ಜಯಣ್ಣನ ಹೋಟೇಲಲ್ಲಿ ಹಿಟ್ಟು ರುಬ್ಬುತ್ತಿರುವ ಸೂರಿ!

Picture of Cinibuzz

Cinibuzz

Bureau Report

ಸಿನಿಮಾ ಇಂಡಸ್ಟ್ರಿ ಇರೋದೇ ಹೀಗೆ. ಅತಿ ಉತ್ಸಾಹದಲ್ಲಿ ಮಾಡಿಕೊಂಡ ಯಡವಟ್ಟುಗಳಿಗೆ ಇಲ್ಲಿ ಬಡ್ಡಿ ಸಮೇತ ಸಾಲ ತೀರಿಸಬೇಕು. ಸೋಲು ಗೆಲುವುಗಳೇನೇ ಇರಲಿ. ದುನಿಯಾ ಸೂರಿ ಕನ್ನಡ ಚಿತ್ರರಂಗದ ಮಟ್ಟಿಗೆ ಸ್ಟಾರ್ ಡೈರೆಕ್ಟರ್ ಅನ್ನೋದರಲ್ಲಿ ಡೌಟಿಲ್ಲ. ಒಂದು ಬ್ಲಾಕ್ ಬಸ್ಟರ್ ಸಿನಿಮಾ ಕೊಟ್ಟ ಬೆನ್ನಿಗೇ ಪರಮತೋಪು ಚಿತ್ರವನ್ನು ಕೊಡೋದು ಸೂರಿ ವರಸೆ. ಈ ನಿಟ್ಟಿನಲ್ಲಿ ಪಾಪ್ಕಾರ್ನ್ ಮಂಕಿ ಮಕಾಡೆ ಮಲಗಿದಮೇಲೆ ಬಂದಿದ್ದು ಬ್ಯಾಡ್ ಮ್ಯಾನರ್ಸ್. ನಿಯಮದಂತೆ ಈ ಸಲ ಬ್ಯಾಡ್ ಮ್ಯಾನರ್ಸ್ ಗೆಲ್ಲಬಹುದು ಅನ್ನೋ ನಂಬಿಕೆಯಿತ್ತು. ಆದರೆ, ಈ ಸಲ ಅಂದುಕೊಂಡಿದ್ದು ನೆರವೇರಲಿಲ್ಲ.
ಬ್ಯಾಡ್ ಮ್ಯಾನರ್ಸ್ ಸಿನಿಮಾಗೆ ಸೂರಿ ಕೂಡಾ ಒಂದು ಕೋಟಿ ರುಪಾಯಿ ಇನ್ವೆಸ್ಟ್ ಮಾಡಿದ್ದರು. ಇದರ ಜೊತೆಗೆ ಇತ್ತೀಚೆಗೆ ತೆರೆಗೆ ಬಂದ ತಮ್ಮದೇ ಶಿಷ್ಯ ಅಭಿ ನಿರ್ದೇಶನದ ಸೋಮು ಸೌಂಡ್ ಇಂಜಿನಿಯರ್ ಸಿನಿಮಾ ರಿಲೀಸ್ ಟೈಮಿಗೆ ಸೂರಿ ಮೂವತ್ತು ಲಕ್ಷ ಹೊಂಚಿಕೊಟ್ಟಿದ್ದರಂತೆ.

ಸೋಮು ಸೌಂಡ್ ಇಂಜಿನಿಯರ್ ಬಗ್ಗೆ ಇದ್ದ ಟಾಕ್ ನೋಡಿದರೆ ಈ ಸಿನಿಮಾ ಅದ್ಭುತ ಯಶಸ್ಸು ಕಾಣುತ್ತದೆ ಅನ್ನೋ ಕಲ್ಪನೆಯಿತ್ತು. ಆದರೆ ಸೌಂಡ್ ಇಂಜಿನಿಯರ್ಗೆ ಪ್ರೇಕ್ಷಕರನ್ನು ಮೆಚ್ಚಿಸುವ ಯಾವ ಅರ್ಹತೆಯೂ ಇರಲಿಲ್ಲ. ಸೂರಿಯ ನಸೀಬು ಕೆಟ್ಟಿದ್ದರಿಂದ ಎರಡೂ ಚಿತ್ರಗಳು ಕೈಕೊಟ್ಟವು. ಈ ಎರಡೂ ಸಿನಿಮಾಗಾಗಿ ಸೂರಿ ಸ್ವಂತ ದುಡ್ಡನ್ನೇನೂ ಕೊಟ್ಟಿರಲಿಲ್ಲ. ನಿರ್ಮಾಪಕ ಜಯಣ್ಣ ಅವರ ಬಳಿ ಬಡ್ಡಿಗೆ ಕಡ ತಂದಿದ್ದರು. ಸಿನಿಮಾಗಾಗಿ ಮಾಡಿದ ಸಾಲದಲ್ಲಿ ಯಾವೊಬ್ಬ ಫೈನಾನ್ಷಿಯರುಗಳೂ ನಯಾ ಪೈಸೆಯನ್ನೂ ಮನ್ನಾ ಮಾಡೋದಿಲ್ಲ. ಧೀರ ನಿರ್ಮಾಪಕರಾದರೆ ಕಾಸು ಈಸಿಕೊಂಡು ವಾಪಾಸು ಕೊಡದಿದ್ದರೆ ಎತ್ತಾಕೊಂಡು ಬಂದು ರೂಮಿಗೆ ಹಾಕಿಕೊಂಡು ತದುಕುತ್ತಾರೆ. ಸಾಲ ಮಾಡಿದವನು ತನ್ನ ಚರ-ಚಿರ ಆಸ್ತಿಯನ್ನು ಬರೆದುಕೊಡೋ ತನಕ ಮುಕ್ತಿ ಕೊಡಲ್ಲ.

