ಅಂಬರೀಶ್ ಯಾಕೆ ಕನ್ನಡದ ಪ್ರಮುಖ ನಟ ಎಂಬ ಪ್ರಶ್ನೆಯ ಬೆನ್ನತ್ತಿ ಹೊರಟಾಗ ‘ಅಂತ‘, ‘ಚಕ್ರವ್ಯೂಹ‘, ‘ಏಳುಸುತ್ತಿನ ಕೋಟೆ‘, ‘ಇಂದ್ರಜಿತ್‘, ‘ಮಸಣದ ಹೂವು‘, ‘ಒಲವಿನ ಉಡುಗೊರೆ‘, ‘ಹೃದಯ ಹಾಡಿತು‘, ‘ಮಣ್ಣಿನ ದೋಣಿ‘, ‘ಸೋಲಿಲ್ಲದ ಸರದಾರ‘, ‘ಸಪ್ತಪದಿ‘, ‘ಮಂಡ್ಯದ ಗಂಡು‘ ತರಹದ ಚಿತ್ರಗಳು ಉತ್ತರವಾಗಿ ಸಿಗುತ್ತವೆ. ಈ ಬಗೆಯ ಚಿತ್ರಗಳನ್ನು ಜ್ಞಾಪಿಸಿಕೊಂಡು ಅಂಬರೀಶ್ ಅವರ ಬಗ್ಗೆ ಆಲೋಚಿಸಿದಾಗ ಒಂದು ವಿಸ್ಮಯಕಾರಿ ಜಗತ್ತು ಕಣ್ಣೆದುರು ನಿಲ್ಲುವುದು ಸುಳ್ಳಲ್ಲ.
https://www.youtube.com/watch?v=55wUu04W3PE
ಈ ನಟ ಕೇವಲ ಅರವತ್ತಾರು ವರ್ಷಕ್ಕೇ ಈ ಪರಿ ಕಳೆಗುಂದಿ ಹೋದದ್ದು ನೋವಿನ, ಬೇಜಾರಿನ ವಿಷಯ; ಅಂಬರೀಶ್ ಕುಡಿತ ಕಮ್ಮಿ ಮಾಡಿದ್ದರೆ… ಸಿಗರೇಟು ಬಿಟ್ಟಿದ್ದರೆ ಇನ್ನೂ ಒಂದಷ್ಟು ಕಾಲ ಚುರುಕಿನಿಂದಿರಬಹುದಿತ್ತು. ಆದರೆ ಅಂಬರೀಶ್ ತರಹದ ಎಲ್ಲಾ ಸವಲತ್ತುಗಳಿರುವ ಮಂದಿ ಮುಪ್ಪು, ಅನಾರೋಗ್ಯ, ಅಸಹಾಯಕತೆಗಳನ್ನೆಲ್ಲ ಎದುರಿಸುತ್ತಾ ಬದುಕುವುದು ಭೀಕರವಾದದ್ದು.
https://www.youtube.com/watch?v=vEwvlFrgo1c
ಅಂಬರೀಶ್ ಯಾರಿಗೆ ತಾನೇ ಗೊತ್ತಿಲ್ಲ? ಇವರದೇ ಒಂದು ಇಮೇಜ್. ನಿರ್ದೇಶಕ ರೂಪಿಸಿದ ಪಾತ್ರವೇ ತಾವಾಗಿ ಜನರೆದುರು ತಮ್ಮೊಳಗಿನ ಕಲಾವಿದನನ್ನು ತೆರೆದುಕೊಳ್ಳುವುದು ಇವರ ಗುರಿಯಾಗಿತ್ತು; ಎಲ್ಲಾ ಬಗೆಯ ಪಾತ್ರಗಳಿಗೂ ಒಗ್ಗಿಕೊಳ್ಳಬಲ್ಲ ಸಾಮರ್ಥ್ಯ ಹೊಂದಿದ್ದ ಅಂಬರೀಶ್ ಸ್ವೀಕರಿಸಿದ ಚಾಲೆಂಜ್ ಯಾವುದೆಂದರೆ, ಸಾಧ್ಯವಾದಷ್ಟು ಆಕ್ಷನ್ ಚಿತ್ರಗಳಲ್ಲಿ ಮಿಂಚುತ್ತಾ ಅಭಿಮಾನಿವಲಯದಲ್ಲಿ ತಮ್ಮ ಇಮೇಜನ್ನೂ ಕಾಪಾಡಿಕೊಳ್ಳುತ್ತಾ ಸಂಸಾರಿಕ ಕತೆ, ಪ್ರೇಮಕತೆಗಳಲ್ಲೂ ನಟಿಸಿ ಸೈ ಎನ್ನಿಸಿಕೊಂಡು ವರ್ಸಟೈಲ್ ನಟ ಎನ್ನಿಸಿಕೊಳ್ಳುವುದು. ಅವರು ‘ಒಲವಿನ ಉಡುಗೊರೆ‘ ಮಾಡುವ ಮೊದಲು ಆಕ್ಷನ್ ಹೀರೋ ಎಂದೇ ಬಿಂಬಿತರಾಗಿದ್ದವರು; ಡಿ.ರಾಜೇಂದ್ರಬಾಬು ನಿರ್ದೇಶನದ ‘ಒಲವಿನ ಉಡುಗೊರೆ‘ ಚಿತ್ರದಲ್ಲಿ ಫೈಟಿಂಗ್ ದೃಶ್ಯಗಳಿಗಿಂತಲೂ ಭಾವನಾತ್ಮಕ ದೃಶ್ಯಗಳಿಗೆ ಹೆಚ್ಚು ಮಹತ್ವವಿತ್ತು. ಆ ನೆಪದಲ್ಲಿ ಹೊಸ ಅಂಬರೀಶ್ ನಮಗೆ ಸಿಕ್ಕಿದರು. ಆಮೇಲೆ ‘ಬಜಾರ್ ಭೀಮ‘, ‘ನ್ಯೂ ಡೆಲ್ಲಿ‘, ‘ಇನ್ಸ್ ಪೆಕ್ಟರ್ ಕ್ರಾಂತಿಕುಮಾರ್‘,’ಅಜಿತ್‘ ತರಹದ ಚಿತ್ರಗಳ ನಡುವೆಯೇ ಅಂಬರೀಶ್ ‘ಪೂರ್ಣಚಂದ್ರ‘ ಚಿತ್ರದಲ್ಲಿ ನಟಿಸಿ ಬೆರಗು ಮೂಡಿಸಿದರು. ಪ್ರೇಕ್ಷಕರನ್ನು ಒಮ್ಮೆಲೇ ತಮ್ಮ ಹೊಡೆದಾಟದ ದೃಶ್ಯಗಳ ಮೂಲಕ, ಪಂಚಿಂಗ್ ಡೈಲಾಗ್ಸ್ ಮೂಲಕ ರಂಜಿಸುತ್ತಿದ್ದ ಅಂಬರೀಶ್, ಮರುಕ್ಷಣವೇ ಭಾವನಾತ್ಮಕವಾಗಿ ಪರಿಣಮಿಸಿ ಅದೇ ಪ್ರೇಕ್ಷಕರ ಕಣ್ಣಲ್ಲಿ ನೀರು ತರಿಸುತಿದ್ದರಲ್ಲದೆ, ಹೃದಯವನ್ನು ಮೆತ್ತಗೆ ಮಾಡಿಬಿಡುತ್ತಿದ್ದರು. ‘ಒಡಹುಟ್ಟಿದವರು‘ ಚಿತ್ರದ ತುಂಬಿದ ಕುಟುಂಬದಲ್ಲಿನ ಆದರ್ಶ ತಮ್ಮನಾಗಿ ಕಾಣುವುದು, ‘ಪುಕ್ಸಟ್ಟೆ ಗಂಡ ಹೊಟ್ಟೆ ತುಂಬ ಉಂಡ‘ ಚಿತ್ರದಲ್ಲಿ ನಕ್ಕು ನಲಿಸುವುದು, ‘ಚಕ್ರವ್ಯೂಹ‘ದ ನಾಯಕನ ಕೆಚ್ಚೆದೆಯ, ಬಂಡಾಯದ ಗುಣವನ್ನು ಸಮರ್ಥವಾಗಿ ನಿಭಾಯಿಸುವುದು, ‘ಶ್ರೀ ಮಂಜುನಾಥ‘ದ ದೊರೆಯ ಗಾಂಭೀರ್ಯತೆ, ‘ದಿಗ್ಗಜರು‘ ಚಿತ್ರದಲ್ಲಿನ ಸ್ನೇಹಮಯಿ ವ್ಯಕ್ತಿತ್ವ– ಇವು ಒಂದಿಷ್ಟು ಮೆಲುಕು.
