ಅಜಿತ್‌ ವಿರುದ್ಧ ಗುಡುಗಿದ ತಮಿಳು ಪತ್ರಕರ್ತ ಯಾರು?

Picture of Cinibuzz

Cinibuzz

Bureau Report

ತಮಿಳು ಚಿತ್ರರಂಗದ ಅತಿ ದೊಡ್ಡ ಹೆಸರು ತಲಾ ಅಜಿತ್. ಸಾಮಾನ್ಯಕ್ಕೆ ಹೀರೋಗಳು ತಮ್ಮ ಸಿನಿಮಾ ಪಬ್ಲಿಸಿಟಿ, ಇತರೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ. ತಮ್ಮನ್ನು ಆರಾಧಿಸುವ ಅಭಿಮಾನಿಗಳಿಗೆ ದರ್ಶನ ನೀಡುತ್ತಾರೆ. ಆದರೆ ಅಜಿತ್‌ ವಿಕ್ಷಿಪ್ತ ಮನಸ್ಥಿತಿಯ ನಟ ಅನ್ನೋದು ತುಂಬಾ ಹಿಂದೆಯೇ ಪ್ರೂವ್‌ ಆಗಿದೆ. ಸಿನಿಮಾವೊಂದಕ್ಕೆ ಸಹಿ ಹಾಕುವ ಸಂದರ್ಭದಲ್ಲೇ ನಾನು ಯಾವುದೇ ಕಾರಣಕ್ಕೂ ಪ್ರೆಸ್‌ಮೀಟು, ಪಬ್ಲಿಸಿಟಿ ಕಾರ್ಯಕ್ರಮಗಳಿಗೆ ಬರೋದಿಲ್ಲ ಅಂತಾ ಅಗ್ರಿಮೆಂಟ್‌ ಮಾಡಿಸಿಕೊಂಡಿರುತ್ತಾರೆ. ಅಷ್ಟೇ ಅಲ್ಲ. ನಾನು ಸಿನಿಮಾದ ಪಾತ್ರಗಳಿಗೆ ಬೇಕಾದಂತೆ ಬದಲಾಗಲು ಸಾಧ್ಯ ಇಲ್ಲʼ  ನಾನು ಯಾವ ಕಾರಣಕ್ಕೂ ತಲೆಗೆ ಡೈ ಮಾಡಿಸಿಕೊಳ್ಳಲ್ಲ. ಸಣ್ಣ ಆಗುವ ಪ್ರಯತ್ನವನ್ನಂತೂ ಮಾಡೋದೇ ಇಲ್ಲ. ಇಷ್ಟ ಇದ್ದರೆ ನಾನು ಇದ್ದಂಗೇ ಬಳಸಿಕೊಳ್ಳಿ. ಅಥವಾ ನನಗೆ ಹೊಂದುವ ಕಥೆಯನ್ನು ರೆಡಿ ಮಾಡಿಕೊಳ್ಳಿ. ಪಾತ್ರಗಳಿಗಾಗಿ ನಾನು ಚೇಂಜ್‌ ಆಗೋದಿಲ್ಲ… ಅಂತಾ ಕೂಡಾ ಹೇಳಿಬಿಟ್ಟಿರುವ ನಟ ಈತ.

ವರ್ಷಕ್ಕೊಂದು ಚಿತ್ರದಲ್ಲಿ ನಟಿಸುವ ಅಜಿತ್‌, ಬೇರೆ ಸಮಯದಲ್ಲಿ ಯಾರೆಂದರೆ ಯಾರ ಕೈಗೂ ಸಿಗೋದಿಲ್ಲ. ನಟನೆಯ ಜೊತೆ ಬೈಕ್‌ ರೇಸರ್‌ ಕೂಡಾ ಆಗಿರುವ ತಲಾ ಅಜಿತ್ ತಮ್ಮ ಪಾಡಿಗೆ ತಾವು ಬೈಕು ಎತ್ತಿಕೊಂಡು ಎಲ್ಲೆಂದರಲ್ಲಿ ಹೊರಟುಬಿಡುತ್ತಾರೆ. ಇನ್ನು ಯಾವ ಟೀವಿ ಅಥವಾ ಪತ್ರಿಕೆಗಳಿಗೂ ಅಜಿತ್‌ ಸಂದರ್ಶನ ನೀಡುವುದಿಲ್ಲ. ಮೇಲ್ನೋಟಕ್ಕೆ ಇವೆಲ್ಲಾ ವಿಚಿತ್ರ ಅನ್ನಿಸೋದು ಹೌದು. ಅಷ್ಟೇ ಯಾಕೆ, ʻನನ್ನ ಹೆಸರಿನಲ್ಲಿ ಯಾವ ಅಭಿಮಾನಿ ಸಂಘಗಳೂ ತಲೆಯೆತ್ತಬಾರದುʼ ಎಂದು ಹೇಳಿ ಇದ್ದ ಸಂಘಗಳನ್ನೂ ಮುಚ್ಚಿಹಾಕಿದ ವಿಚಿತ್ರ ಕ್ಯಾರೆಕ್ಟರ್ರು ಈ ಅಜಿತ್.‌

