ಸಿನಿಮಾ ಇಂಡಸ್ಟ್ರಿಯಲ್ಲಿ ಎಂತೆಂಥಾ ಐನಾತಿಗಳು, ವಂಚಕರು, ಹೆಣ್ಣುಬಾಕರಿದ್ದಾರೆ ಅಂದರೆ ನಿಜಕ್ಕೂ ಗಾಭರಿಯಾಗುತ್ತದೆ. ಒಬ್ಬ ಒಂದು ಹೆಣ್ಣನ್ನು ಒಮ್ಮೆ ವಂಚಿಸಬಹುದು. ಆದರೆ ಇಲ್ಲೊಬ್ಬ ಮಹಿಳೆಯೊಬ್ಬರನ್ನು ಪದೇಪದೆ ವಂಚಿಸಿ, ಯಾಮಾರಿಸಿ, ಕೈಕೊಟ್ಟು ಹೋಗಿದ್ದಾನೆ. ಅದರ ಪೂರ್ಣ ವಿವರ ಇಲ್ಲಿದೆ…
ಕನ್ನಡ ಚಿತ್ರರಂಗದಲ್ಲಿ ಸರಿಸುಮಾರು ಐನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿ ಹೆಸರು ಮಾಡಿರುವ ನಟಿ ಚಂದ್ರಿಕ (ಹೆಸರು ಬದಲಿಸಿದೆ). ತೀರಾ ಸಣ್ಣ ವಯಸ್ಸಿಗೇ ಗಂಡನನ್ನು ಕಳೆದುಕೊಂಡು, ಮಗನನ್ನು ಸಾಕಿ, ಬೆಳಸಲು ನಟನಾ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರು ಈಕೆ. ಮಗನನ್ನು ಬದುಕಿನಲ್ಲಿ ಒಂದು ಮಟ್ಟಕ್ಕೆ ನೆಲೆ ಕಾಣಿಸುವ ಹೊತ್ತಿಗೇ ಚಂದ್ರಿಕಾ ಅವರಿಗೆ ನಿರ್ದೇಶಕನೊಬ್ಬನ ಪರಿಚಯವಾಗಿತ್ತು. ಅದು ಕೋವಿಡ್ ಶುರುವಾದ ಕಾಲಘಟ್ಟ. ಪ್ರಜಾರಾಜ್ಯ ಎನ್ನುವ ಸಿನಿಮಾವೊಂದು ತಯಾರಾಗುತ್ತಿತ್ತು (ಮೊದಲು ಈ ಚಿತ್ರಕ್ಕೆ ವಿಜನ್ 24ಎನ್ನುವ ಹೆಸರಿತ್ತು). ಅದರಲ್ಲಿ ಚಂದ್ರಿಕಾ ನಟಿಸುತ್ತಿದ್ದರು. ಚಿತ್ರೀಕರಣ ನಡೆಯುತ್ತಿದ್ದ ಹೊತ್ತಲ್ಲೇ ಕೊರೋನಾ ಲಾಕ್ ಡೌನ್ ಆಗಿತ್ತು. ಆ ಸಂದರ್ಭದಲ್ಲಿ ಚಂದ್ರಿಕಾ ಅವರ ಸ್ನೇಹ ಬೆಳೆಸಿದ್ದವನು ಪ್ರಜಾರಾಜ್ಯ ಚಿತ್ರದ ನಿರ್ದೇಶಕ ಡಿಜೆ ಹರ್ಷವರ್ಧನ ಅಲಿಯಾಸ್ ವಿಜಯಭಾರ್ಗವ! ಸ್ನೇಹ, ಸಲುಗೆಯನ್ನು ಮೀರಿ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಒಟ್ಟಿಗೇ ಬಾಳ್ವೆ ನಡೆಸಲು ಕೂಡಾ ಶುರು ಮಾಡಿದ್ದರು. ಒಂದು ಹಂತದಲ್ಲಿ ಬೇರೆ ಹುಡುಗಿಯರ ಸಂಪರ್ಕಕ್ಕೆ ಬಿದ್ದ ಹರ್ಷವರ್ಧನ ಚಂದ್ರಿಕಾಗೆ ಕೈಕೊಟ್ಟು ಹೋಗಿದ್ದ.
