ಒಬ್ಬ ರಾಜಕಾರಣಿ, ರಾಜಕೀಯ ಪಕ್ಷ, ಸಂಘಟನೆ, ಲೀಡರು – ಯಾವುದೇ ಆಗಲಿ, ಭದ್ರವಾಗಿ ತಲೆಯೆತ್ತಿ ನಿಲ್ಲಬೇಕೆಂದರೆ ಅದೆಷ್ಟು ಜನರ ಜೀವಗಳು ಪಾಯದ ಕಲ್ಲಾಗಿರುತ್ತವೋ? ಯಾರೆಲ್ಲಾ ಇಟ್ಟಿಗೆ, ಜೆಲ್ಲಿ, ಮರಳಾಗಿ, ಮಣ್ಣಲ್ಲಿ ಮಣ್ಣಾಗಿಬಿಟ್ಟಿರುತ್ತಾರೋ? ಪಂಥ ಅನ್ನೋದು ಎಡದ್ದಾಗಿರಲಿ, ಬಲದ್ದಾಗಿರಲಿ ಬಲಿ ಕೇಳೇ ಕೇಳುತ್ತದೆ!

ʻಯಾವುದೇ ವಿಚಾರವನ್ನು ಅತಿಯಾಗಿ ವಿರೋಧಿಸುವುದು ಅಥವಾ ಪರ ವಹಿಸುವವರ ಅಂತಿಮ ಉದ್ದೇಶ ಲಾಭʼ ಅಂತಾ ಪಿ. ಲಂಕೇಶರು ಹೇಳಿದ್ದಾರೆ. ಹಾಗೆಯೇ ರಾಜಕಾರಣ, ಸ್ಥಾನ ಅಂತಾ ಬಂದಾಗ ಮನುಷ್ಯ ಪರಮ ಸ್ವಾರ್ಥಿಯಾಗಿಬಿಡುತ್ತಾನೆ. ಅದು ಯಾವ ಮಟ್ಟಕ್ಕೆ ಅಂದರೆ, ಜೀವ ತೆಗೆಯಲೂ ಅಥವಾ ತೆಗೆಸಲೂ ಹೇಸುವುದಿಲ್ಲ. ʻಕೆಂಡʼ ಎನ್ನುವ ಸಿನಿಮಾ ನೋಡಿದಾಗ ಇಂಥ ಹತ್ತು ಹಲವು ಚಿಂತನೆಗಳು ಬಂದು ಹೋಗುತ್ತವೆ. ಕೇಶವ ಎನ್ನುವ ಸಾಮಾನ್ಯ ವ್ಯಕ್ತಿಯ ದೃಷ್ಟಿಕೋನದಲ್ಲಿ ಸಾಕಷ್ಟು ವಿಚಾರಗಳನ್ನು ಹೇಳುತ್ತಾ ಹೋಗಿದ್ದಾರೆ.
ಕೆಂಡ ಚಿತ್ರ ಇಂಥದ್ದೇ ಕಾಲಘಟ್ಟದಲ್ಲಿ ನಡೆಯುತ್ತದೆ ಅನ್ನೋದನ್ನು ನೇರವಾಗಿ ಎಲ್ಲೂ ಹೇಳಿಲ್ಲ. ಆದರೆ, ಇಸವಿ ಎರಡು ಸಾವಿರದ ಆಸುಪಾಸಿನಲ್ಲಿ ನಡೆಯುತ್ತದೆ ಅಂತಾ ಅಲ್ಲಲ್ಲಿ ಗುರುತು ಮಾಡಿದ್ದಾರೆ. ಫ್ಯಾಕ್ಟರಿಯ ಕುಲುಮೆಯಲ್ಲಿ ಬೇಯುವ ಕೇಶವ ಕೆಲಸ ಬಿಡುತ್ತಾನೆ. ಯಾವುದೋ ಒಂದು ಪಕ್ಷದ ಮುಖವಾಣಿಯಂಥಾ ಪತ್ರಿಕೆಯಲ್ಲಿ ಕೆಲಸವೂ ಸಿಗುತ್ತದೆ. ಹಾಗಂತ ಬರೆಯೋ ಕೆಲಸವಂತೂ ಅಲ್ಲ. ಬದಲಿಗೆ ಬೆಂಕಿ ಹಚ್ಚುವ ಕೆಲಸ; ನಾಡ ಬಾಂಬುಗಳನ್ನು ಎಸೆದು ಸಮಾಜದ ಸ್ವಾಸ್ಥ್ಯ ಕೆಡಿಸುವ ಕೆಲಸ. ಯಾವುದೋ ಊರಿಗೆ ಹೋಗಿ ಹೋರಾಟದ ಹೆಸರಲ್ಲಿ ಜನರನ್ನು ಒಟ್ಟು ಸೇರಿಸುವ ಕೆಲಸ…!

