ದೇಸಾಯಿ ಸೆಟ್ಟಲ್ಲಿ ನಡೆಯಿತೊಂದು ಅನಾಹುತ!

Picture of Cinibuzz

Cinibuzz

Bureau Report

ಸಿನಿಮಾರಂಗದ ಕೆಲವೊಂದು ವ್ಯವಸ್ಥೆ ಹಡಾಲೆದ್ದುಕೂತಿದೆ. ಅನುಭವವಿಲ್ಲದ ನಿರ್ಮಾಪಕ, ಪ್ಯಾಕೇಜ್ ಡೀಲು ಪಡೆದು ಕಾಸು ಮಾಡಲು ಹೊಂಚು ಹಾಕಿದ ಸಾಹಸ ನಿರ್ದೇಶಕ, ಎಲ್ಲೆಲ್ಲಿ ಎಷ್ಟೆಷ್ಟು ಕೀಳಬಹುದು ಅಂತಾ ಲೆಕ್ಕ ಹಾಕುವ ಮ್ಯಾನೇಜರು, ಛಾನ್ಸು ಸಿಕ್ಕಿದ್ದೇ ಬದುಕಿನ ಸಾಧನೆ ಅಂದುಕೊಂಡ ನಿರ್ದೇಶಕ… ಇವರೆಲ್ಲರ ನಡುವೆ ಬೆಂದು ಬಸವಳಿದ ಪುರಾತನ ಛಾಯಾಗ್ರಾಹಕ.

ಸ್ವಲ್ಪವೇ ಯಾಮಾರಿದ್ದರೂ ಭಾರತೀಯ ಚಿತ್ರರಂಗದ ಹಿರಿಯ ಕಲಾವಿದ ಸೇರಿದಂತೆ ಕನ್ನಡದ ಇಬ್ಬರು ನಟರ ಹೆಣ ಉರುಳುತ್ತಿತ್ತು. ಅದಕ್ಕೆ ಕಾರಣವಾಗಿರೋದು, ʻದೇಸಾಯಿʼ ಎನ್ನುವ ಸಿನಿಮಾ ಮಾಡಲು ಒಟ್ಟಾಗಿರುವ ಕೆಲವು ಬೇಜವಾಬ್ದಾರಿ ಗಿರಾಕಿಗಳು.

ʻದೇಸಾಯಿ ಹೆಸರಿನ ಸಿನಿಮಾವೊಂದು ಚಿತ್ರೀಕರಣ ಹಂತದಲ್ಲಿದೆ. ಶಶಾಂಕ್ ನಿರ್ದೇಶನದ ಲವ್ ೩೬೦ ಚಿತ್ರದಿಂದ ಲಾಂಚ್ ಆದ ಪ್ರವೀಣ್ ಕುಮಾರ್ ಈ ಸಿನಿಮಾದ ಹೀರೋ. ಕನ್ನಡ ಸೇರಿದಂತೆ ತೆಲುಗಿನ ಕೆಲವಾರು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ನಾಗಿ ರೆಡ್ಡಿ ಈ ಚಿತ್ರದ ನಿರ್ದೇಶಕ. ಈತ ಮಹಂತೇಶ ಚೊಳಚಗುಡ್ಡ ಅನ್ನೋ ಮಹಾನುಭಾವನನ್ನು ಅದೆಲ್ಲಿಂದ ಹುಡುಕಿಕೊಂಡು ಬಂದು ಸಿನಿಮಾ ನಿರ್ಮಿಸಲು ಒಪ್ಪಿಸಿದನೋ ಗೊತ್ತಿಲ್ಲ. ಈ ನಿರ್ಮಾಪಕನ ಉಳಿತಾಯದ ಉಮೇದಿನಿಂದಾಗಿ ದೊಡ್ಡ ಅನಾಹುತವೇ ನಡೆಯಬೇಕಿತ್ತು. ಯಾರ ಪುಣ್ಯವೋ ಅದು ಸ್ವಲ್ಪದರಲ್ಲೇ ತಪ್ಪಿದೆ.

ನಡೆದದ್ದೇನು?

