Connect with us

ಫೋಕಸ್

ಬಿಂದಾಸ್ ಮನಸುಗಳ ಬೆರಗಾಗಿಸೋ ಕಥೆ!

Published

on

ಪಾರ್ವತಮ್ಮ ರಾಜ್‌ಕುಮಾರ್ ಅವರ ತಂಗಿಯ ಮಗ ಸಂತೋಷ್ ನಿರ್ದೇಶನದ ಎರಡನೇ ಚಿತ್ರ ಬಿಂದಾಸ್ ಗೂಗ್ಲಿ. ಕಾಲೇಜು ಮತ್ತು ಆ ಕಾರಿಡಾರಿಂದಲೇ ಅರಳಿಕೊಳ್ಳುವ ಡ್ಯಾನ್ಸ್ ವ್ಯಾಮೋಹದ ಸುತ್ತ ಹರಡಿಕೊಳ್ಳುವ ಯೂಥ್‌ಫುಲ್ ಕಥೆಯನ್ನು ಹೊಂದಿರೋ ಈ ಚಿತ್ರ ನಾಳೆ ರಾಜ್ಯಾಧ್ಯಂತ ಬಿಡುಗಡೆಯಾಗಲಿದೆ.

ಕಳೆದ ವರ್ಷ ಸಂತೋಷ್ ಸ್ಟೂಡೆಂಟ್ಸ್ ಅಂತೊಂದು ಚಿತ್ರವನ್ನು ನಿರ್ದೇಶನ ಮಾಡಿದ್ದರು. ಅದು ತಕ್ಕಮಟ್ಟಿಗೆ ಯಶಸನ್ನೂ ಗಳಿಸಿಕೊಂಡಿತ್ತು. ಇದೀಗ ಯುವ ಹುಮ್ಮಸ್ಸಿನ ಹೊಸಾ ಬಗೆಯ ಕಥೆಯೊಂದಿಗೆ ಬಿಂದಾಸ್ ಗೂಗ್ಲಿ ಚಿತ್ರ ಅವರ ಎರಡನೇ ಪ್ರಯತ್ನವಾಗಿ ಮೂಡಿ ಬಂದಿದೆ. ಪ್ರತಿಯೊಬ್ಬರಲ್ಲಿಯೂ ಯಾವುದಾದರೂ ಒಂದು ಪ್ರತಿಭೆ ಇದ್ದೇ ಇರುತ್ತೆ. ಆದರೆ ಅದನ್ನು ಬಿಂದಾಸ್ ಆಗಿ ಪ್ರೆಸೆಂಟ್ ಮಾಡಿದಾಗ ಮಾತ್ರವೇ ಯಶಸ್ಸು ಸಿಕ್ಕುತ್ತೆ. ಈ ಬೇಸಿನ ಮೇಲೆ ರಚಿಸಲ್ಪಟ್ಟಿರೋ ಈ ಕಥೆಯ ಪ್ರಧಾನ ಅಂಶ ಡ್ಯಾನ್ಸ್. ಮೂಲತಃ ಚೆನ್ನಾಗಿ ಡ್ಯಾನ್ಸು ಮಾಡೋ ಕಲೆ ಹೊಂದಿರೋ ಹತ್ತೊಂಬತ್ತು ವರ್ಷದ ಹುಡುಗ ಆಕಾಶ್ ಈ ಚಿತ್ರದ ಮೂಲಕ ನಾಯಕನಾಗಿದ್ದಾನೆ. ಮಮತಾ ರಾವುತ್, ಶಿಲ್ಪಾ ಮತ್ತು ನಿವಿಕಾ ರತ್ನಾಕರ್ ನಾಯಕಿಯರಾಗಿ ನಟಿಸಿದ್ದಾರೆ. ನಟ ಧರ್ಮ ಕೀರ್ತಿರಾಜ್ ಚಕ್ ದೇ ಇಂಡಿಯಾದಲ್ಲಿ ಶಾರುಖ್ ನಿರ್ವಹಿಸಿದ್ದ ಪಾತ್ರದಂತೆ ಸಾಧನೆಯ ಹಾದಿಯಲ್ಲಿರುವ ಯುವಕರನ್ನು ಹುರಿದುಂಬಿಸುವಂಥ ವಿಶೇಷವಾದ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