ಅಜಿತ್‌ ಗುಣವನ್ನು ಕಂಡವರು ʻಈ ವ್ಯಕ್ತಿ ಇರೋದೇ ಹಾಗೆ. ಹೇಗಾದರೂ ಇದ್ದುಕೊಳ್ಳಲಿ, ವರ್ಷಕ್ಕೊಂದು ಸಿನಿಮಾ ಮಾಡುತ್ತಿದ್ದರೆ ಸಾಕು.ʼ ಅಂತಾ ಸುಮ್ಮನಾಗಿಬಿಟ್ಟಿದ್ದಾರೆ. ಅಗಣಿತ ಅಭಿಮಾನಿಗಳನ್ನು ಹೊಂದಿರುವ ಸೂಪರ್‌ ಸ್ಟಾರ್‌ವೊಬ್ಬ ಹೀಗೆ ಬದುಕುತ್ತಿರುವುದು ನಿಜಕ್ಕೂ ಅಚ್ಚರಿ ವಿಚಾರವೇ.

ಇವೆಲ್ಲದರ ನಡುವೆ ತಮಿಳಿನ ಹಿರಿಯ ಪತ್ರಕರ್ತರು, ಮಾಧ್ಯಮದವರು ಅಜಿತ್‌ ಗೆ ನೇರಾನೇರವಾಗಿ ತಿವಿಯಲು ಶುರು ಮಾಡಿದ್ದಾರೆ. ʻʻಯಾರೂ ಮಾಡದ ರೂಲ್ಸುಗಳನ್ನೆಲ್ಲಾ ಮಾಡುವ ಈತ ಏನು ದೇವರಾ? ಇವನೊಬ್ಬ ಸರ್ವಾಧಿಕಾರಿ ಮನಸ್ಥಿತಿಯವನು. ದುರಹಂಕಾರಿ ನಟ. ಯಾರೊಬ್ಬರಿಗೂ ನಯಾಪೈಸೆಯ ಸಹಾಯ ಮಾಡದ ಸ್ವಾರ್ಥಿ. ಸ್ವಂತ ಭಾಮೈದನನ್ನು ಬೆಳೆಸಲೂ ಹಿಂದೇಟು ಹಾಕುತ್ತಿರುವ ದುಷ್ಟ….. ಅಂತೆಲ್ಲಾ ಲೇವಡಿ ಮಾಡಿದ್ದಾರೆ. ತಮಿಳು ಚಿತ್ರರಂಗಕ್ಕೆ ಗೌರವ ಕೊಡ ಈ ನಟನನ್ನು ಸಾರಾಸಗಟಾಗಿ ಬಹಿಷ್ಕರಿಸಬೇಕು. ಬ್ಯಾನ್‌ ಮಾಡಿದರಷ್ಟೇ ಈತ ಬುದ್ದಿ ಕಲಿಯೋದು…. ಅಂತಾ ಗುಡುಗಿದ್ದಾರೆ.

ತಮಿಳಿನ ಹಿರಿಯ ಚಲನಚಿತ್ರ ಪತ್ರಕರ್ತ ಅಂದಾನನ್‌ ಏಕಾಏಕಿ ಬ್ಯಾನ್‌ ಮಾಡಬೇಕು ಅಂತಾ ಅಬ್ಬರಿಸಿರುವುದು ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಅಜಿತ್‌ ನಡೆದುಕೊಳ್ಳುವ ರೀತಿ ಸರಿಯಲ್ಲ ಅಂತಾ ಅನ್ನಿಸಿದವರು ಅಂದಾನನ್‌ ಅವರಿಗೆ ಸಪೋರ್ಟ್‌ ಮಾಡಿದ್ದಾರೆ. ಇನ್ನು ಅಜಿತ್‌ ಅವರ ಹಾರ್ಡ್‌ ಕೋರ್‌ ಅಭಿಮಾನಿಗಳು ಅಂದಾನನ್‌ ಅವರ ಮೇಲೆ ಯಥಾಪ್ರಕಾರ ಕೆಟ್ಟಾಕೊಳಕಾಗಿ ಮಾತಾಡಿದ್ದಾರೆ. ಸದ್ಯಕ್ಕೆ ನಟ ಅಜಿತ್‌ ಅವರ ಪರ ಮತ್ತು ವಿರೋಧದ ಮಾತುಗಳು ಟಾಲಿವುಡ್ಡಿನಲ್ಲಿ ಬಿರುಗಾಳಿ ಎಬ್ಬಿಸಿವೆ…

ಇನ್ನಷ್ಟು ಓದಿರಿ

Scroll to Top