ನೆನ್ನೆ ದಿನ ದೇಸಾಯಿ ಚಿತ್ರದ ಚಿತ್ರೀಕರಣ ಬಾಗಲಕೋಟೆಯ ಮುಚಕಂಡಿ ಡ್ಯಾಮ್ ಬಳಿ ನಡೆದಿತ್ತು. ಒರಟ ಪ್ರಶಾಂತ್, ಚೆಲುವರಾಜ್ ಮತ್ತು ತಮಿಳು, ತೆಲುಗಿನ ಖ್ಯಾತ ನಟ ಮಧುಸೂದನ್ ಮುಂತಾದವರು ಪಾಲ್ಗೊಂಡಿದ್ದರು. ಎರಡು ಥಾರ್ ಕಾರುಗಳ ನಡುವೆ ಚೇಸಿಂಗ್ ದೃಶ್ಯವದು. ಮಾಸ್ ಮಾದ ಕಂಪೋಸ್ ಮಾಡಿದ್ದ ಆ ಸಾಹಸದೃಶ್ಯದಲ್ಲಿ ಅದೇನು ಯಡವಟ್ಟಾಯಿತೋ ಅಥವಾ ಬೇಜವಬ್ದಾರಿಯೋ ಗೊತ್ತಿಲ್ಲ. ಡ್ರೈವರ್ ಸೀಟಲ್ಲಿ ಕುಂತಿದ್ದ ಚೆಲುವರಾಜ್ ಕಾರನ್ನು ರಭಸವಾಗಿ ತಂದು ಮತ್ತೊಂದು ಕಾರಿಗೆ ಗುದ್ದಿಬಿಟ್ಟ. ಕಾರು ಜಖಂಗೊಂಡಿದ್ದು ಮಾತ್ರವಲ್ಲದೆ, ಒಂದು ಕಾರಿನಲ್ಲಿದ್ದ ಆಯಿಲ್ ಟ್ಯಾಂಕ್ ಓಪನ್ ಆಗಿಬಿಟ್ಟಿತ್ತು. ನಸೀಬು ಕೆಟ್ಟು ಪೆಟ್ರೋಲ್ ಟ್ಯಾಂಕೇನಾದರೂ ತೆರೆದುಕೊಂಡಿದ್ದಿದ್ದರೆ, ಎರಡೂ ಕಾರುಗಳು ಬೆಂಕಿಗೆ ಆಹಿತಿಯಾಗಬೇಕಿತ್ತು ಅಂತಾ ಅಲ್ಲಿದ್ದವರೇ ಹೇಳಿಕೊಂಡಿದ್ದಾರೆ.

ಯಾಕೆ ಹೀಗೆ?

