One N Only Exclusive Cine Portal

ಮುನ್ನೂರು ರುಪಾಯಿಯ ಶೂ ಸಾಕು ಅಂದಿದ್ದರು ಅಣ್ಣ….

ಚಿತ್ರರಂಗದೊಂದಿಗೆ ನಿಮ್ಮ ಸಂಪರ್ಕ ಇರಲಿ. ಆದರೆ ಸರ್ಕಾರಿ ಕೆಲಸ ಬಿಡಬೇಡಿ ಎನ್ನುತ್ತಿದ್ದರು. ಬೆಳಗ್ಗೆಯಿಂದ ಸಂಜೆಯ ತನಕ ಕಚೇರಿ ಕೆಲಸಕ್ಕೆ ಅಂದೂ, ಇಂದೂ, ಮುಂದೂ ನನ್ನಿಂದ ತೊಂದರೆಯಾಯಿತೆಂಬ ಮಾತಿಲ್ಲ. ಬಿಡುವಿನ ವೇಳೆಯಲ್ಲಿ ಮಾತ್ರ ನನ್ನ ಆರಾಧ ದೇವರಿಗೆ ಸಮಯ ಮೀಸಲು. ಬೆಳಗ್ಗೆ ಎಂಟು ಗಂಟೆ ಒಳಗೆ ನನ್ನ ನಿತ್ಯ ಕರ್ಮ ಮುಗಿಸಿ, ಮನೆಯ ಜವಾಬುದಾರಿ ಮುಗಿಸಿ ಅಣ್ಣಾವ್ರ ಮನೆಯ ಮೆಟ್ಟಿಲೇರುತ್ತಿದ್ದೆ.ಮೊದಲ ಮೆಟ್ಟಿಲು ಏರಬೇಕು ಅಷ್ಟೇ.ಶಬ್ಧ ಕೇಳಿದ ತಕ್ಷಣ ‘ಏನ್ರೀ ಚೆನ್ನಾ ಬಂದ್ರಾ?ಬನ್ನಿ ಬನ್ನಿ. ಟಿಫನ್ ಮಾಡೋಣ ಎನ್ನಬೇಕು.ನೆನಪಿರಲಿ ಒಳಗೆ ಬಂದ ತಕ್ಷಣ ಇದು ಒಬ್ಬ ಅಭಿಮಾನಿಯನ್ನು ಅಣ್ಣಾವ್ರು ನೋಡುತ್ತಿದ್ದ ರೀತಿ.ಒಂದಲ್ಲ, ಎರಡಲ್ಲ ಸಾವಿರಾರು ದಿನಗಳು ಹೀಗೇ ನಡೆದಿವೆ. ಹೇಳಿ, ನನ್ನಷ್ಟು ಭಾಗ್ಯಶಾಲಿ ಅದ್ಯಾರಿದ್ದಾರೆ ಎಂದು?ಪ್ರಶ್ನೆ ಕೇಳಿ ಸುಮ್ಮನಾದರು ಚೆನ್ನ.ಆ ಪ್ರಶ್ನೆಗೆ ಆಪ್ಷನ್ ಇಲ್ಲ. ಉತ್ತರ ಚೆನ್ನ.