ಹೀಗೆ ತಮ್ಮ ನಿರ್ದೇಶನದ ಎರಡನೇ ಚಿತ್ರವನ್ನು ತೆರೆಗಾಣಲು ಸಜ್ಜುಗಳಿಸಿರುವ ಸಂತೋಷ್ ಅವರದ್ದು ಸಿನಿಮಾ ವಾತಾವರಣವೇ ತುಂಬಿರುವ ಕುಟುಂಬ. ಇವರ ತಂದೆ ಕೂಡಾ ಸಿನಿಮಾ ಡಿಸ್ಟ್ರಿಬ್ಯೂಟರ್. ಸರಿ ಸುಮಾರು ನಲವತ್ತೆಂಟು ವರ್ಷಗಳಿಗೂ ಹೆಚ್ಚು ಕಾಲದಿಂದ ಸಿನಿಮಾ ನಂಟು ಹೊಂದಿರೋ ಕುಟುಂಬ ಇವರದ್ದು. ಪಾರ್ವತಮ್ಮ ರಾಜ್ ಕುಮಾರ್ ಅವರ ಕೊನೆಯ ತಂಗಿ ಮಗನಾದ ಸಂತೋಷ್‌ಗೆ ಆರಂಭದಿಂದಲೂ ನಿರ್ದೇಶಕನಾಗೋ ಹಂಬಲವಿತ್ತು. ಆದರೆ ಮನೆಯ ಕಡೆ ಮಗ ಚೆನ್ನಾಗಿ ಓದಲಿ ಎಂಬ ಅಭಿಲಾಷೆ ಇದ್ದಿದ್ದರಿಂದ ಅತ್ತ ಗಮನ ಹರಿಸಿದ್ದ ಅವರು ಒಳ್ಳೆಯದೊಂದು ಕೆಲಸವನ್ನೂ ಗಿಟ್ಟಿಸಿಕೊಂಡಿದ್ದರು. ವಿದೇಶದಲ್ಲೂ ಕಾರ್ಯ ನಿರ್ವಹಿಸಿ ಬಂದಿದ್ದಾರೆ. ಆದರೆ ಸಿನಿಮಾ ಧ್ಯಾನ ಅಲ್ಲಿರಲು ಬಿಟ್ಟಿರಲೇ ಇಲ್ಲ.

ನಿರ್ದೇಶಕನಾಗಬೇಕೆಂಬ ಹಂಬಲ ಇದ್ದರೂ ಸಂತೋಷ್ ಮೊದಲು ಚಿತ್ರರಂಗಕ್ಕೆ ಆಗಮಿಸಿದ್ದ ನಟನಾಗಿ. ಸಿರಿವಂತ, ಹೋಗಿ ಬಾ ಮಗಳೆ ಮುಂತಾದ ಚಿತ್ರಗಳಲ್ಲಿಯೂ ಅವರು ಅಭಿನಯಿಸಿದ್ದರು. ಆದರೆ ನಟನಾಗೋದು ತನ್ನ ಉದ್ದೇಶವಲ್ಲ ಅಂತ ಪಕ್ಕಾ ಮಾಡಿಕೊಂಡಿದ್ದ ಸಂತೋಷ್ ಕಡೆಗೂ ನಿರ್ದೇಶನದತ್ತ ಮನಸು ಮಾಡಿ ಕಳೆದ ವರ್ಷ ಸ್ಟೂಡೆಂಟ್ಸ್ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದರು.