ಹೊಸದಾಗಿ ಸಿನಿಮಾ ಮಾಡಲು ಬಂದವರನ್ನು ಇಲ್ಲಿನ ಕೆಲವು ಕಮಿಷನ್ ಗಿರಾಕಿಗಳು ಆರಂಭದಲ್ಲೇ ಬೆಚ್ಚಿಬೀಳುವಂತೆ ಮಾಡಿಬಿಟ್ಟಿರುತ್ತಾರೆ. ಅದರಲ್ಲಿ ಮ್ಯಾನೇಜರುಗಳದ್ದು ಮಹತ್ವದ ಪಾತ್ರ. ಅಲ್ಲೊಬ್ಬರು ಇಲ್ಲೊಬ್ಬರು ತೀರಾ ಪ್ರಾಮಾಣಿಕ ಮ್ಯಾನೇಜರುಗಳಿದ್ದಾರೆ. ಹಾಗಂತ ಎಲ್ಲರೂ ಇಲ್ಲಿ ನಿರ್ಮಾಪಕ ಕೊಟ್ಟ ಸಂಬಳವನ್ನೇ ನಂಬಿ ನಿಯತ್ತಿನಿಂದ ಬದುಕುತ್ತಿಲ್ಲ. ಮ್ಯಾನೇಜರುಗಳ ಹಿಡಿತಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡ ಸಿನಿಮಾಗಳೇ ಹೆಚ್ಚು. ದೇಸಾಯಿ ಸಿನಿಮಾದಲ್ಲಿ ಶಶಿ ಎನ್ನುವ ಮ್ಯಾನೇಜರ್ ಏನೇನು ಮ್ಯಾನೇಜ್ ಮಾಡಿದ್ದಾರೋ ಗೊತ್ತಿಲ್ಲ. ಸಾಹಸ ನಿರ್ದೇಶಕ ಮಾಸ್ ಮಾದಪ್ಪನವರಿಗೆ ಒಂದು ಫೈಟ್‌ಗೆ ಇಷ್ಟು ಅಂತಾ ಪ್ಯಾಕೇಜ್ ವಹಿಸಿಬಿಟ್ಟಿದ್ದಾರೆ. ಈಗೆಲ್ಲಾ ಸಾಕಷ್ಟುಜನ ಫೈಟ್ ಕೊರಿಯೋಗ್ರಾಫರ್ಸ್  ಪ್ಯಾಕೇಜ್ ಪಡೆದು ಕಾಸು ಎಣಿಸಿಕೊಳ್ಳುತ್ತಿದ್ದಾರೆ. ಅಲ್ಲಿ ಸಾಹಸ ಕಲಾವಿದರು ಯದ್ವಾತದ್ವಾ ಏಟು ತಿಂದು, ಮೂಳೆ ಮುರಿಸಿಕೊಂಡು, ಮೈಯೆಲ್ಲಾ ಹೊಲಿಗೆ ಹಾಕಿಸಿಕೊಂಡು ನರಳುತ್ತಿರುತ್ತಾರೆ. ಮನೆಯಿಂದ ಹೊರಬಂದರೆ ಮತ್ತೆ ವಾಪಾಸು ಹೋಗೋ ಗ್ಯಾರೆಂಟಿಯೇ ಇಲ್ಲದೆ ಯೋಧರಂತೆ ಬದುಕುತ್ತಿದ್ದಾರೆ. ಇವರನ್ನು ತೋರಿಸಿ ಕಾಸು ಮಾಡಿಕೊಳ್ಳುವ ಮಾಸ್ಟರುಗಳೂ ಕೆಲವರಿದ್ದಾರೆ. ಅದರ ವಿವರ ದೊಡ್ಡದೇ ಇದೆ. ಈಗ ದೇಸಾಯಿ ಚತ್ರೀಕರಣದ ವಿಚಾರಕ್ಕೆ ಬಂದರೆ, ಇಲ್ಲಿ ಮಾಸ್ ಮಾದ ಯಾವುದೇ ಸೇಫ್ಟಿ ಇಲ್ಲದೆ, ನಿರ್ಲಕ್ಷ್ಯದಿಂದ ಚಿತ್ರೀಕರಣ ಮಾಡುತ್ತಿದ್ದರು. ಕನ್ನಡ ಚಿತ್ರರಂಗದಲ್ಲಿ ಸಾಹಸ ನಿರ್ದೇಶಕರ ಅಜಾಗರೂಕತೆಯಿಂದ ಈಗಾಗಲೇ ಸಾಕಷ್ಟು ಜೀವಹಾನಿಗಳಾಗಿವೆ. ಮಾಸ್ ಮಾದ ಅದನ್ನೆಲ್ಲಾ ಮರೆತುಬಿಟ್ಟಿರಾ? ಗೊತ್ತಿಲ್ಲ. ಮಾಸ್ ಮಾದನಿಗೇನು? ಒಪ್ಪಿಕೊಂಡ ಪ್ಯಾಕೇಜಿನಲ್ಲಿ ಎಷ್ಟು ಉಳಿಸಿಕೊಳ್ಳಬೇಕು ಅನ್ನೋದರ ಬಗ್ಗೆ ಗಮನವಿರುತ್ತದೆ. ನಿರ್ಮಾಪಕನಿಗಾದರೂ ಸ್ವಲ್ಪ ಜವಾಬ್ದಾರಿ ಇರಬೇಕಿತ್ತಲ್ಲವಾ? ಚಿತ್ರರಂಗದಲ್ಲಿ ಸರಿಸುಮಾರು ಅರ್ಧ ಶತಮಾನ ಸರ್ವೀಸ್ ಮಾಡಿರುವ ಪಿ.ಕೆ.ಹೆಚ್. ದಾಸ್ ರಂಥಾ ಹಿರಿ ಛಾಯಾಗ್ರಾಹಕ ಈ ಅದ್ವಾನಗಳನ್ನೆಲ್ಲಾ ತಮ್ಮ ಕಣ್ಣಾರೆ ಕಂಡು ತಲೆತಲೆ ಚಚ್ಚಿಕೊಂಡರಂತೆ. ಇನ್ನಾದರೂ ʻದೇಸಾಯಿʼ ಗ್ಯಾಂಗ್ ಎಚ್ಚರಗೊಳ್ಳಲಿ. ಜೀವ ಯಾರದ್ದಾದರೇನು? ಎಲ್ಲರ ಬಗ್ಗೆ ಮುತುವರ್ಜಿ ವಹಿಸಲಿ…

ನಂಬಿ ಕೆಡಬೇಡಿ!

