೫ಡಿ ಲಿರಿಕಲ್ ಸಾಂಗ್ ಬಿಡುಗಡೆ, ಬ್ಲಡ್ ಮಾಫಿಯಾ ಸುತ್ತ ನಡೆಯೋ ಕಥೆ
ಕನ್ನಡ ಚಿತ್ರರಂಗಕ್ಕೆ ಹಲವಾರು ಯಶಸ್ವೀ ಚಲನಚಿತ್ರಗಳನ್ನು ಕೊಟ್ಟಂಥ ನಿರ್ದೇಶಕ ಎಸ್.ನಾರಾಯಣ್ ಬಹಳ ದಿನಗಳ ನಂತರ ಡೈರೆಕ್ಟರ್ ಕ್ಯಾಪ್ ತೊಟ್ಟು ನಿರ್ದೇಶಿಸಿರುವ ಚಿತ್ರ 5ಡಿ. ನಾರಾಯಣ್ ಅವರು ತಮ್ಮ೩೦ ವರ್ಷಗಳ ಅನುಭವವನ್ನು ಈ ಸಿನಿಮಾ ಮೇಲೆ ಹಾಕಿದ್ದಾರೆ. 1ಟು 100 ಡ್ರೀಮ್ ಮೂವೀಸ್ ಲಾಂಚನದಲ್ಲಿ ಸ್ವಾತಿ ಕುಮಾರ್ ಅವರು ಈ ಚಿತ್ರವನ್ನು ನಿರ್ಮಿಸಿದ್ದು, ಚಿತ್ರದಲ್ಲಿ ನಟ ಆದಿತ್ಯ, ಅದಿತಿ ಪ್ರಭುದೇವ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಚಲನಚಿತ್ರ ಕಲಾವಿದರ ಸಂಘದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಿಸು ಪಿಸು ಮಾತು ಹಾಗೂ ಅಮ್ಮ ಎಂಬ ಲಿರಿಕಲ್ ಹಾಡನ್ನು ಫಿಲಂ ಚೇಬರ್ ಅಧ್ಯಕ್ಷ ಬಾಮ ಹರೀಶ್ ಹಾಗೂ ಶಿಲ್ಪ ಶ್ರೀನಿವಾಸ್ ಅವರು ಬಿಡುಗಡೆಮಾಡಿ ಶುಭ ಹಾರೈಸಿದರು.
ಕ್ಷಣಕ್ಷಣಕ್ಕೂ ರೋಮಾಂಚನ, ಕುತೂಹಲ, ನಿರೀಕ್ಷಿಸಲಾರದಂಥ ತಿರುವುಗಳು ಈ ಚಿತ್ರದಲ್ಲಿದ್ದು, ಚಿತ್ರಕತೆ ರಚಿಸುವಾಗಲೇ ಪ್ರತಿ ಹಂತದಲ್ಲಿಯೂ ನೋಡುಗರನ್ನು ನಿಬ್ಬೆರಗಾಗಿಸುವಂಥ ಸನ್ನಿವೇಶಗಳನ್ನು ನಿರ್ದೇಶಕರು ಸೃಷ್ಟಿಸಿದ್ದಾರೆ. ಸೋನು ನಿಗಂ ಗಾಯನದ ‘ಪಿಸುಪಿಸು ಮಾತು’ ಎನ್ನುವ ಗೀತೆ ಕೇಳುಗರ ಹೃದಯದಲ್ಲಿ ಕಚಗುಳಿಯಿಟ್ಟಿದೆ. ಅತಿಹೆಚ್ಚು ಕೇಳುಗರ ಮನತಣಿಸಿ, ಮಲೋಡಿ ಆಫ್ ದಿ ಇಯರ್ ಆಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕಿ ಸ್ವಾತಿ ಕುಮಾರ್ ಈಗಾಗಲೇ ಹಾಡುಗಳು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿವೆ. ನಿಮಗೂ ಇಷ್ಟವಾಗಿದೆ ಅಂದುಕೊಂಡಿದ್ದೇನೆ. ಅಮ್ಮನ ಮೇಲೆ ಮಾಡಿರುವ ಹಾಡನ್ನು ತೆರೆಮೇಲೆ ನೋಡಿದಾಗ ನನಗೂ ಕಣ್ಣು ತುಂಬಿಬಂತು. ಜೊತೆಗ ರೊಮ್ಯಾಂಟಿಕ್ ಹಾಡಿನ ಪಿಚ್ಚರೈಸೇ಼ಷನ್ ಅದ್ಭುತವಾಗಿದ್ದು ಎಲ್ಲರೂ ಇಷ್ಟಪಡುತ್ತಿದ್ದಾರೆ. ಈ ಥರದ ಹಾಡುಗಳು ಇತ್ತೀಚೆಗೆ ಕಡಿಮೆಯಾಗಿವೆ. ೫ ಡಿ ಪೂರ್ಣಪ್ರಮಾಣದ ಎಂಟರ್‌ಟೈನ್‌ಮೆಂಟ್ ಸಿನಿಮಾ ಎನ್ನಬಹುದು. ಸಸ್ಪೆನ್ಸ್, ಥ್ರಿಲ್ಲರ್, ಕಾಮಿಡಿ, ಎಮೋಷನ್ ಹೀಗೆ ಎಲ್ಲಾ ಥರದ ಎಲಿಮೆಂಟ್ ಚಿತ್ರದಲ್ಲಿವೆ ಎಂದು ಹೇಳಿದರು, ನಂತರ ಚಿತ್ರದ ಕಾರ್ಯಕಾರಿ ನಿರ್ಮಾಪಕ ಕುಮಾರ್ ಮಾತನಾಡುತ್ತ ನಾವು ಈ ಸಿನಿಮಾ ಆರಂಭಿಸಿದಾಗ ತುಂಬಾ ಜನರಿಂದ ತುಂಬಾ ನೆಗೆಟಿವ್ ರಿಯಾಕ್ಷನ್ ಬಂದವು, ನಾರಾಯಣ್ ಅವರ ಫ್ಯಾಮಿಲಿ ಕಂಟೆಂಟ್ ಮಾಡಿದವರು, ಇಂಥಾ ಸಿನಿಮಾ ಮಾಡಲ್ಲ ಅಂದರು, ಆದಿತ್ಯ ಹೀರೋ ಅಂದಾಗಲೂ, ಆತನನ್ನು ಹಾಕಿಕೊಂಡು ಸಿನಿಮಾ ಮಾಡಿದರೆ ಗೆಲ್ಲೋದಿಲ್ಲ ಅಂದರು. ಇನ್ನೂ ಕೆಲವರು ೫ಡಿ ಎನ್ನುವ ಟೈಟಲ್ಲೇ ಚೆನ್ನಾಗಿಲ್ಲ ಅಂದರು. ಮತ್ತೆ ಕೆಲವರು ಇದೊಂದು ಒಳ್ಳೇ ಸಿನಿಮಾ ಖಂಡಿತ ಆಗುತ್ತೆ, ಮುಂದುವರೆಯಿರಿ ಎಂದು ಪ್ರೋತ್ಸಾಹಿಸಿದರು. ಈಗ ಸಿನಿಮಾ ಮೆಚ್ಚಿಕೊಂಡು ಬೇರೆ ರೀತಿಯ ರಿಯಾಕ್ಷನ್ ಬರ‍್ತಿದೆ, ಆ ಮಾತು ನಮಗೆ ತುಂಬಾ ಖುಷಿ ಕೊಡ್ತು. ಇನ್ನು ಯಾಕೆ ಈ ಸಿನಿಮಾ ನೋಡಬೇಕು ಎಂಬ ಪ್ರಶ್ನೆ ಬಂದಾಗ ಸಿನಿಮಾ ಅನ್ನೋದು ಒಂದು ಮನರಂಜನೆ, ಜೊತೆಗೊಂದು ಮೆಸೇಜ್ ಕೊಡಬೇಕಾಗಿರುತ್ತೆ.