ಬಿಂದಾಸ್ ಗೂಗ್ಲಿ ಎಂಬುದು ಯುವ ಮನಸುಗಳಿಗೆ ಹತ್ತಿರಾದ ಬಿಂದಾಸ್ ಕಥೆಯೊಂದನ್ನು ಹೊತ್ತು ತರಲಿದೆ. ಆಕಾಶ್‌ಗೆ ನೃತ್ಯದಲ್ಲಿ ಪರಿಣತಿ ಇರೋದರಿಂದ ಆ ಹಿನ್ನೆಯದ್ದೊಂದು ಕಥೆ ಮಾಡಬೇಕೆಂದುಕೊಂಡ ಸಂತೋಷ್ ಬೆಳಗಾವಿಯಲ್ಲಿ ಆರೇಳು ತಿಂಗಳ ಕಾಲ ಈ ಚಿತ್ರದ ಕಥೆ ಬರೆದಿದ್ದರಂತೆ. ಕಡೆಗೂ ಒಂದು ಉತ್ಸಾಹಿ ತಂಡ ಕಟ್ಟಿ ತಾವಂದುಕೊಂಡಂತೆಯೇ ಈ ಚಿತ್ರವನ್ನವರು ರೂಪಿಸಿದ್ದಾರೆ.

ನಾಳೆ ತೆರೆ ಕಾಣಲಿರುವ ಈ ಚಿತ್ರದಲ್ಲಿ ಅದ್ದೂರಿ ತಾರಾಗಣವಿದೆ. ನುರಿತ ತಂತ್ರಜ್ಞರ ತಂಡವೇ ಇದಕ್ಕಾಗಿ ಕೆಲಸ ಮಾಡಿದೆ. ವಿನು ಮನಸು ಸಂಗೀತ ನಿರ್ದೇಶನದಲ್ಲಿ ಬಿಟ್ ಸಾಂಗುಗಳೂ ಸೇರಿದಂತೆ ಹನ್ನೊಂದು ಹಾಡುಗಳಿರೋದು ವಿಶೇಷ. ಮ್ಯಾಥ್ಯೂ ರಾಜನ್ ಛಾಯಾಗ್ರಹಣ, ವೆಂಕಟೇಶ್ ಸಂಕಲನ, ಹೈದ್ರಾಬಾದಿನ ಶ್ರುತಿ, ಕಲೈ ಮಾಸ್ಟರ್ ಮತ್ತು ಹೈಟ್ ಮಂಜು ಅವರ ನೃತ್ಯ ನಿದೇಶನ ಈ ಚಿತ್ರಕ್ಕಿದೆ. ಈ ಚಿತ್ರದ ಮೂಲಕ ನಿರ್ಮಾಪಕ ವಿಜಯ್ ಸದಾನಂದ್ ತಮ್ಮ ಪುತ್ರ ಆಕಾಶ್‌ನನ್ನು ಹೀರೋ ಮಾಡಿದ ಖುಷಿಯಲ್ಲಿದ್ದಾರೆ. ನಾಯಕನಟನಾಗಿ ನೆಲೆನಿಲ್ಲಲು ಬೇಕಿರುವ ಎಲ್ಲ ಗುಣಗಳನ್ನೂ ಹೊಂದಿರುವ ಆಕಾಶ್ ಬಿಂದಾಸ್ ಗೂಗ್ಲಿಯ ಮುಖಾಂತರ ಚಿತ್ರರಂಗದಲ್ಲಿ ನೆಲೆನಿಲ್ಲಲಿ.

Continue Reading
Advertisement
Click to comment

Leave a Reply

Your email address will not be published. Required fields are marked *

ಫೋಕಸ್

ಇದು ಪಂಚತಂತ್ರದ ಐಟಂ ಸಾಂಗು!

