ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾ ಸಾಕಷ್ಟು ಕಾರಣಗಳಿಂದ ಭಾರತೀಯ ಚಿತ್ರರಂಗ ಮಾತ್ರವಲ್ಲ ಜಾಗತಿಕ ಮಟ್ಟದಲ್ಲಿ ಕುತೂಹಲ ಹುಟ್ಟಿಸಿತ್ತು. ಜಗತ್ತಿನ ಹತ್ತು ಹಲವು ಭಾಷೆಗಳಲ್ಲಿಯೂ ಬಿಡುಗಡೆಗೊಂಡಿರುವ ಚಿತ್ರ ಇದು. ಎಲ್ಲರೂ ಇಂಡಿಯಾದ ಸುತ್ತ ಪ್ಯಾನ್ ಮಾಡುತ್ತಿದ್ದರೆ, ಧ್ರುವ ಸರ್ಜಾ ಇಡೀ ಪ್ರಪಂಚಕ್ಕೇ ಬಲೆ ಬೀಸಿದ್ದರು. ಒಂದೇ ಏಟಿಗೆ ತಿಮಿಂಗಿಲವನ್ನು ಹಿಡಿಯಲು ಹೋದ ʻಮಾರ್ಟಿನ್ʼ ಧೈರ್ಯ ಎಷ್ಟರ ಮಟ್ಟಿಗೆ ವರ್ಕೌಟ್ ಆಗಿದೆ ಅನ್ನೋದು ಈಗ ಜಾಹೀರಾಗಿದೆ!

ಈ ಸಿನಿಮಾದಲ್ಲಿ ಧ್ರುವಾ ಸರ್ಜಾ ಅರ್ಜುನ್ ಮತ್ತು ಮಾರ್ಟಿನ್ ಎಂಬ ಎರಡು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅರ್ಜುನ್ ಕಸ್ಟಮ್ಸ್ ಅಧಿಕಾರಿಯಾದರೆ, ಮಾರ್ಟಿನ್ ಗ್ಲೋಬಲ್ ಲೆವೆಲ್ ಗ್ಯಾಂಗ್‌ಸ್ಟರ್. ಇಬ್ಬರೂ ಒಂದೇ ಥರ ಇರುವ ಕಾರಣಕ್ಕೆ ಹಲವು ಗೊಂದಲಗಳು ಏರ್ಪಡುತ್ತವೆ. ನೋಡಲು ಒಂದೇ ಹೋಲಿಕೆ ಇದ್ದರೂ ದಾರಿ ತಪ್ಪಿದ ಒಂದೇ ತಾಯಿಯ ಮಕ್ಕಳಂತೂ ಅಲ್ಲ ಅನ್ನೋದನ್ನು ಖುದ್ದು ಮಾರ್ಟಿನ್ ಪಾತ್ರ ಸ್ಪಷ್ಟಪಡಿಸಿದೆ!
ಮೇಲ್ನೋಟಕ್ಕೆ ಅರ್ಜುನ್ ದೇಶಪ್ರೇಮಿಯಾಗಿಯೂ, ಮಾರ್ಟಿನ್ ದೇಶದ್ರೋಹಿಯಂತೆಯೂ ಬಿಂಬಿಸಲ್ಪಟ್ಟಿದೆ. ಕಟ್ಟಕಡೆಯದಾಗಿ ಮಾರ್ಟಿನ್ ಮತ್ತು ಅರ್ಜುನ್ ಏನಾಗುತ್ತಾರೆ? ಆರಂಭದಲ್ಲಿ ಬರುವ ಪಾಕಿಸ್ತಾನಕ್ಕೂ ಆನಂತರ ಬರುವ ಮೆಡಿಕಲ್ ಮಾಫಿಯಾಗೂ ಏನು ಸಂಬಂಧ? ಎನ್ನುವ ಕೆಲವಾರು ವಿಚಾರಗಳನ್ನು ಭರ್ತಿ ಆಕ್ಷನ್ ಮೂಲಕವೇ ಬಿಡಿಸಿಟ್ಟಿದ್ದಾರೆ.

ಈ ಸಿನಿಮಾದ ಕಥೆ ಮತ್ತು ಚಿತ್ರಕತೆಗಳು ಅರ್ಜುನ್ ಸರ್ಜಾ ಅವರಿಂದ ರಚಿಸಲ್ಪಟ್ಟಿದೆ. ಹೀಗಾಗಿ ʻದೇಶಪ್ರೇಮʼ ಎನ್ನುವುದು ಕಡ್ಡಾಯ ಸಬ್ಜೆಕ್ಟಾಗಿದ್ದು ಪ್ರೀತಿ ಪ್ರೇಮ ಇತ್ಯಾದಿಗಳು ಐಚ್ಛಿಕವಾಗಿದೆ.
