ಟ್ರೇಲರ್ ನಲ್ಲೇ ಕುತೂಹಲ ಮೂಡಿಸಿದ ‘ರೂಪಾಂತರ’ .

Picture of Cinibuzz

Cinibuzz

Bureau Report

ಇತ್ತೀಚೆಗಷ್ಟೆ “ಟರ್ಬೋ” ಮಳಯಾಳಂ ಚಿತ್ರದಲ್ಲಿ ವೆಟ್ರಿವೇಲ್ ಶನ್ಮುಗಸುಂದರಂ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದಿರುವ ರಾಜ್ ಬಿ ಶೆಟ್ಟಿ ಪ್ರಮುಖಪಾತ್ರದಲ್ಲಿ ನಟಿಸಿರುವ “ರೂಪಾಂತರ” ಚಿತ್ರದ ಟ್ರೇಲರ್ ಇತ್ತೀಚಿಗೆ ಬಿಡುಗಡೆಯಾಗಿದೆ‌. ಟ್ರೇಲರ್ ನಲ್ಲೇ ಸಾಕಷ್ಟು ಕುತೂಹಲ ಮೂಡಿಸಿರುವ ಈ ಚಿತ್ರ ಜುಲೈ 26 ರಂದು ಬಿಡುಗಡೆಯಾಗುತ್ತಿದೆ. ಟ್ರೇಲರ್ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

“ರೂಪಾಂತರ” ಚಿತ್ರದ ಕುರಿತು ಮಾತನಾಡಿದ ರಾಜ್ ಬಿ ಶೆಟ್ಟಿ, ‘ನಾವು ಮಂಗಳೂರಿನಲ್ಲಿ ಸಿನಿಮಾ ಮಾಡಬೇಕಾದರೆ ಮಾರ್ಕೇಟ್ ಬೇಡಿಕೆಗೂ ಹೊರತಾದ ಒಳ್ಳೆಯ ಸಿನಿಮಾಗಳನ್ನು ಮಾಡಬೇಕು. ಆಗ ಜನರು ಸಿನಿಮಾಗಳನ್ನು ನೋಡುತ್ತಾರೆ ಎಂಬ ಉದ್ದೇಶದಿಂದ ಸಿನಿಮಾ ಮಾಡಲು ಆರಂಭಿಸಿದ್ದೆವು. ಅದೇ ಉದ್ದೇಶದಿಂದ ಈ ಸಿನಿಮಾವನ್ನು ಮಾಡಿದ್ದೇವೆ. “ರೂಪಾಂತರ” ನನಗೆ ಬಹಳ ಇಷ್ಟವಾದ ಸಿನಿಮಾ. ಏಕೆಂದರೆ ಈ ಚಿತ್ರದಲ್ಲಿ ನಾನು ನಟ ಮಾತ್ರ. ಸಂಭಾಷಣೆಗೆ ಸ್ವಲ್ಪ ಸಹಾಯ ಮಾಡಿದ್ದೇನೆ. ಮಿಕ್ಕಿದೆಲ್ಲಾ ಈ ತಂಡದ ಕನಸು. ನನ್ನ ಬಿಟ್ಟು ಬೇರೆ ಮುಖ್ಯಪಾತ್ರಗಳು ಈ ಚಿತ್ರದಲ್ಲಿದೆ. ಅವರೆಲ್ಲಾ “ರೂಪಾಂತರ” ಗೊಳ್ಳುವುದೆ ಚಿತ್ರದ ಕಥೆ. “ಒಂದು ಮೊಟ್ಟೆಯ ಕಥೆ ” ಚಿತ್ರ ಮಾಡಿದ ತಂಡದೊಂದಿಗೆ ಈ ಚಿತ್ರ ಮಾಡಿರುವುದು ಖುಷಿಯಾಗಿದೆ. ಲೈಟರ್ ಬುದ್ಧ ಫಿಲಂಸ್ ಮೂಲಕ ಚಿತ್ರವನ್ನು ಜುಲೈ 26 ರಂದು ಬಿಡುಗಡೆ ಮಾಡುತ್ತಿರುವುದಾಗಿ ತಳಿಸಿದರು.