https://www.youtube.com/watch?v=dK5WYMFnqFY
ಬಿಂದಾಸ್ ಮನುಷ್ಯ ಅಂಬರೀಶ್, ಸ್ನೇಹಕ್ಕೆ, ಸಹಾಯಹಸ್ತಕ್ಕೆ ಹೆಸರಾದ ಅಂಬರೀಶ್ ಕರ್ನಾಟಕ ಕಂಡ ಅಪರೂಪದ ನಟ; ಚಲನಚಿತ್ರ ಮೊದಲು ಹೀರೋಗಳ ಮಾಧ್ಯಮವಾಗಿತ್ತು. ಅಂಬರೀಶ್ ಅವರ ಮೈಕಟ್ಟು, ಧ್ವನಿ, ನೇರವಂತಿಕೆ, ಮುಕ್ತ ಮನಸ್ಸೇ ಅವರ ವ್ಯಕ್ತಿತ್ವ, ಅವರು ನಿರ್ವಹಿಸುತ್ತಿದ್ದ ಪಾತ್ರಗಳ ನಡುವೆ ಸಂಬಂಧ ಬೆಸೆದು ಯಾವುದೇ ನಾಟಕೀಯತೆಗೆ ದಾರಿ ಮಾಡಿಕೊಡದೆ ಸಹಜ ಕಲಾವಿದರನ್ನಾಗಿ ರೂಪಿಸಿದ್ದು ಸುಳ್ಳಲ್ಲ.
ದಿನಗಳೆದಂತೆ ಅಂಬರೀಶ್ ಅವರನ್ನು ಸಪ್ಪೆ ಮಾಡತೊಡಗಿದ್ದು ಅವರ ರಾಜಕೀಯದ ಸೆಳೆತ ಮತ್ತು ಲಿಮಿಟ್ಟಿಲ್ಲದ ಕುಡಿತ ಎಂಬುದು ಕೂಡ ಕೌತುಕಮಯವಾದದ್ದು. ‘ಮುಂಜಾನೆಯ ಮಂಜು‘, ‘ಮಿಡಿದ ಹೃದಯಗಳು‘, ‘ಎಂಟೆದೆ ಭಂಟ‘, ‘ಸಪ್ತಪದಿ‘, ‘ಒಂಟಿ ಸಲಗ‘ದಂತಹ ಚಿತ್ರಗಳ ಮೇರುತನ, ಪಕ್ವತೆ, ಮತ್ತು ಲವಲವಿಕೆಗಳ ಜಾಗವನ್ನು ‘ಅಣ್ಣಾವ್ರು‘, ‘ವೀರ ಪರಂಪರೆ‘, ‘ಕಠಾರಿವೀರ ಸುರಸುಂದರಾಂಗಿ‘, ‘ವಾಯುಪುತ್ರ‘, ‘ರಣ‘ ತರಹದ ಚಿತ್ರಗಳಲ್ಲಿನ ಖಾಲಿತನ, ಅಪೂರ್ಣತೆ, ಅಸಂಬದ್ದತೆ, ಮಂದಮಯ ವಾತಾವರಣ ಇವೆಲ್ಲಾ ಕವಿದುಕೊಂಡಿದ್ದವು. ಯಾರ ಕಾಂಬಿನೇಶನ್ನಿನಲ್ಲಿ ಬೇಕಾದರೂ ಸಮರ್ಥವಾಗಿ ನಟಿಸಬಲ್ಲೆ ಎಂಬ ಉತ್ಸಾಹದಿಂದಾಗಿ ‘ತಂದೆಗೆ ತಕ್ಕ ಮಗ‘ದಲ್ಲಿನ ಉಪೇಂದ್ರರ ಜೊತೆ ನಟಿಸಿ ತಾವೂ ಜಡ್ಜ್ ಮೆಂಟಿಗೆ ಸಿಗದಂತಾದರು; ತಮಿಳಿನ ಸೂಪರ್ ಹಿಟ್ ಸಿನಿಮಾ ‘ದೇವರ್ ಮಗನ್‘ ಕನ್ನಡದಲ್ಲಿ ಸೋಲುವಂತಾಯಿತಲ್ಲದೆ ಶಿವಾಜಿ ಗಣೇಶನ್ ಮಾಡಿದ್ದ ಅದ್ಭುತ ಪಾತ್ರ ಪ್ರಶ್ನೆಯಾಗಿ ಕಾಡಿತ್ತು. ಇದರೊಂದಿಗೆ ಯಾವ್ಯಾವ ಪಾತ್ರಗಳನ್ನು ಮಾಡಬೇಕು? ಮಾಡಿದರೂ ಈ ಜಮಾನದಲ್ಲಿ ಯಾರ್ಯಾರ ಕಾಂಬಿನೇಶನ್ ತಮಗೆ ಸರಿಹೊಂದುತ್ತದೆ ಎಂಬುದರ ಬಗ್ಗೆ ಅಂಬರೀಶ್ ಆಳದಲ್ಲಿ ಧ್ಯಾನಿಸದ ಹಾಗೆ ಮಾಡಿತ್ತು.