ತಮಾಷೆಯೆಂದರೆ ಏನೋ ಕಾರ್ಯನಿಮಿತ್ತ ಎಂಟು ಗಂಟೆಗೆ ಸದಾಶಿವನಗರದ ಮನೆಗೆ ನಾನು ಹೋಗದಿದ್ದರೆ ಶುರುವಾಗ್ತಾ ಇತ್ತು ನೋಡಿ ಅಣ್ಣಾವ್ರ ಚಡಪಡಿಕೆ. ಇದ್ದ ಎಲ್ಲರನ್ನೂ ಎಲ್ಲಿ ಚೆನ್ನ ಎಲ್ಲಿ ಚೆನ್ನ ಅನ್ನೋರಂತೆ. ಬಂದ ತಕ್ಷಣ ಉದ್ಗಾರ. ‘ಓ ಚೆನ್ನಾ ಬಂದ್ರಾ?ಬನ್ನಿ ಬನ್ನಿ.
ಅವತ್ತೊಂದು ದಿನ ಮನೆಯಲ್ಲಿ ಕೋಳಿಸಾರು, ಮುದ್ದೆ ಮಾಡಿದ್ದಾರೆ.ರಾಜ್‌ರಿಗೆ ನನ್ನ ನೆನಪು. ಆಫೀಸಿಗೆ ಫೋನ್ ಬಂತು.ಮಧ್ಯಾಹ್ನ ಊಟದ ಸಮಯಕ್ಕೆ ಮನೆಗೆ ಬನ್ನಿ ಎಂಬ ಸಂದೇಶ. ನಾನು ಯಾಕಪ್ಪಾ ಏನು ವಿಷಯ ಅಂತ ಸಾವಿರ ಯೋಚನೆ ಮಾಡಿ ಧಾವಂತದಲ್ಲಿ ಮನೆಗೆ ಕಾಲಿಟ್ಟರೆ ‘ಬನ್ನಿ ಚೆನ್ನಾ ಬಂದ್ರಾ?ಕೈ ಕಾಲು ತೊಳೆದುಕೊಂಡು ಬನ್ನಿ. ಜಮಾಯಿಸಿಬಿಡೋಣ.ಇವತ್ತು ಸ್ಪೆಷಲ್ಲು ಮಾಡಿದ್ದಾರೆ ಎಂದು ಅಣ್ಣಾ ತುಂಬು ನಗೆಯೊಂದಿಗೆ ನನ್ನನ್ನು ತಮ್ಮ ಪಕ್ಕದಲ್ಲಿ ಕೂರಿಸಿಕೊಂಡು ಊಟ ಮಾಡಿಸಲು ಹಾತೊರೆಯುತ್ತಿದ್ದರು.
ರೇಡಿಯೋದಲ್ಲಿ ಕೆ.ಎಸ್.ನರಸಿಂಹಸ್ವಾಮಿ ಅವರ ಹಾಡು ‘ಎತ್ತರದ ಮನೆ ನಿನ್ನ ಬದುಕೇನೇ..ನಿನ್ನೊಲುಮೆಯಿಂದಲೇ ಬಾಳು ಬೆಳಕಾಗಿರಲು


ಸಂಜೆ ಕಚೇರಿ ವೇಳೆ ಮುಗಿದ ಮೇಲೆ ಅಣ್ಣಾವ್ರ ಮನೆಗೆ ಹೊರಡುವ ಸಂಭ್ರಮ.ಅಶೋಕ ಹೊಟೇಲ್‌ವರೆಗೆ ದಾರಿ ಓಕೆ.ಆಮೇಲೆ ಸ್ವಲ್ಪ ಟ್ರಾಫಿಕ್ ಜಾಮ್ ಆಗಿಬಿಡೋದು.ತಕ್ಷಣ ಹೇಗೋ ಮಾಡಿ ನುಗ್ಗುತ್ತಿದ್ದೆ. ಬದುಕನ ತಿರುವುಗಳೂ ಹಾಗೇ ತಾನೇ? ಆರು ಗಂಟೆ ಅನ್ನೋದರ ಒಳಗೆ ಅಣ್ಣಾವ್ರ ಬಳಿ ಇರ‍್ತಿದ್ದೆ.ಅಣ್ಣಾವ್ರು ವಾಕಿಂಗ್ ಹೊರಡಲು ಕಾಯುತ್ತಿದ್ದರು.ಲೇಟಾದ ದಿನಗಳಲ್ಲಿ ಗಡಿಬಿಡಿಯಿಂದ ಇದ್ದರೆ ‘ನಿಧಾನವಾಗಲಿ ಪರವಾಗಿಲ್ಲ. ಕೆಲಸ ಮುಗಿಸಿ ಬಂದಿದ್ದೀರಿ.ಕಾಫಿ ಕುಡಿದು ಬನ್ನಿ. ನಿಧಾನಕ್ಕೆ ಬನ್ನಿ ಅಂತೆಲ್ಲಾ ಹೇಳಿ ಅವರೇ ಸಮಾಧಾನಿಸಿಬಿಡುತಿದ್ದರು.ಮೆಲ್ಲಗೆ ಕತ್ತಲು ತಗ್ಗುತ್ತಿದ್ದಂತೆ ನಮ್ಮ ವಾಕ್ ಶುರುವಾಗೋದು. ಐದು ಕಿಲೋಮೀಟರ್ ದೂರ ಕ್ರಮಿಸುವ ಗುರಿ. ಆ ಮಟ್ಟ ಮುಟ್ಟಲಿಲ್ಲ. ಈ ವಾಕಿಂಗ್‌ದೇ ಒಂದು ದೊಡ್ಡ ಅಧ್ಯಾಯ.ವಾಕ್‌ನಲ್ಲಿ ಕೆಲವೊಮ್ಮೆ ಮಾತಿಲ್ಲ. ಕೆಲವೊಮ್ಮೆ ಮಾತೇ ಮಾತು.ಆ ಮಾತಿನಲ್ಲಿ ಸಾವಿರ ಅರ್ಥಗಳು.ಆ ಮಾತುಗಳನ್ನು ಜೋಪಾನವಾಗಿ ಕಾಪಿಟ್ಟುಕೊಂಡರೆ ಅದರ ಮುಂದೆ ಇನ್ಯಾವ ಸ್ನಾತ್ತಕೋತ್ತರ ಪದವಿಯೂ ಬೇಡ.ಪಿ.ಹೆಚ್.ಡಿ ಪದವಿಗೂ ಇಲ್ಲಿ ವಿಷಯ ಸಿಕ್ಕಿ ಬಿಡುತ್ತಿತ್ತು. ಈ ಮಾತನ್ನು ನಾನು ಜವಾಬ್ದಾರಿಯಿಂದ ಹೇಳುತ್ತಿದ್ದೇನೆ. ಖಂಡಿತಾ ಉತ್ಪ್ರೇಕ್ಷೆ ಅಲ್ಲ. ಕೇವಲ ಅಭಿಮಾನದಿಂದ ಬಂದ ಮಾತೂ ಅಲ್ಲ ಇದು.ಆ ವಾಕಿಂಗ್ ಸಮಯ ನನ್ನ ಜೀವನದ ಅತ್ಯಮೂಲ್ಯ ಘಳಿಗೆ. ಹಾಗಾಗಿ ಇಂತಹ ಸಮಯಕ್ಕೆ ನಾನು ಕಾತುರದಿಂದ ಕಾಯುತ್ತಿದ್ದೆ.


