ನಿಜವಾದ ಸ್ನೇಹ ಅಂದರೆ ಇದು!

Picture of Cinibuzz

Cinibuzz

Bureau Report

“ನನಗೇನಾದರೂ ಹೆಚ್ಚು ದುಡ್ಡು ಸಿಕ್ಕರೆ, ನಿನ್ನನ್ನು ಹೀರೋ ಮಾಡಿ ಒಂದು ಚಿತ್ರ ಮಾಡುತ್ತೇನೆ …

ಎಂದು ಹೇಳಿದ್ದರಂತೆ ಶಿವಾನಂದ್ ಎಸ್. ನೀಲಣ್ಣನವರ್. ಅದರಂತೆ ಅವರು ನಡೆದುಕೊಂಡಿದ್ದು, ತಮ್ಮ ಸ್ನೇಹಿತನನ್ನು ಹೀರೋ ಆಗಿ ಮಾಡಿ ಒಂದು ಚಿತ್ರ ಮಾಡಿ ಮುಗಿಸಿದ್ದಾರೆ. ಈಗ ಆ ಚಿತ್ರ ಅಕ್ಟೋಬರ್ 14ರಂದು ರಾಜ್ಯಾದ್ಯಂತ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ.

ಚಾಂಪಿಯನ್ ಕೋವಿಡ್‌ಗೂ ಮೊದಲೇ ಪ್ರಾರಂಭವಾದ ಚಿತ್ರ. ದಿವಂಗತ ನಿರ್ದೇಶಕ ಡಿ. ರಾಜೇಂದ್ರ ಬಾಬು ಅವರ ಮೆಚ್ಚಿನ ಅಸೋಸಿಯೇಟ್ ಆಗಿದ್ದ ಶಾಹುರಾಜ್ ಶಿಂಧೆ ನಿರ್ದೇಶನದ ಚಿತ್ರ. ನಾಲ್ಕು ವರ್ಷಗಳ ಹಿಂದೆ ಪ್ರಾರಂಭವಾದ ಈ ಚಿತ್ರದ ಚಿತ್ರೀಕರಣ ಮುಗಿದು, ಪೋಸ್ಟ್ ಪ್ರೊಡಕ್ಷನ್ ನಡೆಯುತ್ತಿರುವಾಗ ಕೋವಿಡ್ ಶುರುವಾಯಿತು. ಅದೆಲ್ಲ ಮುಗಿಯಬೇಕು ಎನ್ನುವಷ್ಟರಲ್ಲಿ ಶಾಹುರಾಜ್ ಶಿಂಧೆ ಹೃದಯಾಘಾತದಿಂದ ನಿಧನರಾದರು. ಹೀಗೆ ಎರಡೆರೆಡು ಶಾಕ್‌ಗಳಿಂದ ಹೊರಬರುವುದಕ್ಕೆ ನಿರ್ಮಾಪಕ ಶಿವಾನಂದ್ ಮತ್ತು ನಾಯಕ ಸಚಿನ್‌ಗೆ ಒಂದಿಷ್ಟು ಸಮಯ ಹಿಡಿಯಿತು. ಈಗ ಅವೆಲ್ಲದರಿಂದ ಸುಧಾರಿಸಿಕೊಂಡಿರುವ ಅವರು, ಚಾಂಪಿಯನ್ ಬಿಡುಗಡೆ ಮಾಡುವುದಕ್ಕೆ ಸಜ್ಜಾಗಿದ್ದಾರೆ.

