೆ ಬರೆಯೋದು ದಯಾನಂದ್ ಅವರಿಗೆ ಸಿದ್ದಿಸಿದೆ.

ಕನ್ನಡದ ಹೆಮ್ಮೆಯ ಕಥೆಗಾರ ದಯಾನಂದ್ ‘ಬೆಲ್‌ಬಾಟಮ್’ ಸಿನಿಮಾಗೆ ಕಥೆ ಒದಗಿಸಿದ್ದಾರೆ. ಇಂಥ ಸಿನಿಮಾಗಳು ಗೆದ್ದರೆ ಕನ್ನಡದಲ್ಲೂ ಸಾಕಷ್ಟು ಹೊಸ ಕಂಟೆಂಟುಗಳ ಸಿನಿಮಾ ಬರೋದು ಗ್ಯಾರೆಂಟಿ. ಈ ಕಾರಣಕ್ಕಾದರೂ ನಾವು ಬೆಲ್ ಬಾಟಮ್ ಸಿನಿಮಾವನ್ನೊಮ್ಮೆ ನೋಡಲೇಬೇಕು.

Continue Reading

Trending

Copyright © 2018 Cinibuzz