ಸಿನಿಮಾ ಕಾರ್ಮಿಕರು, ತಂತ್ರಜ್ಞರದ್ದೂ ತಪ್ಪಿದೆ! ಯಾರಾದರೂ ಪ್ರಾಮಾಣಿಕ ನಿರ್ಮಾಪಕರು ಸಿನಿಮಾ ಮಾಡಲು ಬಂದಾಗ ಅವರಿಗೆ ಇಲ್ಲಿ ಆಗುವ ಅನುಭವವೇ ಬೇರೆ. ಜರ್ನಿ ಬಾಟಾ, ಹಾಲಿಡೇ ಬಾಟಾ ಅಂತೆಲ್ಲಾ ಡಬಲ್‌ ಡಬಲ್ ಬಿಲ್ಲು ಬರೆದು ಪ್ರೊಡ್ಯೂಸರನ್ನು ಬೆಚ್ಚಿಬೀಳಿಸುತ್ತಾರೆ. ಇವರ ಬಾಟಾಗಳಿಗೆ ಹೆದರಿಕೊಂಡೇ ನಿರ್ಮಾಪ ಚಿತ್ರರಂಗಕ್ಕೆ ಟಾಟಾ ಹೇಳಿಬಿಡುತ್ತಾನೆ. ಆದರೆ ವಂಚಿಸುವ ನಿರ್ಮಾಪಕರನ್ನು ನಮ್ಮವರು ಬೇಗ ನಂಬುತ್ತಾರೆ. ಇದೇ ʻದೇಸಾಯಿʼ ಸಿನಿಮಾದ ನಿರ್ಮಾಪಕ ಮಹಂತೇಶ ಚೊಳಚಗುಡ್ಡ ಮೊದಲ ಷೆಡ್ಯೂಲ್‌ ಶೂಟಿಂಗ್‌ ಮುಗಿಯುತ್ತಿದ್ದಂತೇ ಎಲ್ಲ ತಂತ್ರಜ್ಞರು, ಕಾರ್ಮಿಕರಿಗೆ ಚೆಕ್‌ ಬರೆದುಕೊಟ್ಟು ಕಳಿಸಿದ್ದರು. ಬಸ್ಸಿಗೂ ಕಾಸಿಲ್ಲದೇ ಎಲ್ಲರೂ ವಾಪಾಸು ಬಂದಿದ್ದರು. ಅದನ್ನು ತಂದು ಬ್ಯಾಂಕಿಗೆ ಹಾಕಿದರೆ ಎಲ್ಲವೂ ಬೌನ್ಸ್‌ ಆಗಿತ್ತು.

ಪ್ರಕರಣ ದಾಖಲಾಯ್ತಾ?

ಚಿತ್ರೀರಕರಣದ ಸಮಯದಲ್ಲಿ ಕಾರುಗಳು ಅಪಘಾತಕ್ಕೆ ಒಳಗಾಗಿವೆ. ಅಸಲಿಗೆ ಶೂಟಿಂಗ್‌ಗೆ ಸರಿಯಾದ ಅನುಮತಿ ಪಡೆದಿದ್ದಾರಾ? ಅಪಘಾತವಾಗಿ ಒಂದು ದಿನ ಕಳೆದಿದೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆಯಾ? ಮೂಲಗಳ ಪ್ರಕಾರ ಒಂದು ಕಪ್ಪು ಮತ್ತು ಕೆಂಪು ಬಣ್ಣದ ಥಾರ್‌ ವಾಹನಗಳು ಬಾಗಲಕೋಟೆಯ ಪ್ರತಿಷ್ಟಿತ ಕುಟುಂಬಕ್ಕೆ ಸೇರಿದ್ದಂತೆ. ಚಿತ್ರೀಕರಣ ನಡೆಸಿ ವಾಪಾಸು ಕೊಡುತ್ತೇವೆ ಅಂತಾ ತಂದು ಅದನ್ನು ಆಕ್ಷನ್‌ ದೃಶ್ಯಕ್ಕೆ ಬಳಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ನವನಗರ ಪೊಲೀಸರು ಸ್ವಲ್ಪ ಗಮನ ಕೊಡಬೇಕು.

ಇನ್ನಷ್ಟು ಓದಿರಿ

Scroll to Top