ಇದು ಸ್ನೇಹಿತನಿಗಾಗಿ ಮಾಡಿರುವ ಚಿತ್ರ ಎನ್ನುವ ನಿರ್ಮಾಪಕರು, ನನಗೆ ಹೆಚ್ಚು ದುಡ್ಡು ಸಿಕ್ಕರೆ ನಿನ್ನನ್ನು ಹೀರೋ ಮಾಡಿ ಒಂದು ಚಿತ್ರ ಮಾಡುತ್ತೇನೆ ಎಂದು ನನ್ನ ಸ್ನೇಹಿತನಿಗೆ ಹೇಳಿದ್ದೆ. ಈ ಮಾತು ಹೇಳಿ 14 ವರ್ಷಗಳ ನಂತರ ಕಾಲ ಕೂಡಿ ಬಂದಿದೆ. ಕೊಟ್ಟ ಮಾತಿನಂತೆ ಗೆಳೆಯನನ್ನು ಹೀರೋ ಮಾಡಿದ್ದೇನೆ ‘ ಎನ್ನುತ್ತಾರೆ ಶಿವಾನಂದ್ ಎಸ್. ನೀಲಣ್ಣನವರ್.

ನಾಯಕ ಸಚಿನ್ ಧನಪಾಲ್ ಅವರ ತಂದೆ, ಅಣ್ಣ ಎಲ್ಲರೂ ಸೇನೆಯಲ್ಲಿ ಸೇವೆ ಸಲ್ಲಿಸಿದವರು. ಅವರು ಸಹ ಹಲವು ಪರೀಕ್ಷೆಗಳನ್ನು ಬರೆದಿದ್ದಾರಂತೆ. ಮಾಡಲಿಂಗ್‌ನಲ್ಲೂ ಆಸಕ್ತಿ ಇತ್ತಂತೆ. ಇದೆಲ್ಲದರ ನಡುವೆ ಬ್ಯಾಂಕಿನಲ್ಲಿ ಉದ್ಯೋಗ ಮಾಡುತ್ತಿದ್ದ ಅವರು, ಸಿನಿಮಾ ಮೇಲಿನ ಆಸಕ್ತಿಯಿಂದಾಗಿ ನೌಕರಿ ಬಿಟ್ಟು ಈಗ ಚಿತ್ರರಂಕ್ಕೆ ಬಂದಿದ್ದಾರೆ.

ನಾವಿಬ್ಬರೂ ಆಗ ಒಂದೇ ರೂಮಿನಲ್ಲಿ ಇದ್ದೆವು. ನನ್ನ ಸಿನಿಮಾ ತುಡಿತ ಅವನಿಗೆ ಚೆನ್ನಾಗಿ ಗೊತ್ತಿತ್ತು. ಅದೇ ಕಾರಣಕ್ಕೆ 14 ವರ್ಷಗಳ ಹಿಂದೆ, ನನ್ನನ್ನು ಹೀರೋ ಮಾಡುತ್ತೀನಿ ಎಂದಿದ್ದ. ಹೇಳಿದ ಮಾತಿನಂತೆಯೇ ನಡೆದುಕೊಂಡಿದ್ದಾನೆ. ಆತನಿಗೆ ನಾನು ಜೀವನ ಪೂರ್ತಿ ಆಭಾರಿ’ ಎನ್ನುತ್ತಾರೆ.

ಸಚಿನ್‌ ಅವರಿಗೆ ನಾಯಕಿಯಾಗಿ ಅದಿತಿ ಪ್ರಭುದೇವ ನಟಿಸಿದ್ದಾರೆ. ದೇವರಾಜ್, ಸುಮನ್, ಅವಿನಾಶ್, ರಂಗಾಯಣ ರಘು, ಚಿಕ್ಕಣ್ಣ ಮುಂತಾದವರು ನಟಿಸಿದ್ದಾರೆ. ಸನ್ನಿ ಲಿಯೋನ್ ಈ ಚಿತ್ರದ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ.  ಚಿತ್ರಕ್ಕೆ ಸರ್ವಣನ್ ನಟರಾಜನ್ ಛಾಯಾಗ್ರಹಣ ಮತ್ತು ಅಜನೀಶ್ ಲೋಕನಾಥ್ ಅವರ ಸಂಗೀತವಿದೆ.

ಈಗಾಗಲೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ನೋಡುಗರಿಂದ ಮೆಚ್ಚುಗೆ ಪಡೆದಿದೆ.

ಇನ್ನಷ್ಟು ಓದಿರಿ

Scroll to Top