ಮನುಷ್ಯನಿಗೆ ರಕ್ತ ಎಷ್ಟು ಮುಖ್ಯ ಅನ್ನೋದು ಎಲ್ಲರಿಗೂ ಗೊತ್ತು, ನಾವು ಇತರರಿಗೆ ಉಪಯೋಗವಾಗಲಿ ಎಂದು ಕೊಡುವ ರಕ್ತ ಸರಿಯಾದ ರೀತಿ ಬಳಕೆಯಾಗುತ್ತಿದೆಯೋ, ಇಲ್ಲವೋ ಅಂತ ನಾವ್ಯಾರೂ ಯೋಚಿಸುವುದಿಲ್ಲ, ಬ್ಲಡ್ ಡೊನೇಟ್ ಮಾಡುವುದು ಸರೀನಾ, ತಪ್ಪಾ ಎನ್ನುವ ಕಂಟೆಂಟ್ ಮೇಲೆ ಈ ಸಿನಿಮಾ ನಿಂತಿದೆ. ಮೆಡಿಕಲ್ ಜಗತ್ತಿನಲ್ಲಿ ಬ್ಲಡ್ ಮಾಫಿಯಾನೇ ನಡೆಯುತ್ತಿದೆ. ಅದು ಹೇಗೆ, ಯಾರು ಇದನ್ನು ಮಾಡುತ್ತಿರುವವರು ಎನ್ನುವುದೇ ಚಿತ್ರದ ಮುಖ್ಯವಸ್ತು. ಇದುವರಗೂ ಈ ಥರದ ಎಳೆಯನ್ನು ತೆರೆಯಮೇಲೆ ಯಾರೂ ಸಹ ತಂದಿಲ್ಲ ಎಂದುಕೊಂಡಿದ್ದೇನೆ. ಅಲ್ಲದೆ ಇದೇ ತಿಂಗಳ ೩೦ರಂದು ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮವನ್ನು ದೊಡ್ಡ ಇವೆಂಟ್ ಮೂಲಕ ಮಾಡುತ್ತಿದ್ದೇವೆ. ಹಂತ ಹಂತವಾಗಿ ಚಿತ್ರದ ಒಂದೊಂದೇ ಕಂಟೆಂಟ್ ಹೊರಬಿಡಬೇಕು ಎನ್ನುವ ಉದ್ದೇಶದಿಂದ ಇಂದು ಚಿತ್ರದ ಒಂದು ಮುಖ್ಯ ಅಂಶವನ್ನು ಬಿಟ್ಟಿದ್ದೇವೆ. ಅಲ್ಲದೆ ನಮ್ಮ ಚಿತ್ರದ ಕಲಾವಿದರು ಬೇರೆಬೇರೆ ಕೆಲಸಗಳಲ್ಲಿ ತೊಡಗಿಕೊಂಡಿದ್ದರಿಂದ ಇವತ್ತು ಬಂದಿಲ್ಲ. ಮುಂದೆ ಅವರನ್ನೆಲ್ಲ ಜೊತೆ ಸೇರಿಸಿಕೊಂಡು ಚಿತ್ರದ ಪ್ರಚಾರವನ್ನು ಕೈಗೊಳ್ಳುತ್ತೇವೆ. ಟ್ರೈಲರ್ ಇವೆಂಟ್‌ಗೆ ನಾರಾಯಣ್ ಸೇರಿದಂತೆ ನಾಯಕ, ನಾಯಕಿ ಎಲ್ಲರೂ ಸಹ ಹಾಜರಿರುತ್ತಾರೆ ಎಂದು ಹೇಳಿದರು. ನಂತರ ಚಿತ್ರದ ಕಲಾವಿದರಾದ ರತನ್ ರಾಮ್, ರಾಜೇಶ್, ಛಾಯಾಗ್ರಾಹಕ ಕುಮಾರ್‌ಗೌಡ, ವಿತರಕ ರಾಧಾಕೃಷ್ಣ ಚಿತ್ರದ ಕುರಿತಂತೆ ಮಾತನಾಡಿದರು.
ನಾಯಕ ಡೆಡ್ಲಿ ಆದಿತ್ಯ ಅವರ ಹೊಸ ಲುಕ್ಕು, ನಾಯಕಿ ಅದಿತಿ ಪ್ರಭುದೇವ ಅವರ ಮಾದಕ ಕಿಕ್ಕು. ಹೀಗೆ ಚಿತ್ರದಲ್ಲಿನ ಪ್ರತಿ ಪಾತ್ರಗಳು ಕ್ಯೂರಿಯಾಸಿಟಿ ಬೆಳೆಸುತ್ತಲೇ ಹೋಗುತ್ತವೆ. ಸ್ವಾತಿ ಕುಮಾರ್ ಅವರ ನಿರ್ಮಾಣ, ರವಿ ಗುಂಟಿಮಡುಗು ಅವರ ಕಥೆ, ಕುಮಾರಗೌಡ ಅವರ ಛಾಯಾಗ್ರಹಣ, ಶಿವಪ್ರಸಾದ್ ಅವರ ಸಂಕಲನ, ಡಿಫರೆಂಟ್ ಡ್ಯಾನಿ ಅವರ ಸಾಹಸ ಈ ಚಿತ್ರಕ್ಕಿದೆ. ಇನ್ನೇನು ಶೀಘ್ರದಲ್ಲಿಯೇ ೫ಡಿ ಚಿತ್ರವು ಪ್ರೇಕ್ಷಕರ ಕುತೂಹಲ ತಣಿಸಲು ತೆರೆಯ ಮೇಲೆ ಬರಲಿದೆ.
No Comment! Be the first one.