Published

on

ಭೋಳೇತನವನ್ನು ಗಂಭೀರವಾದುದೇನನ್ನೋ ದಾಟಿಸುವ ವಾಹಕದಂತೆ ಬಳಸಿಕೊಂಡು ಬಂದಿರುವವರು ಯೋಗರಾಜ ಭಟ್. ನಿರ್ದೇಶಕರಾಗಿ ಜನಮಾನಸದಲ್ಲಿ ನೆಲೆಯೂರಿರುವ ಭಟ್ಟರನ್ನು ಗೀತರಚನೆಕಾರರಾಗಿ ಇಷ್ಟಪಡುವವರ ಸಂಖ್ಯೆಯೂ ದೊಡ್ಡದಿದೆ. ಅವರದ್ದೊಂದು ಚಿತ್ರ ಘೋಷಣೆಯಾದೇಟಿಗೆ ಮೊದಲು ಗಮನ ನೆಡುವುದು ಹಾಡುಗಳ ಮೇಲೆ!

ಸದ್ಯ ಅವರು ನಿರ್ದೇಶನ ಮಾಡಿರೋ ಪಂಚತಂತ್ರ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಯಥಾ ಪ್ರಕಾರವಾಗಿ ಈ ಚಿತ್ರದ ಹಾಡುಗಳ ಬಗೆಗೂ ಜನರಲ್ಲೊಂದು ಕತೂಹಲವಿದೆ. ಇದೀಗ ಯೋಗರಾಜ ಭಟ್ಟರು ಪಂಚತಂತ್ರದ ಐಟಂ ಸಾಂಗ್ ಒಂದನ್ನು ಚಿತ್ರೀಕರಿಸಿಕೊಂಡಿದ್ದಾರೆ!

ಶೃಂಗಾರದ ಹೊಂಗೇಮರ ಹೂ ಬಿಟ್ಟಿದೆ ಎಂಬ ಈ ಹಾಡನ್ನು ಯೋಗರಾಜ ಭಟ್ಟರು ಭಾರೀ ತಯಾರಿ ಮಾಡಿಕೊಂಡೇ ಚಿತ್ರೀಕರಿಸಿಕೊಂಡಿದ್ದಾರೆ. ಈ ಹಾಡಿನಲ್ಲಿ ನಾಯಕ ವಿಹಾನ್ ಮತ್ತು ನಾಯಕಿ ಸೋನಲ್ ಮೊಂತೇರೋ ರೊಮ್ಯಾಂಟಿಕ್ ಆಗಿ ಹೆಜ್ಜೆ ಹಾಕಿದ್ದಾರೆ. ಮೊದಲ ಸಾಲುಗಳಲ್ಲಿಯೇ ಮೋಹಕವಾಗಿ ಕಾಣಿಸೋ ಈ ಹಾಡು ಪಂಚತಂತ್ರದ ಪ್ರಧಾನ ಆಕರ್ಷಣೆಗಳಲ್ಲೊಂದು ಎಂಬ ಅಭಿಪ್ರಾಯವನ್ನೂ ಭಟ್ಟರು ಹೊರ ಹಾಕಿದ್ದಾರೆ.

ಐಟಂ ಸಾಂಗ್ ಎಂದರೆ ರಿದಂ ಅನ್ನೇ ಕೆರಳಿಸುವಂತೆ ಪದಗಳನ್ನು ಪೋಣಿಸೋದು ಎಂಬ ಟ್ರೆಂಡ್ ಒಂದಿದೆ. ಆದರೆ ಅದರಾಚೆಗೆ ಐಟಂ ಸಾಂಗಿಗೂ ಆರ್ದ್ರ ಕಂಪನಗಳನ್ನು ಕಟ್ಟಿದ ಕೀರ್ತಿ ಭಟ್ಟರಿಗೇ ಸಲ್ಲಬೇಕು. ಅದಕ್ಕೆ ಕಡ್ಡಿಪುಡಿ ಚಿತ್ರದ ಸೌಂದರ್ಯ ಸಮರ ಸೋತವನೆ ಅಮರ ಹಾಡಿಗಿಂತಲೂ ಬೇರೆ ಉದಾಹರಣೆ ಬೇಕಿಲ್ಲ. ಭಟ್ಟರು ಈ ಹಾಡನ್ನೂ ಕೂಡಾ ಅಂಥಾದ್ದೇ ಮೂಡಿನಲ್ಲಿ ಕಟ್ಟಿ ಕೊಟ್ಟಂತಿದೆ.

