ಕಾಮಿಡಿ ಮಾತ್ರವಲ್ಲ, ಕಾಡುವ ಸನ್ನಿವೇಶಗಳೂ ಇಲ್ಲಿವೆ…

Picture of Cinibuzz

Cinibuzz

Bureau Report

ಆ ಕಾಲೇಜು ತೆರೆದುಕೊಂಡಿದ್ದೇ ಬರೀ ಮೂವತ್ತೈದು ಪರ್ಸೆಂಟ್ ಪಡೆದು ಪಾಸಾದ ಮಕ್ಕಳಿಗಾಗಿ. ಇಂತಿಷ್ಟು ಪರ್ಸೆಂಟು, ಪೇಮೆಂಟು ಇದ್ದರೂ ಕಾಲೇಜಿಗೆ ಪ್ರವೇಶಾವಕಾಶ ಸಿಗೋದು ಕಷ್ಟ. ಇಂಥದ್ದರಲ್ಲಿ ಜಸ್ಟ್ ಪಾಸ್ ವಿದ್ಯಾರ್ಥಿಗಳಿಗೆಂದೇ ಕಾಲೇಜು ಆರಂಭವಾದರೆ ಅಂಥಾ ಹುಡುಗರಿಗೆ ಎಷ್ಟು ಖುಷಿಯಾಗಬಹದು. ಕಾಲೇಜು ಮಾತ್ರವಲ್ಲ, ಹಾಸ್ಟೆಲ್ ಸೌಲಭ್ಯವೂ ಅಲ್ಲಿರುತ್ತದೆ ಅಂದರೆ ಹುಡುಗರ ಪಾಲಿಗದು ಸ್ವರ್ಗ!

ಹಾಗೆ ಸೀಟು ಪಡೆದು ಬಂದ ಹುಡುಗ ಹುಡುಗಿಯರ ಪ್ರೀತಿ ಪ್ರೇಮ ಪ್ರಣಯದಾಟಗಳೂ ಶುರುವಾಗುತ್ತವೆ. ಹುಡುಗರ ಭವಿಷ್ಯದಂತೆಯೇ ಇಲ್ಲಿನ ಕಥೆ ಕೂಡಾ ಯಾವ ದಿಕ್ಕಿಗೆ ಹೊರಳಿಕೊಳ್ಳಬಹುದು ಎನ್ನುವ ಗೊಂದಲ ಶುರುವಾಗುತ್ತದೆ. ತಮಾಷೆ ಪ್ರಸಂಗಗಳೇನೋ ಬಂದೂ ಬಂದು ಹೋಗುತ್ತಿರುತ್ತವೆ ಆದರೆ, ಮುಂದೇನು ಅನ್ನೋದೇ ಪ್ರಶ್ನೆಯಾಗಿ ಕಾಡುತ್ತದೆ. ಅದೇ ಹೊತ್ತಿಗೆ ಒಂದಿಷ್ಟು ತಿರುವುಗಳು ಘಟಿಸಲಾಗಿ, ಸಿನಿಮಾ ಬೇರೊಂದು ಆಯಾಮ ಪಡೆಯುವುದು.

ಕಾಲೇಜು, ಹುಡುಗರ ತುಂಟಾಟ, ಚೇಷ್ಟೆಗಳ ಕುರಿತಾದ ಸಾಕಷ್ಟು ಸಿನಿಮಾಗಳು ಇಲ್ಲೀತನಕ ಬಂದಿವೆ. ಇನ್ನೇನು ವಿಧ್ಯಾರ್ಥಿಗಳ ಬದುಕು ಮುಗಿದೇಹೋಯ್ತು ಅನ್ನುವ ಹಂತಕ್ಕೆ ಒಂದಿಷ್ಟು ತಿರುವುಗಳೇರ್ಪಡೋದು ಈ ಕತೆಗಳ ಸೂತ್ರವಾಗಿರುತ್ತದೆ. ಇಲ್ಲಿ ಕೂಡಾ ಅಂಥದ್ದೇ ಫಾರ್ಮುಲಾ ವರ್ಕಾಗಿದೆ.

ಮಾಡದ ತಪ್ಪಿಗಾಗಿ ಮಹಾ ಆರೋಪವೊಂದು ಹುಡುಗರ ನೆತ್ತಿಗೆ ಸುತ್ತಿಕೊಳ್ಳಬೇಕಿರುತ್ತದೆ. ಸ್ವಲ್ಪದರಲ್ಲೇ ಮಿಸ್ ಆಗಿ ಅದು ಮತ್ತೊಬ್ಬರ ಹೆಸರು ಕೆಡಿಸುತ್ತದೆ. ತಮ್ಮವರ ಹೆಗಲಿಗಂಟಿದ ಆರೋಪದ ಮೂಟೆಯನ್ನು ಹುಡುಗರು ಹೇಗೆ ಕೆಳಗಿಳಿಸುತ್ತಾರೆ, ಆ ನಂತರ ಹುಡುಗರ ಬದುಕು ಏನಾಗುತ್ತದೆ ಅನ್ನೋದು ಜಸ್ಟ್ ಪಾಸ್ ಸಿನಿಮಾದ ಕೊನೆಯ ಕುತೂಹಲ.

