ಉಳುವವನೇ ಭೂಮಿಯ ಒಡೆಯ!

Picture of Cinibuzz

Cinibuzz

Bureau Report

ನಡೆದುಹೋದ ಘಟನೆ ಮತ್ತೆ ಮರುಕಳಿಸಲ್ಲ. ಆದರೆ, ಅಲ್ಲಿ ಏನು ನಡೆಯಿತು ಅಂತಾ ತಿಳಿದುಕೊಳ್ಳೋಕೆ ಎವಿಡೆನ್ಸ್‌ ಇಂದ ಮಾತ್ರ ಸಾಧ್ಯ…. ನಾಲೆ ನಿರ್ಮಾಣದ ಕಾಮಗಾರಿ ಮಾಡಲು ಹೋದ ಕಾರ್ಮಿಕರ ಕಣ್ಣಿಗೆ ಬಿದ್ದ ಅಸ್ತಿಪಂಜರಗಳ ಬಗ್ಗೆ ತನಿಖೆ ಮಾಡಲು ಬಂದ ಫೊರೆನ್ಸಿಕ್‌ ತಂಡ ಅಗೆದು ತೆಗೆಯೋದು ಬರೋಬ್ಬರಿ ನೂರಾ ಎಂಟು ಜನರ ಕಳೇಬರ. ಅವರೆಲ್ಲಾ ಸತ್ತಿದ್ದು ಯಾಕೆ? ಅವರನ್ನೆಲ್ಲಾ ಅಷ್ಟು ನಿರ್ದಯಿಯಾಗಿ ಕೊಂದು ಒಂದೇ ಕಡೆ ಹೂತವನು ಯಾರು? ಅದಕ್ಕೆ ಕಾರಣ ಏನಿರಬಹುದು…? ಇಂಥದ್ದೊಂದು ಕೌತುಕದ ಪ್ರಶ್ನೆಯೊಂದಿಗೆ ಆರಂಭವಾಗುವ ಕತೆ ʻಕಾಟೇರʼ ಚಿತ್ರದ್ದು.

ಮತ್ತೊಂದು ಕಡೆ ಊರಿಗೆ ಊರೇ ಆಕಾಶಕ್ಕೆ ಮುಖ ಕೊಟ್ಟು ಮಳೆರಾಯನಿಗೆ ಕಾದಂತೆ ಆತನ ಬರುವಿಕೆಗಾಗಿ ಕಾದಿದೆ. ಜಾತ್ರೆಗೆ ಕರೆತರಲೇಬೇಕು ಅಂತಾ ತೀರ್ಮಾನಿಸಿರುತ್ತಾರೆ. ಅವನು ಕಾಟಿ… ಕಾಟೇರ… ಸದ್ಯ ಜೈಲಿನಲ್ಲಿದ್ದಾನೆ. ಪೆರೋಲ್‌ ಮೇಲೆ ಹೊರಬರುತ್ತಾನೆ. ಅದರೊಂದಿಗೆ ಅವನ ಹಿನ್ನೆಲೆ ಕೂಡಾ ತೆರೆದುಕೊಳ್ಳುತ್ತದೆ.

ಭೀಮನಹಳ್ಳಿ ಅನ್ನೋ ಊರಿನಲ್ಲಿ ಕುಲುಮೆ ಕೆಲಸ ಮಾಡಿಕೊಂಡಿರುತ್ತಾನೆ. ಸುತ್ತ ಮುತ್ತಲ ಹಳ್ಳಿಯವರೆಲ್ಲಾ ಹೊಲ ಉಳುವ ನೇಗಿಲು, ಮರ ಕಡಿಯೋಕೆ ಮಚ್ಚು, ಗುದ್ದಲಿ, ಕುಡ್ಲು, ಗಡಪಾರಿ, ಪಿಕಾಸಿ, ಕುಡುಗೋಲು ಏನೇ ಬೇಕೆಂದರೂ ಇವನ ಕುಲುಮೆಗೇ ಬರಬೇಕು. ಕುಲುಮೆಯ ಬೆಂಕಿಯ ನಡುವೆ ಜೀವಿಸುವ ಕಾಟೇರನ ಎದೆಯಲ್ಲಿ ಶ್ಯಾನುಭೋಗರ ಮಗಳು ಹೂ ಅರಳಿಸಿರುತ್ತಾಳೆ.