ತಿಪ್ಪೆಗೆಸೆಯಲೂ ಯೋಗ್ಯವಲ್ಲದ ಔಟ್ ಡೇಟೆಡ್ ಔಷಧಿಗಳನ್ನು ಕಳ್ಳಮಾರ್ಗದಿಂದ ಭಾರತಕ್ಕೆ ತಂದು, ಅದಕ್ಕೆ ಹೊಸ ಲೇಬಲ್ ಅಂಟಿಸಿ, ವ್ಯಾಪಾರ ಮಾಡುವ ಮೆಡಿಕಲ್ ಮಾಫಿಯಾದ ಭಯಾನಕ ವಿಚಾರ ಈ ಚಿತ್ರದಲ್ಲಿ ಚರ್ಚಿತವಾಗಿದೆ. ಬಹುಶಃ ಅದೊಂದು ಎಲಿಮೆಂಟು ಸಾಕಿತ್ತು; ಮಾರ್ಟಿನ್‌ನನ್ನು ಶಕ್ತಿಶಾಲಿಯನ್ನಾಗಿಸಲು. ಈ ವಿಚಾರದ ಸುತ್ತ ಶ್ರದ್ಧೆ ವಹಿಸಿ ಕತೆ ಹೆಣೆದು, ಕಾಡುವಂತೆ ಕಟ್ಟಿಕೊಟ್ಟಿದ್ದರೆ ಬಹುಶಃ ಮಾರ್ಟಿನ್ ಇವತ್ತಿನ ದಿನಕ್ಕೆ ʻಅದ್ಭುತ ಚಿತ್ರʼ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗುತ್ತಿತ್ತು. ಅದೊಂದನ್ನು ಬಿಟ್ಟು ಮಿಕ್ಕೆಲ್ಲವನ್ನೂ ತುಂಬಿ, ತುರುಕಿ ಎಷ್ಟು ಬೇಕೋ ಅಷ್ಟು ಅಯೋಮಯ ಮಾಡಿಟ್ಟಿದ್ದಾರೆ. ಬಹುಶಃ ಅರ್ಜುನ್ ಸರ್ಜಾ ಬರೆದುಕೊಟ್ಟ ದೇಶಪ್ರೇಮದ ಕತೆ ಏಪಿ ಅರ್ಜುನ್‌ಗೆ ಅರ್ಥವಾಗಲಿಲ್ಲವೋ ಅಥವಾ ಸರ್ಜಾ ಅವರೇ ಒತ್ತಾಯಪೂರ್ವಕವಾಗಿ ತುಂಬಿಕೊಟ್ಟಿದ್ದರೋ ಗೊತ್ತಿಲ್ಲ. ಕಥೆಯಲ್ಲಿ ಹೇಳಿರುವ ಮೆಡಿಸನ್ನಿನಂತೇ ಕೆಲವೊಂದು ಔಟ್ ಡೇಟೆಡ್ ಸರಕು ನೋಡುಗರ ಮೇಲೂ ಸಿಕ್ಕಾಪಟ್ಟೆ ಸೈಡ್ ಎಫೆಕ್ಟ್ ಕೊಡುತ್ತದೆ!
ಅತಿರಂಜಕ ಡೈಲಾಗುಗಳು, ಪ್ರತೀ ದೃಶ್ಯಗಳಲ್ಲಿನ ಓವರ್ ಬಿಲ್ಡಪ್ಪು ರೇಜಿಗೆ ಹುಟ್ಟಿಸುತ್ತವೆ. ಧ್ರುವ ಸರ್ಜಾ ವಿಪರೀತ ಎಫರ್ಟ್ ಹಾಕಿ ನಟಿಸಿದ್ದಾರೆ. ಇಷ್ಟು ವಿಸ್ತಾರವಾದ ಚಿತ್ರವೊಂದಕ್ಕೆ ವರ್ಷಾನುಗಟ್ಟಲೆ ಸಮಯ ಕೊಟ್ಟು, ದುಡಿದಿರುವ ಧ್ರುವಾ ಅವರ ಶ್ರಮ ದೊಡ್ಡದು. ವೈಭವಿ ಶಾಂಡಿಲ್ಯ ಚೆಲುವು ಪರದೆಯನ್ನು ಕಳೆಗಟ್ಟಿಸಿದೆ. ಅನ್ವೇಶಿ ಜೈನ್ ʻಎದೆಗಾರಿಕೆʼ ಮೆಚ್ಚಿದವರ ಮನಸ್ಸು ಬೆಚ್ಚಗಾಗುತ್ತದೆ. ಚಿಕ್ಕಣ್ಣ, ಪ್ರತಾಪ್ ನಾರಾಯಣ್ ಮುಂತಾದವರ ಪಾತ್ರಗಳೆಲ್ಲಾ ಮಾರ್ಟಿನ್ ಮಧ್ಯೆ ಮಂಕುಮಂಕಾಗಿವೆ.