ಗ್ರಾಮೀಣ ಕಥಾವಸ್ತುಗಳನ್ನು ಹೆಕ್ಕಿ ಸಮರ್ಥವಾಗಿ ಸಿನಿಮಾ ಕಟ್ಟಿಕೊಡುತ್ತಿದ್ದ ಕೆ.ಎಂ.ರಘು ಈ ಸಲ ಕಾಲೇಜು ಸಬ್ಜೆಕ್ಟನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಎಂಥಾ ಸೀರಿಯಸ್ ವಿಚಾರದಲ್ಲೂ ಕಾಮಿಡಿ ಬೆರೆಸಿ ಜನರನ್ನು ರಂಜಿಸುವುದು ಕೆ.ಎಂ.ರಘು ಅವರಿಗೆ ಸಿದ್ದಿಸಿದ ಕಲೆ. ಇಲ್ಲೂ ಫನ್ ಎಲಿಮೆಂಟುಗಳನ್ನು ಸೇರಿಸಿ ನಗುವಿಗೆ ಕೊರತೆ ಇರದಂತೆ ಮಾಡಿದ್ದಾರೆ. ಯುವಕರ ಗೊಂದಲ, ಶಿಕ್ಷಣ ಮಾಫಿಯಾ, ನಿಸ್ವಾರ್ಥ ಶಿಕ್ಷಕರು ಸೇರಿದಂತೆ ಹಲವು ವಿಚಾರಗಳು ಇಲ್ಲಿ ಜಸ್ಟ್‌ ಪಾಸ್‌ ಆಗುತ್ತವೆ… ಮೇಲ್ನೋಟಕ್ಕೆ ಇದೊಂದು ಕಾಮಿಡಿ ಕಥಾವಸ್ತು ಅನ್ನಿಸಿದರೂ ಕಾಡುವ ಸಂಬಂಧಗಳು, ಭಾವನೆಗಳ ಸಂಘರ್ಷಗಳೂ ಇಲ್ಲಿವೆ…

ಕತೆಗೆ ಬೇಕಾದಷ್ಟು ಮೇಕಿಂಗು ಕೂಡಾ ಇಲ್ಲಿದೆ. ಹೀರೋ ಶ್ರೀ ಲವಲವಿಕೆಯಿಂದ ನಟಿಸಿದ್ದಾರೆ. ಹಾಸ್ಯ ಪಾತ್ರಸಲ್ಲಿ ನಟಿಸಿರುವ ಡುಮ್ಮಣ್ಣ ಗಮನ ಸೆಳೆದು, ಮಿಕ್ಕ ಹುಡುಗರೂ ಸ್ಕೋರು ಮಾಡಿದ್ದಾರೆ. ಹೊಸ ಹೀರೋಯಿನ್ ಪ್ರಣತಿ ಇನ್ನೊಂಚೂರು ಎಫರ್ಟ್ ಹಾಕಿದರೆ ನಿಲ್ಲಬಹುದು. ಹರ್ಷವರ್ಧನ ರಾಜ್ ಸಂಗೀತ ಎಂದಿನಂತೆ ಮನಮೋಹಕ. ಪ್ರಾಧ್ಯಾಪಕ ದಳವಾಯಿಯಾಗಿ ರಂಗಾಯಣ ರಘು ಆಪ್ತವಾಗಿ ನಟಿಸಿದ್ದಾರೆ. ಕಥೆ, ದೃಶ್ಯಗಳ ಅಗತ್ಯಕ್ಕೆ ತಕ್ಕಷ್ಟೇ ನಟಿಸೋದು ರಂಗಾಯಣ ರಘು ಶೈಲಿ. ಟಗರು ಪಲ್ಯ ನಂತರ ರಂಗಾಯಣ ರಘು ತುಂಬಾ ಇಷ್ಟವಾಗುವಂತೆ ನಟಿಸಿದ್ದಾರೆ. ಇಡೀ ಸಿನಿಮಾದ ಕೇಂದ್ರ ಬಿಂದುವೇ ಅವರಾಗಿದ್ದಾರೆ. ಪ್ರಕಾಶ್‌ ತುಮಿನಾಡು ತುಂಬಾ ನಗಿಸುತ್ತಾರೆ. ಸಾಧು ಕೋಕಿಲಾ ಕೂಡ ಬಂದು ಹೋಗುತ್ತಾರೆ. ನಟ ಕಲಾರತಿ ಮಹದೇವ್‌ ಅವರಿಗೆ ಇನ್ನಷ್ಟು ಸ್ಕ್ರೀನ್‌ ಸ್ಪೇಸ್‌ ಬೇಕಿತ್ತು.

ಒಟ್ಟಾರೆ ಈವತ್ತಿನ ಪೀಳಿಗೆಯವರು ಮಾತ್ರವಲ್ಲದೆ, ಎಲ್ಲ ಬಗೆಯ ಪ್ರೇಕ್ಷಕರೂ ನೋಡಿ, ಎಂಜಾಯ್‌ ಮಾಡಬಹುದಾದ ಸಿನಿಮಾ ಜಸ್ಟ್‌ ಪಾಸ್!‌

ಇನ್ನಷ್ಟು ಓದಿರಿ

Scroll to Top