ಥರ್ಡ್‌ ಕೃಷ್ಣಪ್ಪನ ಸುತ್ತಾ ನಗುವಿನ ಥಂಡರ್!

Picture of Cinibuzz

Cinibuzz

Bureau Report

ಆ ಊರಿನ ಸಮಾರಂಭವೊಂದಕ್ಕೆ ಚೀಫ್ ಗೆಸ್ಟ್ ಆಗಿ ಸ್ಟಾರ್ ನಟ ಮೈಕೆಲ್ ಮಧು ಬರಬೇಕಿರುತ್ತದೆ. ಆದರೆ ಆತ ಅಚಾನಕ್ಕಾಗಿ ಇಹಲೋಕ ತ್ಯಜಿಸಿರುತ್ತಾನೆ. ಇನ್ನು ಅತಿಥಿಯನ್ನು ಕರೆಸಲು ಉಳಿದಿರುವ ಕಾಂಟ್ಯಾಕ್ಟು ಇರೋದು ಕೃಷ್ಣಪ್ಪನಿಗೆ ಮಾತ್ರ. ಆ ಊರಲ್ಲಿ ಮೂರು ಜನ ಕೃಷ್ಣಪ್ಪಗಳಿರುತ್ತಾರೆ. ಅದರಲ್ಲಿ ಮೂರನೇಯವನು ಗಣಿತದ ಮೇಷ್ಟ್ರು.

ಈ ಥರ್ಡ್ ಕೃಷ್ಣಪ್ಪನ ಸ್ನೇಹಿತನ ಮೂಲಕ ಊರಿಗೆ ಚೀಫ್‌ ಮಿನಿಸ್ಟರ್‌ ಅನ್ನು ಕರೆಸುವ ಪ್ರಯತ್ನವಾಗುತ್ತದೆ. ಈ ಹಂತದಲ್ಲಿ ಏನೇನಾಗುತ್ತದೆ? ಯಾರೆಲ್ಲಾ ಮೋಸ ಹೋಗುತ್ತಾರ್. ಫ್ರಾಡ್‌ ಅನ್ನುವ ಹಣೆಪಟ್ಟಿ ಕಟ್ಟಿಸಿಕೊಂಡ ಕೃಷ್ಣಪ್ಪ ತನ್ನ ಕಳಂಕವನ್ನು ತೊಳೆದುಕೊಳ್ಳಲು ಏನೇನು ಮಾಡುತ್ತಾನೆ? ಕಟ್ಟ ಕಡೆಯದಾಗಿ ಮುಖ್ಯಮಂತ್ರಿಗಳು ಈ ಊರಿಗೆ ಬರುತ್ತಾರಾ? ನಡುವೆ ಬಂದು ಹೋಗು ಹೆಣ್ಣುಮಗಳು ಯಾರು? ಊರಿನ ಪಂಚಾಯ್ತಿ ಪ್ರೆಸಿಡೆಂಟನ ವಿಧವೆ ಮಗಳು ಕೃಷ್ಣಪ್ಪನ ಜೊತೆಯಾಗುತ್ತಾಳಾ? – ಈ ರೀತಿಯ ಹಲವು ಬಗೆಯ ಪ್ರಶ್ನೆಗಳಿಗೆ ಉತ್ತರ ನೀಡುವ ಚಿತ್ರ ಮೂರನೇ ಕೃಷ್ಣಪ್ಪ.