ಆರಂಭದಿಂದ ಒಂದೇ ಸಮನೆ ಚಿತ್ರೀಕರಣ ನಡೆಸಿಕೊಳ್ಳುತ್ತಿರೋ ಪಂಚತಂತ್ರ ಚಿತ್ರ ಈ ಹಾಡಿನ ಮೂಲಕ ನಿರ್ಣಾಯಕ ಹಂತ ತಲುಪಿದೆ. ಇನ್ನೇನು ಕೆಲವೇ ದಿನಗಳಲ್ಲಿ ಶೂಟಿಂಗ್ ಸಮಾಪ್ತಿಯಾಗಲಿದೆ.

Continue Reading

ಪ್ರಚಲಿತ ವಿದ್ಯಮಾನ

ನೆಮ್ಮದಿ ಅರಸಿ ವಿದೇಶಕ್ಕೆ ತರಳಿದರಾ ರಕ್ಷಿತ್ ಶೆಟ್ಟಿ?

Published

on

ಇಡೀ ರಾಜ್ಯದ ತುಂಬಾ ಸುದ್ದಿಯಾಗುವಂತೆ ಅದ್ದೂರಿಯಾಗಿ ರಶ್ಮಿಕಾ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದ ರಕ್ಷಿತ್ ಶೆಟ್ಟಿ ಈಗ ಬ್ರೇಕಪ್ ಸಂಕಟದಲ್ಲಿದ್ದಾರೆ. ಈ ಬಗ್ಗೆ ಕ್ಷಣಕ್ಕೊಂದರಂತೆ ಹೊರ ಬೀಳುತ್ತಿರೋ ರೂಮರ್‌ಗಳು, ಸಾಮಾಜಿಕ ಜಾಲತಾಣಗಳಲ್ಲಿನ ಟ್ರೋಲ್‌ಗಳು… ಇದೆಲ್ಲದರಿಂದ ಕಂಗೆಟ್ಟಿರೋ ರಕ್ಷಿತ್ ನೆಮ್ಮದಿ ಅರಸಿಕೊಂಡು ವಿದೇಶದತ್ತ ತೆರಳಿದರಾ? ಇಂಥಾದ್ದೊಂದು ಪ್ರಶ್ನೆ ಅವರ ಅಭಿಮಾನಿ ಬಳಗದಲ್ಲಿಯೂ ಹುಟ್ಟಿಕೊಂಡಿದೆ.

ರಕ್ಷಿತ್ ಶೆಟ್ಟಿ ಇದೀಗ ಪುಷ್ಕರ್ ಮಲ್ಲಿಕಾರ್ಜುನಯ್ಯ, ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಜೊತೆ ಬ್ಯಾಂಕಾಕ್‌ಗೆ ತೆರಳಿದ್ದಾರೆ. ಅಲ್ಲಿಯೇ ಒಂದಷ್ಟು ಸ್ಥಳಗಳಿಗೆ ಭೇಟಿ ನೀಡಿ ನಿರಾಳವಾಗೋ ಯೋಜನೆಯನ್ನೂ ಹಾಕಿಕೊಂಡಿದ್ದಾರಂತೆ. ಹೀಗೊಂದು ಸುದ್ದಿ ಎಲ್ಲೆಡೆ ಹರಡಿಕೊಂಡಿದೆ. ಸದ್ಯದ ವಾತಾವರಣವೂ ಈ ಸುದ್ದಿಯನ್ನು ಪುಷ್ಟೀಕರಸುವಂತಿದೆ.

