ರಮ್ಯಾ ಈಗ ರಾಜಕಾರಣಿಯಾಗಿದ್ದಾಳೆ. ಆಕೆ ನಿಂತಲ್ಲಿ ಕುಂತಲ್ಲಿ ಬರೀ ವಿವಾದಗಳೇ. ಪೂರ್ವಾಶ್ರಮದಲ್ಲಿ ನಟಿಯಾಗಿದ್ದಳಲ್ಲಾ ರಮ್ಯಾ? ಆ ಕಾಲದಲ್ಲಿಯೂ ವಿವಾದಗಳಿಗೇನೂ ಬರವಿರಲಿಲ್ಲ. ಆ ಕಾಲದಲ್ಲಿ ಈಕೆ ಜಂಭದ ಕೋಳಿಯೆಂದೇ ಫೇಮಸ್ಸು. ಅಂಥಾ ಕಾಲದಲ್ಲಿಯೇ ರಮ್ಯಾ ಮಾಡಿಕೊಂಡಿದ್ದ ವಿವಾದವೊಂದರಲ್ಲೀಗ ಖುದ್ದು ಆಕೆಗೇ ತೀವ್ರ ಮುಖಭಂಗವಾಗಿದೆ!

ವಿಜಯಪ್ರಸಾದ್ ನಿರ್ದೇಶನ ಮಾಡಿದ್ದ, ಜಗ್ಗೇಶ್ ನಾಯಕರಾಗಿದ್ದ ನೀರ್ ದೋಸೆ ಚಿತ್ರದ ವಿಚಾರವಾಗಿ ರಮ್ಯಾ ಮಾಡಿಕೊಂಡ ರಂಖಲುಗಳು ಒಂದೆರಡಲ್ಲ. ಅದೇ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ತನ್ನ ಒಪ್ಪಿಗೆ ಇಲ್ಲದೆ ಫೋಟೋ ತೆಗೆದರೆಂದು ರಮ್ಯಾ ಖ್ಯಾತೆ ತೆಗೆದಿದ್ದಳು. ಅಷ್ಟಕ್ಕೇ ಸುಮ್ಮನಾಗದೆ ಇಬ್ಬರು ಫೋಟೋ ಜರ್ನಲಿಸ್ಟ್‌ಗಳು ಮತ್ತು ಒಬ್ಬ ವರದಿಗಾರರ ವಿರುದ್ಧ ಪೊಲೀಸರಿಗೆ ದೂರನ್ನೂ ನೀಡಿದ್ದಳು. ಈ ಬಗ್ಗೆ ೧ನೇ ಎಸಿಎಂಎಂ ಕೋರ್ಟ್ ವಿಚಾರಣೆ ನಡೆಸಿ ರಮ್ಯಾ ಆರೋಪವನ್ನು ತಿರಸ್ಕರಿಸಿದೆ!

ಈ ಮೂಲಕ ಸುಖಾಸುಮ್ಮನೆ ಸಂಕಷ್ಟಕ್ಕೀಡಾಗಿದ್ದ ಮೂರೂ ಮಂದಿ ನಿರಾಳವಾದರೆ, ಜಂಭದ ಕೋಳಿ ರಮ್ಯಾಗೆ ದೊಡ್ಡ ಮಟ್ಟದಲ್ಲಿಯೇ ಮುಖ ಭಂಗವಾಗಿದೆ. ಇದರೊಂದಿಗೆ ನೀರ್ ದೋಸೆ ಚಿತ್ರತಂಡವೂ ಕೂಡಾ ತುಂಬಾ ಖುಷಿಗೊಂಡಿದೆ. ಯಾಕೆಂದರೆ ರಮ್ಯಾ ತನ್ನ ವೃತ್ತಿ ಧರ್ಮವನ್ನೂ ಮೀರಿ ನೀರ್‌ದೋಸೆ ಚಿತ್ರರಂಗಕ್ಕೆ ಕೊಟ್ಟಿದ್ದ ಕಾಟವೇ ಅಂಥಾದ್ದಿದೆ.

ಆರಂಭದಲ್ಲಿ ಈ ಚಿತ್ರದಲ್ಲಿ ನಟಿಸಲು ಹುರುಪಿನಿಂದಲೇ ಒಪ್ಪಿಕೊಂಡಿದ್ದ ರಮ್ಯಾ ಬರ ಬರುತ್ತಾ ಚಿತ್ರೀಕರಣಕ್ಕೆ ಹಾಜರಾಗೋದೇ ಅಪರೂಪವಾಗಿತ್ತು. ವಿಜಯಪ್ರಸಾದ್ ಈಕೆಯನ್ನು ಚಿತ್ರೀಕರಣಕ್ಕೆ ಕರೆ ತಂದು ತಂದೇ ಹೈರಾಣಾಗಿ ಹೋಗಿದ್ದರು. ಆದರೆ ಇನ್ನು ಕೆಲವೇ ಕೆಲ ಸೀನುಗಳು ಬಾಕಿ ಇರುವಾಗಲೇ ರಮ್ಯಾ ಈ ಫೋಟೋ ಸೀನು ಕ್ರಿಯೇಟ್ ಮಾಡಿ ಎದ್ದು ಹೋಗಿದ್ದಳು. ಆ ಹೊತ್ತಿಗೆಲ್ಲ ಆಕೆಯ ಭಾಗದ ಬಹುತೇಕ ಚಿತ್ರೀಕರಣವಾಗಿತ್ತು.

ಕಡೆಗೆ ಬೇರೆ ನಿರ್ವಾಹವಿಲ್ಲದೆ ಆ ಜಾಗಕ್ಕೆ ಹರಿಪ್ರಿಯಾಳನ್ನು ಕರೆತರಲಾಗಿತ್ತು. ಹರಿಪ್ರಿಯಾ ಪಕ್ಕಾ ನಟಿಯ ಮನೋಧರ್ಮದೊಂದಿಗೆ ನೀರ್‌ದೋಸೆ ಚಿತ್ರದ ವೇಶ್ಯೆಯ ಪಾತ್ರಕ್ಕೆ ಜೀವ ತುಂಬಿದ್ದಳು. ಈವತ್ತಿಗೂ ಈ ಪಾತ್ರ ಆಕೆಯ ವೃತ್ತಿ ಬದುಕಿನಲ್ಲೊಂದು ಮಹತ್ವ ಪಡೆದು ಉಳಿದುಕೊಂಡಿದೆ. ಆದರೆ ಈ ಕಿರಿಕ್ಕಿನ ನಡುವೆಯೇ ರಾಜಕೀಯ ಪ್ರವೇಶ ಮಾಡಿದ್ದ ರಮ್ಯಾ ಮಾತ್ರ ಈ ಕೇಸಲ್ಲಿ ಮುಖಭಂಗವಾದ ಈ ಘಳಿಗೆಯಲ್ಲಿಯೂ ವಿವಾದಗಳನ್ನೇ ಉಸಿರಾಡುತ್ತಿದ್ದಾಳೆ!

#

LEAVE A REPLY

Please enter your comment!
Please enter your name here

1 × 3 =