ಸತ್ಯ ಹೆಗಡೆ ಪೂರ್ತಿ ಸಿನಿಮಾವನ್ನು ದೀಪಾವಳಿ ಮಾಡಿದ್ದಾರೆ. ಬ್ಯೂಟಿಫುಲ್ ಅನ್ನಬಹುದಾದ ಹಲವು ಶಾಟ್ಸ್ ಇಟ್ಟಿದ್ದಾರೆ. ಚಿತ್ರವನ್ನು ಹಾಲಿವುಡ್ ಗುಣಮಟ್ಟದಲ್ಲಿ ರೂಪಿಸಲು ಪಟ್ಟಿರುವ ಶ್ರಮವೇನೋ ಕಾಣುತ್ತದೆ. ಗ್ರಾಫಿಕ್ಸ್ ಕೆಲಸದಲ್ಲಿ ಎಲ್ಲ ಫ್ರೇಮುಗಳಲ್ಲೂ ಒಂದೇ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯವಾಗಿಲ್ಲ. ರವಿ ಬಸ್ರೂರ್ ಅಬ್ಬರವನ್ನೇ ಹಿನ್ನೆಲೆ ಸಂಗೀತ ಅಂದುಕೊಂಡಿದ್ದರೆ ಬಹುಶಃ ಅದು ಅವರ ತಪ್ಪು ಕಲ್ಪನೆ. ʻಜೀವ ನೀನೆ…ʼ ಎನ್ನುವ ಅತಿಸುಂದರ ಹಾಡಿಗೆ ಮಣಿಶರ್ಮ ಕೊಟ್ಟಿರುವ ಟ್ಯೂನು ಮನಮೋಹಕವಾಗಿದೆ. ಈ ಹಾಡಿನ ಅಕ್ಷರಕ್ಷರವೂ ಅದ್ಭುತವಾಗಿದೆ. ಇಷ್ಟು ಚೆಂದನೆಯ ಪದಗಳನ್ನು ಜೋಡಿಸಿರುವ ಎ.ಪಿ. ಅರ್ಜುನ್ ಅವರನ್ನು ಯಾರೇ ಆದರೂ ಮೆಚ್ಚಲೇಬೇಕು. ಸೋನು ನಿಗಮ್ ಮತ್ತು ಶೃತಿಕಾ ಸಮುದ್ರಲ ಉಸಿರು ಕೊಟ್ಟು ಹಾಡಿರುವ ಈ ಹಾಡು ಬಹುಶಃ ಈ ವರ್ಷದ ಮೊದಲ ಸ್ಥಾನವನ್ನು ಗಿಟ್ಟಿಸಬಹುದು.
ಇವೆಲ್ಲ ಏನೇ ಆಗಲಿ, ಆಕ್ಷನ್ ಪ್ರಿಯರಿಗೆಂದೇ ರೂಪಿಸಿರುವ ಸಿನಿಮಾ ಇದು. ಯಾವ್ಯಾವುದೋ ದೇಶದ ಸಿನಿಮಾಗಳನ್ನು ನೋಡಿ ಮೈನವಿರೇಳಿಸಿಕೊಳ್ಳುವ ಪ್ರೇಕ್ಷಕರಿಗೆ ಆಯುಧಪೂಜೆಯ ಈ ಸಂದರ್ಭದಲ್ಲಿ ನೋಡಲು ಹೇಳಿಮಾಡಿಸಿದಂತಾ ಚಿತ್ರವಿದು.
ಸಿನಿಮಾದ ಪ್ಲಸ್ಸು ಮೈನಸ್ಸುಗಳೇನೇ ಇರಲಿ, ಇಷ್ಟು ದೊಡ್ಡ ಪ್ರಯತ್ನವನ್ನು ಮಾಡಲು ಗಟ್ಟಿ ಗುಂಡಿಗೆ ಬೇಕು. ಅದನ್ನು ಹೊಂದಿರುವ ನಿರ್ಮಾಪಕ ಉದಯ್ ಕೆ. ಮೆಹ್ತಾ ಅವರನ್ನು ಅಭಿನಂದಿಸಬೇಕು; ಮನಸಾರೆ ಕೈ ಹಿಡಿಯಬೇಕು…












