ಅದೊಂದು ದಿನ ಇಂತಹ ವಾಕ್ ಎಂಬ ವಾಕ್‌ಗಾಗಿ ನಾನು ಹೊಸ ಶೂ ತೆಗೆದುಕೊಂಡೆ.ತುಂಬಾ ಮೃದುವಾದ ಶೂ ಅದು.ಅದನ್ನು ಕಂಡ ಅಣ್ಣಾವ್ರು ಅದನ್ನು ಚೆನ್ನಾಗಿ ಗಮನಿಸಿ ಹಾಕಿಕೊಂಡು ನೋಡಿದ್ದರು.ಎಲ್ಲಿ ತೊಗೊಂಡ್ರಿ ಚೆನ್ನಾ?ಶೇಷಾದ್ರಿಪುರಂನ ನಟರಾಜ ಥಿಯೇಟರ್ ಹತ್ತಿರದ ಅಂಡಗಿಯಲ್ಲಿ.ಎಷ್ಟು ಕೊಟ್ರಿ?ಮುನ್ನೂರು ರೂಪಾಯಿ. ಹೌದಾ?ನನಗೊಂದು ಜೊತೆ ತಂದುಬಿಡಿ. ಒಂದೇನು ಮೂರು ಜೊತೆ ತೆಗೆದುಕೊಂಡು ಹೋಗಿ ಮುಂದಿಟ್ಟೆ.ಅದನ್ನು ಧರಿಸಿ ವಾಕ್ ಶುರುವಯ್ತು.ತುಂಬಾ ಚೆನ್ನಾಗಿದೆ ಚೆನ್ನಾ.. ಕಾಲಿಗೆ ಆರಾಮಿರುತ್ತೆ ಎಂದರು.ಇದನ್ನು ಒಂದು ದಿನ ಅಪ್ಪು ಗಮನಿಸಿದ್ದರು.ಏನು ಎತ್ತ ಎಂದು ವಿಚಾರಿಸಿದರು.ಮುನ್ನೂರು ರೂಪಾಯಿಯ ಶೂ ಎಂಬುದು ಸರಿ ಬರಲಿಲ್ಲ. ಮೂರು ಸಾವಿರ ರೂಪಾಯಿಯ ಬ್ರಾಂಡೆಡ್ ಶೂ ತಂದಿಟ್ಟರು.ಇದೇ ಧರಿಸಿ ಅಂತ ಅಪ್ಪನನ್ನು ಪ್ರೀತಿಯಿಂದ ಒತ್ತಾಯಿಸಿದರು.ಇಂಥದ್ದೆಲ್ಲ ಅಣ್ಣಾವ್ರಿಗೆ ಸರಿಯಾಗಲಿಲ್ಲ. ಬೆಲೆ ಕೇಳಿದ ಮೇಲಂತೂ ಕಂದಾ ಬೇಡಪ್ಪಾ ಬೇಡ ಇದು ನನಗೆ ಸರಿ ಹೊಂದಲ್ಲ ಎಂದವರೇ ಮತ್ತೆ ಮುನ್ನೂರು ರೂಪಾಯಿಯ ಶೂ ಧರಿಸಿ ವಾಕಿಂಗ್‌ಗೆ ಹೊರಟರು.ಆಮೇಲೆ ಆ ಬ್ರಾಂಡೆಡ್ ಶೂ ರಾಜ್ ತಂಗಿ ಮಗ ಶೇಖರ್ ಪಾಲಾಯಿತು.