ಆದರೆ ಚಂದ್ರಿಕಾ ಗಟ್ಟಿಗಿತ್ತಿ. ಪೊಲೀಸು, ಕಂಪ್ಲೇಂಟು ಅಂತಾ ಕೊಟ್ಟು ನಂಜನಗೂಡು ಹತ್ತಿರ ತಗಡೂರು ಇವನ ಮೂಲದ ಹರ್ಷವರ್ಧನನ್ನು ಸೀದಾ ಜೈಲಿಗೇ ಕಳಿಸಿದ್ದರು. ಈ ಹೊತ್ತಲ್ಲಿ ಅವರಿವರ ಮೂಲಕ ಅಂಗಲಾಚಿದ ಹರ್ಷವರ್ಧನ ಕೇಸು ವಾಪಾಸು ತೆಗೆದುಕೊಳ್ಳುವಂತೆ ಮಾಡಿದ. ಜೈಲಿನಿಂದ ಹೊರವಬಂದವನು ಇನ್ನುಮುಂದೆ ನಿನ್ನೊಟ್ಟಿಗೆ ನೇರ್ಪಾಗಿ ಬಾಳ್ವೆ ಮಾಡ್ತೀನಿ ಅಂತಾ ಆಣೆ ಪ್ರಮಾಣ ಮಾಡಿದ. ಕಾನೂನುಬದ್ಧವಾಗಿ ರಿಜಿಸ್ಟರ್ ಮ್ಯಾರೇಜ್ ಕೂಡಾ ಆದ. ಇದೆಲ್ಲಾ ಆಗುತ್ತಿದ್ದಂತೇ ಹರ್ಷವರ್ಧನ್ ನಿರ್ದೇಶಿಸಿದ್ದ ಪ್ರಜಾರಾಜ್ಯ ತೆರೆಗೆ ಕೂಡಾ ಬಂತು. ಸಿನಿಮಾ ಅಂದುಕೊಂಡ ಮಟ್ಟಕ್ಕೆ ಗೆಲುವು ಕಾಣಲಿಲ್ಲ. ಈ ಎಲ್ಲ ಹೊತ್ತಲ್ಲೂ ಹರ್ಷವರ್ಧನ ಎಲ್ಲೂ ಮಾನಸಿಕವಾಗಿ ಧೃತಿಗೆಡದಂತೆ ಚಂದ್ರಿಕಾ ಅಕ್ಕರೆಯಿಂದ ಪೊರೆದರು. ಕೆಲಸವಿಲ್ಲದೇ ಎರಡು ವರ್ಷಗಳ ಕಾಲ ಸುಮ್ಮನೇ ಕೂತರೂ ಇಷ್ಟಪಟ್ಟು ಕಟ್ಟಿಕೊಂಡ ತಪ್ಪಿಗೆ ಸಕಲವನ್ನೂ ಕರುಣಿಸಿ ಸಾಕಿದರು.
