Picture of Cinibuzz

Cinibuzz

Bureau Report

ವಿಜಯಲಕ್ಷ್ಮಿ ಕಂಬೈನ್ಸ್ ಲಾಂಛನದಲ್ಲಿ ಡಾ||ಶಿವಪ್ಪ ನಿರ್ಮಿಸಿರುವ ಹಾಗೂ ಶ್ರೀರಾಮ್ ನಿರ್ದೇಶಿಸಿರುವ “ಕಾಕ್ಟೈಲ್” ಚಿತ್ರದ ಟ್ರೇಲರ್ ಅನ್ನು ಅಶ್ವಿನಿ ಪುನೀತ್ ರಾಜಕುಮಾರ್ ಬಿಡುಗಡೆ ಮಾಡಿದರು.

ಟ್ರೇಲರ್ ಬಿಡುಗಡೆ ಮಾಡಿದ ಅಶ್ವಿನಿ ಪುನೀತ್ ರಾಜಕುಮಾರ್, ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ಚಿತ್ರತಂಡಕ್ಕೆ ಶುಭ ಕೋರಿದರು.

ನಾನು ಈ ಸಮಯದಲ್ಲಿ ಮೊದಲು ನೆನಪಿಸಿಕೊಳ್ಳುವುದು ಪುನೀತ್ ರಾಜಕುಮಾರ್ ಅವರನ್ನು. ನನ್ನ ಮಗನನ್ನು ನಾಯಕನನ್ನಾಗಿ ಮಾಡುವದಿಂದ ಹಿಡಿದು, ನಮ್ಮ ಚಿತ್ರದ ಕುರಿತಾದ ಎಲ್ಲಾ ವಿಷಯಗಳನ್ನು ಅವರ ಬಳಿ ಹಂಚಿಕೊಳ್ಳುತ್ತಿದ್ದೆ. ಅವರು ಸೂಕ್ತ ಮಾರ್ಗದರ್ಶನ ನೀಡುತ್ತಿದ್ದರು. ನಿಮ್ಮೊಂದಿಗೆ ನಾನು ಇರುತ್ತೇನೆ ಎಂದು ಧೈರ್ಯ ತುಂಬುತ್ತಿದ್ದರು. ಚಿತ್ರ ಬಿಡುಗಡೆಯ ಹೊತ್ತಿಗೆ ಅವರಿಲ್ಲದುರುವುದು ತುಂಬಾ ದುಃಖವಾಗುತ್ತಿದೆ‌. ಇಂದು ನಮ್ಮ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲು ಅಶ್ವಿನಿ ಪುನೀತ್ ರಾಜಕುಮಾರ್ ಬಂದಿದ್ದಾರೆ. ಅವರಿಗೆ ಅನಂತ ಧನ್ಯವಾದಗಳು ಎಂದರು ನಿರ್ಮಾಪಕ ಡಾ||ಶಿವಪ್ಪ.

ನನಗೆ ಸುಮಾರು ಹದಿನೈದು ವರ್ಷಗಳಿಂದ ಚಿತ್ರರಂಗದ ಜೊತೆ ನಂಟು. “ಕಾಕ್ಟೈಲ್” ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ. ಈ ಚಿತ್ರದಲ್ಲಿ ಲವ್, ಹಾರಾರ್, ಸೆಂಟಿಮೆಂಟ್, ಸಸ್ಪೆನ್ಸ್ ಥ್ರಿಲ್ಲರ್ ಎಲ್ಲವೂ ಇದೆ. ಇದು ಒಂದೇ ಜಾನರ್ ನ ಚಿತ್ರವಲ್ಲ. ಕನ್ನಡದಲ್ಲಿ ಇದು ಹೊಸ ನರೇಶನ್ ಸಿನಿಮಾ. ಇತ್ತೀಚೆಗೆ ಚಿತ್ರವನ್ನು ವೀಕ್ಷಿಸಿದ ಕೆಲವು ಸ್ನೇಹಿತರು ಸಹ ಮೆಚ್ಚುಗೆ ಸೂಚಿಸಿದರು. ಚಿತ್ರ ಉತ್ತಮವಾಗಿ ಬರಲು ಕಾರಣ ನನ್ನ ತಂಡ ಎಂದು ಹೇಳುತ್ತೇನೆ. ನಿವೃತ್ತ ಐ ಎ ಎಸ್ ಅಧಿಕಾರಿಯಾಗಿರುವ ನಿರ್ಮಾಪಕ ಡಾ|| ಶಿವಪ್ಪ ಅವರ ಮಗ ವೀರೆನ್ ಕೇಶವ್ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಜನವರಿ 6 ರಂದು ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ. ಈ ಚಿತ್ರಕ್ಕೆ ಜನರ ಪ್ರೋತ್ಸಾಹ ಸಿಕ್ಕರೆ, ಮುಂದಿನ ದಿನಗಳಲ್ಲಿ ಭಾಗ 2 ಮಾಡುತ್ತೇವೆ ಎಂದರು ನಿರ್ದೇಶಕ ಶ್ರೀರಾಮ್.

ನಾಲ್ಕೈದು ಡ್ರಿಂಕ್ಸ್ ಗಳ ಮಿಶ್ರಣಕ್ಕೆ “ಕಾಕ್ಟೈಲ್” ಎನ್ನುತ್ತಾರೆ.‌ ನಮ್ಮ ಸಿನಿಮಾದಲ್ಲೂ ಹಾಗೆ. ಲವ್ ಇದೆ ಲವ್ ಜಾನರ್ ಸಿನಿಮಾ‌ ಅಲ್ಲ.‌ ಸೆಂಟಿಮೆಂಟ್ ಇದೆ ಸೆಂಟಿಮೆಂಟ್ ಸಿನಿಮಾ ಅಲ್ಲ. ಎಲ್ಲಾ ಅಂಶಗಳನ್ನು ಒಳಗೊಂಡಿರುವ ಬೇರೆಯದೆ ರೀತಿಯ ಸಿನಿಮಾ ನಮ್ಮದು. ವಿಕ್ರಮ್ ಎಂಬುದು ನನ್ನ ಪಾತ್ರದ ಹೆಸರು. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು ನಾಯಕ ವೀರೆನ್ ಕೇಶವ್.

ನಾಯಕಿ ಚರಿಶ್ಮಾ ಸಹ ತಮ್ಮ ಪಾತ್ರದ ಕುರಿತು ಮಾತನಾಡಿದರು. ಸಂಗೀತ ನಿರ್ದೇಶಕ ಲೋಕಿ ತವಸ್ಯ ಸೇರಿದಂತೆ ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಇನ್ನಷ್ಟು ಓದಿರಿ

Scroll to Top