ಭೂಮಾಲೀಕರ ದರ್ಪ, ದೌರ್ಜನ್ಯಗಳ ನಡುವೆ ಬದುಕುವ ರೈತಾಪಿ ವರ್ಗದ ಬವಣೆಯನ್ನು ʻಕಾಟೇರʼದಲ್ಲಿ ಚಿತ್ರಿಸಲಾಗಿದೆ. ದೇವರಾಜ ಅರಸು ಕಾಲದಲ್ಲಿ, ಅಂದಿನ ಪ್ರಧಾನಿ ಇಂದಿರಾಗಾಂಧಿ ಜಾರಿಗೆ ತಂದ ಬಗರ್ ಹುಕುಂ ಸಾಗುವಳಿ ಕಾಯ್ದೆಯ ಸುತ್ತ ಕತೆ ಬೆಸೆದುಕೊಂಡಿದೆ.

ʻಉಳುವವನೇ ಭೂಮಿಯ ಒಡೆಯʼ ಘೋಷಣೆಯಾಗುತ್ತಿದ್ದಂತೇ ಭೂಮಾಲೀಕರು ನಡೆಸಿದ ಕುತುಂತ್ರಗಳು, ಅದರಿಂದ ಉದ್ಭವಿಸಿದ ರಕ್ತ ಚರಿತ್ರೆಯನ್ನಿಲ್ಲಿ ಕಥೆಯ ರೂಪದಲ್ಲಿ ಬಿಡಿಸಿಟ್ಟಿದ್ದಾರೆ. ತನ್ನ ಒಡಹುಟ್ಟಿದವಳು ಮಗುವಿಗೆ ಎದೆಹಾಲು ಕುಡಿಸಲು ಮುಂದಾದಾಗ ಕೀಟಲೆ ಮಾಡುವ ದಾಂಢಿಗನ ಕಣ್ಣು ಕೀಳುವುದರೊಂದಿಗೆ ಕಾಟೇರನ ಬಡಿದಾಟ ಶುರುವಾಗುತ್ತದೆ. ನಂತರ ಅದು ರೈತಪರ ಹೋರಾಟಕ್ಕೆ, ಭೂಮಾಲೀಕರ ವಿರುದ್ಧ ನಡೆಸುವ ದಂಗೆಯ ತನಕವೂ ಮುಂದುವರೆಯುತ್ತದೆ.

ಈ ನೆಲದ ಕಥಾವಸ್ತುವನ್ನು ಹೆಕ್ಕಿ ನಿರ್ದೇಶಕ ತರುಣ್‌ ಕಿಶೋರ್‌ ಸುಧೀರ್‌ ಮತ್ತು ಜಡೇಶ ಹಂಪಿ ಜಂಟಿಯಾಗಿ ಕಥೆ ಮತ್ತು ಚಿತ್ರಕತೆ ರೂಪಿಸಿದ್ದಾರೆ. ಅದನ್ನು ಕಮರ್ಷಿಯಲ್ಲಾಗಿ ಪ್ರಸೆಂಟ್‌ ಕೂಡಾ ಮಾಡಿದ್ದಾರೆ. ಕಷ್ಟ ಪಟ್ಟು ಬೆಳೆ ಬೆಳೆದ ರೈತರ ರಕ್ತ ಹೀರುತ್ತಿದ್ದ ಭೂಮಾಲೀಕರು, ಜಾತಿಪದ್ಧತಿಗಳನ್ನೆಲ್ಲಾ ನೇರವಾಗಿ ಹೇಳುವ ಧೈರ್ಯ ಮಾಡಿದ್ದಾರೆ. ದರ್ಶನ್‌ ಥರದ ಸೂಪರ್‌ ಸ್ಟಾರ್‌ ನಟನ ಸಿನಿಮಾದಲ್ಲಿ ಇಂಥದ್ದೊಂದು ವಿಚಾರವನ್ನು ತೋರಿಸೋದು ಕನ್ನಡದ ಮಟ್ಟಿಗೆ ನಿಜಕ್ಕೂ ಸವಾಲಿನ ಕೆಲಸ. ಆದರೆ, ತರುಣ್‌ ಅದನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.