ಈತ ಏನೇ ಬಯಸಿದರೂ ಇಲ್ಲ ಅನ್ನದ ಚಂದ್ರಿಕಾ ಕೇಳಿದ್ದನ್ನೆಲ್ಲಾ ಕೊಡಿಸಿದರು. ʻನನಗೆ ಕಾರು ಕೊಡಿಸು. ಅದನ್ನು ಓಡಿಸಿಕೊಂಡು ಜೀವನ ಮಾಡ್ತೀನಿʼ ಅಂದಿದ್ದ. ತಕ್ಷಣ ಕಾರೊಂದನ್ನು ಖರೀದಿಸಿ ಕೊಟ್ಟರು. ಮತ್ತೊಂದು ಸಿನಿಮಾದ ನಿರ್ದೇಶನದ ಅವಕಾಶ ಕೊಡಿಸಿದರು. ಈತನ ವಯೋವೃದ್ಧ ತಾಯಿಯನ್ನು ಕರೆತಂದು ಜೊತೆಗಿಟ್ಟುಕೊಂಡರು. ಈ ಯಾವುದರ ನಿಯತ್ತಿಲ್ಲದ ಹರ್ಷವರ್ಧನ ಯಥಾಪ್ರಕಾರ ತನ್ನ ಚೆಂಗಲು ಆಟವನ್ನು ಆರಂಭಿಸಿದ. ಬೇರೆ ಹುಡುಗಿಯ ಜೊತೆಗೆ ಜುಮ್ಮಾಚಕ್ಕಾ ಶುರು ಮಾಡಿಕೊಂಡ. ಎಲ್ಲವನ್ನೂ ಕಣ್ಣಾರೆ ಕಂಡರೂ ಚಂದ್ರಿಕಾ ಚಕಾರವೆತ್ತಲಿಲ್ಲ.
ʻನಿನ್ನ ಬಯಕೆ ಏನೇನಿದೆಯೋ ತೀರಿಸಿಕೋ, ಆದರೆ ನನ್ನ ಗಂಡನಾಗಿರು ಸಾಕುʼ ಎನ್ನುವ ಉದಾರ ಮನೋಭಾವ ತೋರಿದರು. ಯಾವ ಹೆಣ್ಣು ತಾನೆ ತನ್ನ ಗಂಡ ಅನ್ನಿಸಿಕೊಂಡವನು ಯಾರೊಂದಿಗೋ ಚೆಲ್ಲಾಟ ಆಡುತ್ತಿದ್ದರೆ ಸುಮ್ಮನಿರಲು ಸಾಧ್ಯವಾ? ಚಂದ್ರಿಕಾ ಈ ವಿಚಾರದಲ್ಲೂ ಅವನಿಗೆ ವಿನಾಯ್ತಿ ತೋರಿದರು. ಏನೇ ಮಾಡಿದರೂ ಹರ್ಷವರ್ಧನ ತನ್ನ ದುಷ್ಟಬುದ್ದಿಯನ್ನು ಮತ್ತಷ್ಟು ಹೆಚ್ಚಿಸಿಕೊಂಡ. ಅದೊಂದು ದಿನ ಚಂದ್ರಿಕಾ ಅವರ ಕೆನ್ನೆ ಛಿದ್ರವಾಗುವಂತೆ ಹೊಡೆದ. ಟೀವಿ ಸೇರಿದಂತೆ ಅವರ ಮನೆಯಲ್ಲಿದ್ದ ವಸ್ತುಗಳನ್ನೆಲ್ಲಾ ನೆಲಕ್ಕೆಸೆದು ಪುಡಿ ಮಾಡಿದ. ಇಷ್ಟೆಲ್ಲಾ ಆದಮೇಲೆ, ಮನೆ ಬಿಟ್ಟು ಹೋದವನು ಈ ತನಕವೂ ಕೈಗೆ ಸಿಕ್ಕಿಲ್ಲ. ಮತ್ತೆ ಯಾವ ಹೆಣ್ಣುಮಗಳ ಬಾಳು ಹಾಳು ಮಾಡುವ ಸ್ಕೆಚ್ಚು ಹಾಕಿಕೊಂಡಿದ್ದಾನೋ ಗೊತ್ತಿಲ್ಲ.
ಸದ್ಯಕ್ಕೆ ಚಂದ್ರಿಕಾ ಹರ್ಷವರ್ಧನನ ಜನ್ಮ ಜಾತಕವನ್ನು ಆಧಾರಸಮೇತ ಬಯಲಿಗೆಳೆಯುವ ಮನಸ್ಸು ಮಾಡಿದಂತಿದೆ. ಇಷ್ಟರಲ್ಲೇ ಆ ಎಲ್ಲಾ ವಿಚಾರಗಳು ಮಾಧ್ಯಗಳಿಗೆ ಆಹಾರವಾಗೋದು ಖಚಿತ!