ದಿವಂಗತ ಮಂಜುನಾಥನ ಗೆಳೆಯರ ಮಜವಾದ ಕಥೆ!

Picture of Cinibuzz

Cinibuzz

Bureau Report

ತಾಜಾತನದ ಪೋಸ್ಟರುಗಳು ಸೇರಿದಂತೆ ತನ್ನದೇ ಮಾರ್ಗದಲ್ಲಿ ಪ್ರೇಕ್ಷಕರನ್ನು ಸೆಳೆದಿದ್ದ ದಿವಂಗತ ಮಂಜುನಾಥನ ಗೆಳೆಯರು ಚಿತ್ರ ತೆರೆಕಂಡಿದೆ. ಎಸ್.ಡಿ ಅರುಣ್ ನಿರ್ದೆಶನದ ಈ ಚಿತ್ರ ಯುವ ಸಮೂಹದ ಮನೋಭೂಮಿಕೆಯ ಜೊತೆಜೊತೆಗೇ ಕೌಟುಂಬಿಕ ಮೌಲ್ಯಗಳು, ಪೊಲೀಸ್ ವ್ಯವಸ್ಥೆ ಸೇರಿದಂತೆ ಒಟ್ಟಾರೆ ಸಮಾಜ ಪರಿಣಾಮಕಾರಿ ಕಥಾನಕವೊಂದರ ಮೂಲಕ ಪ್ರೇಕ್ಷಕರನ್ನು ಮುಟ್ಟಿದೆ.

ನಿರ್ದೇಶಕ ಎಸ್.ಡಿ ಅರುಣ್ ತಮ್ಮ ಚಿತ್ರದಲ್ಲಿ ಸಂಭಾಷಣೆ ಸೇರಿದಂತೆ ಎಲ್ಲವೂ ನ್ಯಾಚುರಲ್ ಆಗಿಯೇ ಮೂಡಿ ಬಂದಿರೋ ಸೂಚನೆ ನೀಡುತ್ತಾ ಬಂದಿದ್ದರು. ಅದಕ್ಕೆ ತಕ್ಕುದಾಗಿಯೇ ಜೀವ ಪಡೆದಿರೋ ಈ ಚಿತ್ರದ ಅಷ್ಟೂ ಪಾತ್ರಗಳು ಒಂದೊಂದು ಥರದಲ್ಲಿ ಕಾಡುತ್ತವೆ. ಸಹಜವಾದ ಸಂಭಾಷಣೆಯೇ ಎಲ್ಲ ಭಾವಗಳನ್ನೂ ಹೊಮ್ಮಿಸುವಲ್ಲಿ ಸಫಲವಾಗಿದೆ. ದೃಷ್ಯಾವಳಿಗಳು ನೋಡುಗರನ್ನು ಅನಾಯಾಸಾವಾಗಿ ತಮ್ಮ ಟೀನೇಜು ನೆನಪಿನಾಳಕ್ಕೆ ನೂಕುತ್ತವೆ, ಗಾಬರಿ ಬೀಳಿಸುತ್ತವೆ ಮತ್ತು ಕಣ್ಣಾಲಿಗಳನ್ನು ತೇವಗೊಳಿಸುತ್ತವೆ…

