ಇದು ಪಕ್ಕಾ ಮಾಸ್‌ ಸಿನಿಮಾ ಅನ್ನೋದರಲ್ಲಿ ಡೌಟೇ ಇಲ್ಲ!

Picture of Cinibuzz

Cinibuzz

Bureau Report

ಚಿತ್ರೀಕರಿಸಿದ ಒಟ್ಟಾರೆ ಸಿನಿಮಾದ ಒಳ್ಳೆ ಶಾಟ್‌ಗಳನ್ನು ತೆಗೆದು, ಒಂದು ಕಡೆ ಜೋಡಿಸಿ, ಟೀಸರ್ ರೂಪದಲ್ಲಿ ಬಿಡೋದು ಕೆಲವರ ಶೈಲಿ. ಇಡೀ ಸಿನಿಮಾದಲ್ಲಿ ಹೇಳಬೇಕಾದನ್ನು ಕೆಲವೇ ಸೆಕೆಂಡುಗಳಲ್ಲಿ ಹೇಳುವುದು ಮತ್ತೆ ಕೆಲವರ ವರಸೆ. ʻಚೌಕಿದಾರ್ʼ ಟೀಸರ್ ನೋಡಿದರೆ, ನಿಜಕ್ಕೂ ಆಶ್ಚರ್ಯವಾಗುತ್ತದೆ. ಈ ಪುಟ್ಟ ಟೀಸರೇ ಒಂದು ಜಗತ್ತನ್ನು ತೆರೆದಿಟ್ಟಿದೆ. ದೊಡ್ಡ ಬಿಲ್ಡಿಂಗಿನಿಂದ ಆರಂಭಗೊಳ್ಳುತ್ತದೆ. ಹಿಪ್ಪುನೇರಳೆ ಸೊಪ್ಪು ಕೊಯ್ಯುತ್ತಿರುವ ನಾಯಕಿ, ರೇಷ್ಮೆ ಗೂಡಿದ ದೊಡ್ಡ ಮಾರುಕಟ್ಟೆ, ಅದರ ನಡುವಲ್ಲೊಬ್ಬ ತಿಂದು ಮುಕ್ಕುವ ಭಕ್ಷಕ, ಸ್ಲಮ್ಮು, ಸೆಕ್ಯೂರಿಟಿ ಗಾರ್ಡುಗಳ ಸಿಸ್ಟಮ್ಮು, ಭಾರೀ ಗಾತ್ರದ ಪಾತ್ರೆಗಳಲ್ಲಿ ಅಡುಗೆ ತಯಾರಿ, ಅದೇ ವೇಳೆಗೆ ತಪ್ಪಿಸಿಕೊಳ್ಳುವ ಟಗರು, ಅದನ್ನು ಹಿಮ್ಮೆಟ್ಟುವ ದಾಂಡಿಗರ ಪಡೆ, ಅಟ್ಟಾಡಿಸಿ ಹಿಡಿದ ಟಗರಿನ ಕುತ್ತಿಗೆಗೆ ಕತ್ತಿ ಇಡುತ್ತಿದ್ದಂತೇ ಇಲ್ಲಿ ಹೀರೋ ಆ ರಾಕ್ಷಸನ ಕುತ್ತಿಗೆಗೂ ಕತ್ತಿ ಮಡಗುತ್ತಾನೆ. ರಕ್ತಸಿಕ್ತ ದೃಶ್ಯ ತೆರೆದುಕೊಳ್ಳುತ್ತೆ… ಅಲ್ಲಿಂದ ಹಿನ್ನೆಲೆ ಸಂಗೀತದ ರಿದಮ್ಮು ಕೂಡಾ ಬದಲಾಗುತ್ತದೆ. ಟಗರು ಮತ್ತು ಖಳನನ್ನು ರೂಪಕವಾಗಿಸಿ ಏನನ್ನೋ ಹೇಳ ಹೊರಟಿದ್ದಾರಾ? ದೇವರ ಬುಟ್ಟಿಯನ್ನು ತಲೆಮೇಲಿರಿಸಿಕೊಂಡು ನಡೆಯುವ ಪಾತ್ರ ಏನು ಹೇಳುತ್ತದೆ? ನಿರ್ದೇಶಕ ಚಂದ್ರಶೇಖರ ಬಂಡಿಯಪ್ಪ ಅನೇಕ ಮೆಟಫರ್ ಗಳನ್ನು ಸೇರಿಸಿ ʻಚೌಕಿದಾರ್ʼ ಮೂಲಕ ತೀವ್ರವಾಗಿ ಕಾಡುವ ಕತೆ ಹೇಳಲು ಹೊರಟಿದ್ದಾರಾ? ಟೀಸರು ನೋಡಿದ ಯಾರಿಗೇ ಆದರೂ ಇಂಥದ್ದೊಂದು ಅಭಿಪ್ರಾಯ ಮೂಡುತ್ತದೆ.