ಸಿನಿಮಾ ಜಗತ್ತಿನಾಚೆಗೆ ರಾಜಕೀಯವಾಗಿ ತಮ್ಮನ್ನು ತೊಡಗಿಸಿಕೊಂಡ ಅಂಬರೀಶ್ ಲೋಕಸಭಾ ಸದಸ್ಯರಾಗಿ, ವಿಧಾನಸಭಾ ಸದಸ್ಯರಾಗಿ, ಸಚಿವರಾಗಿ ಕೆಲಸ ಮಾಡಿದವರು. ಆಳದಲ್ಲಿ ಸಮಾಜಕ್ಕೆ ಏನಾದರು ಸೇವೆ ಸಲ್ಲಿಸಬೇಕೆಂಬ ತುಡಿತ ಹೊಂದಿದ್ದರೂ ಪ್ರಾಕ್ಟಿಕಲ್ಲಾಗಿ, ಅಧಿಕಾರಯುತವಾಗಿ ಜನಸೇವೆ ಮಾಡುವಲ್ಲಿ ಅಂಬರೀಶ್ ಅಷ್ಟು ಪಳಗಿದವರು ಎನ್ನಿಸಲೇ ಇಲ್ಲ; ಕಾಂಗ್ರೆಸ್ ಹಾಗೂ ಜನತಾ ದಳ ಪಾರ್ಟಿಗಳಲ್ಲಿ ಗುರ್ತಿಸಿಕೊಂಡು ಕರ್ನಾಟಕ ರಾಜಕಾರಣದ ದ್ವಂದ್ವಕ್ಕೆ ಸಾಕ್ಷಿಯಾದರಲ್ಲದೇ ಮಂಡ್ಯ ಜನತೆ ತಮ್ಮ ಸಿನಿಮಾಗಳ ದೆಸೆಯಿಂದ, ತಮ್ಮ ತವರಿನ ಕಾರಣದಿಂದ, ತಾವೊಬ್ಬ ಒಕ್ಕಲಿಗ ಎಂಬ ಸೆಂಟಿಮೆಂಟಿನಿಂದ ತಮ್ಮ ಮೇಲಿಟ್ಟಿದ್ದ ಅಭಿಮಾನವನ್ನು ಓಟುಗಳನ್ನಾಗಿ ಪರಿವರ್ತಿಸುವಲ್ಲಿ ಅಂಬರೀಶ್ ಯಶಸ್ವಿಯಾದರು; ಈ ಬೆಳವಣಿಗೆಯಿಂದ ಸ್ವತಃ ಅಂಬರೀಶ್ ಅವರಿಗೆ ಅಥವಾ ಮಂಡ್ಯ ಜನತೆಗೆ ಉಪಯೋಗವಾಯಿತೋ ಇಲ್ಲವೋ ಗೊತ್ತಿಲ್ಲ, ಆದರೆ ರಾಜಕೀಯ ಪಕ್ಷಗಳಿಗಂತೂ ಖಂಡಿತ ವರ್ಕ್ ಔಟ್ ಆಯಿತು.
No Comment! Be the first one.