ಇಂಜಿನೀರಿಂಗ್ ಕಲಿತು ಕೆಲಸ, ಬದುಕಿನ ಒತ್ತಡದಲ್ಲಿ ಕಳೆದು ಹೋಗಿದ್ದ ನಾಲ್ವರು ಗೆಳೆಯರು ತಮ್ಮ ಸ್ನೇಹಿತ ಮಂಜುನಾಥನ ಸಾವಿನ ಸಂದರ್ಭದಲ್ಲಿ ಒಂದುಗೂಡಿ ಅಲ್ಲಿಂದಲೇ ಬಿಚ್ಚಿಕೊಳ್ಳೋ ಕಥೆ ಈ ಚಿತ್ರದ್ದು. ಗೆಳೆಯ ಮಂಜುನಾಥ ಸಿಸಿ ಟಿವಿ ಬ್ಯುಸಿನೆಸ್ ನಡೆಸುತ್ತಿದ್ದ ಮಂಜುನಾಥ ಕಾಲಕ್ರಮೇಣ ಬೆಟ್ಟಿಂಗ್ ಸೇರಿದಂತೆ ನಾನಾ ದಂಧೆಗಳ ದಾಳವಾಗಿರುತ್ತಾನೆ. ಕಡೆಗೊಂದು ದಿನ ಆತ ಸತ್ತ ಸುದ್ದಿ ಹರಡಿಕೊಳ್ಳುತ್ತೆ. ಮೇಲು ನೋಟಕ್ಕದು ಆತ್ಮಹತ್ಯೆ. ಆದರೆ ಪೊಲೀಸ್ ಅಧಿಕಾರಿ ಕೆಂಪಯ್ಯನಿಗೆ ಅದು ಕೊಲೆ ಎಂಬೋ ಸಂದೇಹ… ಹಾಗೆ ತಮ್ಮ ಗೆಳೆಯ ಸತ್ತ ಸುದ್ದಿ ಕೇಳಿ ನಾಲ್ವರು ಸ್ನೇಹಿತರು ಬಂದಾಗ ಅಲ್ಲಿಂದ ಬಿಚ್ಚಿಕೊಳ್ಳೋ ರೋಚಕ ಕಥೆ ದಿವಂಗತ ಮಂಜುನಾಥನ ಗೆಳೆಯರದ್ದು.

ಪೊಲೀಸ್ ಅಧಿಕಾರಿ ಕೆಂಪಯ್ಯ ಸಾವಿನ ಮನೆಗೆ ಬಂದಿದ್ದ ನಾಲ್ವರು ಗೆಳೆಯರ ಮೇಲೆ ಗುಮಾನಿ ಹೊಂದುತ್ತಾನಾ? ಆ ಕೊಲಡೆಯ ಹಿಂದೆ ಇರೋ ಅಸಲಿಯತ್ತೇನು? ಇಂಥಾ ನಾನಾ ಪ್ರಶ್ನೆಗಳಿಗೆ ಚಿತ್ರ ನೋಡೋ ಮೂಲಕ ಉತ್ತರ ಕಂಡುಕೊಂಡರೆ ಒಳಿತು. ಇಡೀ ಕಥೆಯನ್ನು ನಿರ್ದೇಶಕರು ಸಹಜವಾದ ಟ್ರ್ಯಾಕು ಬಿಟ್ಟು ಆಚೀಚೆ ಕದಲದಂತೆ ಕಟ್ಟಿ ಕೊಟ್ಟಿದ್ದಾರೆ. ಹೊಸಬರಾದರೂ ಈ ನಾಲಕ್ಕೂ ಹುಡುಗರು ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ. ಫ್ಲಾಶ್‌ಬ್ಯಾಕುಗಳಿರೋ ಈ ಕಥೆಯನ್ನು ಎಲ್ಲೂ ಬೋರು ಹೊಡೆಸದಂತೆ ಕಾಪಾಡಿರುವ ನಿರ್ದೇಶಕರು ಯುವ ಸಮುದಾಯಕ್ಕೊಂದು ಸಂದೇಶವನ್ನೂ ಕೊಟ್ಟಿದ್ದಾರೆ.

ಒಂದೇ ಸೂರತ್ರದ ಚಿತ್ರಗಳನ್ನು ನೋಡಿ ಬೇಸತ್ತಿರೋ ಪ್ರೇಕ್ಷಕರಿಗೆ ಖಂಡಿತವಾಗಿಯೂ ಈ ಚಿತ್ರ ಬೇರೆಯದ್ದೇ ಅನುಭವ ನೀಡುತ್ತದೆ, ತನ್ನದೇ ಆದ ರೀತಿಯಲ್ಲಿ ಕಾಡುತ್ತದೆ.

#

ಇನ್ನಷ್ಟು ಓದಿರಿ

Scroll to Top