ಮೊದಲೆಲ್ಲಾ ಹೊಟೇಲಲ್ಲಿ ತಿಂದು ಕಾಸು ಕೊಡದೇ ಹೋದರೆ, ಒಳಗಿರುವ ಗ್ರೈಂಡರನ್ನು ಆಫ್ ಮಾಡಿ ಹಿಟ್ಟು ರುಬ್ಬಲು ಕೂರಿಸುತ್ತಿದ್ದರಲ್ಲಾ? ಅದೇ ಥರ ಸಾಲ ವಾಪಾಸು ಕೊಡದವರನ್ನು ಜಯಣ್ಣ ತಮ್ಮ ಆಫೀಸಿಗೆ ತಂದು ಕೂರಿಸಿಕೊಳ್ಳುತ್ತಾರೆ. ಸದ್ಯ ಜಯಣ್ಣನು ಸೂರಿಯನ್ನು ಕರಕೊಂಡು ಬಂದು ಕುಕ್ಕರಗಾಲಲ್ಲಿ ಕೂರಿಸಿ ಕಥೆ ರೆಡಿ ಮಾಡಲು ಬಿಟ್ಟಿದ್ದಾರೆ. ಈಗ ಸೂರಿ ಕಿಸ್ ಸಿನಿಮಾ ಹೀರೋ ವಿರಾಟ್ ಗಾಗಿ ಹೊಸಾ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರಲ್ಲಾ? ಅದು ಜಯಣ್ಣನ ಸಾಲ ತೀರಿಸುವ ಸ್ಕೀಮಿಗಾಗಿ.

ಜಯಣ್ಣ ಸೂರಿಗೆ ಮತ್ತೊಂದು ಆಪ್ಷನ್ ಕೊಟ್ಟಿದ್ದರು. ಅದೇನೆಂದರೆ, ʻಹೇಗಾದರೂ ಮಾಡಿ ದರ್ಶನ್ ಡೇಟ್ಸ್ ತಗೊಂಬಾ. ನೀನು ಮಾಡಿರುವ ಸಾಲವನ್ನು ಪೂರ್ತಿ ಮನ್ನಾ ಮಾಡ್ತೀನಿ. ಅದರ ಜೊತೆಗೆ ಇನ್ನೂ ಒಂಚೂರು ಪೇಮೆಂಟನ್ನೂ ಕೊಡ್ತೀನಿʼ ಅಂದಿದ್ದರು. ಸೂರಿಯ ಹಣೇಬರಹಕ್ಕೆ ಕಳೆದ ಹದಿನೆಂಟು ವರ್ಷಗಳಿಂದಲೂ ಸೂರಿ ಹೇಳಿದ ಯಾವ ಕಥೆಯನ್ನೂ ದರ್ಶನ್ ಓಕೆ ಮಾಡೇ ಇಲ್ಲ. ಅದೂ ಅಲ್ಲದೆ, ದರ್ಶನ್ ಪಾಲಿನ ಹಳೆಯ ವೈರಿಯಗಳ ಲಿಸ್ಟಿನಲ್ಲಿ ಮೊದಲಿರುವ ಹೆಸರೇ ಬಹುಶಃ ಜಯಣ್ಣನವರದ್ದು. ಜಯಣ್ಣ ಮತ್ತು ದರ್ಶನ್ ಸ್ನೇಹ ಬ್ರೇಕಪ್ ಆಗಿ ಬರೋಬ್ಬರಿ ಹದಿನೈದು ವರ್ಷಗಳೇ ಕಳೆದಿವೆ. ಒಂದು ಸಲಕ್ಕೆ ಯಾರ ಮೇಲಾದರೂ ಮಚ್ಚರ ಇಟ್ಟರೆ ಮತ್ತೆ ಅದನ್ನು ಮರೆಯದೇ ಕಾಲಾನುಕಾಲಕ್ಕೆ ರಿನೀವಲ್ ಮಾಡಿಕೊಂಡು ಸಾಗುವುದು ದರ್ಶನ್ ಗುಣ. ಹೀಗಿರುವಾಗ ಜಯಣ್ಣನಿಗಾಗಿ ಸೂರಿ ಕಥೆ ಕೇಳಿದರೆ ದರ್ಶನ್ ಒಪ್ಪುವುದುಂಟೇ? ಅದು ಸಾಧ್ಯವಾಗದೇ ಇದ್ದಾಗ ಸೂರಿ ವಿಧಿ ಇಲ್ಲದೇ ಹಿಟ್ಟು ರುಬ್ಬಲು ಕುಂತಿದ್ದು!!
ಅರ್ಥವಾಯ್ತೇ?!

ಸದ್ಯ ಛಾಲೆಂಜಿಂಗ್ ಸ್ಟಾರೇ ದೊಡ್ಡದೊಂದು ಕ್ರೈಮ್ ಸ್ಟೋರಿಯ ಸೂತ್ರಧಾರನಾಗಿರುವಾಗ ಸೂರಿ ಅವರ ಹತ್ತಿರ ಹೋಗೋದೂ ಸಾಧ್ಯವಿಲ್ಲ….

ಇನ್ನಷ್ಟು ಓದಿರಿ

Scroll to Top