ಪಾನ್ ಮಸಾಲ ಜಾಹಿರಾತು ನೀಡಿ ಮತ್ತೆ ಟ್ರೋಲ್ ಗೊಳಗಾದ ಅಕ್ಷಯ್ ಕುಮಾರ್

Picture of Cinibuzz

Cinibuzz

Bureau Report

  • ಅನುರಾಗ್

ನಾಯಿ ಬಾಲ ಯಾವತ್ತಿದ್ದರೂ ಡೊಂಕು ಎಂಬ ಗಾದೆ ಮಾತು ಸುಳ್ಳಲ್ಲ. ಪಾನ್ ಮಸಾಲ ಜಾಹಿರಾತೊಂದರಲ್ಲಿ ಭಾಗವಹಿಸಿ, ಟ್ರೋಲ್ ಗೆ ಒಳಗಾಗಿದ್ದ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್, ಇನ್ನು ಇಂತಹ ಉತ್ಪನ್ನಗಳ ಜಾಹಿರಾತಿನಲ್ಲಿ ತೊಡಗಿಸಿಕೊಳ್ಳುವುದಿಲ್ಲ ಎಂದು ಕ್ಷಮೆಯಾಚಿಸಿದ್ದರು. ಆದರೆ ಇದೀಗ ತಾವು ಯಾವ ಉತ್ಪನ್ನಕ್ಕೆ ಜಾಹಿರಾತು ನೀಡಲ್ಲ ಎಂದು ಪ್ರಚಾರ ರಾಯಭಾರಿತ್ವದಿಂದ ಹಿಂದೆ ಸರಿದಿದ್ದರೋ, ಮತ್ತೊಮ್ಮೆ ಅದೇ ವಿಮಲ್ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದು ಮತ್ತೊಮ್ಮೆ ವಿಪರೀತ ಟ್ರೋಲ್ ಗೆ ಒಳಗಾಗಿದ್ದಾರೆ.

ಕೇವಲ ಅಕ್ಷಯ್ ಮಾತ್ರವಲ್ಲದೇ ಈ ಜಾಹಿರಾತಿನಲ್ಲಿ ಬಾಲಿವುಡ್ ನಟರಾದ ಶಾರೂಖ್ ಖಾನ್ ಮತ್ತು ಅಜಯ್ ದೇವಗನ್ ಕೂಡ ಕಾಣಿಸಿಕೊಂಡಿದ್ದಾರೆ. ಈ ಜಾಹಿರಾತಿನಲ್ಲಿ ಕಾರಿನಲ್ಲಿ ಬರುವ ಅಜಯ್ ಮತ್ತು ಶಾರೂಖ್, ಅಕ್ಷಯ್ ಮನೆಯ ಬಳಿ ಕಾರು ನಿಲ್ಲಿಸಿ ಅಕ್ಷಯ್ ನನ್ನು ಕೆಳಗೆ ಬರುವಂತೆ ಕೂಗುತ್ತಾರೆ. ಆದರೆ ಊರ್ ಚಿಂತೆ ತನಗೇಕೆ ಎಂಬಂತೆ, ಹೆಡ್ ಫೋನ್ ಹಾಕಿ ಹಾಡು ಕೇಳುತ್ತಿದ್ದ ಅಕ್ಷಯ್ ಗೆ ಶಾರೂಖ್ ನ ಕೂಗು ಕೇಳೋದೇ ಇಲ್ಲ. ಆಗ ನೋಡಿ ಅಜಯ್ ಒಂದು ಪ್ಲಾನ್ ಮಾಡುತ್ತಾನೆ. ಹೆಂಡದ ಬಾಟಲಿ ತೋರಿಸಿ ತಮಗೆ ಬೇಕಾದವರನ್ನು ತಮ್ಮಡೆಗೆ ಸೆಳೆಯೋ, ಹಳೆ ಸಿನಿಮಾ ಸೀನುಗಳಂತೆಯೇ ಅಜಯ್ ದೇವಗನ್,  ವಿಮಲ್ ನ ಪ್ಯಾಕೇಟ್ ತುಂಡರಿಸಿ ಬಾಯಿಗೆ ಸುರುವಿಕೊಳ್ಳುತ್ತಾನೆ. ಆಗ ಹೊಮ್ಮುವ ವಿಮಲ್ ನ ಪರಿಮಳದಿಂದ ಆಕರ್ಷಿತನಾಗಿ, ಅಕ್ಷಯ್  ಉತ್ಸಾಹದಿಂದ ಕೆಳಗಿಳಿದಿಳಿದು ಓಡೋಡಿ ಬರುತ್ತಾನೆ.

