ರಣಚಂಡಿ ರಾಗಿಣಿ ಈಗ ಟೆರರಿಸ್ಟ್!

Picture of Cinibuzz

Cinibuzz

Bureau Report

ಇತ್ತೀಚೆಗೆ ಆಕ್ಷನ್ ಪಾತ್ರಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವವರು ರಾಗಿಣಿ. ಮಾಲಾಶ್ರೀಯವರಿಗೇ ಪೈಪೋಟಿ ಕೊಡುವಂತೆ ಅಬ್ಬರಿಸುತ್ತಾ ಅಂಥಾ ಪಾತ್ರಗಳಿಗೇ ಫಿಕ್ಸಾಗಿದ್ದ ರಾಗಿಣಿಯೀಗ ಏಕಾಏಕಿ ಟೆರರಿಸ್ಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ!

ಪಿ. ಸಿ ಶೇಖರ್ ನಿರ್ದೇಶನದ ಟೆರರಿಸ್ಟ್ ಎಂಬ ಚಿತ್ರದಲ್ಲಿ ರಾಗಿಣಿ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಬಾಂಬ್ ಬ್ಲಾಸ್ಟ್ ಆದ ಪ್ರಕರಣವೊಂದರ ಸುತ್ತ ನಡೆಯುವ ಕಥಾ ಹಂದರ ಹೊಂದಿರೋ ಈ ಚಿತ್ರದ ಫಸ್ಟ್ ಲುಕ್ ಕೂಡಾ ಇದೀಗ ರಿಲೀಸಾಗಿದೆ. ತಣ್ಣಗೆ ಚಿತ್ರೀಕರಣ ಮುಗಿಸಿಕೊಂಡು ಸಲೀಸಾಗಿಯೇ ಸದ್ದು ಮಾಡುತ್ತಿರೋ ಈ ಚಿತ್ರದಲ್ಲಿ ಎರಡು ಶೇಡುಗಳಿರೋ ಪಾತ್ರವೊಂದರಲ್ಲಿ ರಾಗಿಣಿ ನಟಿಸಿದ್ದಾರಂತೆ.

ಬಾಂಬ್ ಬ್ಲಾಸ್ಟ್ ಅಂದಾಕ್ಷಣ ಒಂದು ಸಮುದಾಯವನ್ನು ಟಾರ್ಗೆಟ್ ಮಾಡುವ, ಒಂದೇ ದೃಷ್ಟಿಯಲ್ಲಿ ನೋಡಿ ಆ ಸಮುದಾಯವನ್ನು ಸಾರಾಸಗಟಾಗಿ ವಿಲನ್ನು ಮಾಡೋ ವಿದ್ಯಮಾನ ಮಾಮೂಲಿ. ಅಂಥಾದ್ದೇ ಕಥೆ ಹೊಂದಿರೋ ಈ ಚಿತ್ರದ ಕಥೆಯೇನು ಎಂಬ ಪ್ರಶ್ನೆಗೆ ನಿರ್ದೇಶಕರೇ ಸೂಕ್ತ ಉತ್ತರವನ್ನೂ ನೀಡಿದ್ದಾರೆ.

ಒಂದು ಬಾಂಬ್ ಬ್ಲಾಸ್ಟ್ ಪ್ರಕರಣದ ಸುತ್ತಾ ಬೆಳಗ್ಗೆಯಿಂದ ಸಂಜೆಯವರೆಗೆ ನಡೆಯೋ ಕಥೆ ಈ ಚಿತ್ರದ್ದು. ಈ ವರೆಗೆ ರಾಗಿಣಿ ಥರ ಥರದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರಲ್ಲಾ? ಅಲ್ಲೆಲ್ಲೂ ಕಾಣಿಸದ ರಾಗಿಣಿಯನ್ನು ಈ ಪಾತ್ರದ ಮೂಲಕ ತೋರಿಸಲಾಗಿದೆ. ರಿಯರ್ ಕಥೆ ಹೊಂದಿರೋ ಈ ಪಾತ್ರ ನೈಜವಾಗಿ ಮೂಡಿಬರಲೂ ಒತ್ತು ಕೊಡಲಾಗಿದೆ. ಟೆರರಿಸಂ ಅಂದಾಕ್ಷಣ ಒಂದು ಸಮುದಾಯವನ್ನು ಗುರಿ ಮಾಡಲಾಗುತ್ತದೆ. ಆದರೆ ಈ ಕಥೆಯಲ್ಲಿ ಹಾಗೆ ಮಾಡಿಲ್ಲ. ಇದು ಸತ್ಯದ ಭೂಮಿಕೆಯಲ್ಲಿ ರೂಪುಗೊಂಡಿರೋ ಕಥೆ ಎಂಬುದು ನಿರ್ದೇಶಕ ಪಿ.ಸಿ ಶೇಖರ್ ಸ್ಪಷ್ಟನೆ.

ಈ ಚಿತ್ರ ಇನ್‌ವೆಂಚರ್ ಫಿಲಂ ಬ್ಯಾನರ್ ಸಂಸ್ಥೆಯಡಿಯಲ್ಲಿ ನಿರ್ಮಾಣಗೊಂಡಿದೆ. ಚಿತ್ರೀಕರಣವನ್ನೆಲ್ಲ ಮುಗಿಸಿಕೊಂಡು ಸೆಪ್ಟೆಂಬರಿನಲ್ಲಿ ತೆರೆ ಕಾಣಲು ಸಜ್ಜಾಗಿರುವ ಈ ಚಿತ್ರಕ್ಕೆ ಪ್ರದೀಪ್ ವರ್ಮಾ ಸಂಗೀತ, ಮುರಳಿ ಕ್ರಿಶ್ ಛಾಯಾಗ್ರಹಣ ಹಾಗೂ ಸಚಿನ್ ಅವರ ಸಂಭಾಷಣೆಯಿದೆ.

ಇನ್ನಷ್ಟು ಓದಿರಿ

Scroll to Top