ಸದ್ಯದಲ್ಲಿಯೇ ಎಲ್ಲ ವಿಚಾರಗಳೂ ಬಯಲಾಗಲಿವೆ ಎಂಬರ್ಥದ ಹೇಳಿಕೆಯನ್ನು ಹೊರತಾಗಿಸಿ ಬೇರ್‍ಯಾವ ನಿಖರ ಉತ್ತರಗಳೂ ರಕ್ಷಿತ್ ಕಡೆಯಿಂದ ಬಂದಿಲ್ಲ. ಆದರೆ ಈ ಬಗ್ಗೆ ರಕ್ಷಿತ್ ಡಿಪ್ರೆಸ್ ಮೂಡಿಗೆ ಜಾರಿರೋದಂತೂ ನಿಜ. ಪುಷ್ಕರ್ ಮಲ್ಲಿಕಾರ್ಜುನಯ್ಯ ಸೇರಿದಂತೆ ಹಲವಾರು ಗೆಳೆಯರು ರಕ್ಷಿತ್ ಪರವಾಗಿ ಮಾತಾಡಿದರೂ ಪ್ರಯೋಜನವಾಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಬ್ರೇಕಪ್ ಸುದ್ದಿ ರೆಕ್ಕೆ ಪುಕ್ಕದ ಸಮೇತ ಹಾರಾಡುತ್ತಿದೆ.

ಇಂಥಾದ್ದರಿಂದ ರಕ್ಷಿತ್ ಅದೆಷ್ಟು ಕಂಗಾಲಾಗಿದ್ದರೆಂದರೆ ಅವರು ವಾರದ ಹಿಂದೆ ಸಾಮಾಜಿಕ ಜಾಲತಾಣಗಳಿಂದ ಹೊರ ನಡೆದಿದ್ದರು. ಇದೀಗ ಬ್ರೇಕಪ್ ಬಗ್ಗೆ ನಿಖರವಾದ ಹೇಳಿಕೆ ನೀಡಲೇ ಬೇಕಾದ ಅನಿವಾರ್ಯತೆ ರಕ್ಷಿತ್‌ಗಿದೆ. ಈ ಬಗ್ಗೆ ಯಾವ ನಿಧಾರ ತಳೆಯೋದೆಂಬ ಆಲೋಚನೆಯ ಅಜೆಂಡಾವನ್ನೂ ಕೂಡಾ ರಕ್ಷಿತ್ ಅವರ ವಿದೇಶ ಪ್ರವಾಸ ಹೊಂದಿರುವಂತಿದೆ!

Continue Reading

ಫೋಕಸ್

ಇರುವುದೆಲ್ಲವ ಬಿಟ್ಟು ಹಾಟ್ ಆದ್ರು ಮೇಘನಾ!

Published

on

ಕಾಂತ ಕನ್ನಲ್ಲಿ ನಿರ್ದೇಶನದ ಇರುವುದೆಲ್ಲವ ಬಿಟ್ಟು ಚಿತ್ರದಲ್ಲಿ ಮೇಘನಾ ರಾಜ್ ನಾಯಕಿಯಾಗಿ ನಟಿಸಿದ್ದಾರೆ. ಚಿರಂಜೀವಿ ಸರ್ಜಾ ಜೊತೆ ಮದುವೆಯಾದ ಬಳಿಕ ಮೇಘನಾ ಒಂದು ವಿರಾಮ ತೆಗೆದುಕೊಂಡಿದ್ದರು. ಅವರು ಮತ್ತೆ ನಟನೆಗೆ ವಾಪಾಸಾಗುತ್ತಾರಾ ಅಥವಾ ಫ್ಯಾಮಿಲಿ ಲೈಫಲ್ಲಿ ಕಳೆದುಹೋಗಿ ಬಿಡುತ್ತಾರಾ ಎಂಬ ಅಭಿಮಾನಿಗಳ ಆತಂಕ ಈ ಚಿತ್ರದ ಮೂಲಕ ದೂರಾಗಿದೆ. ಒಂದರ್ಥದಲ್ಲಿ ಇರುವುದೆಲ್ಲವ ಬಿಟ್ಟು ಚಿತ್ರದಲ್ಲಿ ಭಿನ್ನವಾದೊಂದು ಪಾತ್ರದ ಮೂಲಕ ಅವರು ಭರ್ಜರಿಯಾಗಿಯೇ ರೀ ಎಂಟ್ರಿ ಕೊಟ್ಟಿದ್ದಾರೆ.