ವರ್ಲ್ಡ್ ಕಪ್ ನೋಡೋವಾಗ ಟಿವಿ ಪರದೆಯಲ್ಲಿ ಕಾಣೋ ಈ ಜಾಹಿರಾತಿನ ಕಂಟೆಂಟ್ ಮತ್ತು ಪ್ರಚಾರ ಸಾಮಾಗ್ರಿ ಏನೇ ಆಗಿರಲಿ,  ಸಿನಿಮಾಗಳಲ್ಲಿ ತಮ್ಮನ್ನು ಹೀರೋ ಎಂದು  ಬಿಂಬಿಸಿಕೊಂಡು ಜನತೆಗೆ ದುಶ್ಚಟಗಳನ್ನು ರೂಡಿಸಿಕೊಳ್ಳೋ ಹಾಗೆ ಪ್ರೇರೇಪಿಸುವ ಈ ಮೂವರು ನಟರ ಮೇಲೆ ನೆಟ್ಟಿಗರು ಕಿಡಿ ಕಾರುತ್ತಿದ್ದಾರೆ. ಆದರೆ ಈ ಕಿಡಿಯ ಉರಿ ಸ್ವಲ್ಪ ಹೆಚ್ಚೇ ಅನ್ನುವಂತೆ ಅಕ್ಷಯ್ ಗೆ ತಟ್ಟುತ್ತಿದೆ.

2022 ರಲ್ಲಿ ವಿಮಲ್ ಜಾಹಿರಾತಿನಲ್ಲಿ ತೊಡಗಿಸಿಕೊಂಡು ನಂತರ ಇನ್ನೆಂದೂ ಈ ರೀತಿ ಮಾಡುವುದಿಲ್ಲ. ಈ ಜಾಹಿರಾತಿನಲ್ಲಿ ಬಂದ ಹಣವನ್ನೆಲ್ಲಾ ಸಾರ್ವಜನಿಕ ಸೇವೆಗೆ ನೀಡುತ್ತೇನೆ ಎಂದು ಕ್ಷಮೆ ಕೋರಿದ್ದ ಅಕ್ಷಯ್ ಇಷ್ಟು ಬೇಗ ತಮ್ಮ ಮಾತನ್ನು ಮತ್ತೊಮ್ಮೆ ಮುರಿದು ಬಿಟ್ರಾ ಅಂತ ನೆಟ್ಟಿಗರು ಅಕ್ಷಯ್ ರನ್ನು ಅಣಕಿಸುತ್ತಿದ್ದಾರೆ. ಹಿಪ್ಪೋಕ್ರೆಸಿ ಎಂದು ಜರೆಯುತ್ತಿದ್ದಾರೆ. ರಿಯಲ್ ಲೈಫ್ ಹೀರೋಗಳ ಕಥೆಗಳನ್ನು ಸಿನಿಮಾದಲ್ಲಿ ಮಾತ್ರ ನಟನೆಯ ಮುಖಾಂತರ ವ್ಯಕ್ತಪಡಿಸದೇ ನಿಜ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಸಲಹೆ ನೀಡುತ್ತಿದ್ದಾರೆ. ಸಾಮಾಜಿಕ ಸಿನಿಮಾ ಮಾಡಿ ಹೀರೋ ಅನ್ನಿಸಿಕೊಳ್ಳೋದಷ್ಟೇ ಅಲ್ಲ, ಬಹು ಜನರನ್ನು ತಲುಪುವ ಜಾಹಿರಾತುಗಳ ಆಯ್ಕೆಯಲ್ಲೂ ಸಂದೇಶವಿರಲಿ ಎಂದು ಅಭಿಮಾನಿಗಳು ಮತ್ತು ವಿರೋಧಿಗಳಿಬ್ಬರೂ ಅಕ್ಷಯ್ ಗೆ ಸಲಹೆ ನೀಡುತ್ತಿದ್ದಾರೆ.

ಇನ್ನಷ್ಟು ಓದಿರಿ

Scroll to Top