2.5/5
ಅದು ಉತ್ತರ ಕರ್ನಾಟಕದ ದೊಡ್ಡ ಕುಟುಂಬ. ಯಾವುದೋ ಕಾರಣಕ್ಕೆ ಮಗ-ಸೊಸೆ ಮನೆಯಿಂದ ದೂರವಾಗಿರುತ್ತಾರೆ. ದೇಸಾಯಿ ಮನೆತನದಲ್ಲಿ ಅನೇಕ ಘಟನೆಗಳು ನಡೆಯುತ್ತಿರುತ್ತವೆ. ಮನೆತನದ ಮರ್ಯಾದೆ ತೆಗೆಯಲು ನಿಂತವನೊಬ್ಬ. ಎಲ್ಲರನ್ನೂ ಒಟ್ಟುಮಾಡಲು ಬಂದವನೊಬ್ಬ. ಈ ನಡುವೆ ಚೆಲ್ಲಾಪಿಲ್ಲಿಯಾದ ಕುಟುಂಬ ಮತ್ತೆ ಜೊತೆಯಾಗಲು ಸಾಧ್ಯವಾಗುತ್ತದಾ? ಹಾಗೊಮ್ಮೆ ಎಲ್ಲರೂ ಸೇರುವುದಾದರೆ ಏನೆಲ್ಲಾ ವಿಚಾರಗಳು ಬಂದು ಹೋಗುತ್ತವೆ? ಎಂಬಿತ್ಯಾದಿ ವಿಚಾರಗಳ ಸುತ್ತ ಬೆಸೆದುಕೊಂಡಿರುವ ಕೌಟುಂಬಿಕ ಕಥಾಹಂದರದ ಚಿತ್ರ ದೇಸಾಯಿ.

ಒಂದು ಕಾಲದಲ್ಲಿ ಅಪ್ಪ ಅಮ್ಮನನ್ನು ತೊರೆದು ಬಂದ ಮಗ ತನ್ನ ಬದುಕಲ್ಲಿ ಮಗ ದೂರಾದಾಗ ಮನಸ್ಸು ಹೇಗೆ ವ್ಯಾಕುಲಗೊಳ್ಳುತ್ತದೆ…. ಛಿದ್ರವಾದ ಕುಟುಂಬವನ್ನು ಒಟ್ಟು ಸೇರಿಸುವ ಹುಡುಗನ ಮುಂದೆ ಎದುರಾಗುವ ಸವಾಲುಗಳು ಎಂಥವು? ಇವೆಲ್ಲಾ ದೇಸಾಯಿ ಸಿನಿಮಾದಲ್ಲಿ ತೆರೆದುಕೊಳ್ಳುತ್ತಾ ಸಾಗುತ್ತದೆ..
ವರ್ಷಾಂತರಗಳಿಂದ ಕನ್ನಡ ಮತ್ತು ತೆಲುಗು ನಿರ್ದೇಶಕರ ಬಳಿ ಸಹ ನಿರ್ದೇಶಕರಾಗಿ ದುಡಿದಿರುವ ನಾಗಿ ರೆಡ್ಡಿ ಭಡ ನಿರ್ದೇಶನದ ಚಿತ್ರವಿದು. ಈ ಹಿಂದೆ ಶಶಾಂಕ್ ಅವರ ಲೈಫ್ 360 ಸಿನಿಮಾ ಮೂಲಕ ಹೀರೋ ಆಗಿ ಲಾಂಚ್ ಆಗಿದ್ದ ಪ್ರವೀಣ್ ಈ ಚಿತ್ರದಲ್ಲೂ ನಾಯಕನಾಗಿ ನಟಿಸಿದ್ದಾರೆ. ದಕ್ಷಿಣ ಭಾರತದ ಹೆಸರಾಂತ ನಟ ಮಧುಸೂಧನ್ ರಾವ್ ದೇಸಾಯಿ ಕುಟುಂಬದ ಯಜಮಾನನಾಗಿ ನಟಿಸಿದ್ದಾರೆ. ಒರಟ ಪ್ರಶಾಂತ್ ಅಪರೂಪಕ್ಕೆ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಚೆಲುವರಾಜ್ ಮತ್ತು ಒರಟ ಪ್ರಶಾಂತ್ ಕಾಂಬಿನೇಷನ್ ಇಡೀ ಸಿನಿಮಾದಲ್ಲಿ ದೇಸಾಯಿ ಕುಟುಂಬವನ್ನು ಕಾಡಿದಂತೆ, ಪ್ರೇಕ್ಷಕರನ್ನೂ ಕಾಡುತ್ತಾರೆ.

ಮಧುಸೂಧನ್ ರಾವ್, ಪ್ರವೀಣ್, ರಾಧ್ಯ, ಕಲ್ಯಾಣಿ, ಹರಿಣಿ, ನಟನ ಪ್ರಶಾಂತ್, ಒರಟ ಪ್ರಶಾಂತ್, ಚೆಲುವರಾಜ್, ಆರತಿ ಕುಲಕರ್ಣಿ, ಮಂಜುನಾಥ ಹೆಗ್ಡೆ, ಕಾಂತಾರಾ ಸೃಷ್ಟಿ ಸೇರಿದಂತೆ ಸಾಕಷ್ಟು ಜನ ದೇಸಾಯಿ ಚಿತ್ರದಲ್ಲಿ ನಟಿಸಿದ್ದಾರೆ. ಇಷ್ಟೊಂದು ದೊಡ್ಡ ತಾರಾಗಣವಿರುವ ಚಿತ್ರ ಬಾಗಲಕೋಟೆ, ಬಾದಾಮಿ ಮೊದಲಾದ ಕಡೆ ಸಿನಿಮಾ ಚಿತ್ರೀಕರಣಗೊಂಡಿದೆ. ಬಾಗಲಕೋಟೆಯ ಆ ಹಳೇ ಬಂಗಲೆ ಕೂಡಾ ಚಿತ್ರದಲ್ಲಿ ಪ್ರಧಾನ ಪಾತ್ರ ವಹಿಸಿದೆ. ಇಷ್ಟೊಂದು ಜನ ಕಲಾವಿದರಿದ್ದರೂ ಗಮನ ಸೆಳೆಯೋದು ಕೆಲವರು ಮಾತ್ರ. ಒರಟ ಪ್ರಶಾಂತ್ ಹೊಸ ಲುಕ್ಕು, ಮ್ಯಾನರಿಸಮ್ಮು ವಿಶೇಷವಾಗಿದೆ. ಅದು ಬಿಟ್ಟರೆ ಹರಿಣಿಗೆ ಮಾತಿಲ್ಲದೇ ಬರಿಯ ಎಕ್ಸ್ಪ್ರೆಷನ್ನಿನಲ್ಲೇ ನಟಿಸಿದ್ದಾರೆ.