ಈ ನಾಡಿನಲ್ಲಿ ಜನ ದಂಗೆಯೇಳದೇ ಯಾವುದೂ ದಕ್ಕಿಲ್ಲ. ಚಳವಳಿ, ಹೋರಾಟ ಮಾತ್ರದಿಂದಲೇ ಇಷ್ಟರಮಟ್ಟಿಗಾದರೂ ಸಮಾಜ ಉಳಿದಿದೆ. ಆದರೆ ಯಾರನ್ನು ನಂಬಬೇಕು? ಯಾರನ್ನು ನಂಬಬಾರದು ಅನ್ನೋದು ಜನಸಾಮಾನ್ಯರಿಗೆ ಇರುವ ಗೊಂದಲ. ಬಹುಶಃ ಇದೇ ಗೊಂದಲ ಸಿನಿಮಾದ ಕಂಟೆಂಟಲ್ಲೂ ಇದೆ!
ಹಾಗಂತ ಹೋರಾಟ ಅನ್ನೋದೇ ಫೇಕು ಅಂತಲೂ ಈ ಚತ್ರದಲ್ಲಿ ಎಲ್ಲೂ ಹೇಳಿಲ್ಲ. ಒಬ್ಬೊಬ್ಬರ ಬದುಕಿನ ಹಿಂದೆಯೂ ಒಂದೊಂದು ಗುರಿ-ಕಾರಣಗಳು ಇರುತ್ತವೆ. ತಾನು ಎಲ್ಲಿ ತಲುಪಲಿದ್ದೇನೆ ಎನ್ನುವುದರ ಸ್ವಷ್ಟ ಅಂದಾಜು ಇಲ್ಲದೇ ಬೌದ್ಧಿಕ ಅಂಧತ್ವಕ್ಕೆ ಬದುಕನ್ನು ಬಲಿಕೊಡಬಾರದು ಅನ್ನೋದು ಬಹುಶಃ ʻಕೆಂಡʼ ಸಿನಿಮಾದ ಅಂತಿಮ ಸಂದೇಶ. ಕೈ ಕಳೆದುಕೊಂಡವನು ಕೂಡಾ ಕಬಾಬು ಮಾರಿ ಜೀವನ ಸಾಗಿಸಬಹುದು, ಕ್ರಾಂತಿ ಮಾಡಲು ಹೋದರೆ ಇದ್ದವರನ್ನೆಲ್ಲಾ ಕಳೆದುಕೊಳ್ಳಬೇಕು ಅನ್ನೋದು ರೂಪಕದಂತಿದೆ!

ಯಾವುದನ್ನೂ ನೇರವಾಗಿ ಹೇಳದೇ ಪ್ರತಿಯೊಂದನ್ನೂ ಅಮೂರ್ತವಾಗಿ ಹೇಳಿರುವ ಕೆಂಡವನ್ನು ನುಂಗುವುದೋ ಉಗುಳುವುದೋ ಎನ್ನುವ ಗೋಜಲು ಉಂಟಾಗುತ್ತದೆ. ಆದರೂ ಈ ಚಿತ್ರದಲ್ಲಿ ಅಮೂರ್ತವಾದದ್ದೇನೋ ಇದೆ ಎನ್ನುವ ಭಾವ ಹುಟ್ಟಿಸುತ್ತದೆ. ಕಟ್ಟ ಕಡೆಯದಾಗಿ ಇರೋದೊಂದು ಬದುಕಲ್ಲಿ ಜ್ಞಾನದ ಹಾದಿಯಲ್ಲಿ ಸಾಗಬೇಕಾ? ಕರ್ಮದ ದಾರಿಯನ್ನು ಕಂಡುಕೊಳ್ಳಬೇಕಾ? ಎನ್ನುವ ಪ್ರಶ್ನೆಯಂತೂ ಕಾಡುತ್ತದೆ. ಇದು ʻಕೆಂಡʼದ ಮಹತ್ವ!
ಗೋಪಾಲಕೃಷ್ಣ ದೇಶಪಾಂಡೆ ಬಿಟ್ಟರೆ ಹಲವರು ದೊಡ್ಡ ಪರದೆಗೆ ಇಲ್ಲಿ ಹೊಸಬರೇ. ಬಿ.ವಿ ಭರತ್, ಸಚಿನ್ ಶ್ರೀನಾಥ್, ಪ್ರಣವ್ ಶ್ರೀಧರ್, ವಿನೋದ್, ಬಿಂದು ರಕ್ಷಿದಿ ನಿರ್ದೇಶಕರು ಹೇಳಿದಂತೆ ನಟಿಸಿದ್ದಾರೆ. ರಿತ್ವಿಕ್ ಕಾಯ್ಕಿಣಿ ಸಂಗೀತದ ಕೆಲಸ ಕೂಡಾ ಚಿತ್ರಕ್ಕೆ ಪೂರಕವಾಗಿದೆ.
ಗಂಟು ಮೂಟೆ ಎನ್ನುವ ಮುದ್ದಾದ, ಕಾಡುವ ಸಿನಿಮಾ ಮಾಡಿದ್ದ ರೂಪಾ ರಾವ್ ʻಕೆಂಡʼವನ್ನು ನಿರ್ಮಿಸಿದ್ದಾರೆ. ಸಹದೇವ್ ಕೆಲವಡಿ ಇರ್ದೇಶನ ಮಾಡಿದ್ದಾರೆ. ಕಮರ್ಷಿಯಲ್ ಚಿತ್ರಗಳನ್ನಷ್ಟೇ ನೋಡುವವರಿಗೆ ʻಕೆಂಡʼ ರುಚಿಸುತ್ತದೋ ಇಲ್ಲವೋ ಗೊತ್ತಿಲ್ಲ; ಆದರೆ ಯಾವುದೇ ಕಾಲಘಟ್ಟಕ್ಕೂ ಪ್ರಸ್ತುತ ಅನ್ನಿಸುವ ಹಲವು ಅಂಶಗಳು ಇಲ್ಲಿವೆ…!












