ದೇವರಾಜ್ ನಿರ್ಮಾಣ ಮಾಡಿರೋ ಈ ಚಿತ್ರದಲ್ಲಿ ಪ್ರತೀ ಪಾತ್ರವೂ ನಮ್ಮೊಳಗೆ ಉಳಿದು ಹೋಗಿರೋ ಯಾವುದೋ ಭಾವಗಳ ಪ್ರತಿಬಿಂಬದಂತೆ ರೂಪಿಸಲ್ಪಟ್ಟಿವೆ. ನಿರ್ದೇಶಕ ಕಾಂತ ಕನ್ನಲ್ಲಿ ರೂಪಿಸಿದ ಅಂಥಾದ್ದೇ ಒಂದು ಪಾತ್ರಕ್ಕೆ ಮೇಘನಾ ರಾಜ್ ಜೀವ ತುಂಬಿದ್ದಾರೆ. ಇದರಲ್ಲಿನ ಮೇಘನಾ ಫೋಟೋಗಳು ಈಗಾಗಲೇ ಸಖತ್ ಸೌಂಡು ಮಾಡಲಾರಂಭಿಸಿವೆ. ಇದರ ತುಂಬಾ ಅವರು ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

ಮೇಘನಾ ಅವರದ್ದಿಲ್ಲಿ ಕಾರ್ಪೋರೇಟ್ ವಲಯದ ಬೋಲ್ಡ್ ಪಾತ್ರವಂತೆ. ಅದೇ ವಲಯದ ತೊಳಲಾಟಗಳನ್ನು ಧ್ವನಿಸುವ ತಿಲಕ್‌ಗೆ ಜೋಡಿಯಾಗಿ ಮೇಘನಾ ಕಾಣಿಸಿಕೊಂಡಿದ್ದಾರೆ. ಮದುವೆ ಅಂದ್ರೆ ಮಾಡಲು ಕೆಲಸಿಲ್ಲದವರು ಮಾತ್ರವೇ ಮೈ ಮೇಲೆಳೆದುಕೊಳ್ಳೋ ದುರಂತ ಅಂದುಕೊಂಡಿರೋ ಈ ದೇವ್ ಪಾತ್ರದೊಂದಿಗಿನ ಲಿವಿನ್ ಸಂಬಂಧದ ಜೊತೆಗಾರ್ತಿಯಾಗಿ ಮೇಘನಾ ನಟಿಸಿದ್ದಾರೆ.

ಕಮರ್ಷಿಯಲ್ ಅಂಶಗಳಾಚೆಗೆ ಸೂಕ್ಷ್ಮ ವಿಚಾರದತ್ತ ಗಮನ ನೆಟ್ಟಿರುವ ಈ ಚಿತ್ರದ ತುಂಬಾ ಮೇಘನಾ ಹಾಟ್ ಆಗಿ ಕಾಣಿಸಿಕೊಂಡಿರೋ ಸೂಚನೆ ಫೋಟೋಗಳ ಮೂಲಕ ಈಗಾಗಲೇ ಜಾಹೀರಾಗಿದೆ. ಆದರೆ ಈ ಪಾತ್ರ ಭಾವುಕವಾಗಿಯೂ ಮೂಡಿ ಬಂದಿದೆಯಂತೆ. ಒಟ್ಟಾರೆಯಾಗಿ ಇದು ಚಾಲೆಂಜಿಂಗ್ ಪಾತ್ರ. ಅದನ್ನು ಶ್ರದ್ಧೆಯಿಂದಲೇ ನಿರ್ವಹಿಸಿರೋ ಮೇಘನಾ ಪ್ರೇಕ್ಷಕರಿಗೆ ಮತ್ತಷ್ಟು ಆಪ್ತವಾಗೋ ನಿರೀಕ್ಷೆ ಹೊಂದಿದ್ದಾರೆ.

Continue Reading

Trending

Copyright © 2018 Cinibuzz