ಈ ಘಟನೆಯನ್ನು ನಾನು ಕೂಲಂಕಶವಾಗಿ ಗಮನಿಸಿದೆ.ಅವರ ಸರಳತೆ ಎಂಬುದು ನನ್ನ ಇಡೀ ಮನ ಆವರಿಸಿತು. ಇಂತಹ ಪುಟ್ಟ ಪುಟ್ಟ Wಟನೆಗಳೇ ಯಾವುದೋ ವ್ಯಕ್ತಿಯ ಯೋಗ್ಯತೆಗೆ ಮಾನದಂಡಗಳು. ನಮ್ಮಂಥವರಿಗೆ ಬಹುದೊಡ್ಡ ಪಾಠ ಎನಿಸಿತು.ಹೀಗೆ ಒಂದು ಮಳೆಗಾಲ ವಾಕ್ ಹೊರಟಾಗ ಏನೂ ಇರದಿದ್ದ ಶುಭ್ರ ಆಕಾಶ ಅರ್ಧ ದಾರಿ ಕ್ರಮಿಸುತ್ತಿದ್ದಂತೆ ಮೋಡ ಕವಿದು ದಟ್ಟ ಕತ್ತಲಾಯಿತು. ಮಳೆ ಮುನ್ಸೂಚನೆ ಇದ್ದಿದ್ದರೆ ಅದಕ್ಕೆ ಜಾಗೃತೆಯಾದರೂ ಮಾಡುತ್ತಿದ್ದೆವೇನೋ..ಇದ್ದಕ್ಕಿದ್ದಂತೆ ಆರ್ಭಟಿಸಿದ ಮಳೆಗೆ ಬೆದರಿ ಅಲ್ಲೇ ಒಂದು ಕಾರ್‌ಶೆಡ್‌ನಂತಹ ಜಾಗದಲ್ಲಿ ಆಶ್ರಯಕ್ಕೆ ನಿಂತೆವು.ಮುಕ್ಕಾಲು ಗಂಟೆ ಕಳೆದರೂ ಮಳೆ ನಿಲ್ಲುವುದಿರಲಿ, ಕಡಿಮೆಯಾಗುವ ಸೂಚನೆಯೂ ಕಾಣಲಿಲ್ಲ. ನನಗೂ ಕಾಲು ನೋವು ಶುರುವಾಯಿತು.ಅಣ್ಣಾವ್ರಂತೂ ನಿಂತ ಬಂಗಿ ಕೂಡಾ ಬದಲಿಸದೇ ಮಳೆಯನ್ನು ಎಂಜಾಯ್ ಮಾಡುತ್ತಿದ್ದರು.ಇದ್ದಕ್ಕಿದ್ದಂತೆ ಮಳೆಯಲ್ಲಿ ನೆನೆಯೋಣವಾ ಎಂದರು.ಅಣ್ಣಾ, ಬೇಡ ನೆಗಡಿಯಾಗತ್ತೆ ಅಂದೆ.ಅಯ್ಯೋ ನಡೀರಿ ನೆಗಡೀನೂ ಇಲ್ಲ ಏನೂ ಇಲ್ಲ ಅಂದವರೇ ರಸ್ತೆಯಲ್ಲಿ ಮಂಡಿತನಕ ಹರಿಯುತ್ತಿದ್ದ ನೀರಿನಲ್ಲಿ ನಡೆಯುತ್ತಾ ಆನಂದದಿಂದ ಮನೆ ಸೇರಿದರು.

Leave a Reply

Your email address will not be published. Required fields are marked *


CAPTCHA Image
Reload Image