ಅವನ ಬದುಕಿನಲ್ಲಿ ಅದೇನೇನಾಗಿರುತ್ತದೋ ಗೊತ್ತಿಲ್ಲ. ಸ್ವಂತಕ್ಕೊಂದು ಕ್ಯಾಬ್ ಇಟ್ಟುಕೊಂಡು ಡ್ರೈವರ್ ಕೆಲಸ ಮಾಡುತ್ತಿರುತ್ತಾನೆ. ಕಣ್ಣ ಸುತ್ತ ಕಪ್ಪು ಕವಿದಿರುತ್ತದೆ. ಇಸ್ತ್ರಿ ಇಲ್ಲದ ಬಟ್ಟೆ, ಬಾಡಿದ ಮುಖ, ಕಳಾಹೀನ ಕಣ್ಣುಗಳು. ಅವನನ್ನು ಕಂಡವರಿಗೆ ಬದುಕಿನಲ್ಲಿ ಏನೆಂದರೆ ಏನೂ ಉಳಿದಿಲ್ಲವೆನ್ನುವ ಭಾವ ಮೂಡುತ್ತದೆ. ಇದರ ಜೊತೆಗೆ ಟಿ.ಬಿ. ಕಾಯಿಲೆಯೂ ಮೈಗಂಟಿರುತ್ತದೆ. ಹಾಗಂತ ಇದು ಶೂನ್ಯಕ್ಕೆ ತಲುಪಿದವನ ಹಿನ್ನೆಲೆಯನ್ನು ಕೆದುಕುವ ಕಥೆಯಲ್ಲ. ಡ್ರೈವರ್ ರಾಘವ ವಾಸ್ತವ್ಯಕ್ಕಿರುವ ಬಿಲ್ಡಿಂಗಿಗೇ ಮತ್ತೊಬ್ಬಳು ಯುವತಿ ಬರುತ್ತಾಳೆ. ಇವಳ ಹಿನ್ನೆಲೆಯಲ್ಲಿ ಏನೇನು ಅಧ್ಯಾಯಗಳಿದ್ದವೋ ಗೊತ್ತಿಲ್ಲ. ಒಟ್ಟಿನಲ್ಲಿ ಇಬ್ಬರೂ ಒಂದು ಕಡೆ ಸೇರುತ್ತಾರೆ. ಇವಳ ಬಗ್ಗೆ ಇವನಿಗೆ ಕುತೂಹಲ, ಅವನ ಬಗ್ಗೆ ಇವಳಿಗೆ ಗೊಂದಲ. ಸಿಗರೇಟು ಇಬ್ಬರನ್ನೂ ಒಟ್ಟು ಸೇರಿಸಿಸುತ್ತದೆ.
ಮತ್ತೊಬ್ಬ ಮಹಂತೇಶ ಅಲಿಯಾಸ್ ಮಹಾನ್-ಥೂ… ಪಕ್ಕಾ ತಲೆಹಿಡುಕ. ಹೆಣ್ಮಕ್ಕಳನ್ನು ಬಳಸಿಕೊಂಡು ಬ್ಯುಸಿನೆಸ್ ಮಾಡುವ ಪಿಂಪ್. ಒಂದೇ ಬಿಲ್ಡಿಂಗಲ್ಲಿರುವ ಆ ಇಬ್ಬರಿಗೂ ಈ ನಿಕೃಷ್ಟನಿಗೂ ಏನು ಸಂಬಂಧ ಅನ್ನೋದೇ ಇಡೀ ಸಿನಿಮಾದ ಜೀವಾಳ. ಈ ಹಿಂದೆ ಕಹಿ ಎನ್ನುವ ಸಿನಿಮಾವನ್ನು ನೀಡಿದ್ದ ಅರವಿಂದ್ ಶಾಸ್ತ್ರಿ ನಿರ್ದೇಶನದ ಚಿತ್ರ ಬಿಸಿ ಬಿಸಿ ಐಸ್ ಕ್ರೀಮ್.
ಯಾರ ಹಿನ್ನೆಲೆ, ಚರಿತ್ರೆಯನ್ನು ಕೆದಕದೇ, ಬೆದಕದೇ ನಡೆಯುತ್ತಿರುವ ವಿದ್ಯಮಾನಗಳನ್ನಷ್ಟೇ ಹೇಳುವ ಪ್ರಯತ್ನ ಇಲ್ಲಿ ನಡೆದಿದೆ. ಒಬ್ಬಳು ಸುಂದರವಾದ ಹೆಣ್ಣುಮಗಳು, ಬದುಕಿನಲ್ಲಿ ಭರವಸೆಯನ್ನೇ ಕಳೆದುಕೊಂಡವನೊಬ್ಬ. ಬದುಕಲು ಏನು ಬೇಕಾದರೂ ಮಾಡುವ ವ್ಯಕ್ತಿ ಈ ಮೂವರ ನಡುವೆ ಒಂದಿಷ್ಟು ರೂಪಕಗಳನ್ನು ಸೇರಿಸಿ ಬೆಸೆದಿರುವ ಸಿನಿಮಾ ಬಿಸಿ ಬಿಸಿ ಐಸ್ ಕ್ರೀಮ್.
ಹಾಗೆ ನೋಡಿದರೆ ಈ ವಾರ ಬಿಡುಗಡೆಯಾಗಿರುವ ಕೆಲವಾರು ಸಿನಿಮಾಗಳಲ್ಲಿ ಬೆಟರ್ ಅಂತಾ ಇದ್ದರೆ ಅದು ʻಬಿಸಿಬಿಸಿ ಐಸ್ ಕ್ರೀಮ್ʼ. ಅದ್ಧೂರಿ ತಾಂತ್ರಿಕತೆ ಇಲ್ಲದಿದ್ದರೂ, ಸರಳವಾದ ಕಥೆ, ನೋಡಿಸಿಕೊಂಡು ಹೋಗುವ ಕಂಟೆಂಟ್ ಇಲ್ಲಿದೆ…
ಅರವಿಂದ್ ಅಯ್ಯರ್ ಮತ್ತು ಸಿರಿ ಚೆಂದದ ನಟನೆ ತುಂಬಾನೇ ಖುಷಿ ಕೊಡುತ್ತದೆ. ಗೋಪಾಲ ದೇಶಪಾಂಡೆಯವರ ಹೊಸಾ ಲುಕ್ಕು, ಬಾಡಿ ಲಾಂಗ್ವೇಜು ಮಜಾ ಕೊಡುತ್ತದೆ. ಕ್ಯಾಮೆರಾ ಮತ್ತು ಸಂಕಲನ ಕೂಡಾ ಗುಣಮಟ್ಟದಿಂದ ಕೂಡಿದೆ.












































