`ಕಲ್ಜಿಗ’ ಪೋಸ್ಟರ್ ಹೇಗಿದೆ ನೋಡಿ!

Picture of Cinibuzz

Cinibuzz

Bureau Report

ಕರಾವಳಿ ಸೀಮೆಯಿಂದ ಕನ್ನಡ ಚಿತ್ರರಂಗಕ್ಕೆ ಈಗಾಗಲೇ ಅನೇಕರು ಆಗಮಿಸಿದ್ದಾರೆ. ಒಂದಷ್ಟು ಗೆಲುವನ್ನೂ ದಾಖಲಿಸಿದ್ದಾರೆ. ಇದೀಗ `ಕಲ್ಜಿಗ’ ಎಂಬ ಚಿತ್ರದ ಮೂಲಕ ಮತ್ತೊಂದು ತಂಡ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದೆ. ಶೀರ್ಷಿಕೆಯಲ್ಲಿಯೇ ಕೌತುಕ ಬೆರೆತ ಸೆಳೆತವೊಂದನ್ನು ಬಚ್ಚಿಟ್ಟುಕೊಂಡಂತಿರುವ ಈ ಚಿತ್ರದ ಟೈಟಲ್ ಹಾಗೂ ಪೋಸ್ಟರ್ ಇದೀಗ ಅನಾವಣಗೊಂಡಿದೆ. ಚಿತ್ರತಂಡ, ನಾನಾ ಕ್ಷೇತ್ರದ ಗಣ್ಯರು ಮತ್ತು ನಾದಬ್ರಹ್ಮ ಹಂಸಲೇಖ ಸಮ್ಮುಖದಲ್ಲಿ ಕಲ್ಜಿಗದ ಟೈಟಲ್ ಹಾಗೂ ಪೋಸ್ಟರ್ ಬಿಡುಗಡೆಗೊಂಡಿದೆ.
ಹಿಮಾನಿ ಫಿಲಂಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ ಕಲ್ಜಿಗ ಚಿತ್ರವನ್ನು ಸುಮನ್ ಸುವರ್ಣ ನಿರ್ದೇಶನ ಮಾಡಿದ್ದಾರೆ. ವಿಶೇಷವೆಂದರೆ, ಬಹು ಕಾಲದ ನಂತರ ನಾದಬ್ರಹ್ಮ ಹಂಸಲೇಖ ಈ ಸಿನಿಮಾ ಮೂಲಕ ಸಂಗೀತ ನಿರ್ದೇಶನಕ್ಕೆ ಮರಳಿದ್ದಾರೆ. ಗೀತರಚನೆಯತ್ತಲೂ ಹೊರಳಿಕೊಂಡಿದ್ದಾರೆ. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಖುದ್ದು ಹಂಸಲೇಖ ಅವರೇ ಹಾಜರಿದ್ದರು. ಈ ಸಂದರ್ಭದಲ್ಲಿ ಚಿತ್ರತಂಡವನ್ನು ಮೆಚ್ಚಿಕೊಳ್ಳುತ್ತಲೇ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ನಲವತ್ತಕ್ಕೂ ಹೆಚ್ಚು ಸಿನಿಮಾಗಳ ಆಫರ್ ಗಳನ್ನು ತಿರಸ್ಕರಿಸಿ, ಕಲ್ಜಿಗ ಚಿತ್ರದತ್ತ ಆಕರ್ಷಿತರಾದುದಕ್ಕೆ ಕಾರಣಗಳನ್ನು ಬಿಚ್ಚಿಟ್ಟರು. ಒಟ್ಟಾರೆಯಾಗಿ, ನಾದಬ್ರಹ್ಮನ ಮಾತುಗಳಲ್ಲಿ ಒಂದಿಡೀ ಚಿತ್ರ ಮೂಡಿ ಬಂದಿರಬಹುದಾದ ರೀತಿಯ ಬಗ್ಗೆ ಮೆಚ್ಚುಗೆ ಹೊಮ್ಮುತ್ತಿತ್ತು.

