ಬಿಲ್ವ ಕ್ರಿಯೇಷನ್ಸ್ ನಿರ್ಮಾಣದ ಇರುವುದೆಲ್ಲವ ಬಿಟ್ಟು ನಾಳೆ ತೆರೆಗೆ ಬರುತ್ತಿದೆ. ಇದೀಗ ನಿರ್ದೇಶಕ ಕಾಂತ ಕನ್ನಲಿ ಯೋಗರಾಜ ಭಟ್ಟರಿಂದ ವಿಶೇಷವಾದ ಪ್ರಮೋಷನ್ ಸಾಂಗ್ ಒಂದನ್ನು ಬರೆಸಿ, ಅಷ್ಟೇ ವಿಶೇಷವಾದ ಸಂಗೀತದೊಂದಿಗೆ ಬಿಡುಗಡೆ ಮಾಡಿದ್ದಾರೆ. ಚಿತ್ರದ ಆಂತರ್ಯಕ್ಕೆ ಪೂರಕವಾದ ಈ ಹಾಡೀಗ ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ. ಸಾಮಾಜಿಕ ಜಾಲತಾಣಗಳಲ್ಲಂತೂ ಅದ್ಭುತ ಪ್ರತಿಕ್ರಿಯೆಗಳೇ ಸಿಗುತ್ತಿವೆ.

`ಈ ಜೀವನ ಎಲ್ಲಾನು ಕಲಿಸುತ್ತೆ ಅಮಿಕಂಡಿರೋದನ್ನ ಬಿಟ್ಟು. ಈ ಜೀವನ ನಮಗರ್ಥ ಆಗೋದ್ರೊಳಗೆ ಎಲ್ಲ ಕೂತ್ಕೊಂಡ್ಬಿಟ್ವಲ್ಲಪ್ಪ ಕೆಟ್ಟು’ ಎಂಬ ಈ ಹಾಡನ್ನು ಕನ್ನಡ ಕೋಗಿಲೆ ಖ್ಯಾತಿಯ ಗಣೇಶ್ ಕಾರಂತ್ ಹಾಡಿದ್ದಾರೆ. ಅನಂತ್ ಕಿಶನ್ ಸಂಗೀತ ಸಂಯೋಜನೆ ಮಾಡಿರೋ ಈ ಹಾಡಿನ ಮೂಲಕವೇ ಇರುವುದೆಲ್ಲವ ಬಿಟ್ಟು ಚಿತ್ರದ ಬಗ್ಗೆ ಕಡೇ ಕ್ಷಣದಲ್ಲಿ ಕುತೂಹಲ ತೀವ್ರಗೊಳ್ಳುವಂತಾಗಿದೆ.

ಭಟ್ಟರ ಹಾಡಿನ ಅಸಲೀ ಘಮ ಈ ಪ್ರಮೋಷನ್ ಸಾಂಗ್ ಮೂಲಕವೂ ಮುಂದುವರೆದಿದೆ. ಈ ಚಿತ್ರದ ಕಥೆಗೆ ಮಾತ್ರವಲ್ಲದೇ, ಬದುಕಿಗೂ ಹತ್ತಿರಾಗುವಂಥಾ ಈ ಸಾಹಿತ್ಯವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಈ ಹಾಡಿನ ಮೇಕಿಂಗ್ ವೀಡಿಯೋ ಮೂಲಕವೇ ಒಟ್ಟಾರೆ ಚಿತ್ರದ ಕಥೆಯ ಜಾಡಿನ ಸೂಚನೆಗಳೂ ಸಿಕ್ಕಿವೆ. ಕಾಂತ ಕನ್ನಲಿ ಇಂಥಾದ್ದೊಂದು ಹಾಡನ್ನು ಯೋಗರಾಜ ಭಟ್ಟರ ಕಡೆಯಿಂದಲೇ ಬರೆಸಬೇಕೆಂಬ ತೀರ್ಮಾನ ಮಾಡಿಯೇ ಅಖಾಡಕ್ಕಿಳಿದಿದ್ದರಂತೆ. ಅದಕ್ಕೆ ಸರಿಯಾಗಿ ಭಟ್ಟರೂ ಕೂಡಾ ಒಳ್ಳೆ ಸಾಹಿತ್ಯದ ಮೂಲಕ ಸಾಥ್ ಕೊಟ್ಟಿದ್ದಾರೆ. ಇನ್ನಷ್ಟು ಪ್ರೇಕ್ಷಕರನ್ನು ಥೇಟರಿನತ್ತ ಸೆಳೆಯೋ ತಾಕತ್ತು ಹೊಂದಿರೋ ಈ ಹಾಡು ಭಟ್ಟರ ಒಳ್ಳೆ ಹಾಡುಗಳಲ್ಲೊಂದಾಗಿಯೂ ದಾಖಲಾಗಿದೆ!

  #

LEAVE A REPLY

Please enter your comment!
Please enter your name here

17 − nine =