ಕ್ಲಾಸ್ ಸಿನಿಮಾಗಳ ಮೂಲಕ ಲವರ್ ಬಾಯ್ ಆಗಿ ಕಾಣಿಸಿಕೊಳ್ಳುತ್ತಿದ್ದ ಪೃಥ್ವಿ ಅಂಬರ್ ಮೊದಲ ಬಾರಿಗೆ ರಗಡ್ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ರೋಸ್ ಹಿಡಿಯುತ್ತಿದ್ದ ಪೃಥ್ವಿ ಕೈಗೆ ಲಾಂಗ್ ಕೊಟ್ಟು ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ರಕ್ತಹರಿಸಿದ್ದಾರೆ. ಸಂಕ್ರಾಂತಿ ಹಬ್ಬದ ವಿಶೇಷವಾಗಿ ಚೌಕಿದಾರ್ ಸಿನಿಮಾದ ಟೀಸರ್ ಅನಾವರಣಗೊಂಡಿದೆ. ಹಿಂದೆಂದೂ ಕಾಣದ ಲುಕ್ ನಲ್ಲಿ ಪೃಥ್ವಿ ಪ್ರತ್ಯಕ್ಷರಾಗಿದ್ದಾರೆ. ರಕ್ತಸಿಕ್ತ ಅವತಾರವೆತ್ತಿರುವ ಅವರ ಹೊಸ ಲುಕ್ ಸಿನಿರಸಿಕರಿಗೆ ಕಿಕ್ ಕೊಟ್ಟಿದೆ.

ಟೀಸರ್ ನಲ್ಲಿ ಎಲ್ಲಾ ಪಾತ್ರಗಳನ್ನು ತೋರಿಸಿರುವ ಚಂದ್ರಶೇಖರ್ ಬಂಡಿಯಪ್ಪ ಕಥೆಯ ಗುಟ್ಟನ್ನು ಎಲ್ಲಿಯೂ ಬಿಟ್ಟುಕೊಟ್ಟಿಲ್ಲ. ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಟೀಸರ್ ಬಿಡುಗಡೆ ಮಾಡಲಾಗಿದ್ದು, ಖಾಕಿ ಲುಕ್ ನಲ್ಲಿ ಸುಧಾರಾಣಿ ಖದರ್ ತೋರಿಸಿದ್ದಾರೆ. ಹಿರಿಯ ನಟ ಸಾಯಿ ಕುಮಾರ್ ಪೃಥ್ವಿ ತಂದೆ ಪಾತ್ರದಲ್ಲಿ ಗಮನಸೆಳೆಯುತ್ತಾರೆ. ಧರ್ಮ, ಹಿರಿಯ ನಟಿ ಶ್ವೇತಾ ತಾರಾ ಬಳಗದಲ್ಲಿದ್ದಾರೆ.

ಪೃಥ್ವಿ ಅಂಬರ್ ಗೆ ಜೋಡಿಯಾಗಿ ಅಭಿನಯಿಸಿರುವ ಧನ್ಯ ರಾಮ್ ಕುಮಾರ್ ಡಿ ಗ್ಲಾಮರ್ ಆಗಿ ಕಾಣಿಸಿಕೊಂಡಿದ್ದಾರೆ. ಸಚಿನ್ ಬಸ್ರೂರ್ ಸಂಗೀತ ಟೀಸರ್ ನಲ್ಲಿ ಗಮನಸೆಳೆಯುತ್ತಿದೆ. ಕಲ್ಲಹಳ್ಳಿ ಚಂದ್ರಶೇಖರ್ ನಿರ್ಮಾಣ ಮಾಡುತ್ತಿದ್ದಾರೆ. ವಿದ್ಯಾದೇವಿ ನಿರ್ಮಾಣದಲ್ಲಿ ಸಾಥ್ ಕೊಡುತ್ತಿದ್ದಾರೆ.

ವಿ.ನಾಗೇಂದ್ರ ಪ್ರಸಾದ್, ಪ್ರಮೋದ್ ಮರವಂತೆ, ಸಂತೋಷ್ ನಾಯಕ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಸಿದ್ದು ಕಂಚನಹಳ್ಳಿ ಛಾಯಾಗ್ರಹಣ, ರವಿ ವರ್ಮಾ ಸಾಹಸ ನಿರ್ದೇಶನ ಸಿನಿಮಾಗಿದೆ. ‘ಚೌಕಿದಾರ್’ ಬಹುಭಾಷೆಯಲ್ಲಿ ಮೂಡಿ ಬರುತ್ತಿದ್ದು, ಪೃಥ್ವಿರಾಜ್ ಧಘಾರಿ ಸಹ ನಿರ್ದೇಶನದಲ್ಲಿ ಚಿತ್ರ ತಯಾರಾಗಿದೆ. ಮೇ ತಿಂಗಳಲ್ಲಿ ಚೌಕಿದಾರ್ ತೆರೆಗೆ ತರಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಟೀಸರ್ ನೋಡುತ್ತಿದ್ದರೇ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಯಾವುದೋ ಹೊಸ ಕಥೆಯನ್ನು ಹರವಿಡಲು ಹೊರಟಿರುವುದು ಗೊತ್ತಾಗುತ್ತಿದೆ.

ಇನ್ನಷ್ಟು ಓದಿರಿ

Scroll to Top