Kaliga_Tulu_Kannada_cinibuzz
Kaliga_Tulu_Kannada_cinibuzz

ಇನ್ನುಳಿದಂತೆ, ಗಿರ್ ಗಿಟ್, ಸರ್ಕಸ್, ಗಮ್ಜಾಲ್ ಮುಂತಾದ ಚಿತ್ರಗಳಲ್ಲಿ ನಿರ್ದೇಶನ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದ ಸುಮನ್ ಸುವರ್ಣ `ಕಲ್ಜಿಗ’ದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ತುಳು ಚಿತ್ರರಂಗದಲ್ಲಿ ಕಿಂಗ್ ಆಫ್ ಆಕ್ಷನ್ ಎಂಬ ಬಿರುದಾಂಕಿತರಾಗಿರುವ ಅರ್ಜುನ್ ಕಾಪಿಕಾಡ್ ಈ ಚಿತ್ರದ ನಾಯಕನಾಗಿ ನಟಿಸಿದ್ದಾರೆ. ಅಪ್ಪಟ ಕನ್ನಡತಿ ಸುಶ್ಮಿತಾ ಭಟ್ ನಾಯಕಿಯಾಗಿ ಜೊತೆಯಾಗಿದ್ದಾರೆ. ಎಸ್ ಕೆ ಗ್ರೂಪ್ ಎಂಬ ಮಾರ್ಕೆಟಿಂಗ್ ಸಂಸ್ಥೆಯ ಮಾಲೀಕರಾಗಿರುವ ಶರತ್ ಕುಮಾರ್ ಎ.ಕೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಸದ್ಯದ ಮಟ್ಟಿಗೆ ಕಲ್ಜಿಗದ ಆಂತರ್ಯವನ್ನು ಚಿತ್ರತಂಡ ಗೌಪ್ಯವಾಗಿಟ್ಟಿದೆ. ಈಗಾಗಲೇ ಉಡುಪಿ, ಮಂಗಳೂರು ಸುತ್ತಮುತ್ತಲ ಪ್ರದೇಶಗಳಲ್ಲಿ ಚಿತ್ರೀಕರಣ ಮುಕ್ತಾಯವಾಗಿದೆ. ಇದೀಗ ಮುಕ್ಕಾಲು ಭಾಗ ಪೋಸ್ಟ್ ಪ್ರೊಡಕ್ಷನ್ ಕಾರ್ಯವೂ ಸಮಾಪ್ತಿಗೊಂಡಿದೆ. ಮಂಗಳೂರು ಸೀಮೆಯ ಕನ್ನಡ ಭಾಷಾ ಶೈಲಿಯಲ್ಲಿ ತಯಾರಾಗಿರುವ ಈ ಚಿತ್ರವನ್ನು ತುಳುವಿಗೆ ಡಬ್ ಮಾಡಲಾಗಿದೆಯಂತೆ. ಧರ್ಮದ ದಾರಿಯಲ್ಲಿ ಅಧರ್ಮದ ನೆರಳು ಬಿದ್ದ ನಂತರದಲ್ಲಿ ಘಟಿಸುವ ರೋಚಕ ಕಥನ ಕಲ್ಜಿಗದಲ್ಲಿದೆಯಂತೆ. ಈ ಪೋಸ್ಟರ್ ಮತ್ತು ಟೈಟಲ್ ಅನಾವರಣದ ವೇದಿಕೆಯಲ್ಲಿ ಚಿತ್ರತಂಡದ ಕಡೆಯಿಂದ ಇವಿಷ್ಟು ಮಾಹಿತಿಗಳು ಜಾಹೀರಾಗಿವೆ.

ಈ ಸಂದರ್ಭದಲ್ಲಿ ಛಾಯಾಗ್ರಾಹಕ ಸಚಿನ್ ಶೆಟ್ಟಿ, ಕುಲದಲ್ಲಿ ಕೀಳ್ಯಾವುದೋ ಸಿನಿಮಾ ನಿರ್ಮಾಪಕ ಸಂತೋಷ್ ಕುಮಾರ್, ನಿರ್ವತ್ತ ಪೊಲೀಸ್ ಅಧಿಕಾರಿ ಶಿವಪ್ರಕಾಶ್ ಮತ್ತು ಚಿತ್ರತಂಡ ಹಾಜರಿತ್ತು. ಹಂಸಲೇಖ ಸಂಗೀತ, ಸಾಹಿತ್ಯ, ಸಚಿನ್ ಶೆಟ್ಟಿ ಛಾಯಾಗ್ರಹಣ, ಪ್ರಸಾದ್ ಕೆ ಶೆಟ್ಟಿ ಹಿನ್ನೆಲೆ ಸಂಗೀತ, ಯಶ್ವಿನ್ ಕೆ ಶೆಟ್ಟಿಗಾರ್ ಸಂಕಲನ ಈ ಚಿತ್ರಕ್ಕಿದೆ. ಕಾಂತಾರ ಖ್ಯಾತಿಯ ಸನೀಲ್ ಗುರು ಕ್ರಿಯೇಟಿವ್ ಹೆಡ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ರಾಧಾಕೃಷ್ಣ ಮಾಣಿಲ, ಪ್ರೊಡಕ್ಷನ್ ಮ್ಯಾನೇಜರ್ ಆಗಿ ಸಂದೀಪ್ ಶೆಟ್ಟಿ `ಕಲ್ಜಿಗ’ಕ್ಕೆ ಕೈ ಜೋಡಿಸಿದ್ದಾರೆ. ಈಗಾಗಲೇ ಕಲ್ಜಿಗ ಸೆಪೆಂಬರ್ ತಿಂಗಳಲ್ಲಿ ತೆರೆಗಾಣೋದು ಖಾತರಿಯಾಗಿದೆ. ಪೋಸ್ಟ್ ಪ್ರೊಡಕ್ಷನ್ ಕಾರ್ಯ ಸಂಪೂರ್ಣಗೊಂಡ ನಂತರದಲ್ಲಿ ಚಿತ್ರತಂಡ ಮತ್ತೊಂದಷ್ಟು ವಿಚಾರಗಳೊಂದಿಗೆ ಪ್ರೇಕ್ಷಕರನ್ನು ತಲುಪಿಕೊಳ್ಳಲಿದೆ.

  • ಪತ್ರಿಕಾ ಪ್ರಚಾರಕರ್ತರು : ಜಯಸೂರ್ಯ

ಇನ್ನಷ್ಟು ಓದಿರಿ

Scroll to Top