ದರ್ಶನ್‌ ಇಲ್ಲಿ, ತರುಣ ಮತ್ತು ನಡುವಯಸ್ಸು ಮೀರಿದ ಎಳೇ ವೃದ್ದ – ಈ ಎರಡೂ ಗೆಟಪ್ಪುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟುದ್ದದ, ಕ್ಲಿಷ್ಟಕರವಾದ ಸಂಭಾಷಣೆಯನ್ನು ದರ್ಶನ್‌ ತೀರಾ ಸಹಜವಾಗಿ ಮಾತಾಡಿದ್ದಾರೆ. ಕಷ್ಟಪಟ್ಟು ಬಡಿದಾಡಿದ್ದಾರೆ. ಮನಸ್ಸಿಟ್ಟು ಅಭಿನಯಿಸಿದ್ದಾರೆ. ಕಾಟೇರ ದರ್ಶನ್‌ ವೃತ್ತಿ ಬದುಕಿಗೆ ಒಂದೊಳ್ಳೆ ಚಿತ್ರವೆನಿಸುತ್ತದೆ.

ಛಾಯಾಗ್ರಾಹಕ ಸುಧಾಕರ್‌ ಎಸ್‌ ರಾಜ್‌ ಅದ್ಭುತವಾಗಿ ಕೆಲಸ ನಿರ್ವಹಿಸಿದ್ದಾರೆ. ಒಂದಿಡೀ ಊರನ್ನು ನಿರ್ಮಿಸಿರುವ ಕಲಾನಿರ್ದೇಶಕರ ಶ್ರಮ ದೊಡ್ಡದು. ವಿ ಹರಿಕೃಷ್ಣ ಸಂಗೀತ ಎಲ್ಲವೂ ʻಕಾಟೇರʼ ಸಿನಿಮಾದ ಕಳೆ ಹೆಚ್ಚಿಸಿದೆ. ಗ್ರಾಮೀಣ ಹಿನ್ನೆಲೆಯ ಅಪ್ಪಟ ದೇಸೀ ಸಿನಿಮಾವನ್ನು ಕಟ್ಟುವಾಗ ಆ ಚಿತ್ರದಲ್ಲಿ ಬಳಸುವ ಭಾಷೆ ಅತಿ ಮುಖ್ಯವಾಗುತ್ತದೆ. ಕಾಟೇರ ಸಿನಿಮಾದಲ್ಲಿ ಮಾಸ್ತಿ ಅವರು ಬರೆದಿರುವ ಪ್ರತೀ ಶಬ್ದವೂ ತೂಕದಿಂದ ಕೂಡಿದೆ. ಮಾಸ್ತಿ ಹೊಸೆದಿರುವ ಮಾತುಗಳೆಲ್ಲಾ ರೈತಮಕ್ಕಳ ಅಂತರಾತ್ಮದ ದನಿಯಾಗಿ ಹೊರಹೊಮ್ಮಿದೆ…

ಮಾಲಾಶ್ರೀ ಪುತ್ರಿ ಆರಾಧನಾ ಮಾತಾಡುವಾಗ ಚೆಂದ ಕಾಣಿಸ್ತಾರೆ. ನೂರಾರು ಜನ ಹಿರಿ-ಕಿರಿ ನಟರು ಕಾಟೇರದಲ್ಲಿ ಭಾಗಿಯಾಗಿದ್ದಾರೆ. ಸಾಕಷ್ಟು ವರ್ಷಗಳ ನಂತರ ನಟ ರವಿಚೇತನ್‌ಗೆ ಒಂದೊಳ್ಳೆ ಪಾತ್ರ ಕೊಡಮಾಡಿರುವ ಚಿತ್ರ ಕಾಟೇರ. ವಿನೋದ್‌ ಆಳ್ವಾ, ಕುಮಾರ್‌ ಗೋವಿಂದ್‌ ಸೇರಿದಂತೆ ತೆರೆಮರೆಗೆ ಸರಿದಿದ್ದ ಅನೇಕರು ಇಲ್ಲಿ ರೀ ಎಂಟ್ರಿ ಕೊಟ್ಟಿದ್ದಾರೆ. ಶೃತಿ ಎಂದಿನಂತೆ ಮನೋಜ್ಞವಾಗಿ ಅಭಿನಯಿಸಿದ್ಧಾರೆ. ವೈಲೆನ್ಸ್‌ ಜಾಸ್ತಿ ಇದೆ ಅನ್ನೋದನ್ನು ಬಿಟ್ಟರೆ, ಕಾಟೇರ ಎಲ್ಲರಿಗೂ ಇಷ್ಟವಾಗುವ ಚೆಂದದ ಸಿನಿಮಾ…

ಇನ್ನಷ್ಟು ಓದಿರಿ

Scroll to Top