ಶ್ಯಾನೆ ಲೇಟಾಯ್ತು!

Picture of Cinibuzz

Cinibuzz

Bureau Report

ಇದೇ ಏಪ್ರಿಲ್‌ ಹತ್ತೊಂಭತ್ತನೇ ತಾರೀಖು ಬಂದರೆ, ದುನಿಯಾ ವಿಜಯ್‌ ಅವರ ಭೀಮ ಸಿನಿಮಾ ಆರಂಭಗೊಂಡು ಎರಡು ವರ್ಷಗಳಾಗುತ್ತಿವೆ. ಕಳೆದ ಒಂದು ವರ್ಷದ ನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಭೀಮ ಬರುತ್ತಲೇ ಇದೆ. ೨೦೨೨ರಲ್ಲಿ ಶುರುವಾದ ಸಿನಿಮಾ ಕಡೇ ಪಕ್ಷ ೨೦೨೩ರಲ್ಲಿ ಬಿಡುಗಡೆಯಾಗಬಹುದು ಅನ್ನೋದು ಎಲ್ಲರ ನಂಬಿಕೆಯಾಗಿತ್ತು. ಆದರೆ, ಭೀಮ ಬಿಡುಗಡೆ ದಿನಾಂಕ ಪದೇ ಪದೇ ಮುಂದೆ ಹೋಗಿದೆ. ಹಾಗೆ ನೋಡಿದರೆ ಈ ಎರಡು ವರ್ಷಗಳಲ್ಲಿ ಅತಿ ಹೆಚ್ಚು ಪ್ರಚಾರ ಪಡೆದ ಚಿತ್ರ ಇದಾಗಿದೆ.

ಸಾಮಾನ್ಯವಾಗಿ ಟೀಸರು, ಹಾಡುಗಳು ಬಂದ ಕೆಲವೇ ದಿನಗಳಲ್ಲಿ ಸಿನಿಮಾವನ್ನು ತೆರೆಗೆ ತಂದುಬಿಡುತ್ತಾರೆ. ʻಕೌನ್ರೆ ಉನೇ ಹಾಡುʼ ಜಗದ್ವಿಖ್ಯಾತಿಯಾಗಿತ್ತು. ಅದಾದನಂತರ ʻಲವ್‌ ಯು ಕಣೇʼ ಹಾಡು ಕೂಡಾ ಸೂಪರ್‌ ಹಿಟ್‌ ಆಗಿತ್ತು. ಇದರ ಜೊತೆಗೆ ಫಸ್ಟ್‌ ಲುಕ್ಕು, ಟೀಸರುಗಳೂ ಚೆನ್ನಾಗೇ ಸೌಂಡು ಮಾಡಿದ್ದವು. ಇಷ್ಟೊಳ್ಳೆ ಪಬ್ಲಿಸಿಟಿಯಾಗುತ್ತಿರುವ ಹೊತ್ತಲ್ಲೇ ಫಿಲಮ್ಮನ್ನು ರಿಲೀಸ್‌ ಮಾಡಿದ್ದಿದ್ದರೆ ಸರಿಯಿರುತ್ತಿತ್ತು. ಅದ್ಯಾವ ಕಾರಣಕ್ಕೆ ಇಷ್ಟು ದಿನ ಬಿಡುಗಡೆಯನ್ನು ಮುಂದೂಡಿದರೋ ಗೊತ್ತಿಲ್ಲ. ʻಈಗ ಎಲೆಕ್ಷನ್‌ ಕಾರಣಕ್ಕಾಗಿ ನಾವೇ ಸ್ವಲ್ಪ ಲೇಟ್‌ ಮಾಡ್ತಿದ್ದೀವಿ. ಚುನಾವಣೆ ಮುಗೀತಿದ್ದಂಗೇ ರಿಲೀಸ್‌ ಪ್ಲಾನ್‌ ಮಾಡ್ತೀವಿʼ ಅಂತಾ ಸಿನಿಮಾದ ನಿರ್ಮಾಪಕರಲ್ಲೊಬ್ಬರಾದ ಕೃಷ್ಣ ಸಾರ್ಥಕ್‌ ಹೇಳುತ್ತಿದ್ದಾರೆ. ಇತ್ತ ಕೋಬ್ರಾ ವಿಜಯ್‌ ಕುಮಾರ್‌ ಅವರು ಜಡೇಶ್‌ ನಿರ್ದೇಶನದ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಳ್ಳಲಿದ್ದಾರೆ. ಅದಾಗಲೇ ಒಂದೆರಡು ಸುತ್ತಿನ ಪ್ರಚಾರ ಮುಗಿಸಿರುವ ಭೀಮನನ್ನು ಈಗ ಫ್ರೆಷ್‌ಆಗಿ ಮತ್ತೊಂದು ರೌಂಡು ಪಬ್ಲಿಸಿಟಿ ಮಾಡಿ ಥೇಟರಿಗೆ ತಂದು ಬಿಡಬೇಕು. ಇವೆಲ್ಲಾ ಸ್ವತಃ ಚಿತ್ರತಂಡಕ್ಕೇ ಶ್ರಮವಲ್ಲವೇ?

ಇನ್ನಷ್ಟು ಓದಿರಿ

Scroll to Top