ಮಂಗಳೂರಿನವರು ಮಂಗಳೂರಿಗರಿಗೆ ಸಿನಿಮಾ ಮಾಡುತ್ತಾರೆ ಎಂಬ ಮಾತಿದೆ‌. ಆದರೆ ಈ ಚಿತ್ರವನ್ನು ನಾವು ಬೆಂಗಳೂರಿನಲ್ಲಿ ಮಾಡಿದ್ದೇವೆ‌. ರಾಜ್ ಬಿ ಶೆಟ್ಟಿ ಅವರನ್ನು ಹೊರತು ಪಡಿಸಿ ಮಿಕ್ಕೆಲ್ಲ ನಟರು ಬೇರೆ ಬೇರೆ ಪ್ರಾಂತ್ಯದವರು. ಇದೇ 26 ರಂದು ಚಿತ್ರ ಬಿಡುಗಡೆಯಾಗಲಿದೆ‌. ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಸುಹಾನ್ ಪ್ರಸಾದ್.

ಐದು ಪ್ರಮುಖಪಾತ್ರಗಳ ಸುತ್ತ ಈ ಚಿತ್ರದ ಕಥೆ ಸುತ್ತುತ್ತದೆ. ರಾಜ್ ಬಿ ಶೆಟ್ಟಿ ಸೇರಿದಂತೆ ಚಿತ್ರತಂಡದ ಸಹಕಾರದಿಂದ ಈ ಚಿತ್ರ ಚೆನ್ನಾಗಿ ಬಂದಿದೆ ಎನ್ನುತ್ತಾರೆ ನಿರ್ದೇಶಕ ಮಿಥಿಲೇಶ್ ಎಡವಲತ್. ಚಿತ್ರದಲ್ಲಿ ನಟಿಸಿರುವ ಅಂಜನ್ ಭಾರದ್ವಾಜ್ ಹಾಗೂ ಲೇಖಾ ನಾಯ್ಡು ಅವರು ತಮ್ಮ ಪಾತ್ರದ ಕುರಿತು ಮಾತನಾಡಿದರು. ಹಾಡುಗಳ ಕುರಿತು ಮಿಥುನ್ ಮುಕುಂದನ್ ಮಾಹಿತಿ ನೀಡಿದರು.

ರಾಜ್ ಬಿ ಶೆಟ್ಟಿ, ಸೋಮಶೇಖರ್ ಬೋಲೇಗಾಂವ್, ಲೇಖಾ ನಾಯ್ಡು, ಹನುಮ್ಮಕ್ಕ, ಭರತ್ ಜಿ.ಬಿ, ಅಂಜನ್ ಭಾರಧ್ವಾಜ್ ಮತ್ತಿರರ ತಾರಗಣ ಈ ಚಿತ್ರಕ್ಕಿದೆ. ಭುವನೇಶ್ ಮಣಿವಣ್ಣನ್ ಸಂಕಲನ ಹಾಗೂ ಪ್ರವೀಣ್ ಮತ್ತು ಅರ್ಷದ್ ನಾಕ್ಕೋತ್ ನಿರ್ಮಾಣ ವಿನ್ಯಾಸವಿರುವ “ರೂಪಾಂತರ ” ಚಿತ್ರಕ್ಕೆ ಪ್ರವೀಣ್ ಶ್ರೀಯಾನ್ ಅವರ ಛಾಯಾಗ್ರಹಣವಿದೆ.

ಟರ್ಬೋ ಚಿತ್ರವನ್ನು ಕರ್ನಾಟಕದಾದ್ಯಂತ ಯಶಸ್ವಿಯಾಗಿ ಹಂಚಿಕೆ ಮಾಡಿದ ಲೈಟರ್ ಬುಧ್ಧ ಫಿಲಂಸ್ ಈ ಚಿತ್ರವನ್ನೂ ಹಂಚಿಕೆ ಮಾಡುತ್ತಿದೆ. “ರೂಪಾಂತರ” ಟ್ರೇಲರ್ ಗೆ ಎಲ್ಲಾ ಕಡೆಯಿಂದ ಮೆಚ್ಚುಗೆ ಮಾತುಗಳು ಕೇಳಿ ಬರುತ್ತಿದೆ ಎಂದು ಸಂಸ್ಥೆಯ ಕಾರ್ಯಕಾರಿ ನಿರ್ದೇಶಕರಾದ ಬಾಲಕೃಷ್ಣ ಅರ್ವನಕರ್ ಅವರು ತಿಳಿಸಿದ್ದಾರೆ.

ಇನ್ನಷ್ಟು ಓದಿರಿ

Scroll to Top