ಈ ಇಡೀ ಚಿತ್ರವನ್ನು ಕೋಲಾರ, ಚಿಕ್ಕಬಳ್ಳಾಪುರ ಸೀಮೆಯ ಭಾಷೆಯನ್ನು ಬಳಿಸಿಕೊಂಡಿದ್ದಾರೆ. ಎಲ್ಲದಕ್ಕೂ ʻಗಳುʼ ಸೇರಿಸಿಕೊಂಡು ಮಾತಾಡುವ ಪಾತ್ರಗಳು ಮಜವಾಗಿವೆ. ಸಂಪತ್ ಮೈತ್ರೇಯ ಅದ್ಭುತ ನಟ ಅಂತಾ ಎಲ್ಲರಿಗೂ ಗೊತ್ತು. ಮೂರನೇ ಕೃಷ್ಣಪ್ಪನಾಗಿ ಸಂಪತ್‌ ಇಲ್ಲಿ ಕಾಣಿಸಿಕೊಂಡಿರುವ ಬಗೆ ಅವರ ಬಗೆಗಿನ ಗೌರವವನ್ನು ಮತ್ತಷ್ಟು ಹೆಚ್ಚಿಸುತ್ತದೆ.‌ ರಂಗಾಯಣ ರಘು ಕೂಡಾ ಅಷ್ಟೇ ಚೆಂದಗೆ ಅಭಿನಯಿಸಿದ್ದಾರೆ. ಸಂಪತ್‌ ಮತ್ತು ರಂಗಾಯಣ ರಘು ಎನ್ನುವ ನಟ ರಾಕ್ಷಸರ ಮುಂದೆ ಮತ್ತೊಂದು ಪಾತ್ರ ಎದ್ದು ನಿಲ್ಲುತ್ತದೆ. ಅದು ಉಗ್ರಂ ಮಂಜು ಅವರ ಕ್ಯಾರೆಕ್ಟರು. ಇಡೀ ಚಿತ್ರದಲ್ಲಿ ಮಂಜು ಒಂದೇ ಲೊಕೇಷನ್ನಿನಲ್ಲಿ ವೆರೈಟಿ ವೆರೈಟಿಯಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಇಡೀ ಸಿನಿಮಾಗೆ ಕನೆಕ್ಟ್‌ ಆಗುತ್ತಾರೆ. ಇಷ್ಟು ದಿನ ಭಯ ಪಡಿಸುತ್ತಿದ್ದ ಮಂಜು ಇಲ್ಲಿ ಭಯಂಕರ ನಗಿಸುತ್ತಾರೆ. ಅದರ ಜೊತೆಗೆ ಸದಾ ಪ್ರೆಸಿಡೆಂಟ್‌ ಜೊತೆ ಇರುವ ನಟ ಕೂಡಾ ಸಹಜ ಅಭಿನಯದಿಂದ ನಗು ಹುಟ್ಟಿಸುತ್ತಾರೆ.

ನಿರ್ದೇಶಕ ನವೀನ್ ಸರಳ ಕಥೆಯೊಂದಕ್ಕೆ ಸಾಕಷ್ಟು ಫನ್ ಸೇರಿಸಿ ಸಿನಿಮಾದಿಂದ ಆರಂಭದಿಂದ ಕೊನೆಯ ತನಕ ನೋಡುಗರನ್ನು ನಕ್ಕುನಗಿಸುವಲ್ಲಿ ಗೆದ್ದಿದ್ದಾರೆ. ಆನಂದ್ ರಾಜಾ ವಿಕ್ರಂ ಮತ್ತು ಸುಪ್ರೀತ್ ಶರ್ಮಾ ಸಂಗೀತ ಮತ್ತು ಹಿನ್ನೆಲೆ ಸಂಗೀತ ಕಥೆ ಮತ್ತು ಅದು ನಡೆಯುವ ಜಾಗಕ್ಕೆ ಸರಿ ಹೊಂದಿದೆ. ಯೋಗಿ ಛಾಯಾಗ್ರಹಣ ಕೂಡಾ ಊರಿನ ಪರಿಸರವನ್ನು ಕಟ್ಟಿಕೊಟ್ಟಿದೆ…

‌ತಮಾಷೆಯ ಜೊತೆಗೆ ತುಂಬಾ ಕಾಡುವ ಅಂಶಗಳನ್ನು ಸೇರಿಸಿ ರೂಪಿಸಿರುವ ಮೂರನೇ ಕೃಷ್ಣಪ್ಪನನ್ನು ಮಿಸ್‌ ಮಾಡದೇ ನೋಡಿ!

ಇನ್ನಷ್ಟು ಓದಿರಿ

Scroll to Top