ಸುಮ್ಮನಿರಲಾರದೆ ಅದೇನೋ ಮಾಡಿಕೊಂಡರು ಅಂತಾರಲ್ಲಾ? ರಿಯಲ್ ಸ್ಟಾರ್ ಉಪೇಂದ್ರ ಅದನ್ನೇ ಮಾಡಿಕೊಂಡಂತಿದೆ. ಪ್ರಜಾಕೀಯ ಅಂತೊಂದು ಪಕ್ಷ ಮಾಡಿ ಇಡೀ ರಾಜಕೀಯ ವ್ಯವಸ್ಥೆಯ ದಿಕ್ಕುದೆಸೆಗಳನ್ನೇ ಬದಲಾಯಿಸುತ್ತೇನೆಂಬಂತೆ ಹ್ಞೂಂಕರಿಸುತ್ತಾ ಪುಟಿದೆದ್ದಿದ್ದವರು ಉಪೇಂದ್ರ. ಆದರೆ ನಿಜವಾದ ಯುದ್ಧ ಶುರುವಾಗೋ ಮುನ್ನವೇ ರಣರಂಗದಿಂದ ಪೇರಿಕಿತ್ತಿದ್ದ ಉಪ್ಪಿ ಬಗ್ಗೆ ಬಹುತೇಕರಿಗೆ ಸಿಟ್ಟಿತ್ತು.

ಆದರೆ, ಚುನಾವಣೆಯೂ ಮುಗಿದು ಸಮ್ಮಿಶ್ರ ಸರ್ಕಸ್ಸು ಆರಂಭವಾದ ನಂತರ ಪ್ರಜಾಕೀಯವೆಂಬ ಹಳೇ ಸರಕನ್ನು ಎಲ್ಲರೂ ಮರೆತಂತಿದ್ದರು. ಆದರೆ ಉಪೇಂದ್ರ ಇತ್ತೀಚೆಗೆ ಮತ್ತೆ ಟ್ವೀಟ್ಟರ್ ಮೂಲಕ ಪ್ರಜಾಕೀಯದ ಪುಂಗಿಯೂದಿದ್ದಾರೆ. ಅಮೆರಿಕಾದ ನೂತನ ಅಧ್ಯಕ್ಷರು ತಮ್ಮ ಮೊದಲ ಭಾಷಣದಲ್ಲಿ ಪ್ರಜಾಕೀಯದ ಥರದ ಕೆಲ ಅಂಶಗಳನ್ನು ಪ್ರಸ್ತಾಪಿಸಿದ್ದಾರೆ ಅಂತ ಹೆಮ್ಮೆಯಿಂದ ಬರೆದುಕೊಂಡಿದ್ದರಂತೆ. ಇದರ ವಿರುದ್ಧ ಕೆಲ ಮಂದಿ ಟ್ವಿಟ್ಟರ್‌ನಲ್ಲಿಯೇ ತಿರುಗಿ ಬಿದ್ದಿದ್ದಾರೆ.

ಪಾಕಿಸ್ತಾನ ಪದೇ ಪದೆ ದೇಶದ ನೆಮ್ಮದಿಗೆ ಕಂಟಕ ತರುತ್ತಿರೋ ಶತ್ರು ರಾಷ್ಟ್ರ. ಅಂಥಾ ದೇಶದ ಬಗ್ಗೆ ಮಾತಾಡುವಾಗ ಎಚ್ಚರದಿಂದಿರಿ ಅಂತ ಉಪ್ಪಿಗೆ ಧಮಕಿ ಹಾಕಿದ್ದಾರೆ. ಇದರ ಬಗ್ಗೆ ಕಮೆಂಟುಗಳು ಮುಂದುವರೆದಿವೆಯಾದರೂ ಉಪೇಂದ್ರ ಮುಗುಮ್ಮಾಗಿದ್ದಾರೆ. ಆದರೆ ಈ ಹೊತ್ತಲ್ಲಿ ಮತ್ತೆ ಪ್ರಜಾಕೀಯದ ವಿಚಾರವನ್ನು ಕೆರೆಯುವ ಅವಶ್ಯಕತೆ ಏನಿತ್ತು ಅಂತ ಜನರೇ ಮಾತಾಡಿಕೊಳ್ಳುತ್ತಿದ್ದಾರೆ.
ಪಕ್ಕದ ಪಾಕಿಸ್ತಾನದಲ್ಲಿ ತನ್ನ ಐಡಿಯಾಗಳನ್ನು ಅಳವಡಿಸುತ್ತಿದ್ದಾರೆ ಅನ್ನೋ ಉಪೇಂದ್ರಗೆ ಇಲ್ಲಿ ಅದನ್ನು ಸಾಕಾರಗೊಳಿಸಲು ಯಾವ ಅಡೆತಡೆಗಳಿದ್ದವು? ಯುದ್ಧ ಹತ್ತಿರ ಬಂದಾಗ ಶಸ್ತ್ರಾಸ್ತ್ರ ಎಸೆದು ಹೋದದ್ದು ಯಾರ ತಪ್ಪು? ಉಪೇಂದ್ರ ಅವರನ್ನು ಇದ್ದಕ್ಕಿದ್ದಂತೆ ರಾಜಕೀಯ ರಂಗಕ್ಕೆ ಯಾರಾದರೂ ದಬ್ಬಿದ್ದರಾ? ಅಂತೆಲ್ಲ ಜನ ಅಪಹಾಸ್ಯ ಮಾಡುತ್ತಿದ್ದಾರೆ!
#












