ಆರತಿ ಕುಲಕರ್ಣಿಗೆ ಕಡಿಮೆ ದೃಶ್ಯಗಳಿದ್ದರೂ ಹೆಚ್ಚು ಸ್ಕೋರ್ ಮಾಡಿಕೊಳ್ಳುತ್ತಾರೆ. ಕನ್ನಡದ ಪ್ರಮುಖ ಪೋಷಕ ನಟಿಯಾಗುವ ಸಾಧ್ಯತೆಯನ್ನು ಆರತಿ ತೋರಿದ್ದಾರೆ. ಪ್ರಮುಖವಾಗಿ ನಾಯಕನಟ ಪ್ರವೀಣ್ ಕುಮಾರ್ ತುಂಬಾನೇ ಡಲ್ ಅನಿಸುತ್ತಾರೆ. ಅನುಭವೀ ನಟರ ಮುಂದೆ ಪ್ರವೀಣ್ ಡೈಲಾಗ್ ಡೆಲಿವರಿ, ಅಭಿನಯಗಳೆಲ್ಲವೂ ಸಪ್ಪೆ ಅನ್ನಿಸುತ್ತದೆ. ಇವರು ಫೈಟ್ ಗಳಿಗೆ ಕೊಟ್ಟ ಮುತುವರ್ಜಿಯನ್ನು ನಟಿಸಲೂ ಕೊಟ್ಟಿದ್ದಿದ್ದರೆ ಚೆನ್ನಾಗಿರುತ್ತಿತ್ತು. ನಾಯಕಿ ರಾಧ್ಯ ಇರೋದರಲ್ಲೇ ಬೆಟರ್ ಅನ್ನಿಸುತ್ತದೆ. ನಟ ಮಧುಸೂದನ್ ರಾವ್ ಅವರಿಗೆ ಯಾರದ್ದೋ ಬಳಿ ಡಬ್ಬಿಂಗ್ ಮಾಡಿಸಿದ್ದಾರೆ. ಅದು ಮ್ಯಾಚ್ ಆಗಿಲ್ಲ. ಆರಂಭದ ಕುಸ್ತಿ ಅಖಾಡದ ಫೈಟ್ ಮತ್ತು ಕ್ಲೈಮ್ಯಾಕ್ಸ್ನಲ್ಲಿ ಬರುವ ಜೋಳದ ಹೊಲದಲ್ಲಿ ನಡೆಯುವ ಫೈಟ್ ವಿಶೇಷ ಅನ್ನಿಸುತ್ತದೆ.
ಕ್ಲೈಮ್ಯಾಕ್ಸ್ ಫೈಟ್ ಮೂಲಕ ಸಾಹಸ ನಿರ್ದೇಶಕ ಮಾಸ್ ಮಾದ ಮತ್ತೆ ಎದ್ದು ಬಂದಿದ್ದಾರೆ. ತೂರಿ ಬರುವ ಬಾಣ, ಮೈಗೆ ಸುತ್ತಿಕೊಳ್ಳುವ ಹಗ್ಗ, ಮೈ ಜುಮ್ಮೆನಿಸುವ ಸಾಹಸ ಮಜಾ ಕೊಡುತ್ತದೆ. ಸಿನಿಮಾದ ಮೊದಲ ಭಾಗದಲ್ಲಿ ಅನವಶ್ಯಕ ದೃಶ್ಯಗಳು ಕಿರಿಕಿರಿ ಅನ್ನಿಸಿದರೆ, ಎರಡನೇ ಭಾಗ ವೇಗವಾಗಿ ಸಾಗಿ ಸಮಾಧಾನ ನೀಡುತ್ತದೆ.
ಇವೆಲ್ಲವನ್ನೂ ಹೊರತುಪಡಿಸಿ, ಒಂದೊಳ್ಳೆ ಕೌಟುಂಬಿಕ ಕಥೆಯ ಎಳೆ ಸಿನಿಮಾವನ್ನು ಸಹ್ಯವಾಗಿಸುತ್ತದೆ. ಪಕ್ಕಾ ಕಮರ್ಷಿಯಲ್ ಫಾರ್ಮುಲಾದ ಚೌಕಟ್ಟಿನಲ್ಲಿ, ಉತ್ತರ ಕರ್ನಾಟಕದ ಭಾಷೆಯಲ್ಲಿ ಮೂಡಿಬಂದಿರುವ ದೇಸಾಯಿ ನೋಡುಗರನ್ನು ಒಂದಿಷ್ಟು ಕಾರಣಕ್ಕಾದರೂ ಮೆಚ್ಚಿಸುತ್ತದೆ.












































